ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8ನೇ ತರಗತಿ) ನೇಮಕಕ್ಕೆ (Teacher Recruitment 2022) ಸಂಬಂಧಿಸಿದಂತೆ ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಿಸಿದ್ದು, ಒಟ್ಟು ೫೪,೩೪೨ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ಅರ್ಹತೆ ಪಡೆಯದ ಅಭ್ಯರ್ಥಿಗಳು ಮತ್ತೆ ನೇಮಕ ಪ್ರಕ್ರಿಯೆ ಯಾವಾಗ ಶುರುವಾಗಬಹುದು ಎಂದು ಪ್ರಶ್ನಿಸುತ್ತಿದ್ದಾರೆ. ಈಗ ನಡೆಯುತ್ತಿರುವ ನೇಮಕ ಪ್ರಕ್ರಿಯೆಯಲ್ಲಿ ಒಂದು ವೇಳೆ ಅಗತ್ಯ ಇರುವಷ್ಟು ಅರ್ಹ ಅಭ್ಯರ್ಥಿಗಳು ಲಭ್ಯವಾಗದೇ ಇದ್ದಲ್ಲಿ ಮುಂದಿನ ಡಿಸೆಂಬರ್ ಒಳಗೆ ಮತ್ತೊಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಾಗುವುದು ಎಂದು ಕಳೆದ ಜುಲೈನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದರು. ಹೀಗಾಗಿ ಮತ್ತೊಮ್ಮೆ ಸಿಇಟಿ ನಡೆಯುತ್ತಾ ಎಂಬ ಬಗ್ಗೆ ಅಭ್ಯರ್ಥಿಗಳ ನಡುವೆ ಚರ್ಚೆ ನಡೆಯುತ್ತಿದೆ.
ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ ಸದ್ಯ ನಡೆಯುತ್ತಿರುವ ನೇಮಕ ಪ್ರಕ್ರಿಯೆಯಲ್ಲಿ ಒಟ್ಟಾರೆ ಅಗತ್ಯಕ್ಕಿಂತ ಹೆಚ್ಚು ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಕೆಲ ಭಾಷಾ ವಿಷಯಗಳಲ್ಲಿ ಮಾತ್ರ ಅರ್ಹ ಅರ್ಭರ್ಥಿಗಳ ಕೊರತೆ ಇದೆ. ಜಿಲ್ಲಾವಾರು ಹುದ್ದೆಗಳಿಗೆ ಮೀಸಲಾತಿಯನ್ವಯ ಆಯ್ಕೆಯಾದ ಅಭ್ಯರ್ಥಿಗಳು ಲಭ್ಯವಿದ್ದಾರೆಯೇ ಎಂಬುದನ್ನು ಈಗ ಪರಿಶೀಲಿಸಲಾಗುತ್ತಿದೆ. ಅರ್ಹ ಅಭ್ಯರ್ಥಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಇನ್ನಿಲ್ಲವೆಂದರೂ ಮೂರ್ನಾಲ್ಕು ತಿಂಗಳು ಬೇಕಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಬಹಳ ಅಭ್ಯರ್ಥಿಗಳ ಕೊರತೆ ಉಂಟಾದಲ್ಲಿ ಮಾತ್ರ ಕೂಡಲೇ ನೇಮಕ ಪ್ರಕ್ರಿಯೆ ಆರಂಭಿಸಲಾಗುತ್ತದೆ.
ಶಿಕ್ಷಕರ ಕೊರತೆಯು ಹೆಚ್ಚಾಗಿರುವುದರಿಂದ ಈ ನೇಮಕ ಪ್ರಕ್ರಿಯೆಯಲ್ಲಿ ಅರ್ಹ ಅಭ್ಯರ್ಥಿಗಳ ಸಂಖ್ಯೆ ಕಡಿಮೆ ಇದ್ದಿದ್ದರೆ ಕೂಡಲೇ ಮತ್ತೊಂದು ಸಿಇಟಿ ನಡೆಸಲು ಶಿಕ್ಷಣ ಸಚಿವರು ಸೂಚಿಸಿದ್ದರು. ಈ ಬಗ್ಗೆ ಅವರು ಹೇಳಿಕೆ ಕೂಡ ನೀಡಿದ್ದರು. ಆದರೆ ಈಗ ಆ ಪರಿಸ್ಥಿತಿ ಉದ್ಭವಿಸದು. ಕೆಲ ಭಾಷಾ ವಿಷಯಗಳನ್ನು ಬಿಟ್ಟರೆ, ವಿಷಯಗಳ ಶಿಕ್ಷಕರ ಹುದ್ದೆಗಳಿಗೆ ಹೆಚ್ಚಿನ ಮಂದಿ ಅರ್ಹತೆ ಪಡೆದಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು “ವಿಸ್ತಾರ ನ್ಯೂಸ್ʼʼಗೆ ತಿಳಿಸಿದ್ದಾರೆ.
