Site icon Vistara News

SSC Constable GD 2022 | ಹುದ್ದೆಗಳ ಸಂಖ್ಯೆ ದುಪ್ಪಟ್ಟು ಹೆಚ್ಚಳ; ಈಗ ಒಟ್ಟು 45,284 ಹುದ್ದೆಗಳಿಗೆ ನೇಮಕ

SSC Constable GD 2022

ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಕೇಂದ್ರೀಯ ಶಸ್ತ್ರಾಸ್ತ್ರ ಪೊಲೀಸ್‌ ಪಡೆ(CAPFs) ಮತ್ತು ವಿಶೇಷ ರಕ್ಷಣಾ ಪಡೆ (SSF)ಯಲ್ಲಿನ ಕಾನ್ಸ್‌ಟೇಬಲ್‌ ಹುದ್ದೆ (ಜನರಲ್‌ ಡ್ಯೂಟಿ) ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ ರೈಫಲ್‌ಮೆನ್‌ ಮತ್ತು ಮಾದಕದ್ರವ್ಯ ನಿಯಂತ್ರಣ ಬ್ಯುರೋದಲ್ಲಿನ ಸಿಪಾಯಿ ಹುದ್ದೆಗಳ ನೇಮಕಕ್ಕೆ (SSC Constable GD 2022) ಈ ಹಿಂದೆಯೇ ಅರ್ಜಿ ಆಹ್ವಾನಿಸಿದ್ದು, ಇದೀಗ ಹುದ್ದೆಗಳ ಸಂಖ್ಯೆಯನ್ನು ದುಪ್ಪಟ್ಟು ಹೆಚ್ಚಿಸಿದೆ.

ಈ ಪರೀಕ್ಷೆಯನ್ನು ” Constable (GD) in Central Armed Police Forces (CAPFs), SSF, Rifleman (GD) in Assam Rifles and Sepoy in Narcotics Control Bureau Examination, 2022ʼʼ ಎಂದು ಕರೆಯಲಾಗತ್ತದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ನೇಮಕಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಅಧಿಸೂಚನೆ ಪ್ರಕಟಿಸಿರುವ ಸಿಬ್ಬಂದಿ ನೇಮಕಾತಿ ಆಯೋಗವು ಹುದ್ದೆಗಳ ಸಂಖ್ಯೆಯನ್ನು 45,284 ಕ್ಕೆ ಏರಿಸಲಾಗಿದೆ.

ಅಧಿಸೂಚನೆ ಹೊರಡಿಸಿದ ಸಂದರ್ಭದಲ್ಲಿ ಒಟ್ಟು 24,369 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಕಟಿಸಲಾಗಿತ್ತು. ಇದೀಗ ಎಲ್ಲ ಪಡೆಗಳಲ್ಲಿನ ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಗಡಿಭದ್ರತಾ ಪಡೆಯ (BSF) 20,765 ಹುದ್ದೆಗಳಿಗೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) 5,914, ಕೇಂದ್ರೀಯ ಶಸ್ತ್ರಾಸ್ತ್ರ ಪೊಲೀಸ್‌ ಪಡೆಯ (CRPF) 11,169, ಸಶಸ್ತ್ರ ಸೀಮಾ ಬಲ್‌ನ (SSB) 2,167, ಇಂಡೋ-ಟೆಬೇಟಿಯನ್‌ ಬಾರ್ಡರ್‌ ಪೊಲೀಸ್‌ನ (ITBP) 1,787, ಅಸ್ಸಾಂ ರೈಫಲ್ಸ್‌ನ (AR) 3,153, ವಿಶೇಷ ರಕ್ಷಣಾ ಪಡೆಯ (SSF) 154 ಹುದ್ದೆಗಳಿಗೆ ಹಾಗೂ ಮಾದಕದ್ರವ್ಯ ನಿಯಂತ್ರಣ ಬ್ಯುರೋದಲ್ಲಿನ (NCB) 175 ಸಿಪಾಯಿ ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಪ್ರಕಟಿಸಲಾಗಿದೆ.

ಹುದ್ದೆಗಳ ಮೀಸಲಾತಿ ವಿವರ:

ಅರ್ಜಿ ಸಲ್ಲಿಸಲು 30-11-2022 (ರಾತ್ರಿ 11:00 ಗಂಟೆಯವರೆಗೆ) ಕೊನೆಯ ದಿನವಾಗಿರುತ್ತದೆ. ಅರ್ಜಿ ಶುಲ್ಕ ಪಾವತಿಸಲು 01-12-2022 ಕೊನೆಯ ದಿನವೆಂದು ಪ್ರಕಟಿಸಲಾಗಿದೆ.

ನೇಮಕಾತಿಯ ವೇಳಾಪಟ್ಟಿ

ವಿದ್ಯಾರ್ಹತೆ ಏನು?
ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ಅಥವಾ 10 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರುವುದಕ್ಕೆ ದಾಖಲೆಗಳನ್ನು ಹಾಜರು ಪಡಿಸಬೇಕಿರುತ್ತದೆ.

