ಬೆಂಗಳೂರು: ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) 75,768 ಕಾನ್ಸ್‌ಟೇಬಲ್ ಹುದ್ದೆಗಳ (ಜನರಲ್ ಡ್ಯೂಟಿ) ನೇಮಕಕ್ಕೆ ಅಧಿಸೂಚನೆ (SSC recruitment 2023) ಹೊರಡಿಸಿದೆ. ಎಸ್‌ಎಸ್‌ಎಲ್‌ಸಿ ಓದಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ (SSC GD Constable 2023 ) ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಈ ಹುದ್ದೆಗಳ ನೇಮಕಕ್ಕೆ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (CBE) ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನಡೆಸಲಾಗುತ್ತದೆ. ರಾಜ್ಯದ ಅಭ್ಯರ್ಥಿಗಳು ಕೂಡ ಈ ಎರಡು ಭಾಷೆಯಲ್ಲಿ ಯಾವುದಾದರೂ ಒಂದು ಭಾಷೆ ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆಯಬೇಕು.
ಕನ್ನಡದಲ್ಲಿಯೂ ಈ ನೇಮಕಾತಿ ಪರೀಕ್ಷೆ ನಡೆಸಬೇಕೆಂಬ ರಾಜ್ಯದ ಬೇಡಿಕೆಗೆ ಈ ಬಾರಿಯೂ ಎಸ್‌ಎಸ್‌ಸಿ ಸ್ಪಂದಿಸಿಲ್ಲ. ಕಳೆದ ಏಪ್ರಿಲ್‌ನಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿನ (ಸಿಆರ್‌ಪಿಎಫ್) ಕಾನ್ಸ್‌ಟೇಬಲ್ ಹುದ್ದೆಗಳ (ಜನರಲ್ ಡ್ಯೂಟಿ) ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದಾಗ ಕೂಡ ನೇಮಕಾತಿ ಪರೀಕ್ಷೆಗಳನ್ನು ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಮಾತ್ರ ನಡೆಸಲಾಗುವುದು ಎಂದು ಪ್ರಕಟಿಸಲಾಗಿತ್ತು. ಈ ಕುರಿತು ʻವಿಸ್ತಾರ ನ್ಯೂಸ್ʼ ಗಮನ ಸೆಳೆದಾಗ, ಕನ್ನಡ ಹೋರಾಟಗಾರರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಕನ್ನಡಿಗರ ಹೋರಟಕ್ಕೆ ಮಣಿದಿದ್ದ ಕೇಂದ್ರ ಗೃಹ ಸಚಿವಾಲಯ ಈ ನೇಮಕಾತಿ ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವ ತೀರ್ಮಾನ ಪ್ರಕಟಿಸಿತ್ತು.
ಈ ವಿಷಯವನ್ನು ಆಗ X ನಲ್ಲಿ ಪ್ರಕಟಿಸಿದ್ದ ಗೃಹ ಸಚಿವ ಅಮಿತ್ ಶಾ, ಇನ್ನು ಮುಂದೆ ಸಿಎಪಿಎಫ್ ವ್ಯಾಪ್ತಿಗೆ ಬರುವ ಸಿಆರ್‌ಪಿಎಫ್, ಗಡಿ ಭದ್ರತಾ ಪಡೆ (BSF), ಸಶಸ್ತ್ರ ಸೀಮಾ ದಳ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) ಸೇರಿ ಎಲ್ಲ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಯಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದರು. ಆದರೆ ಎಸ್‌ಎಸ್‌ಸಿಯು ಈಗ ಮತ್ತೆ ಹಳೆ ಚಾಳಿಯನ್ನೇ ಮುಂದುವರಿಸಿದೆ. ಶುಕ್ರವಾರ ಹೊರಡಿಸಿದ ಅಧಿಸೂಚನೆಯಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (CBE) ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನಡೆಸಲಾಗುತ್ತದೆ ಎಂದು ಸ್ಪಷ್ಟವಾಗಿ ಪ್ರಕಟಿಸಲಾಗಿದೆ.
ಕೇಂದ್ರ ಗೃಹ ಸಚಿವರ ಟ್ವೀಟ್
In a historic decision, MHA decides to conduct the Constable (GD) CAPF exams in 13 regional languages also. It will give an impetus to participation of local youth in CAPFs.
