ಬೆಂಗಳೂರು: ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಕಾನ್ಸ್‌ಟೇಬಲ್ ಹುದ್ದೆಗಳ (ಜನರಲ್ ಡ್ಯೂಟಿ) ನೇಮಕಕ್ಕೆ ಸಂಬಂಧಿಸಿದಂತೆ (SSC recruitment 2023) ಒಂದು ಗುಡ್ ಮತ್ತು ಬ್ಯಾಡ್ ನ್ಯೂಸ್ ನೀಡಿದೆ. ಗುಡ್ ನ್ಯೂಸ್ ಏನೆಂದರೆ ಈ ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುತ್ತದೆ. ಬ್ಯಾಡ್ ನ್ಯೂಸ್ ಏನೆಂದರೆ ಈ ಹಿಂದೆ ಪ್ರಕಟಿಸಿದಂತೆ 75,768 ಹುದ್ದೆಗಳಿಗೆ ನೇಮಕ ನಡೆಯುತ್ತಿಲ್ಲ. ಬದಲಾಗಿ, ಈ ಬಾರಿ ಕೇವಲ 26,146 ಹುದ್ದೆಗಳಿಗೆ ನೇಮಕ ನಡೆಯಲಿದೆ.
ಮೊದಲಿಗೆ ಬಿಡುಗಡೆಯಾಗಿದ್ದ ಅಧಿಸೂಚನೆಯಲ್ಲಿ 75,768 ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕ ನಡೆಯಲಿದೆ. ಈ ನೇಮಕಕ್ಕೆ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (CBE) ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನಡೆಸಲಾಗುತ್ತದೆ ಎಂದು ಪ್ರಕಟಿಸಲಾಗಿತ್ತು. ಭಾರಿ ಹುದ್ದೆಗಳಿಗೆ ನೇಮಕ ನಡೆಯುತ್ತಿರುವುದರಿಂದ ಅಭ್ಯರ್ಥಿಗಳು ಹರ್ಷ ವ್ಯಕ್ತಪಡಿಸಿದ್ದರು. ಅದೇ ಸಂದರ್ಭದಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನಡೆಯದೇ ಇರುವುದಕ್ಕೆ ಆಕ್ಷೇಪಣೆ ಕೂಡ ವ್ಯಕ್ತವಾಗಿತ್ತು.
ಈ ಹಿಂದೆ ಗೃಹ ಇಲಾಖೆ ನೀಡಿದ ಸೂಚನೆಯಂತೆ ಈ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ಮೊದಲಿಗೆ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (CBE) ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುತ್ತದೆ ಎಂದು ಪರಿಷ್ಕೃತ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಇದರಿಂದಾಗಿ ಇದೇ ಮೊದಲ ಬಾರಿಗೆ ಈ ಪರೀಕ್ಷೆಯು ಕನ್ನಡದಲ್ಲಿಯೂ ನಡೆಯುತ್ತಿದೆ. ಅಲ್ಲದೆ ಹುದ್ದೆಗಳ ಕಡಿತದ ಕುರಿತೂ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ. ಸದ್ಯ 26,146 ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದು ತಿಳಿಸಲಾಗಿದ್ದರೂ, ಇದನ್ನು ಮತ್ತೆ ಮುಂದೆ ಪರಿಷ್ಕರಿಸುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ.
ಪರಿಷ್ಕೃತ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ (Click Here) ಮಾಡಿ.
ಕಳೆದ ಏಪ್ರಿಲ್‌ನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿನ (ಸಿಆರ್‌ಪಿಎಫ್) ಕಾನ್ಸ್‌ಟೇಬಲ್ ಹುದ್ದೆಗಳ (ಜನರಲ್ ಡ್ಯೂಟಿ) ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದಾಗ ನೇಮಕಾತಿ ಪರೀಕ್ಷೆಗಳನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ನಡೆಸಲಾಗುವುದು ಎಂದು ಪ್ರಕಟಿಸಲಾಗಿತ್ತು. ಈ ಕುರಿತು ʻವಿಸ್ತಾರ ನ್ಯೂಸ್ʼ ಗಮನ ಸೆಳೆದಿದ್ದು, ಕನ್ನಡ ಹೋರಾಟಗಾರರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಕನ್ನಡಿಗರ ಹೋರಟಕ್ಕೆ ಮಣಿದಿದ್ದ ಕೇಂದ್ರ ಗೃಹ ಸಚಿವಾಲಯ ಈ ನೇಮಕಾತಿ ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವ ತೀರ್ಮಾನ ಪ್ರಕಟಿಸಿತ್ತು.
