Site icon Vistara News

SSC JE Recruitment 2022 | ಕೇಂದ್ರ ಸರ್ಕಾರದ ಜೂನಿಯರ್‌ ಎಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

SSC JE Recruitment 2022

ಕೇಂದ್ರ ಸರ್ಕಾರದ ವಿವಿಧ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ (SSC JE Recruitment 2022) ನೇಮಕ ಮಾಡಿಕೊಳ್ಳಲು ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಜೂನಿಯರ್ ಎಂಜಿನಿಯರ್ ಪರೀಕ್ಷೆ ನಡೆಸಲಿದ್ದು, ಇದಕ್ಕೆ ಅಧಿಸೂಚನೆ ಪ್ರಕಟಿಸಿದೆ.

ಮುಖ್ಯವಾಗಿ ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕ್ವಾಲಿಟಿ ಸರ್ವೇಯಿಂಗ್ ಮತ್ತು ಕಾಂಟ್ರಾಕ್ಟ್ಸ್ ವಿಭಾಗದ ಜೂನಿಯರ್ ಎಂಜಿನಿಯರ್ ಹುದ್ದೆಗಳನ್ನು ಈ ಪರೀಕ್ಷೆ ಮೂಲಕ ಭರ್ತಿ ಮಾಡಲಾಗುತ್ತದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈಗಾಗಲೇ ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್ 02 ಕೊನೆಯ ದಿನವಾಗಿರುತ್ತದೆ. ಆಸಕ್ತರು ಅಂದು ರಾತ್ರಿ 11 ಗಂಟೆಯ ಒಳಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿ ಶುಲ್ಕ ಪಾವತಿಸಬಹುದಾಗಿದ್ದು, ಇದಕ್ಕೆ ಸೆಪ್ಟೆಂಬರ್‌ 3 ಕೊನೆಯ ದಿನವಾಗಿರುತ್ತದೆ. ಸೆಪ್ಟೆಂಬರ್‌ 4 ರಂದು ಅರ್ಜಿಯಲ್ಲಿ ಬದಲಾವಣೆಗಳನ್ನು ಮಾಡಲು ಅವಕಾಶವಿರುತ್ತದೆ.

ಪರೀಕ್ಷೆಯ ವೇಳಾಪಟ್ಟಿ ಇಂತಿದೆ;

SSC JE Recruitment 2022

ಮೊದಲಿಗೆ ನಡೆಯುವ ಕಂಪ್ಯೂಟರ್‌ ಆಧಾರಿತ ಪರೀಕ್ಷೆಯನ್ನು ಇದೇ ನವೆಂಬರ್‌ನಲ್ಲಿ ನಡೆಸಲಾಗುತ್ತದೆ. ಎಷ್ಟು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಎಸ್‌ಎಸ್‌ಸಿ ಪ್ರಕಟಿಸಿಲ್ಲ. ಆದರೆ ಕೇಂದ್ರ ಸರ್ಕಾರವು ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡುವ ತೀರ್ಮಾನ ತೆಗೆದುಕೊಂಡಿರುವುದರಿಂದ ಹೆಚ್ಚಿನ ಸಂಖ್ಯೆಯ ಹುದ್ದೆಗಳಿಗೆ ಈ ಬಾರಿ ನೇಮಕ ನಡೆಯಬಹುದು ಎಂದು ಅಂದಾಜಿಸಲಾಗುತ್ತಿದೆ.

ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ಲಿಂಕ್‌: https://ssc.nic.in/Portal/Apply

ಯಾವ್ಯಾವ ಇಲಾಖೆಗಳಿಗೆ ನೇಮಕ?
ಕೇಂದ್ರ ಜಲ ಆಯೋಗ, ಕೇಂದ್ರ ಲೋಕೋಪಯೋಗಿ ಇಲಾಖೆ, ಮಿಲಿಟರಿ ಎಂಜಿನಿಯರಿಂಗ್ ಸರ್ವೀಸ್, ಕೇಂದ್ರ ಲೋಕೋಪಯೋಗಿ ಇಲಾಖೆ, ಕೇಂದ್ರ ಜಲ ಮತ್ತು ವಿದ್ಯುತ್‌ ಸಂಶೋಧನಾ ಸಂಸ್ಥೆ, ಫಾರಕ್ಕಾ ಬ್ಯಾರೇಜ್ ಪ್ರಾಜೆಕ್ಟ್‌, ಗಡಿ ರಸ್ತೆ ಸಂಸ್ಥೆ, ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್‌ಟಿಆರ್‌ಒ) ಮತ್ತಿತರ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಲು ಜೂನಿಯರ್‌ ಎಂಜಿನಿಯರ್‌ಗಳನ್ನು ಈ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಹತೆಗಳೇನು?
ಸಿವಿಲ್, ಎಲೆಕ್ಟ್ರಿಕಲ್ ಅಥವಾ ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಅಥವಾ ಸಿವಿಲ್, ಎಲೆಕ್ಟ್ರಿಕಲ್ ಅಥವಾ ಮೆಕಾನಿಕಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬಹುದು.

ರಕ್ಷಣಾ ಇಲಾಖೆಗೆ ಸೇರಿದ ಗಡಿ ರಸ್ತೆ ಸಂಸ್ಥೆ ಎಲ್ಲ ಹುದ್ದೆಗಳಿಗೆ, ಕೇಂದ್ರ ಜಲ ಆಯೋಗದ ಸಿವಿಲ್‌ ಜೂನಿಯರ್‌ ಎಂಜಿನಿಯರ್‌ ಹುದ್ದೆಗಳಿಗೆ ಪದವೀಧರರೂ ಅರ್ಜಿ ಸಲ್ಲಿಸಬಹುದಾಗಿದೆ. ಕೆಲವೊಂದು ವಿಭಾಗಗಳ ಹುದ್ದೆಗಳಿಗೆ ನಿರ್ದಿಷ್ಟ ಪದವಿ ಅಥವಾ ಡಿಪ್ಲೊಮಾ ವಿದ್ಯಾರ್ಹತೆಯನ್ನೇ ಬಯಸಲಾಗಿದೆ. ಈ ಕುರಿತು ಪೂರ್ಣ ವಿವರವನ್ನು ಅಧಿಸೂಚನೆಯಿಂದ ಪಡೆದುಕೊಳ್ಳಬಹುದು.

ಮಿಲಿಟರಿ ಸರ್ವೀಸ್ ಎಂಜಿನಿಯರಿಂಗ್, ಗಡಿ ರಸ್ತೆ ಸಂಸ್ಥೆಯಲ್ಲಿರುವ ಹುದ್ದೆಗಳಿಗೆ ಸಂಬಂಧಪಟ್ಟ ವಿಭಾಗಗಗಳಲ್ಲಿ ಎರಡು ವರ್ಷದ ಅನುಭವವನ್ನೂ ಬಯಸಲಾಗಿದೆ.

ವಯೋಮಿತಿ ಎಷ್ಟು?
ಕೇಂದ್ರ ಜಲ ಆಯೋಗ, ಕೇಂದ್ರ ಲೋಕೋಪಯೋಗಿ ಇಲಾಖೆಯ ಹುದ್ದೆಗೆ ಗರಿಷ್ಠ 32 ವರ್ಷ ಮತ್ತು ಉಳಿದ ಎಲ್ಲಾ ಇಲಾಖೆಗಳು/ ಸಂಸ್ಥೆಗಳಲ್ಲಿರುವ ಜೂನಿಯರ್‌ ಎಂಜಿನಿಯರ್‌ ಹುದ್ದೆಗೆ ಗರಿಷ್ಠ ವಯೋಮಿತಿ 30 ವರ್ಷ ನಿಗದಿ ಪಡಿಸಲಾಗಿದೆ. ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟಿರುತ್ತದೆ?
ಸಾಮಾನ್ಯ ಮತ್ತು ಇತರೆ ಹಿಂದುಳಿದ  ವರ್ಗದ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಮಹಿಳಾ ಅಭ್ಯರ್ಥಿಗಳು, ಎಸ್‌ಸಿ/ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ಇರುತ್ತದೆ. ಎಸ್‌ಬಿಐ ಬ್ಯಾಂಕ್ ಚಲನ್ ಮೂಲಕ/ಭೀಮ್ ಯುಪಿಐ/ಕ್ರೆಡಿಟ್/ನೆಟ್  ಬ್ಯಾಂಕಿಂಗ್ ಮೂಲಕವೂ ಶುಲ್ಕ ಪಾವತಿಸಬಹುದು.

ನೇಮಕ ಹೇಗೆ?
ಅರ್ಜಿ ಸಲ್ಲಿಸಿದ ಎಲ್ಲ ಅಭ್ಯರ್ಥಿಗಳಿಗೆ ಮೊದಲು ಕಂಪ್ಯೂಟರ್ ಆಧರಿತ ಪರೀಕ್ಷೆ (ಪತ್ರಿಕೆ-1) ನಡೆಸಲಾಗುತ್ತದೆ. ನವೆಂಬರ್‌ನಲ್ಲಿ ಈ ಪರೀಕ್ಷೆ ನಡೆಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಎರಡನೇ ಪರೀಕ್ಷೆ (ಪತ್ರಿಕೆ-2) ನಡೆಸಲಾಗುತ್ತದೆ. ಪತ್ರಿಕೆ-1 ಮತ್ತು ಪತ್ರಿಕೆ-2ರಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳನ್ನು ಪರಿಗಣಿಸಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಸಿದ್ಧಪಡಿಸಿ, ದಾಖಲೆ ಪರಿಶೀಲನೆ ನಡೆಸಲಾಗುತ್ತದೆ.
ಅಗತ್ಯ ದಾಖಲೆ ಹೊಂದಿದವರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಕೆಲ ಹುದ್ದೆಗಳಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗುತ್ತದೆ.

ಪರೀಕ್ಷಾ ಕೇಂದ್ರ ಆಯ್ಕೆ ಹೇಗೆ?
ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವಾಗಲೇ ಮೂರು ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಲು ವಕಾಶ ನೀಡಲಾಗುತ್ತದೆ. ರಾಜ್ಯದ ಅಭ್ಯರ್ಥಿಗಳು ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಪರೀಕ್ಷಾ ಕೇಂದ್ರಗಳಲ್ಲಿ ತಮಗೆ ಸೂಕ್ತವಾದ ಮೂರು ಕೇಂದ್ರಗಳನ್ನು ಆಯ್ಕೆ ಮಾಡಬಹುದು.

ಅರ್ಜಿ ಸಲ್ಲಿಸಿದ ಬಳಿಕ ಪರೀಕ್ಷಾ ಕೇಂದ್ರ  ಬದಲಾವಣೆ ಮಾಡುವಂತೆ ವಿನಂತಿಸುವ ಯಾವುದೇ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಹೀಗಾಗಿ, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಿ ಕೊಳ್ಳಬೇಕು ಮತ್ತು ಅದನ್ನು ಸರಿಯಾಗಿ ಅರ್ಜಿಯಲ್ಲಿ ನಮೂದಿಸಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: https://ssc.nic.in/ ರಾಜ್ಯದಲ್ಲಿನ ಕಚೇರಿ ವೆಬ್‌ ಸೈಟ್:https://www.ssckkr.kar.nic.in/

ಇದನ್ನೂ ಓದಿ| Job News | ಕೇಂದ್ರ ಸರ್ಕಾರಿ ನೌಕರಿಗೆ SSC ಪರೀಕ್ಷೆ ಬರೆಯಿರಿ

Exit mobile version