ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಕ್ಕೆ (Teacher Recruitment 2022) ಸಂಬಂಧಿಸಿದಂತೆ 1:1 ಅನುಪಾತದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಒಟ್ಟು 13,363 ಅಭ್ಯರ್ಥಿಗಳು ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 1,637 ಹುದ್ದೆಗಳು ನೇಮಕವಾಗದೇ ಖಾಲಿ ಉಳಿದಿವೆ.
ಕಲ್ಯಾಣ ಕರ್ನಾಟಕದ 5 ಸಾವಿರ ಹುದ್ದೆಗಳಲ್ಲಿ 4,187ಗಳಿಗೆ ನೇಮಕವಾಗಿದ್ದಾರೆ. ಉಳಿದ 9,176 ಅಭ್ಯರ್ಥಿಗಳು ರಾಜ್ಯದ ಇತರ ಜಿಲ್ಲೆಗಳಿಗೆ ನೇಮಕಗೊಂಡಿದ್ದಾರೆ. ತೃತೀಯ ಲಿಂಗಿಗಳಿಗೆ ಮೀಸಲಾಗಿದ್ದ 10 ಹುದ್ದೆಗಳ ಪೈಕಿ ಮೂರು ಹುದ್ದೆಗಳಿಗೆ ನೇಮಕಗೊಂಡಿದ್ದಾರೆ.
ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ ಸೈಟ್‌ನಲ್ಲಿ ವಿಭಾಗವಾರು ಒದಗಿಸಲಾಗಿದ್ದು, ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಸಕ್ತರು ನವೆಂಬರ್ 23 ರ ಒಳಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಆಯಾ ಜಿಲ್ಲಾ ಉಪನಿರ್ದೇಶಕರಿಗೆ ತಮ್ಮ ಆಕ್ಷೇಪಣೆಯನ್ನು ಸಲ್ಲಿಸಬಹುದು. ಈ ವಿಷಯವನ್ನು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಶಿಕ್ಷಕರಾದ ಎಂಜಿನಿಯರಿಂಗ್ ಪದವೀಧರರು
ಈ ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಕಟ್ಟು ನಿಟ್ಟಾಗಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿತ್ತು. ಅದರಂತೆ ಅಧಿಸೂಚನೆ ಹೊರಡಿಸಿದ ದಿನದಿಂದ 1:1 ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆವರೆಗಿನ ಪ್ರಕ್ರಿಯೆಯನ್ನು 9 ತಿಂಗಳ ಒಳಗೆ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ ಸಚಿವರು, ತೃತೀಯ ಲಿಂಗಿಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ಶೇ.1ರಷ್ಟು ಮೀಸಲಾತಿ ನೀಡಲಾಗಿತ್ತು. ಪ್ರಪ್ರಥಮ ಬಾರಿಗೆ ಮೂವರು ಲಿಂಗತ್ವ ಅಲ್ಪಸಂಖ್ಯಾತರು 1:1 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಅರ್ಹ ಎಂಜಿನಿಯರಿಂಗ್ ಪದವೀಧರರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. 34 ಜನರು ಪರೀಕ್ಷೆ ಬರೆದಿದ್ದರು. ಅವರಲ್ಲಿ 19 ಎಂಜಿನಿಯರಿಂಗ್ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಸಚಿವರು ವಿವರಿಸಿದ್ದಾರೆ.
ಶುಕ್ರವಾರ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವರು ಗುರುವಾರವೇ ಟ್ವೀಟ್‌ನಲ್ಲಿ ಪ್ರಕಟಿಸಿದ್ದರು. ಅಂತೆಯೇ ಇಂದು ಆಯ್ಕೆ ಪಟ್ಟಿ ಹೊರಬಿದ್ದಿದೆ.
ಈ ನೇಮಕಾತಿಗೆ ಸಂಬಂಧಿಸಿದಂತೆ ಕಳೆದ ಮೇ 21 ಮತ್ತು 22 ರಂದು ಲಿಖಿತ ಪರೀಕ್ಷೆ ನಡೆಸಿದ್ದು, ಆಗಸ್ಟ್ 17 ರಂದು ಫಲಿತಾಂಶ ಪ್ರಕಟಿಸಲಾಗಿತ್ತು. 15 ಸಾವಿರ ಹುದ್ದೆಗಳಿಗೆ ನಡೆದ ಈ ಪರೀಕ್ಷೆ ಬರೆಯಲು 1,16,223. ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಶಿಕ್ಷಕ ಹುದ್ದೆಗೆ ಪರಿಗಣನೆಯಾಗಿರುವ ಅರ್ಜಿಗಳ ಸಂಖ್ಯೆ 68,849 ಮಾತ್ರ. ಪರೀಕ್ಷೆಗೆ ಶೇ.7ರಷ್ಟು ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. 51,098 ಪರೀಕ್ಷೆ ಬರೆದು ಅರ್ಹತೆ ಪಡೆದಿದ್ದರು.
ಸೆಪ್ಟೆಂಬರ್‌ನಲ್ಲಿ 1:2 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿ ಪ್ರಕಟಿಸಲಾಗಿತ್ತು. ಈ ಪಟ್ಟಿಯಲ್ಲಿ 22,432 ಅಭ್ಯರ್ಥಿಗಳು ಸ್ಥಾನ ಪಡೆದಿದ್ದರು. ಅಕ್ಟೋಬರ್‌ನಲ್ಲಿ ಇವರ ದಾಖಲೆ ಪರಿಶೀಲನೆ ನಡೆಸಲಾಗಿತ್ತು. ಇದೀಗ ಅಂತಿಮವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. 13,363 ಅಭ್ಯರ್ಥಿಗಳು ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಮಾಹಿತಿಗೆ ಸಹಾಯವಾಣಿ ಸಂಖ್ಯೆ: 080-22483140,080- 2222 8805, 080-22483145
ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‌ಸೈಟ್ ವಿಳಾಸ: https://www.schooleducation.kar.nic.in/index.html
ಇದನ್ನೂ ಓದಿ | ಈಗ ಆನ್‌ಲೈನ್ ವ್ಯಾಪ್ತಿಗೆ ಶಿಕ್ಷಕರ ಅಗತ್ಯ ಸೇವೆ: ಶಿಕ್ಷಣ ಇಲಾಖೆಗೆ ಪ್ರಾಥಮಿಕ ಶಿಕ್ಷಕರ ಸಂಘ ಅಭಿನಂದನೆ