ಕೇಂದ್ರ ಸರಕಾರದ ವಿವಿಧ ಸಚಿವಾಲಯ, ಇಲಾಖೆ, ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ನಡೆಸುವ ಬಹುನಿರೀಕ್ಷಿತ “ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಎಗ್ಸಾಮ್ʼʼಗೆ (ಸಿಜಿಎಲ್) (SSC CGL Notification 2022) ಕೊನೆಗೂ ಅಧಿಸೂಚನೆ ಹೊರಡಿಸಲಾಗಿದೆ.
30 ಸಾವಿರ ಹುದ್ದೆಗಳಿಗೆ ನೇಮಕ ನಡೆಯಬಹುದೆಂದು ಅಂದಾಜಿಸಲಾಗುತ್ತಿತ್ತು. ಆದರೆ ಸುಮಾರು 20 ಸಾವಿರ ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದು ಎಸ್‌ಎಸ್‌ಸಿ ಹೇಳಿದೆ. ನಿಖರವಾಗಿ ಎಷ್ಟು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಮುಂದೆ ತಿಳಿಸಲಾಗುವುದು ಎಂದು ಎಸ್‌ಎಸ್‌ಸಿಯು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.
ಗ್ರೂಪ್ “ಬಿʼʼ ಮತ್ತು “ಸಿʼʼ ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ನಡೆಯಲಿದೆ. ಒಟ್ಟು ನಾಲ್ಕು ಹಂತದ ಪರೀಕ್ಷೆಯ ಮೂಲಕ ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ ಸಂದರ್ಶನ ಇರುವುದಿಲ್ಲ. ಮೊದಲ ಹಂತದ ಪರೀಕ್ಷೆಯನ್ನು ಇದೇ ಡಿಸೆಂಬರ್‌ನಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಲಾಗಿದೆ.
ಸಿಜಿಎಲ್ ಪರೀಕ್ಷೆಯ ವೇಳಾಪಟ್ಟಿ
ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು 08-10-2022 ಕೊನೆಯ ದಿನವಾಗಿರುತ್ತದೆ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಾವತಿಸಬಹುದಾಗಿದ್ದು, ಆನ್‌ಲೈನ್‌ನಲ್ಲಿ ಪಾವತಿಸಲು 09-10-2022 ( ಸಮಯ 23:00) ಕೊನೆಯ ದಿನವಾಗಿರುತ್ತದೆ. ಆಫ್‌ಲೈನ್‌ನಲ್ಲಿ ಪಾವತಿಸಲು 10-10-2022 ಕೊನೆಯ ದಿನವಾಗಿರುತ್ತದೆ.
ಅರ್ಜಿ ಸಲ್ಲಿಸಲು ಲಿಂಕ್ : https://ssc.nic.in/Portal/Apply
ಯಾವೆಲ್ಲಾ ಹುದ್ದೆಗೆ ಈ ಪರೀಕ್ಷೆ?
ಒಟ್ಟು 35 ವಿವಿಧ ಇಲಾಖೆಗಳಲ್ಲಿನ ಗ್ರೂಪ್ “ಬಿ” ಮತ್ತು ಗ್ರೂಪ್ “ಸಿʼʼ ಹುದ್ದೆಗಳಿಗೆ ನೇಮಕ ನಡೆಯಲಿದೆ. ಇದರಲ್ಲಿ ಮುಖ್ಯವಾಗಿ ಅಸಿಸ್ಟೆಂಟ್ ಆಡಿಟ್ ಆಫೀಸರ್, ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ತೆರಿಗೆ ಮತ್ತು ಅಬಕಾರಿ ಇಲಾಖೆಯ ಇನ್ಸ್‌ಪೆಕ್ಟರ್, ಸಿಬಿಐ ಮತ್ತು ಎನ್‌ಐಎನ ಸಬ್‌ಇನ್ಸ್‌ಪೆಕ್ಟರ್, ವಿವಿಧ ಇಲಾಖೆಯ ಆಡಿಟರ್, ಟ್ಯಾಕ್ಸ್ ಅಸಿಸ್ಟೆಂಟ್ ಮತ್ತಿತರ ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.
ವಿದ್ಯಾರ್ಹತೆ ಏನು?
