ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್ಎಸ್ಸಿ) ಕೇಂದ್ರದ ವಿವಿಧ ಸಚಿವಾಲಯ, ಇಲಾಖೆ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಗ್ರೂಪ್ ʼಸಿʼಯ ‘ಮಲ್ಟಿ ಟಾಸ್ಕಿಂಗ್ ಸ್ಟಾಫ್’ (ಎಂಟಿಎಸ್) (SSC MTS Recruitment 2023) ಮತ್ತು ಹವಾಲ್ದಾರ್ ಹುದ್ದೆಗಳ (CBIC & CBN) ನೇಮಕಕ್ಕೆ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ. ಈ ಬಾರಿ ಕನ್ನಡದಲ್ಲಿಯೂ ಪರೀಕ್ಷೆ ನಡೆಸುವುದಾಗಿ ಎಸ್ಎಸ್ಸಿ ಪ್ರಕಟಿಸಿರುವುದರಿಂದ ಈ ಪರೀಕ್ಷೆ ಬಹಳವಾಗಿ ಗಮನ ಸೆಳೆದಿದೆ.
ವಿವಿಧ ಇಲಾಖೆಗಳಲ್ಲಿನ ಒಟ್ಟು 10,880 ಎಂಟಿಎಸ್ ಹುದ್ದೆಗಳಿಗೆ ಹಾಗೂ ಸುಂಕ ಮತ್ತು ಪರೋಕ್ಷ ತೆರಿಗೆಯ ಕೇಂದ್ರೀಯ ಮಂಡಳಿ (CBIC) ಮತ್ತು ನರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (CBN) ನಲ್ಲಿನ 529 ಹವಾಲ್ದಾರ್ ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಈಗ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆದರೆ ರಾಜ್ಯದಲ್ಲಿ ಎಷ್ಟು ಹುದ್ದೆಗಳಿವೆ ಎಂದು ನೋಡಿದರೆ ನಿರಾಸೆಯಾಗಬಹುದು.
ಯಾವ ರಾಜ್ಯದಲ್ಲಿ ಎಷ್ಟು ಎಂಟಿಎಸ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಎಂಬ ಮಾಹಿತಿಯನ್ನು ಸಿಬ್ಬಂದಿ ನೇಮಕಾತಿ ಆಯೋಗ ಪ್ರಕಟಿಸಿದೆ. ಇದರ ಪ್ರಕಾರ ರಾಜ್ಯದಲ್ಲಿ ಕೇವಲ 483 ಹುದ್ದೆಗಳಿಗೆ ನೇಮಕ ನಡೆಯಲಿದೆ. ಇದರಲ್ಲಿ 18-25 ವರ್ಷ ವಯೋಮಿತಿಯ ಹುದ್ದೆಗಳು 375 ಹಾಗೂ 18-27 ವಯೋಮಿತಿಯ ಹುದ್ದೆಗಳು 108. ಬೆಂಗಳೂರಿನಲ್ಲಿರುವ ಎಸ್ಎಸ್ಸಿಯ ಪ್ರಾದೇಶಿಕ ಕಚೇರಿಯ ಮೂಲಕ ಈ ನೇಮಕ ಪ್ರಕ್ರಿಯೆ ನಡೆಯಲಿದೆ.
ಯಾವ ರಾಜ್ಯದಲ್ಲಿ ಎಷ್ಟು ಹುದ್ದೆಗಳಿವೆ ನೋಡಲು ಇಲ್ಲಿ ಕ್ಲಿಕ್ (click here) ಮಾಡಿ
ರಾಜ್ಯದ ಅಭ್ಯರ್ಥಿಗಳು ಕನ್ನಡ ಮಾತ್ರವಲ್ಲದೆ, ಕೊಂಕಣಿಯನ್ನೂ ಆಯ್ಕೆ ಮಾಡಿಕೊಂಡು ಈ ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ಪರೀಕ್ಷೆಯನ್ನು ಬರೆಯಬಹುದಾಗಿದೆ. ರಾಜ್ಯದ ಒಟ್ಟು ಎಂಟು ಜಿಲ್ಲಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತೆ. ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಪರೀಕ್ಷಾ ಕೇಂದ್ರ ಇರಲಿದೆ.
ನೇಮಕ ಹೇಗೆ?
ಮೊದಲಿಗೆ ಕಂಪ್ಯೂಟರ್ ಆಧಾರಿತ ಎರಡು ಹಂತದ ಪರೀಕ್ಷೆ (2 ಸೆಷನ್ನಲ್ಲಿ ನಡೆಯಲಿದೆ) ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ, ಅಗತ್ಯ ಇದ್ದರೆ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ಅಗತ್ಯ ವಿಲ್ಲದ ಹುದ್ದೆಗಳಿಗೆ ನೇರವಾಗಿ ದಾಖಲೆ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಪರೀಕ್ಷೆಗಳು ಹೇಗಿರುತ್ತವೆ, ಯಾವೆಲ್ಲಾ ವಿಷಯಗಳನ್ನು ಒಳಗೊಂಡಿರುತ್ತದೆ ಎಂಬ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
ಎಸ್ಎಸ್ಎಲ್ಸಿ ಅಥವಾ 10ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 17 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ : https://ssc.nic.in/Portal/Apply
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: SSC MTS 2023 : 11 ಸಾವಿರ ಎಂಟಿಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