ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ನೇಮಕಾತಿ ಹಾಗೂ ಹುದ್ದೆಗಳಲ್ಲಿ ಮೀಸಲಾತಿ (SC ST Reservation) ಹೆಚ್ಚಳ ಮಾಡಿ ಕಳೆದ ಅಕ್ಟೋಬರ್‌ನಲ್ಲಿ ಸುಗ್ರೀವಾಜ್ಞೆ ಹೊರಡಿಸಿದ್ದ ರಾಜ್ಯ ಸರ್ಕಾರ ಈಗ ನಿಗದಿಪಡಿಸಲಾದ ಹೆಚ್ಚಿನ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ನೇರ ನೇಮಕಾತಿ ಮುಖಾಂತರ ಭರ್ತಿಮಾಡುವಾಗ ಅನುಸರಿಸಬೇಕಾದ ಸಮತಳ ಮೀಸಲಾತಿಯ (horizontal reservation) ರೋಸ್ಟರನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.
ಪ್ರತಿ ನೇರ ನೇಮಕಾತಿ ಮೀಸಲಾತಿ ಪ್ರವರ್ಗದಡಿ ಪ್ರತ್ಯೇಕವಾಗಿ ಸಮತಳ ಮೀಸಲಾತಿಯನ್ನು ಅನುಸರಿಸಲು ಈ ರೋಸ್ಟರಿನಲ್ಲಿ ಆಸ್ಪದ ನೀಡಲಾಗಿದೆ. ಇದು ಮಾರ್ಚ್ 8 ರಿಂದಲೇ ಜಾರಿಗೆ ಬಂದಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಕಳೆದ ಅಕ್ಟೋಬರ್‌ನಲ್ಲಿ ಎಸ್‌ಸಿ ಮೀಸಲಾತಿಯನ್ನು ಶೇ. 15 ರಿಂದ 17ಕ್ಕೆ, ಎಸ್‌ಟಿ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಏರಿಸಿ, ಸಂವಿಧಾನದ 9ನೇ ಪರಿಚ್ಛೇದದ ಅಡಿಯಲ್ಲಿ ರಕ್ಷಣೆ ಪಡೆದು ಮೀಸಲಾತಿ ಘೋಷಣೆಗೆ ಸಂಬಂಧಪಟ್ಟಂತೆ ರಾಜ್ಯ ಪತ್ರ ಹೊರಡಿಸಲಾಗಿತ್ತು. ಈ ಸಂಬಂಧ ಮಸೂದೆ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಅಂಗೀಕಾರ ಪಡೆದಿದೆ. ಈ ಹೊಸ ಮೀಸಲಾತಿ ಪ್ರಮಾಣಕ್ಕೆ ಅನುಗುಣವಾಗಿ ನೇರ ನೇಮಕಾತಿ ಮುಖಾಂತರ ಭರ್ತಿಮಾಡಬೇಕಾದ ರಿಕ್ತಸ್ಥಾನಗಳಿಗೆ ಬಿಂದುಗಳನ್ನು ಗುರುತಿಸಿ ಕಳೆದ ಡಿಸೆಂಬರ್‌ನಲ್ಲಿ ಆದೇಶ ಹೊರಡಿಸಲಾಗಿತ್ತು. ಈಗ ಸಮತಳ ಮೀಸಲಾತಿಯ ರೋಸ್ಟರ್ ಪ್ರಕಟಿಸಲಾಗಿದೆ.