ಬಹುತೇಕ ಹುದ್ದೆಗಳಿಗೆ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅಸಿಸ್ಟೆಂಟ್ ಆಡಿಟ್ ಆಫೀಸರ್/ಅಸಿಸ್ಟೆಂಟ್ ಅಕೌಂಟ್ಸ್ ಆಫೀಸರ್ ಹುದ್ದೆಗೆ ಪದವಿ ಜತೆಗೆ ಸಿಎ/ ಕಾಸ್ಟ್ & ಮ್ಯಾನೇಜ್‌ಮೆಂಟ್ ಅಕೌಂಟೆಂಟ್ ಅಥವಾ ಕಂಪನಿ ಸೆಕ್ರೆಟರಿ ಸೆಕ್ರೆಟರಿ ಅಥವಾ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಬಿಸ್ನೆಸ್ ಸ್ಟಡೀಸ್/ ಬಿಸ್ನೆಸ್ಟ್ ಅಡ್ಮಿನಿಸ್ಟ್ರೇಷನ್/ ಬಿಸ್ನೆಸ್ ಎಕನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ ನಡೆಯುತ್ತದೆ?
ರಾಜ್ಯದ ಒಟ್ಟು ಎಂಟು ಜಿಲ್ಲಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತೆ. ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಪರೀಕ್ಷಾ ಕೇಂದ್ರ ಇರಲಿದೆ.
ಜೂನಿಯರ್ ಸ್ಟ್ಯಟಿಸ್ಟಿಕಲ್ ಆಫೀಸರ್ ಹುದ್ದೆಗೆ ಪಿಯುಸಿಯಲ್ಲಿ ಗಣಿತದಲ್ಲಿ ಶೇ.60 ರಷ್ಟು ಅಂಕಪಡೆದು, ಪದವಿ ಪಡೆದಿರುವ ಅಭ್ಯರ್ಥಿಗಳು ಅಥವಾ ಪದವಿಯಲ್ಲಿ ಸ್ಟ್ಯಟಿಸ್ಟಿಕ್ ಅನ್ನು ಒಂದು ವಿಷಯವಾಗಿ ಓದಿದವರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ವಯೋಮಿತಿ ಎಷ್ಟು?
ಬಹುತೇಕ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 30 ವರ್ಷ. ಕೆಲವು ಹುದ್ದೆಗಳಿಗೆ 27 ಮತ್ತು 32 ವರ್ಷ ವಯೋಮಿತಿಯನ್ನೂ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ ಎಷ್ಟು ಕಟ್ಟಬೇಕು?
ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಮಹಿಳಾ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿರುತ್ತದೆ. ಶುಲ್ಕವನ್ನುಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿರುತ್ತದೆ. ಆನ್‌ಲೈನ್‌ನಲ್ಲಿ ಸಾಧ್ಯವಾಗದೇ ಇರುವವರು ಎಸ್‌ಬಿಐ ಬ್ಯಾಂಕನಲ್ಲಿ ಚಲನ್ ಮೂಲಕ ಪಾವತಿಸಲು ಅವಕಾಶ ನೀಡಲಾಗಿದೆ.
ಪರೀಕ್ಷೆ ಹೇಗಿರುತ್ತದೆ? ಏನೆಲ್ಲಾ ಓದಬೇಕು? ಯಾವೆಲ್ಲಾ ಇಲಾಖೆಯ ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂಬೆಲ್ಲಾ ಮಾಹಿತಿಯನ್ನು “ವಿಸ್ತಾರ ನ್ಯೂಸ್ʼʼ ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ. ಇದಕ್ಕಾಗಿ ಪ್ರತಿದಿನ ವೆಬ್‌ಸೈಟ್‌ಗೆ ಭೇಟಿ ನೀಡುತ್ತಿರಿ.
ಹೆಚ್ಚಿನ ಮಾಹಿತಿಗೆ ಎಸ್‌ಎಸ್‌ಸಿ ವೆಬ್‌ಸೈಟ್ ವಿಳಾಸ: https://ssc.nic.in/
ಇದನ್ನೂ ಓದಿ | Job News | ಕೇಂದ್ರ ಸರ್ಕಾರಿ ನೌಕರಿಗೆ SSC ಪರೀಕ್ಷೆ ಬರೆಯಿರಿ