ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಕ್ಕೆ (Teacher Recruitment 2022) ಸಂಬಂಧಿಸಿದಂತೆ ಕೊನೆಗೂ ಶಿಕ್ಷಣ ಇಲಾಖೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದೆ. ಇಲಾಖೆಯ ವೆಬ್‌ಸೈಟ್‌ನಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದ್ದು, 13,352 ಅಭ್ಯರ್ಥಿಗಳು ಶಿಕ್ಷಕರಾಗಿ ನೇಮಕಗೊಂಡಿದ್ದಾರೆ.
ವೆಬ್‌ಸೈಟ್‌ನಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿರುವ ವಿಷಯವನ್ನು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಫೆಬ್ರವರಿ 27 ರಂದು 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಮಾ.1 ರಿಂದ ಮಾ.4 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. 700ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 15 ಆಕ್ಷೇಪಣೆಗಳು ಮಾತ್ರ ಪರಿಗಣನೆಗೆ ಅರ್ಹವಾಗಿದ್ದವು. ಇವುಗಳನ್ನು ಪರಿಶೀಲಿಸಿ ಈಗ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಯ್ಕೆಯಾದ ಶಿಕ್ಷಕರ ವಿವರ ಇಂತಿದೆ; ಇಂಗ್ಲಿಷ್ ಭಾಷೆ -1,772, ಗಣಿತ ಮತ್ತು ವಿಜ್ಞಾನ -5,498, ಸಮಾಜ ಪಾಠಗಳು-4,524, ಜೀವ ವಿಜ್ಞಾನ-1,558, ಒಟ್ಟು -13352
ನೇಮಕ ಪ್ರಕ್ರಿಯೆ ಪ್ರಮುಖ ಮಾಹಿತಿ
- ನೇಮಕಾತಿ ಅಧಿಸೂಚನೆ ಹೊರಡಿಸಿದ ದಿನಾಂಕ : 21-03-2022.
- ಆನ್‌ಲೈನ್ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ : ದಿನಾಂಕ:21-03-2022 ರಿಂದ 22-04-2022
ರವರೆಗೆ ಅವಕಾಶ ಕಲ್ಪಿಸಲಾಗಿತ್ತು. - ಸಲ್ಲಿಕೆಯಾದ ಒಟ್ಟು ಅರ್ಜಿಗಳ ಸಂಖ್ಯೆ : 1,16,223.
- ನೇಮಕಾತಿ ಪರೀಕ್ಷೆ ನಡೆದ ದಿನಾಂಕ : 21-05-2022 ಮತ್ತು 22-05-2022
- ಪರೀಕ್ಷೆಗೆ ಹಾಜರಾದವರ ಸಂಖ್ಯೆ : 68,849
- ಪರೀಕ್ಷೆಯಲ್ಲಿ ಅರ್ಹತೆ ಪಡೆದವರ ಸಂಖ್ಯೆ: 51,098
- 1:2 ಪರಿಶೀಲನಾ ಪಟ್ಟಿಯಲ್ಲಿ ಪರಿಗಣಿಸಲ್ಪಟ್ಟಿದ್ದ ಅಭ್ಯರ್ಥಿಗಳ ಸಂಖ್ಯೆ : 22,432
- 1:1 ತಾತ್ಕಾಲಿಕ ಆಯ್ಕೆಪಟ್ಟಯಲ್ಲಿ ಆಯ್ಕೆಯಾಗಿದ್ದವರ ಸಂಖ್ಯೆ: 13,351
- ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆ: 13,352
- ಮುಖ್ಯ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳ ಸಂಖ್ಯೆ: 8,376
- ಆಯ್ಕೆಯಾದ ಪುರುಷ ಅಭ್ಯರ್ಥಿಗಳ ಸಂಖ್ಯೆ: 4,973
- ಆಯ್ಕೆಯಾದ ತೃತೀಯ ಲಿಂಗಿ ಅಭ್ಯರ್ಥಿಗಳು : 03
- ಆಯ್ಕೆಯಾದ ಎಂಜಿನಿಯರಿಂಗ್ ಅಭ್ಯರ್ಥಿಗಳ ಸಂಖ್ಯೆ : 21
ಮೂಲ ವೃಂದದ ಒಟ್ಟು 10,000 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ 9,159 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಐದು ಸಾವಿರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಇದಕ್ಕೆ 4,193 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಒಟ್ಟಾರೆ 15,000 ಹುದ್ದೆಗಳಿಗೆ ನಡೆದ ನೇಮಕ ಪ್ರಕ್ರಿಯೆಯಲ್ಲಿ 13,352 ಹುದ್ದೆಗಳಿಗೆ ಆಯ್ಕೆ ನಡೆದಿದ್ದು, ಒಟ್ಟು 1,648 ಹುದ್ದೆಗಳು ಭರ್ತಿಯಾಗದೆ ಉಳಿಯಲಿವೆ ಎಂದು ಸಚಿವರು ತಿಳಿಸಿದ್ದಾರೆ.
