Site icon Vistara News

PM Rozgar Mela: ಗ್ರೂಪ್‌ ಸಿ, ಡಿ ಹುದ್ದೆಗಳ ಸಂದರ್ಶನ ತೆಗೆದು ಹಾಕಿ ಭ್ರಷ್ಟಾಚಾರಕ್ಕೆ ಅಂತ್ಯ ಹಾಡಿದ್ದೇವೆ: ನರೇಂದ್ರ ಮೋದಿ

PM Narendra Modi

ಬೆಂಗಳೂರು: ಇಂದು 71 ಸಾವಿರ ಯುವಜನರಿಗೆ ನೇಮಕಾತಿ ಪತ್ರವನ್ನು ನೀಡಿದ್ದೇನೆ. ಸ್ವಲ್ಪ ದಿನಗಳ ಹಿಂದೆ ಗುಜರಾತ್‌ನಲ್ಲಿ ರೋಜ್‌ಗಾರ್ ಮೇಳವನ್ನು (PM Rozgar Mela) ಆಯೋಜನೆ ಮಾಡಲಾಗಿತ್ತು. ಇನ್ನು ಮುಂದೂ ಸಹ ಆಯೋಜನೆ ಮಾಡುತ್ತೇವೆ. ಬಿಜೆಪಿ ನೇತೃತ್ವದ ಭಾರತ ಸರ್ಕಾರ ಈ ರೀತಿಯ ಮೇಳಗಳನ್ನು ಮಾಡುತ್ತಿದೆ. ಎಲ್ಲ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಗ್ರೂಪ್‌ ಸಿ, ಡಿ ಹುದ್ದೆಗಳನ್ನು ಪಡೆಯುವಾಗ ಯುವಜನರಿಗೆ ಆಗುತ್ತಿದ್ದ ಎಲ್ಲ ಸಮಸ್ಯೆಗಳನ್ನು ನಿವಾರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಹೇಳಿದರು.

ನವ ದೆಹಲಿಯಿಂದ ಆಯೋಜಿಸಲಾಗಿದ್ದ ರೋಜ್‌ಗಾರ್‌ (ಉದ್ಯೋಗ) ಮೇಳದಲ್ಲಿ ವರ್ಚುವಲ್‌ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗ್ರಾಮೀಣ ಅಭಿವೃದ್ಧಿ, ಜೀವನದ ವಿಸ್ತಾರಕ್ಕೆ ಭಾರತ ಸರ್ಕಾರವು ಯೋಜನೆಗಳನ್ನು ಮಾಡಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದ ಮೂಲಕ ಭಾರತ ಸರ್ಕಾರ ಮುನ್ನಡೆಯುತ್ತಿದೆ ಎಂದು ಬಣ್ಣಿಸಿದರು.

ವರ್ಚುವಲ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಷಣ. ದೇಶದ ಬೇರೆ ಬೇರೆ ಕಡೆಗಳಲ್ಲಿ ಭಾಗಿಯಾಗಿರುವ ಯವ ಜನತೆ

