ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಕೇಂದ್ರದ ವಿವಿಧ ಸಚಿವಾಲಯ, ಇಲಾಖೆ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಗ್ರೂಪ್ ʼಸಿʼಯ ‘ಮಲ್ಟಿ ಟಾಸ್ಕಿಂಗ್ ಸ್ಟಾಫ್’ (ಎಂಟಿಎಸ್) (SSC MTS 2023) ಮತ್ತು ಹವಾಲ್ದಾರ್ ಹುದ್ದೆಗಳ (CBIC & CBN) ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ.
ಸಂತೋಷದ ವಿಷಯವೆಂದರೆ ಈ ನೇಮಕಾತಿಯಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (Computer Based Examination) ಇದೇ ಮೊದಲ ಬಾರಿಗೆ ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುತ್ತಿದೆ. ಈ ವಿಷಯವನ್ನು ಎಸ್‌ಎಸ್‌ಸಿಯು ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ರಾಜ್ಯದ ಅಭ್ಯರ್ಥಿಗಳು ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು 08 ಕೋಡ್ ಬಳಸಬಹುದು.
ವಿವಿಧ ಇಲಾಖೆಗಳಲ್ಲಿನ ಒಟ್ಟು 10,880 ಎಂಟಿಎಸ್ ಹುದ್ದೆಗಳಿಗೆ ಹಾಗೂ ಸುಂಕ ಮತ್ತು ಪರೋಕ್ಷ ತೆರಿಗೆಯ ಕೇಂದ್ರೀಯ ಮಂಡಳಿ (CBIC) ಮತ್ತು ನರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (CBN) ನಲ್ಲಿನ 529 ಹವಾಲ್ದಾರ್ ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದ್ದು, ಈ ಕುರಿತು ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗುವುದು ಎಂದು ಎಸ್‌ಎಸ್‌ಸಿಯು ತಿಳಿಸಿದೆ.
ನೇಮಕಾತಿಯ ವೇಳಾಪಟ್ಟಿ
ವಿದ್ಯಾರ್ಹತೆ ಏನು?
ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ 17-02-2023 ಗೂ ಮುನ್ನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ದಾಖಲೆಗಳನ್ನು ಹಾಜರು ಪಡಿಸಬೇಕಿರುತ್ತದೆ.
ಹವಾಲ್ದಾರ್ ಹುದ್ದೆಗೆ ಅರ್ಜಿ ಸಲ್ಲಿಸುವ ಪುರಷ ಅಭ್ಯರ್ಥಿಗಳು 157.5 ಸೆಂ.ಮೀ. ಎತ್ತರವಿರಬೇಕು. ಎದೆಯ ಸುತ್ತಳತೆಯು 81 ಸೆಂ.ಮೀ. ಇರಬೇಕು. ಮಹಿಳಾ ಅಭ್ಯರ್ಥಿಗಳು 152 ಸೆಂ.ಮೀ. ಎತ್ತರವಿರಬೇಕು. 48 ಕೆಜಿ ತೂಕವಿರಬೇಕು.
ವಯೋಮಿತಿ ಎಷ್ಟು?
ಕೆಲವು ಹುದ್ದೆಗಳಿಗೆ 18-25 ಮತ್ತೆ ಕೆಲವು ಹುದ್ದೆಳಿಗೆ 18-27 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಯಲ್ಲಿ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸಲು ವೆಬ್‌ಸೈಟ್ ವಿಳಾಸ : https://ssc.nic.in/Portal/Apply
ಅರ್ಜಿ ಶುಲ್ಕ ಎಷ್ಟು ಕಟ್ಟಬೇಕು?
ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಮಹಿಳಾ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿರುತ್ತದೆ. ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿರುತ್ತದೆ. ಆನ್‌ಲೈನ್‌ನಲ್ಲಿ ಸಾಧ್ಯವಾಗದೇ ಇರುವವರು ಎಸ್‌ಬಿಐ ಬ್ಯಾಂಕ್‌ನಲ್ಲಿ ಚಲನ್ ಮೂಲಕ ಪಾವತಿಸಲು ಅವಕಾಶ ನೀಡಲಾಗಿದೆ.
ನೇಮಕ ಹೇಗೆ?
ಮೊದಲಿಗೆ ಕಂಪ್ಯೂಟರ್ ಆಧಾರಿತ ಎರಡು ಹಂತದ ಪರೀಕ್ಷೆ (2 ಸೆಷನ್‌ನಲ್ಲಿ ನಡೆಯಲಿದೆ) ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ, ಅಗತ್ಯ ಇದ್ದರೆ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ಅಗತ್ಯ ವಿಲ್ಲದ ಹುದ್ದೆಗಳಿಗೆ ನೇರವಾಗಿ ದಾಖಲೆ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಪರೀಕ್ಷೆಗಳು ಹೇಗಿರುತ್ತವೆ, ಯಾವೆಲ್ಲಾ ವಿಷಯಗಳನ್ನು ಒಳಗೊಂಡಿರುತ್ತದೆ ಎಂಬ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ ನಡೆಯುತ್ತದೆ?
ರಾಜ್ಯದ ಒಟ್ಟು ಎಂಟು ಜಿಲ್ಲಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತೆ. ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಪರೀಕ್ಷಾ ಕೇಂದ್ರ ಇರಲಿದೆ.
ನೇಮಕದ ಕುರಿತ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್: https://ssc.nic.in
ಬೆಂಗಳೂರು ಎಸ್‌ಎಸ್‌ಸಿ ಸಹಾಯವಾಣಿ ಸಂಖ್ಯೆ: 080-25502520, 09483862020
ಇದನ್ನೂ ಓದಿ | SSC Exam Calendar 2023 | ಹೊಸ ವರ್ಷದಲ್ಲಿ ಎಸ್‌ಎಸ್‌ಸಿ ನಡೆಸುವ ನೇಮಕಾತಿ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