ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ, ಇಲಾಖೆ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಸ್ಟೆನೋಗ್ರಾಫರ್ “ಸಿʼʼ ಮತ್ತು “ಡಿ” ಹುದ್ದೆಗಳ ನೇಮಕಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು (SSC Stenographer 2022), ಅಧಿಸೂಚನೆ ಹೊರಡಿಸಿದೆ.
ಸ್ಟೆನೋಗ್ರಫಿ ಕಲಿತವರು ಮಾತ್ರ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಸ್ಟೆನೋಗ್ರಫಿಯ ಪರೀಕ್ಷೆ ನಡೆಸಿಯೇ ನೇಮಕ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಅನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್ 5 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಅಂದು ರಾತ್ರಿ 11 ಗಂಟೆಯ ಒಳಗೆ ಅರ್ಜಿ ಸಲ್ಲಿಸಬೇಕಿರುತ್ತದೆ. ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್ 6 ಕೊನೆಯ ದಿನವಾಗಿರುತ್ತದೆ. ನವೆಂಬರ್‌ನಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಯಲಿದ್ದು, ನಂತರ ಕೌಶಲ ಪರೀಕ್ಷೆ ನಡೆಸಲಾಗುತ್ತದೆ.
ಎಷ್ಟು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿಯನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿಲ್ಲ. ಖಾಲಿ ಇರುವ ಹುದ್ದೆಗಳನ್ನು ನೋಡಿಕೊಂಡು ಸಂಖ್ಯೆಯನ್ನು ನಿಗದಿಪಡಿಸಲಾಗುವುದು. ಈ ಕುರಿತ ಮಾಹಿತಿಯನ್ನು ಎಸ್‌ಎಸ್‌ಸಿ ವೆಬ್‌ಸೈಟ್‌ನ ಕ್ಯಾಂಡಿಡೇಟ್ಸ್ ಕಾರ್ನರ್‌ನಲ್ಲಿ (Candidate’s Corner>Tentative Vacancy) ಒದಗಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ.
ಪರೀಕ್ಷೆಯ ವೇಳಾ ಪಟ್ಟಿ ಹೀಗಿದೆ;
ಅರ್ಹತೆಗಳೇನು?
ಅರ್ಜಿ ಸಲ್ಲಿಸಲಿಚ್ಚಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ತೇರ್ಗಡೆಯಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷ. ಸ್ಟೆನೋಗ್ರಾರ್ ಗ್ರೇಡ್ “ಸಿʼʼ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 30 ವರ್ಷ ಮತ್ತು ಸ್ಟೇನೋಗ್ರಾರ್ ಗ್ರೇಡ್ “ಡಿʼʼ ಹುದ್ದೆಗಳಿಗೆ ಗರಿಷ್ಠ ವಯೋಮಿತಿ 27 ವರ್ಷ. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಜಾತಿ/ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಲಿಂಕ್: https://ssc.nic.in/Portal/Apply
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕಾಗಿರುತ್ತದೆ. ಎಸ್‌ಸಿ/ಎಸ್‌ಟಿ/ವಿಕಲಚೇತನ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲಾಗಿದೆ. ಆನ್‌ಲೈನ್‌ನಲ್ಲಿ ಮಾತ್ರವಲ್ಲದೆ ಆಫ್‌ಲೈನ್‌ನಲ್ಲಿ ಕೂಡ (ಎಸ್‌ಬಿಐ ಚಲನ್ ಮೂಲಕ) ಅರ್ಜಿ ಶುಲ್ಕ ಪಾವತಿಸಬಹುದಾಗಿರುತ್ತದೆ.
ಸಿಬಿಟಿ ಹೇಗಿರುತ್ತದೆ?
ನವೆಂಬರ್‌ನಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಪ್ರಶ್ನೆಪತ್ರಿಕೆ ಇರುತ್ತದೆ. ಇದರಲ್ಲಿ ಜನರಲ್ ಅವೇರ್ನೆಸ್, ಜನರಲ್ ಇಂಟಲಿಜೆನ್ಸ್ ಮತ್ತು ರೀಸನಿಂಗ್‌ಗೆ ಸಂಬಂಧಿಸಿ ದಂತೆ ತಲಾ 50 ಅಂಕಗಳ ಪ್ರಶ್ನೆಗಳು, ಇಂಗ್ಲಿಷ್ ಲಾಂಗ್ವೇಜ್ ಮತ್ತು ಕಾಂಪ್ರಹೆನ್ಷನ್‌ಗೆ ಸಂಬಂಧಪಟ್ಟಂತೆ 100 ಅಂಕಗಳ ಪ್ರಶ್ನೆಗಳು ಸೇರಿ ಒಟ್ಟು 200 ಅಂಕಗಳಿಗೆ 200 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಅಭ್ಯರ್ಥಿಗಳಿಗೆ ಉತ್ತರಿಸಲು 2 ಗಂಟೆ 40 ನಿಮಿಷ ಕಾಲಾವಕಾಶ ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ 0.25ಅಂಕ ಕಳೆಯಾಗುತ್ತದೆ.
ಪರೀಕ್ಷೆಯು ರಾಜ್ಯದ ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿಯಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗಲೇ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕಿರುತ್ತದೆ.
ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸ್ಟೆನೋಗ್ರಫಿಗೆ ಸಂಬಂಧಪಟ್ಟಂತೆ ಕೌಶಲ ಪರೀಕ್ಷೆ ನಡೆಸಲಾಗುತ್ತದೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಈ ಪರೀಕ್ಷೆ ನಡೆಯಲಿದೆ.
ಕೌಶಲ ಪರೀಕ್ಷೆ ಹೀಗಿರಲಿದೆ;
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ವೆಬ್: https://ssc.nic.in
ಇದನ್ನೂ ಓದಿ| SSC JE Recruitment 2022 | ಕೇಂದ್ರ ಸರ್ಕಾರದ ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