ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ( 6 ರಿಂದ 8 ನೇ ತರಗತಿ) ನೇಮಕಕ್ಕೆ (Teacher Recruitment 2022) ಸಂಬಂಧಿಸಿದಂತೆ 1:2 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿ ವಿಭಾಗವಾರು ಇಂದಿನಿಂದ (ಸೆ.27) ಪ್ರಕಟವಾಗಲಿದೆ.
ಮೊದಲಿಗೆ ಬೆಂಗಳೂರು ವಿಭಾಗದ ಪಟ್ಟಿ ಪ್ರಕಟವಾಗಿದೆ. ಬೆಳಗಾವಿ, ಮೈಸೂರು ಮತ್ತು ಕಲಬುರಗಿ ವಿಭಾಗದ ಪಟ್ಟಿಯನ್ನು ಕ್ರಮವಾಗಿ ಬುಧವಾರ ಮತ್ತು ಗುರುವಾರ (ಸೆ.28 ಮತ್ತು 29) ಸಂಜೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಈ ವಿಷಯವನ್ನು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ.ನಾಗೇಶ್ ಟ್ವೀಟ್ ಮಾಡಿ ತಿಳಿಸಿದ್ದಾರೆ.
ಪ್ರತಿ ಹುದ್ದೆಗೆ ಇಬ್ಬರು ಅಭ್ಯರ್ಥಿಗಳ ಆಯ್ಕೆಯಂತೆ ಸದ್ಯ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಇವರ ದಾಖಲೆ ಪರಿಶೀಲನೆ ನಡೆಯುತ್ತದೆ. ನಂತರ ಒಂದು ಹುದ್ದೆಗೆ ಒಬ್ಬರಂತೆ ಅರ್ಹರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
1:2 ತಾತ್ಕಾಲಿಕ ಪರಿಶೀಲನಾ ಪಟ್ಟಿಯಲ್ಲಿನ ಅಭ್ಯರ್ಥಿಗಳು ಸಂಬಂಧಪಟ್ಟ ಜಿಲ್ಲೆಯ ಉಪನಿರ್ದೇಶಕರ (ಆಡಳಿತ) ಹಾಗೂ ನೇಮಕಾತಿ ಪ್ರಾಧಿಕಾರದ ಕಚೇರಿಯಲ್ಲಿ ತಮ್ಮ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕೆಂದು ಸೂಚಿಸಲಾಗಿದೆ. ಈ ಸಂಬಂದ ವೇಳಾಪಟ್ಟಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಸೆಪ್ಟೆಂಬರ್ 30 ರಂದು ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಉತ್ತರ ಪತ್ರಿಕೆಗಳಲ್ಲಿ ತಮ್ಮ ವೈಯುಕ್ತಿಕ ಗುರುತುಗಳನ್ನು ಬಹಿರಂಗಪಡಿಸಿ ಪರೀಕ್ಷಾ ನಿಯಮಗಳನ್ನು ಉಲ್ಲಂಘಿಸಿದ ಹಾಗೂ ಇನ್ನಿತರ ಕಾರಣಗಳಿಂದಾಗಿ 60 ಅಭ್ಯರ್ಥಿಗಳನ್ನು 1:2 ಅನುಪಾತದ ಪಟ್ಟಿಗೆ ಪರಿಗಣಿಸದೇ ಕೈ ಬಿಡಲಾಗಿದೆ ಎಂದು ಇಲಾಖೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಲಿಂಕ್ : https://schooleducation.kar.nic.in/cacellpdfs/pdffiles/Prakatane_27092022.pdf
ಈ ನೇಮಕಾತಿಗೆ ಸಂಬಂಧಿಸಿದಂತೆ ಕಳೆದ ಮೇ 21 ಮತ್ತು 22 ರಂದು ಲಿಖಿತ ಪರೀಕ್ಷೆ ನಡೆಸಿದ್ದು, ಆಗಸ್ಟ್ 17 ರಂದು ಫಲಿತಾಂಶ ಪ್ರಕಟಿಸಲಾಗಿತ್ತು. 15 ಸಾವಿರ ಹುದ್ದೆಗಳಿಗೆ ನಡೆದ ಈ ಪರೀಕ್ಷೆ ಬರೆಯಲು 1,06,083 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಶಿಕ್ಷಕ ಹುದ್ದೆಗೆ ಪರಿಗಣನೆಯಾಗಿರುವ ಅರ್ಜಿಗಳ ಸಂಖ್ಯೆ 74,116 ಮಾತ್ರ. ಪರೀಕ್ಷೆಗೆ ಶೇ.7ರಷ್ಟು ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. ಹೀಗಾಗಿ ಈಗ 69,159 ಅಭ್ಯರ್ಥಿಗಳ ಫಲಿತಾಂಶ ಪ್ರಕಟಗೊಂಡಿತ್ತು.
ಇದನ್ನೂ ಓದಿ| 2,500 ಪ್ರೌಢಶಾಲಾ ಶಿಕ್ಷಕರ ನೇಮಕ | ಸದ್ಯವೇ ಅಧಿಸೂಚನೆ; ಡಿಸೆಂಬರ್‌ನಲ್ಲಿ ಪರೀಕ್ಷೆ