ನವ ದೆಹಲಿ: ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಕೇಂದ್ರದ ವಿವಿಧ ಸಚಿವಾಲಯ, ಇಲಾಖೆ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಗ್ರೂಪ್ ʼಸಿʼಯ ‘ಮಲ್ಟಿ ಟಾಸ್ಕಿಂಗ್ ಸ್ಟಾಫ್’ (ಎಂಟಿಎಸ್) (SSC MTS 2023) ಮತ್ತು ಹವಾಲ್ದಾರ್ ಹುದ್ದೆಗಳ (CBIC & CBN) ನೇಮಕಕ್ಕೆ (NON-TECHNICAL) ಅಧಿಸೂಚನೆ ಹೊರಡಿಸಿದೆ.
ಇಂದಿನಿಂದಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 21 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ.
ಈ ನೇಮಕಾತಿಯಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (Computer Based Examination) ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುತ್ತಿದೆ. ಈ ವಿಷಯವನ್ನು ಎಸ್‌ಎಸ್‌ಸಿಯು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ರಾಜ್ಯದ ಅಭ್ಯರ್ಥಿಗಳು ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು 08 ಕೋಡ್ ಬಳಸಬಹುದು. ಸೆಪ್ಟೆಂಬರ್‌ನಲ್ಲಿ ಈ ಪರೀಕ್ಷೆ ನಡೆಯುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಖಾಲಿ ಇರುವ ಎಂಟಿಎಸ್ ಹುದ್ದೆಗಳಲ್ಲಿ 18 ರಿಂದ 25 ವಯಸ್ಸಿನವರಿಗೆ 47 ಹುದ್ದೆ 18 ರಿಂದ 27 ವರ್ಷದೊಳಗಿನವರಿಗೆ 5 ಹುದ್ದೆಗಳಿವೆ. ಒಟ್ಟಾರೆಯಾಗಿ 18 ರಿಂದ 25 ವಯಸ್ಸಿನವರಿಗೆ 998, 18 ರಿಂದ 27 ವರ್ಷದೊಳಗಿನವರಿಗೆ 200 ಹಾಗೂ 360 ಹವಾಲ್ದಾರ್ ಹುದ್ದೆ ಸೇರಿ 1,558 ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. ಈ ಹುದ್ದೆಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದ್ದು, ಈ ಕುರಿತು ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗುವುದು ಎಂದು ಎಸ್‌ಎಸ್‌ಸಿಯು ತಿಳಿಸಿದೆ.
ನೇಮಕಾತಿಯ ವೇಳಾಪಟ್ಟಿ
ವಿದ್ಯಾರ್ಹತೆ ಏನು?
ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ 14-07-2023 ಗೂ ಮುನ್ನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ದಾಖಲೆಗಳನ್ನು ಹಾಜರು ಪಡಿಸಬೇಕಿರುತ್ತದೆ.
ಹವಾಲ್ದಾರ್ ಹುದ್ದೆಗೆ ಅರ್ಜಿ ಸಲ್ಲಿಸುವ ಪುರಷ ಅಭ್ಯರ್ಥಿಗಳು 157.5 ಸೆಂ.ಮೀ. ಎತ್ತರವಿರಬೇಕು. ಎದೆಯ ಸುತ್ತಳತೆಯು 81 ಸೆಂ.ಮೀ. ಇರಬೇಕು. ಮಹಿಳಾ ಅಭ್ಯರ್ಥಿಗಳು 152 ಸೆಂ.ಮೀ. ಎತ್ತರವಿರಬೇಕು. 48 ಕೆಜಿ ತೂಕವಿರಬೇಕು.
ವಯೋಮಿತಿ ಎಷ್ಟು?
ಕೆಲವು ಹುದ್ದೆಗಳಿಗೆ 18-25 ಮತ್ತೆ ಕೆಲವು ಹುದ್ದೆಳಿಗೆ 18-27 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಯಲ್ಲಿ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ. ವಯೋಮಿತಿಯನ್ನು ದಿನಾಂಕ 01-08-2023 ಕಕ್ಕೆ ಲೆಕ್ಕ ಹಾಕಲಾಗುತ್ತದೆ.
ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ : https://ssc.nic.in/Portal/Apply
ಅರ್ಜಿ ಶುಲ್ಕ ಎಷ್ಟು ಕಟ್ಟಬೇಕು?
ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಮಹಿಳಾ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿರುತ್ತದೆ. ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿರುತ್ತದೆ. ಆನ್‌ಲೈನ್‌ನಲ್ಲಿ ಸಾಧ್ಯವಾಗದೇ ಇರುವವರು ಎಸ್‌ಬಿಐ ಬ್ಯಾಂಕ್‌ನಲ್ಲಿ ಚಲನ್ ಮೂಲಕ ಪಾವತಿಸಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ : KEA Recruitment 2023 : ಸರ್ಕಾರದ ನಿಗಮ ಮಂಡಳಿಗಳಲ್ಲಿ 670 ಹುದ್ದೆ; ಇಂದಿನಿಂದ ಅರ್ಜಿ ಸಲ್ಲಿಕೆ ಶುರು
ನೇಮಕ ಹೇಗೆ?
ಮೊದಲಿಗೆ ಕಂಪ್ಯೂಟರ್ ಆಧಾರಿತ ಎರಡು ಹಂತದ ಪರೀಕ್ಷೆ (2 ಸೆಷನ್‌ನಲ್ಲಿ ನಡೆಯಲಿದೆ) ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ, ಅಗತ್ಯ ಇದ್ದರೆ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ಅಗತ್ಯ ವಿಲ್ಲದ ಹುದ್ದೆಗಳಿಗೆ ನೇರವಾಗಿ ದಾಖಲೆ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಪರೀಕ್ಷೆಗಳು ಹೇಗಿರುತ್ತವೆ, ಯಾವೆಲ್ಲಾ ವಿಷಯಗಳನ್ನು ಒಳಗೊಂಡಿರುತ್ತದೆ ಎಂಬ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ ನಡೆಯುತ್ತದೆ?
ರಾಜ್ಯದ ಒಟ್ಟು ಎಂಟು ಜಿಲ್ಲಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತೆ. ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಪರೀಕ್ಷಾ ಕೇಂದ್ರ ಇರಲಿದೆ.
ನೇಮಕದ ಕುರಿತ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: https://ssc.nic.in/
ಬೆಂಗಳೂರು ಎಸ್‌ಎಸ್‌ಸಿ ಸಹಾಯವಾಣಿ ಸಂಖ್ಯೆ: 080-25502520, 09483862020