ಇನ್ನು ಮುಂದಿನ ದಿನಗಳಲ್ಲೂ ಸಹ ನಾವು ಬೃಹತ್‌ ಮಟ್ಟದಲ್ಲಿ ರೋಜ್‌ಗಾರ್‌ ಮೇಳವನ್ನು ಆಯೋಜನೆ ಮಾಡಿಕೊಂಡು ಬರಲಿದ್ದೇವೆ. ಈ ಹಿಂದಿನ 9 ವರ್ಷಗಳಲ್ಲಿ ಭಾರತ ಸರ್ಕಾರದ ವತಿಯಿಂದ ಬಹಳ ವೇಗವಾಗಿ, ನಿಷ್ಪಕ್ಷಪಾತವಾಗಿ ನಡೆಸಿಕೊಂಡು ಬರಲಾಗಿದೆ. ಈ ಹಿಂದೆ ಒಂದು ಅರ್ಜಿಯನ್ನು ಸಲ್ಲಿಸಬೇಕಿದ್ದರೆ ಕಿಲೋ ಮೀಟರ್‌ಗಟ್ಟಲೇ ಸಾಲು ನಿಲ್ಲಬೇಕಿತ್ತು. ದಾಖಲೆಯನ್ನು ಅಟೆಸ್ಟ್‌ ಮಾಡಬೇಕೆಂದರೆ ಗೆಜೆಟೆಡ್‌ ಅಧಿಕಾರಿಯ ಸಹಿ ಸೇರಿದಂತೆ ಹಲವು ಪ್ರಕ್ರಿಯೆಗಳಿತ್ತು. ಇನ್ನು ಕಷ್ಟಪಟ್ಟು ಅರ್ಜಿ ಸಲ್ಲಿಸಿದರೆ ಅರ್ಜಿ ಸಮಯಕ್ಕೆ ಸರಿಯಾಗಿ ಮುಟ್ಟಿದೆಯೋ ಇಲ್ಲವೋ ಎಂಬುದೂ ಗೊತ್ತಾಗುತ್ತಿರಲಿಲ್ಲ. ಆದರೆ, ಇಂದು ಎಲ್ಲ ಪ್ರಕ್ರಿಯೆಗಳನ್ನೂ ಆನ್‌ಲೈನ್‌ ಮೂಲಕವೇ ಮಾಡಲು ವ್ಯವಸ್ಥೆ ಮಾಡಲಾಗಿದೆ. ಗ್ರೂಪ್‌ ಸಿ ಮತ್ತು ಗ್ರೂಪ್‌ ಡಿ ಹುದ್ದೆಗಳಿಗೆ ಸಂದರ್ಶನಗಳನ್ನು ನಿಲ್ಲಿಸಲಾಗಿದೆ. ಈ ಮೂಲಕ ಭ್ರಷ್ಟಾಚಾರಕ್ಕೆ ತೆರೆ ಎಳೆಯಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇದನ್ನೂ ಓದಿ: Karnataka Election 2023 : ಗ್ಯಾರಂಟಿ ಎಲ್ಲರಿಗೂ ಸಿಗಲ್ಲ, Conditions Apply ಅಂದ ಪರಮೇಶ್ವರ್‌

ಉದ್ಯೋಗ ಮೇಳದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

10 ವರ್ಷದಿಂದ ಸ್ಥಿರ, ಸಮರ್ಥ ಆಡಳಿತ: ಪ್ರಲ್ಹಾದ್‌ ಜೋಶಿ

ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ನಮ್ಮ ಸರ್ಕಾರವು 10 ವರ್ಷದಿಂದ ಸ್ಥಿರ ಹಾಗೂ ಸಮರ್ಥ ಆಡಳಿತವನ್ನು ಕೊಡುತ್ತಾ ಬಂದಿದೆ. ಕಳೆದ ಮೇಳಗಳಲ್ಲಿ 2 ಲಕ್ಷ ಜನರಿಗೆ ಉದ್ಯೋಗವನ್ನು ನೀಡಲಾಗಿದೆ. ಇಂದು 71 ಸಾವಿರ ಯುವ ಜನರಿಗೆ ನೇಮಕಾತಿ ಪತ್ರ ನೀಡಲಾಗಿದೆ. ನಾನು ಈ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ಭಾಗಿಯಾಗಿದ್ದೇನೆ. ಕರ್ನಾಟಕ ಹಲವು ಹೊಸ ಸಂಶೋಧನಾತ್ಮಕ ಕಂಪನಿಗಳ ತಾಣವಾಗಿದೆ. ಕರ್ನಾಟಕದ ಅಭಿವೃದ್ಧಿಗೆ ನಾವು ಕೆಲಸ ಮಾಡುತ್ತೇವೆ. ಕರ್ನಾಟಕದ ಹೊಸ ಸರ್ಕಾರ ಒಳ್ಳೇ ಕೆಲಸ ಮಾಡುತ್ತದೆ ಎನ್ನುವ ವಿಶ್ವಾಸವನ್ನು ಹೊಂದಿದ್ದೇನೆ. ಹೊಸ ಸರ್ಕಾರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದು ಹೇಳಿದರು.