ಈ ವಿಷಯವನ್ನು ಆಗ X ನಲ್ಲಿ ಪ್ರಕಟಿಸಿದ್ದ ಗೃಹ ಸಚಿವ ಅಮಿತ್ ಶಾ, ಇನ್ನು ಮುಂದೆ ಸಿಎಪಿಎಫ್ ವ್ಯಾಪ್ತಿಗೆ ಬರುವ ಸಿಆರ್‌ಪಿಎಫ್, ಗಡಿ ಭದ್ರತಾ ಪಡೆ (BSF), ಸಶಸ್ತ್ರ ಸೀಮಾ ದಳ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) ಸೇರಿ ಎಲ್ಲ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದರು. ಈ ಸೂಚನೆಯನ್ನು ಎಸ್‌ಎಸ್‌ಸಿ ಕೂಡ ಈಗ ಪಾಲಿಸಿದೆ.
ಪರಿಷ್ಕೃತ ಹುದ್ದೆಗಳ ವಿವರ
ಈ ನೇಮಕಾತಿಯಲ್ಲಿ ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. 160 ಅಂಕಗಳಿಗೆ ನಡೆಯಲಿರುವ ಈ ಪರೀಕ್ಷೆಯಲ್ಲಿ 80 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪರೀಕ್ಷೆ ಬರೆಯಲು ಒಂದು ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ಈ ಪರೀಕ್ಷೆಯಲ್ಲಿ ಪ್ರಶ್ನೆಗಳು ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಲಿವೆ. ಈ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ದೈಹಿಕ ಸಾಮರ್ಥ್ಯ ಮತ್ತು ದೇಹದಾರ್ಢ್ಯತೆ ಪರೀಕ್ಷೆ (PET/ PST) ನಡೆಸಲಾಗುತ್ತದೆ. ಇದರಲ್ಲಿಯೂ ಅರ್ಹತೆ ಪಡೆದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
ರಾಜ್ಯದ ಒಟ್ಟು ಎಂಟು ಜಿಲ್ಲಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತೆ. ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಪರೀಕ್ಷಾ ಕೇಂದ್ರ ಇರಲಿದೆ. ರಾಜ್ಯದ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆಯುವ ಮೂಲಕ ಅರೆಸೇನಾಪಡೆಗಳಲ್ಲಿನ ಈ ಹುದ್ದೆಗಳನ್ನು ಪಡೆದುಕೊಳ್ಳಬಹುದಾಗಿದೆ. ನೇಮಕಗೊಂಡ ಅಭ್ಯರ್ಥಿಗಳಿಗೆ ಮಾಸಿಕ ರೂ. 21,700-69,100 ವೇತನ ನೀಡಲಾಗುತ್ತದೆ.
ವಿದ್ಯಾರ್ಹತೆ ಏನು?
ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ಅಥವಾ 10 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರುವುದಕ್ಕೆ ದಾಖಲೆಗಳನ್ನು ಹಾಜರು ಪಡಿಸಬೇಕಿರುತ್ತದೆ.
ನೇಮಕಾತಿಯ ವೇಳಾಪಟ್ಟಿ
ದೈಹಿಕ ಅರ್ಹತೆ ಏನೇನು?
ಅಭ್ಯರ್ಥಿಗಳಿಗೆ ಶಾರೀರಿಕ ಮಾನದಂಡಗಳನ್ನು ನಿಗದಿಪಡಿಸಲಾಗಿರುತ್ತದೆ. ಪುರುಷ ಅಭ್ಯರ್ಥಿಗಳು ಕನಿಷ್ಠ 170 ಸೆಂ.ಮೀ. ಎತ್ತರವಿರಬೇಕು, ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 80 ಸೆಂ.ಮೀ. ಎದೆ ಸುತ್ತಳಗೆ ಹೊಂದಿರಬೇಕು. ಎದೆಯ ಕನಿಷ್ಠ ಹಿಗ್ಗುವಿಕೆ 5 ಸೆಂ.ಮೀ. ಇರಬೇಕು. ಮಹಿಳಾ ಅಭ್ಯರ್ಥಿಗಳು ಕನಿಷ್ಠ 157 ಸೆಂ.ಮೀ ಎತ್ತರವಿರಬೇಕು. ಎತ್ತರಕ್ಕೆ ತಕ್ಕ ತೂಕವನ್ನು ಪುರುಷ ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ.
ನವೆಂಬರ್ 24 ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಡಿಸೆಂಬರ್ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆ ಇದೆ. 18-23 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ವೆಬ್ ವಿಳಾಸ: https://ssc.nic.in/
ಇದನ್ನೂ ಓದಿ : Job Alert: ನಮ್ಮ ಮೆಟ್ರೋದಲ್ಲಿದೆ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