ಮಹಿಳಾ ದಿನಾಚರಣೆಯಂದೇ ಮಹಿಳಾ ಅಭ್ಯರ್ಥಿಗಳಿಗೆ ಗಿಫ್ಟ್
ಹಲವಾರು ಏಳು-ಬೀಳುಗಳನ್ನು ಕಂಡ ಶಿಕ್ಷಕರ ನೇಮಕ ಪ್ರಕ್ರಿಯೆಯ ಅಂತಿಮ ಆಯ್ಕೆ ಪಟ್ಟಿಯು ಮಹಿಳಾ ದಿನಾಚರಣೆಯಂದು ಪ್ರಕಟವಾಗಿದೆ. ವಿಶೇಷವೆಂದರೆ ಈ ಆಯ್ಕೆಪಟ್ಟಿಯಲ್ಲಿ ಶಿಕ್ಷಕರಾಗಿ ನೇಮಕಗೊಂಡವರಲ್ಲಿ ಮಹಿಳಾ ಅಭ್ಯರ್ಥಿಗಳೇ ಹೆಚ್ಚಿದ್ದಾರೆ. ಆಯ್ಕೆಯಾದ ಒಟ್ಟು 13,352 ಅಭ್ಯರ್ಥಿಗಳ ಪೈಕಿ ಮಹಿಳೆಯರ ಸಂಖ್ಯೆ 8,376 ! ಕೇವಲ 4,973 ಪುರುಷ ಅಭ್ಯರ್ಥಿಗಳು ಶಿಕ್ಷಕರಾಗಿ ನೇಮಕಗೊಂಡಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ಮೀಸಲಾಗಿದ್ದ ಐದು ಸಾವಿರ ಹುದ್ದೆಗಳಲ್ಲಿಯೂ ಮಹಿಳಾ ಅಭ್ಯರ್ಥಿಗಳು ತಮ್ಮ ಪ್ರಾಬಲ್ಯ ಮೆರೆದಿದ್ದು, 2,413 ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಈ ನೇಮಕಾತಿಗೆ ಸಂಬಂಧಿಸಿದಂತೆ ಕಳೆದ ಮೇ 21 ಮತ್ತು 22 ರಂದು ಲಿಖಿತ ಪರೀಕ್ಷೆ ನಡೆಸಿದ್ದು, ಆಗಸ್ಟ್ 17 ರಂದು ಫಲಿತಾಂಶ ಪ್ರಕಟಿಸಲಾಗಿತ್ತು. ಸೆಪ್ಟೆಂಬರ್‌ನಲ್ಲಿ 1:2 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿ ಪ್ರಕಟಿಸಲಾಗಿತ್ತು. ಈ ಪಟ್ಟಿಯಲ್ಲಿ 22,432 ಅಭ್ಯರ್ಥಿಗಳು ಸ್ಥಾನ ಪಡೆದಿದ್ದರು. ಅಕ್ಟೋಬರ್‌ನಲ್ಲಿ ಇವರ ದಾಖಲೆ ಪರಿಶೀಲನೆ ನಡೆಸಲಾಗಿತ್ತು. ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 13,352 ಅಭ್ಯರ್ಥಿಗಳು ಸ್ಥಾನ ಪಡೆದಿದ್ದರು.
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ : https://www.schooleducation.kar.nic.in
ಇದನ್ನೂ ಓದಿ : Teacher Recruitment 2022 : ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕ; ಹೊಸ ಆಯ್ಕೆ ಪಟ್ಟಿ ಪ್ರಕಟ; 13,351 ಅಭ್ಯರ್ಥಿಗಳು ಆಯ್ಕೆ