ಕೌಶಲ್ಯ ವಿಕಸನಕ್ಕೆ ಪ್ರಧಾನಿಯವರು ಸಾಕಷ್ಟು ಒತ್ತು ನೀಡಿದ್ದಾರೆ. ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ ಮೂಲಕ ಕೌಶಲ್ಯಾಭಿವೃದ್ಧಿಗೆ ಮಹತ್ವ ನೀಡಿದ್ದಾರೆ. ಮೇಕ್ ಇನ್ ಇಂಡಿಯಾ ಬಗ್ಗೆ ಜನರು ಗೇಲಿ ಮಾಡಿದ್ದರು. ಆದರೆ, ಶೇಕಡಾ 92ರಷ್ಟು ಮೊಬೈಲ್ ಈಗ ನಮ್ಮ ದೇಶದಲ್ಲೇ ತಯಾರಾಗುತ್ತಿದೆ. ಈಗ ಚೀನಾ ತನ್ನ ಡಿಮ್ಯಾಂಡ್ ಕಳೆದುಕೊಂಡಿದೆ. ಭಾರತದಲ್ಲೂ ಉತ್ತಮ ಮಾನವ ಸಂಪನ್ಮೂಲ ಇದೆ ಎಂದು ಹೇಳಿದರು.

ನಿದ್ದೆಗೆ ಜಾರಿದ ತೇಜಸ್ವಿ ಸೂರ್ಯ; ಇಲ್ಲಿದೆ ನೋಡಿ ವಿಡಿಯೊ

ಈ ವೇಳೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಭಾಗಿಯಾಗಿದ್ದ ಸಂಸದ ತೇಜಸ್ವಿ ಸೂರ್ಯ ಅವರು ನಿದ್ದೆಗೆ ಜಾರಿದ್ದರು. ಸಂಸದ ಪಿ.ಸಿ. ಮೋಹನ್‌ ಮೋಹನ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಮೂರು ಕಡೆ ಉದ್ಯೋಗ ಮೇಳ ಕಾರ್ಯಕ್ರಮ

ರಾಜ್ಯದಲ್ಲಿ ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಈ ಮೇಳದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. 71 ಸಾವಿರ ನೇಮಕಾತಿ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಿದ್ದಾರೆ. ವರ್ಚುವಲ್ ಮೂಲಕ ಮೋದಿ ಅವರು ಪತ್ರ ವಿತರಿಸಿದ್ದು, ದೇಶದ 45 ಸ್ಥಳಗಳಲ್ಲಿ ರೋಜ್‌ಗಾರ್ ಮೇಳವನ್ನು ಆಯೋಜನೆ ಮಾಡಲಾಗಿತ್ತು.

ಇದನ್ನೂ ಓದಿ: ನನ್ನ ಕುಟುಂಬದ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದರೆ ನಿಮ್ಮ ಮನೆಗೇ ಬರುತ್ತೇನೆ ಎಚ್ಚರ: ಬಾಲಚಂದ್ರ ಜಾರಕಿಹೊಳಿ

ಯಾವ ಯಾವ ಹುದ್ದೆಗಳ ನೇಮಕಾತಿ ಪತ್ರ ವಿತರಣೆ

ಅಂಚೆ ಇಲಾಖೆ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಪತ್ರವು ಈ ವೇಳೆ ವಿತರಣೆಗೊಳ್ಳಲಿದೆ. ಗ್ರಾಮೀಣ ಡಾಕ್ ಸೇವಕ್, ಅಂಚೆ ನೀರಿಕ್ಷಕರು, ತೆರಿಗೆ ಸಹಾಯಕರು, ಇನ್‌ಸ್ಪೆಕ್ಟರ್‌ಗಳು, ನರ್ಸಿಂಗ್, ಸಹಾಯಕ ಲೆಕ್ಕಪರಿಶೋಧಕ, ಜೂನಿಯರ್ ಅಕೌಂಟ್ ಕ್ಲರ್ಕ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪ್ರಾಂಶುಪಾಲರು ಸೇರಿದಂತೆ ಹಲವು ಹುದ್ದೆಗಳ ನೇಮಕಾತಿ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿತರಣೆ ಮಾಡಿದ್ದಾರೆ.

Exit mobile version