Site icon Vistara News

Teacher Recruitment 2022 : 15 ಸಾವಿರ ಶಿಕ್ಷಕರ ನೇಮಕಾತಿ ಪರೀಕ್ಷೆಯ ಕೀ ಉತ್ತರ ಪ್ರಕಟ

Teacher Recruitment 2022

ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ( 6 ರಿಂದ 8 ನೇ ತರಗತಿ) ನೇಮಕಕ್ಕೆ (Teacher Recruitment 2022) ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಕೀ ಉತ್ತರಗಳನ್ನು ಇಲಾಖೆಯ ವೆಬ್‌ನಲ್ಲಿ ಪ್ರಕಟಿಸಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಇಲಾಖೆಯ ವೆಬ್‌ಗೆ ಭೇಟಿ ನೀಡಿ ಕೀ ಉತ್ತರಗಳನ್ನು ಪರಿಶೀಲಿಸಬಹುದಾಗಿದೆ. ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ ಉತ್ತರಗಳನ್ನು ಪ್ರತ್ಯೇಕವಾಗಿ ನೀಡಲಾಗಿದೆ.

ಪ್ರಕಟಿಸಿರುವ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅಭ್ಯರ್ಥಿಗಳು ಇಚ್ಛಿಸಿದಲ್ಲಿ ಆನ್‌ಲೈನ್‌ ಮೂಲಕವೇ ತಮ್ಮ ಆಕ್ಷೇಪಣೆ ದಾಖಲಿಸಲಬಹುದಾಗಿದೆ. ಇದಕ್ಕಾಗಿ ಇಲಾಖೆಯು ಲಿಂಕ್‌ ಒದಗಿಸಿದ್ದು ಇದರಲ್ಲಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸಿ, ಲಾಗಿನ್‌ ಆಗುವ ಮೂಲಕ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಆಕ್ಷೇಪಣೆ ಸಲ್ಲಿಸಲು ಜೂನ್‌ 10 ಕೊನೆಯ ದಿನವಾಗಿದೆ. ನಂತರ ಬರುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಇಲಾಖೆಯು ಸ್ಪಷ್ಪಪಡಿಸಿದೆ.

ಲಿಂಕ್‌ ಇಲ್ಲಿದೆ |https://sts.karnataka.gov.in/GPSTRNHK/ObjectionLogin.aspx

ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಮಾತ್ರ ಆಕ್ಷೇಪಣೆ ಸಲ್ಲಿಸಬೇಕು, ಆಫ್‌ಲೈನ್‌ ಮೂಲಕ ಸಲ್ಲಿಸಿದರೆ ಪರಿಗಣಿಸಲಾಗುವುದಿಲ್ಲ ಎಂದು ಇಲಾಖೆ ಹೇಳಿದೆ. ಆಕ್ಷೇಪಣೆ ಸಲ್ಲಿಸುವಾಗ ಪೂರಕ ಮಾಹಿತಿಯನ್ನು, ದಾಖಲೆಗಳನ್ನು ಒದಗಿಸಬೇಕಿರುತ್ತದೆ.

ಆಕ್ಷೇಪಣೆಗೂ ಶುಲ್ಕ
ಅಭ್ಯರ್ಥಿಯು ಪ್ರತಿ ಆಕ್ಷೇಪಣೆಗೆ 50 ರೂ. ಶುಲ್ಕ ಪಾವತಿಸಬೇಕಾಗಿರುತ್ತದೆ. ಇದು ಸಂಸ್ಕರಣಾ ಶುಲ್ಕವಾಗಿದ್ದು, ಅಭ್ಯರ್ಥಿಯು ಸಲ್ಲಿಸಿರುವ ಆಕ್ಷೇಪಣೆಯು ಸರಿಯಾಗಿದ್ದಲ್ಲಿ ಈ ಶುಲ್ಕವನ್ನು ಹಿಂದಿರುಗಿಸಲಾಗುತ್ತದೆ. ಪೂರಕ ದಾಖಲೆಗಳಿಲ್ಲದಿದ್ದಲ್ಲಿ ಆಕ್ಷೇಪಣೆಯನ್ನು ತಿರಸ್ಕರಿಸಲಾಗುತ್ತದೆ ಮತ್ತು ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿದೆ. ಸಾಧ್ಯವಾಗದಿದ್ದರೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಚಲನ್‌ ಮೂಲಕ ಕೂಡ ಸಲ್ಲಿಸಲು ಅವಕಾಶ ನೀಡಲಾಗಿದೆ.

ಹೆಚ್ಚಿನ ಮಾಹಿತಿಗೆ ವೆಬ್‌ : https://www.schooleducation.kar.nic.in

ಐವರಲ್ಲಿ ಒಬ್ಬರಿಗೆ ಹುದ್ದೆ ?
15 ಸಾವಿರ ಹುದ್ದೆಗಳಿಗೆ ಕಳೆದ ಮೇ 21ಮತ್ತು 22 ರಂದು ನಡೆದ ಈ ಪರೀಕ್ಷೆ ಬರೆಯಲು 1,06,083 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಶಿಕ್ಷಕ ಹುದ್ದೆಗೆ ಪರಿಗಣನೆಯಾಗಿರುವ ಅರ್ಜಿಗಳ ಸಂಖ್ಯೆ 74,116 ಮಾತ್ರ. ಆದರೆ ಪರೀಕ್ಷೆಗೆ ಶೇ.7ರಷ್ಟು ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಹೀಗಾಗಿ ಈಗ 69,159 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಇದರಿಂದ ಪರೀಕ್ಷೆ ಬರೆದ ಐವರಲ್ಲಿ ಒಬ್ಬರಿಗೆ ಈ ಹುದ್ದೆ ದೊರೆಯಬಹುದು ಎಂದು ಲೆಕ್ಕಾಚಾರ ಹಾಕಲಾಗುತ್ತಿದೆ. ಅಭ್ಯರ್ಥಿಗಳಿಗೆ ತಮಗೆ ಈ ಹುದ್ದೆ ದೊರೆಯುವುದೇ ಎಂಬುದು ಈ ಕೀ ಉತ್ತರದಿಂದ ಇನ್ನಷ್ಟು ಸ್ಪಷ್ಟವಾಗಲಿದೆ.

Exit mobile version