— गृहमंत्री कार्यालय, HMO India (@HMOIndia) April 15, 2023
The decision reflects PM @narendramodi Ji's commitment to developing and encouraging regional languages. pic.twitter.com/Dd1iNWzyL5
ಈ ನೇಮಕಾತಿಯಲ್ಲಿ ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. 160 ಅಂಕಗಳಿಗೆ ನಡೆಯಲಿರುವ ಈ ಪರೀಕ್ಷೆಯಲ್ಲಿ 80 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪರೀಕ್ಷೆ ಬರೆಯಲು ಒಂದು ಗಂಟೆ ಕಾಲಾವಕಾಶ ನೀಡಲಾಗಿರುತ್ತದೆ. ಈ ಪರೀಕ್ಷೆಯಲ್ಲಿ ಪ್ರಶ್ನೆಗಳು ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಇರಲಿವೆ. ಈ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ದೈಹಿಕ ಸಾಮರ್ಥ್ಯ ಮತ್ತು ದೇಹದಾರ್ಢ್ಯತೆ ಪರೀಕ್ಷೆ (PET/ PST) ನಡೆಸಲಾಗುತ್ತದೆ. ಇದರಲ್ಲಿಯೂ ಅರ್ಹತೆ ಪಡೆದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
ನೇಮಕ ಮಾಡಿಕೊಳ್ಳುವಾಗ ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ. ಆದರೆ ಬಹುತೇಕರ ಮಾತೃಭಾಷೆಯಲ್ಲಿ (ಕನ್ನಡಿಗರಿಗೆ ಕನ್ನಡದಲ್ಲಿ) ಈ ಪರೀಕ್ಷೆ ನಡೆಯದೇ ಇರುವುದರಿಂದ ಅನೇಕ ಅಭ್ಯರ್ಥಿಗಳು ನೇಮಕದಿಂದ ವಂಚಿತರಾಗಲಿದ್ದಾರೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ನಡೆಯುತ್ತಿರುವುದರಿಂದ ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಆಂಧ್ರಪ್ರದೇಶದ ಅಭ್ಯರ್ಥಿಗಳ ಭಾಗವಹಿಸುವಿಕೆ ಈ ನೇಮಕಾತಿಯಲ್ಲಿ ಬಹಳ ಕಡಿಮೆ ಇರುತ್ತದೆ ಎಂದು ಸಿಆರ್‌ಪಿಎಫ್ ಈ ಹಿಂದೆ ಬಹಿರಂಗ ಪಡಿಸಿತ್ತು. ಆದರೂ ಎಸ್‌ಎಸ್‌ಸಿ ಮಾತ್ರ ಮಲತಾಯಿ ಧೋರಣೆಯನ್ನು ಮುಂದುವರಿಸುತ್ತಿದೆ.
ರಾಜ್ಯದ ಒಟ್ಟು ಎಂಟು ಜಿಲ್ಲಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತೆ. ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಪರೀಕ್ಷಾ ಕೇಂದ್ರ ಇರಲಿದೆ. ಆದರೆ ಭಾಷೆಯ ತೊಡಕಿನಿಂದಾಗಿ ಕನ್ನಡಿಗರಿಗೆ ಕೈಗೆ ಸಿಕ್ಕ ತುತ್ತು ಬಾಯಿಗೆ ಬಾರದಂತಾಗುತ್ತಿದೆ.
ಈ ಬಾರಿ ಗಡಿಭದ್ರತಾ ಪಡೆಯಲ್ಲಿನ (BSF) 27,875 ಹುದ್ದೆ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿನ (CISF) 8,598 ಹುದ್ದೆ, ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿನ 25,427 ಹುದ್ದೆ, ಸಶಸ್ತ್ರ ಸೀಮಾ ಬಲದಲ್ಲಿನ 5,278 ಹುದ್ದೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಯಲ್ಲಿನ (ITBP) 3,006 ಹುದ್ದೆ, ಅಸ್ಸಾಂ ರೈಫಲ್ಸ್‌ನಲ್ಲಿ ರೈಫಲ್‌ಮೆನ್ (AR) 4,776 ಹುದ್ದೆ, ಸಚಿವಾಲಯ ಭದ್ರತಾ ಪಡೆಯಲ್ಲಿನ (SSF) 583 ಹುದ್ದೆ ಹಾಗೂ ರಾಷ್ಟ್ರೀಯ ತನಿಖಾ ಏಜೆನ್ಸಿಯಲ್ಲಿನ (NIA) 225 ಹುದ್ದೆ, ಎಲ್ಲ ಸೇರಿ ಒಟ್ಟು 75,768 ಹುದ್ದೆಗಳಿಗೆ ನೇಮಕ ನಡೆಯುತ್ತಿದೆ.
ವಿದ್ಯಾರ್ಹತೆ ಏನು?
ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ಅಥವಾ 10 ನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾಗಿರುವುದಕ್ಕೆ ದಾಖಲೆಗಳನ್ನು ಹಾಜರು ಪಡಿಸಬೇಕಿರುತ್ತದೆ.
ದೈಹಿಕ ಅರ್ಹತೆ ಏನೇನು?
ಅಭ್ಯರ್ಥಿಗಳಿಗೆ ಶಾರೀರಿಕ ಮಾನದಂಡಗಳನ್ನು ನಿಗದಿಪಡಿಸಲಾಗಿರುತ್ತದೆ. ಪುರುಷ ಅಭ್ಯರ್ಥಿಗಳು ಕನಿಷ್ಠ 170 ಸೆಂ.ಮೀ. ಎತ್ತರವಿರಬೇಕು, ಸಾಮಾನ್ಯ ಸ್ಥಿತಿಯಲ್ಲಿ ಕನಿಷ್ಠ 80 ಸೆಂ.ಮೀ. ಎದೆ ಸುತ್ತಳಗೆ ಹೊಂದಿರಬೇಕು. ಎದೆಯ ಕನಿಷ್ಠ ಹಿಗ್ಗುವಿಕೆ 5 ಸೆಂ.ಮೀ. ಇರಬೇಕು. ಮಹಿಳಾ ಅಭ್ಯರ್ಥಿಗಳು ಕನಿಷ್ಠ 157 ಸೆಂ.ಮೀ ಎತ್ತರವಿರಬೇಕು. ಎತ್ತರಕ್ಕೆ ತಕ್ಕ ತೂಕವನ್ನು ಪುರುಷ ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ.
ನವೆಂಬರ್ 24 ರಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಡಿಸೆಂಬರ್ 28 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆ ಇದೆ. 18-23 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ವೆಬ್ ವಿಳಾಸ: https://ssc.nic.in/
ಇದನ್ನೂ ಓದಿ : Job Alert: ಐಡಿಬಿಐ ಬ್ಯಾಂಕ್‌ನಲ್ಲಿದೆ 2,100 ಉದ್ಯೋಗಾವಕಾಶ; ಇಂದಿನಿಂದಲೇ ಅರ್ಜಿ ಸಲ್ಲಿಸಿ