ದೈಹಿಕ ಅರ್ಹತೆ ಏನೇನು?
ಅಭ್ಯರ್ಥಿಗಳಿಗೆ ಶಾರೀರಿಕ ಮಾನದಂಡಗಳನ್ನು ನಿಗದಿಪಡಿಸಲಾಗಿರುತ್ತದೆ. ಪುರುಷ ಅಭ್ಯರ್ಥಿಗಳು ಕನಿಷ್ಠ 170 ಸೆಂ.ಮೀ. ಎತ್ತರವಿರಬೇಕು, ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 80 ಸೆಂ.ಮೀ. ಎದೆ ಸುತ್ತಳಗೆ ಹೊಂದಿರಬೇಕು. ಎದೆಯ ಕನಿಷ್ಠ ಹಿಗ್ಗುವಿಕೆ 5 ಸೆಂ.ಮೀ. ಇರಬೇಕು. ಮಹಿಳಾ ಅಭ್ಯರ್ಥಿಗಳು ಕನಿಷ್ಠ 157 ಸೆಂ.ಮೀ ಎತ್ತರವಿರಬೇಕು. ಎತ್ತರಕ್ಕೆ ತಕ್ಕ ತೂಕವನ್ನು ಪುರುಷ ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಲಿಂಕ್‌ : https://ssc.nic.in/Portal/Apply

ನೇಮಕಕ್ಕೆ ಹಿಂದಿ-ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ!
ಈ ನೇಮಕ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲಿಗೆ ಕಂಪ್ಯೂಟರ್‌ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. 160 ಅಂಕಗಳಿಗೆ ನಡೆಯಲಿರುವ ಈ ಪರೀಕ್ಷೆಯಲ್ಲಿ 80 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪರೀಕ್ಷೆ ಬರೆಯಲು ಒಂದು ನಿಮಿಷ ಕಾಲಾವಕಾಶ ನೀಡಲಾಗಿರುತ್ತದೆ. ಈ ಪರೀಕ್ಷೆಯಲ್ಲಿ ಪ್ರಶ್ನೆಗಳು ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಲಿವೆ. ಕನ್ನಡದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ. ಈ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ದೈಹಿಕ ಸಾಮರ್ಥ್ಯ ಮತ್ತು ದೇಹದಾರ್ಢ್ಯತೆ ಪರೀಕ್ಷೆ (PET/ PST) ನಡೆಸಲಾಗುತ್ತದೆ. ಇದರಲ್ಲಿಯೂ ಅರ್ಹತೆ ಪಡೆದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ನೇಮಕ ಮಾಡಿಕೊಳ್ಳುವಾಗ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಆದರೆ ಬಹುತೇಕರ ಮಾತೃಭಾಷೆಯಲ್ಲಿ (ಕನ್ನಡಿಗರಿಗೆ ಕನ್ನಡದಲ್ಲಿ) ಈ ಪರೀಕ್ಷೆ ನಡೆಯದೇ ಇರುವುದರಿಂದ ಅನೇಕ ಅಭ್ಯರ್ಥಿಗಳು ನೇಮಕದಿಂದ ವಂಚಿತರಾಗಲಿದ್ದಾರೆ.

ವಯೋಮಿತಿ ಎಷ್ಟು?
18-23 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಂದರೆ ಅಭ್ಯರ್ಥಿಗಳು 02-01-2000ರ ನಂತರ 01-01-2005ಕ್ಕಿಂತ ಮೊದಲು ಜನಿಸಿರಬೇಕು. ವಯೋಮಿತಿಯಲ್ಲಿ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ ಎಷ್ಟು ಕಟ್ಟಬೇಕು?
ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಮಹಿಳಾ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿರುತ್ತದೆ. ಶುಲ್ಕವನ್ನುಆ ನ್‌ಲೈನ್‌ನಲ್ಲಿ ಪಾವತಿಸಬಹುದಾಗಿರುತ್ತದೆ. ಆನ್‌ಲೈನ್‌ನಲ್ಲಿ ಸಾಧ್ಯವಾಗದೇ ಇರುವವರು ಎಸ್‌ಬಿಐ ಬ್ಯಾಂಕನಲ್ಲಿ ಚಲನ್‌ ಮೂಲಕ ಪಾವತಿಸಲು ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ ನಡೆಯುತ್ತದೆ?
ರಾಜ್ಯದ ಒಟ್ಟು ಎಂಟು ಜಿಲ್ಲಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತೆ. ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಪರೀಕ್ಷಾ ಕೇಂದ್ರ ಇರಲಿದೆ.

ಬೆಂಗಳೂರು ಎಸ್‌ಎಸ್‌ಸಿ ಸಹಾಯವಾಣಿ ಸಂಖ್ಯೆ: 080-25502520, 09483862020

ನೇಮಕದ ಕುರಿತ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: https://ssc.nic.in/

ಇದನ್ನೂ ಓದಿ | KSP Recruitment 2022 | 3,484 ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಈ 15 ವಿಷಯ ಗಮನಿಸಿ

Exit mobile version