ನೇರ ಮೀಸಲಾತಿ ಜಾರಿಗೆ ಗೊತ್ತುಪಡಿಸಲಾದ 100 ಬಿಂದುಗಳ ರೋಸ್ಟರಿನಲ್ಲಿ ಮಾಜಿ ಸೈನಿಕರಿಗೆ, ಅಂಗವೈಕಲ್ಯವನ್ನುಳ್ಳ ಅಭ್ಯರ್ಥಿಗಳಿಗೆ, ಯೋಜನೆಗಳಿಂದ ನಿರ್ವಸಿತರಾದವರಿಗೆ, ಮಹಿಳೆಯರಿಗೆ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ, ತೃತೀಯ ಲಿಂಗಿಗಳಿಗೆ ಹಾಗೂ ಗ್ರಾಮೀಣ ಅಭ್ಯರ್ಥಿಗಳಿಗೆ ಸಮತಳ ಮೀಸಲಾತಿಯನ್ನು ಗುರುತಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
ಅಂಗವೈಕಲ್ಯರಿಗೆ ಮೀಸಲಾದ ಹುದ್ದೆ ಇತರರಿಗೆ!
ನೇರ ನೇಮಕಾತಿಯ ಸಂದರ್ಭದಲ್ಲಿ, ಅಧಿಸೂಚಿಸಿದ ಅಂಗವೈಕಲ್ಯವನ್ನುಳ್ಳ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಅಂತಹ ರಿಕ್ತಸ್ಥಾನಗಳನ್ನು ಮುಂದಿನ ನೇಮಕಾತಿಗೆ ಮುಂದಕ್ಕೊಯ್ಯಬೇಕು. ಮುಂದಿನ ನೇಮಕಾತಿಯಲ್ಲಿಯೂ ಅಧಿಸೂಚಿತ ಅಂಗವೈಕಲ್ಯವನ್ನುಳ್ಳ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಆಯಾ ಪ್ರವರ್ಗದ ಇತರ ಅಂಗವೈಕಲ್ಯವನ್ನುಳ್ಳ ಅಭ್ಯರ್ಥಿಗಳಿಂದ ಭರ್ತಿ ಮಾಡಬೇಕು. ಒಂದು ವೇಳೆ, ಯಾವುದೇ ಅಂಗವೈಕಲ್ಯವನ್ನುಳ್ಳ ಅಭ್ಯರ್ಥಿಗಳು ಲಭ್ಯರಾಗದಿದ್ದಲ್ಲಿ ಆಯಾ ಪ್ರವರ್ಗದ ಇತರೆ ಅರ್ಹ ಅಭ್ಯರ್ಥಿಗಳಿಂದ ಭರ್ತಿ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ನೇರ ನೇಮಕಾತಿಯ ಸಂದರ್ಭದಲ್ಲಿ, ಉಳಿದ ಸಮತಳ ಮೀಸಲಾತಿಗಳಾದ ಮಾಜಿ ಸೈನಿಕರಿಗೆ, ಯೋಜನೆಗಳಿಂದ ನಿರ್ವಸಿತರಾದವರಿಗೆ, ಮಹಿಳೆಯರಿಗೆ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ, ತೃತೀಯ ಲಿಂಗಿಗಳಿಗೆ ಹಾಗೂ ಗ್ರಾಮೀಣ ಅಭ್ಯರ್ಥಿಗಳಿಗೆ ಗುರುತಿಸಿರುವ ಸ್ಥಾನಗಳನ್ನು ಆ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಂದ ಭರ್ತಿ ಮಾಡಬೇಕು. ಒಂದು ವೇಳೆ, ಮಾಜಿ ಸೈನಿಕರಿಗೆ/ ಯೋಜನೆಗಳಿಂದ ನಿರ್ವಸಿತರಾದವರಿಗೆ/ತೃತೀಯ ಲಿಂಗಿಗಳಿಗೆ ಸಂಬಂಧಿಸಿದ ಸಮತಳ ಮೀಸಲಾತಿ ವರ್ಗಕ್ಕೆ ಮೀಸಲಿರಿಸಿದ ರಿಕ್ತ ಸ್ಥಾನಗಳಿಗೆ ಎದುರಾಗಿ ಆ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಆ ರಿಕ್ತ ಸ್ಥಾನಗಳನ್ನು ಅದೇ ನೇರ ಮೀಸಲಾತಿ (vertical reservation) ಗೆ ಸೇರಿದ ಇತರ ಅಭ್ಯರ್ಥಿಗಳಿಂದ ಭರ್ತಿ ಮಾಡಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಮಹಿಳೆಯರಿಗೆ ಮೀಸಲಿರಿಸಿದ ರಿಕ್ತ ಸ್ತಾನಗಳಿಗೆ ಎದುರಾಗಿ ಆ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಆ ರಿಕ್ತ ಸ್ಥಾನಗಳನ್ನು ಅದೇ ನೇರ ಮೀಸಲಾತಿ (vertical reservation) ಗೆ ಸೇರಿದ ಪುರುಷ ಅಭ್ಯರ್ಥಿಗಳಿಂದ ಭರ್ತಿ ಮಾಡಬಹುದು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿಗಳಿಗೆ ಮತ್ತು ಗ್ರಾಮೀಣ ಅಭ್ಯರ್ಥಿಗಳಿಗೆ ಗುರುತಿಸಿರುವ ಸ್ಥಾನಗಳನ್ನು ಆ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಂದಲೇ ಭರ್ತಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೊಸ ರೋಸ್ಟರ್ ಹೀಗಿದೆ;
ವಿಸ್ತೃತ: ಮ.ಅ.: ಮಹಿಳಾ ಅಭ್ಯರ್ಥಿ, ಮಾ.ಸೈ.: ಮಾಜಿ ಸೈನಿಕರು, ಅಂ.ವಿ.:ಅಂಗವಿಕಲ ಅಭ್ಯರ್ಥಿ, ಯೋ.ಅ.: ಯೋಜನೆಗಳಿಂದ ನಿರಾಶ್ರಿತರಗೊಂಡ ಅಭ್ಯರ್ಥಿ, ಗ್ರಾ.ಅ.: ಗ್ರಾಮೀಣ ಅಭ್ಯರ್ಥಿ, ಕಮಾಅ : ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಅಭ್ಯರ್ಥಿ, ತೃ.ಲಿಂ : ತೃತೀಯ ಲಿಂಗಿಗಳಿಗೆ.
ಈಗ ಯಾವ ಜಾತಿಗೆ ಎಷ್ಟು ಮೀಸಲಾತಿ?
ಹಿಂದಿನ ನೇಮಕಾತಿಗೆ ಅನ್ವಯವಾಗದು
ಇನ್ನು ಮುಂದೆ ನಡೆಯುವ ನೇಮಕಾತಿಯ ಸಂದರ್ಭದಲ್ಲಿ ಈಗ ಹೊರಡಿಸಲಾಗಿರುವ ರೋಸ್ಟರಿನ ಪ್ರಕಾರವೇ ನೇಮಕ ನಡೆಯಬೇಕು. ಯಾವುದೇ ವೃಂದದ ಹುದ್ದೆಗಳಿಗೆ ಈಗಾಗಲೇ ನೇರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಿದ್ದಲ್ಲಿ ಮತ್ತು ಆ ನೇಮಕಾತಿ ಪ್ರಕ್ರಿಯೆಯು ಇನ್ನೂ ಬಾಕಿ ಇದ್ದಲ್ಲಿ, ಅಂತಹ ನೇರ ನೇಮಕಾತಿ ಪ್ರಕ್ರಿಯೆಯನ್ನು ಈ ಹಿಂದಿನ ರೋಸ್ಟರಿನ ಪ್ರಕಾರವೇ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ಸ್ಪಷ್ಪಪಡಿಸಲಾಗಿದೆ.
ಇದನ್ನೂ ಓದಿ : SC ST Reservation | ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ವಿಧೇಯಕಕ್ಕೆ ರಾಜ್ಯಪಾಲ ಗೆಹ್ಲೋಟ್ ಅಂಕಿತ, ಸಮುದಾಯಗಳ ಕನಸು ನನಸು