ಸದ್ಯ ಉರ್ದು, ಮರಾಠಿ, ತೆಲುಗು ಭಾಷಾ ಶಿಕ್ಷಕರ ಹುದ್ದೆಗಳಿಗೆ ಖಾಲಿ ಇರುವ ಹುದ್ದೆಗಳಿಗೆ ತಕ್ಕಂತೆ ಅರ್ಹ ಅಭ್ಯರ್ಥಿಗಳು ಲಭ್ಯವಾಗಿಲ್ಲ. ಮರಾಠಿಯ ಗಣಿತ ವಿಜ್ಞಾನ ಶಿಕ್ಷಕರ74 ಖಾಲಿ ಹುದ್ದೆಗಳಿಗೆ 50 ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದಿದ್ದಾರೆ. ಉರ್ದು ಶಾಲೆಗಳ ಗಣಿತ ವಿಜ್ಞಾನದಲ್ಲಿ 411 ಹುದ್ದೆಗಳು ಖಾಲಿ ಇದ್ದು, 286 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ತೆಲುಗು ಶಾಲೆಗಳ ಸಮಾಜ ವಿಜ್ಞಾನದ 2 ಹುದ್ದೆಗೆ ಒಬ್ಬರೂ ಅರ್ಹತೆ ಪಡೆದಿಲ್ಲ. ಹೀಗಾಗಿ ಶಿಕ್ಷಣ ಸಚಿವರ ಹೇಳಿಕೆಯಂತೆ ಮತ್ತೊಮ್ಮೆ ಟಿಇಟಿ ನಡೆಯಬಹುದು ಎಂಬ ಭರವಸೆಯಲ್ಲಿ ಅಭ್ಯರ್ಥಿಗಳಿದ್ದಾರೆ.
ಇಲಾಖೆಯು ಈಗಾಗಲೇ ನವೆಂಬರ್ ೬ ರಂದು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಸುವುದಾಗಿ ಪ್ರಕಟಿಸಿದೆ. ಇದರಲ್ಲಿ ಅರ್ಹತೆ ಪಡೆದವರಿಗೂ ಮುಂದಿನ ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕಾಗಿದೆ. ಹೀಗಾಗಿ ಈ ಪರೀಕ್ಷೆ ನಡೆದು, ಫಲಿತಾಂಶ ಪ್ರಕಟವಾದ ನಂತರವೇ ಮತ್ತೊಂದು ಸಿಇಟಿ ನಡೆಸುವ ಕುರಿತು ತೀರ್ಮಾನಿಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ವಿವರಿಸಿದ್ದಾರೆ.
ಈಗ ರಾಜ್ಯದಲ್ಲಿ ಒಬ್ಬರು ಶಿಕ್ಷಕರಿಗೆ 40 ಮಂದಿ ವಿದ್ಯಾರ್ಥಿಗಳಿದ್ದಾರೆ. ಶಿಕ್ಷಕರ ಸಂಖ್ಯೆಯನ್ನು ಕೂಡಲೇ ಹೆಚ್ಚಿಸದಿದ್ದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಅದು ಪರಿಣಾಮ ಬೀರಲಿದೆ. ಹೀಗಾಗಿ ನೇಮಕ ಪ್ರಕ್ರಿಯೆಯನ್ನು ನಡೆಸಲು ಈಗಾಗಲೇ ತೀರ್ಮಾನಿಸಲಾಗಿದೆ. ಆದರೆ ಅಭ್ಯರ್ಥಿಗಳು ನಿರೀಕ್ಷಿಸುತ್ತಿರುವಂತೆ ಡಿಸೆಂಬರ್ ಒಳಗೇ ಮತ್ತೊಂದು ಸಿಇಟಿ ನಡೆಯುವುದು ಕಷ್ಟ. ಆದರೆ ಮುಂದಿನ ವರ್ಷದ ಆರಂಭದಲ್ಲಿಯೇ 20 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಅರ್ಹತೆ ಪಡೆದ ನಾಲ್ವರಲ್ಲಿ ಒಬ್ಬರಿಗೆ ಜಾಬ್
15 ಸಾವಿರ ಹುದ್ದೆಗಳಿಗೆ 1,16,223 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಕಳೆದ ಮೇ 21 ಮತ್ತು 22 ರಂದು ನಡೆದ ಲಿಖಿತ ಪರೀಕ್ಷೆಗೆ ಹಾಜರಾದವರ ಸಂಖ್ಯೆ 74,923. ಇವರಲ್ಲಿ 54,342 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, ಪರೀಕ್ಷೆ ಬರೆದ 20,581 ಅಭ್ಯರ್ಥಿಗಳು ಅರ್ಹತೆ ಪಡೆದಿಲ್ಲ. ಅರ್ಹತೆ ಪಡೆದ ನಾಲ್ವರಲ್ಲಿ ಒಬ್ಬರಿಗೆ ಈಗ ಉದ್ಯೋಗ ದೊರೆಯುವುದು ಖಚಿತವಾಗಿದೆ. ಆದರೆ ವಿಷಯವಾರು ಅರ್ಹತೆ ಪಡೆದ ಅಭ್ಯರ್ಥಿಗಳಲ್ಲಿ ಭಾರಿ ವ್ಯತ್ಯಾಸಗಳಿವೆ. ಈ ನೇಮಕ ಪ್ರಕ್ರಿಯೆ ಪೂರ್ಣಗೊಂಡ ನಂತರ ಏನಿಲ್ಲವೆಂದರೂ 40 ಸಾವಿರ ಅಭ್ಯರ್ಥಿಗಳು ಮತ್ತೆ ಮುಂದಿನ ನೇಮಕ ಪ್ರಕ್ರಿಯೆಗೆ ಸಿದ್ಧತೆ ನಡೆಸಬೇಕಾಗುತ್ತದೆ.
ಯಾವ ವಿಷಯ ಎಷ್ಟು ಮಂದಿ ಅರ್ಹರು?
ವಿಷಯ | ಖಾಲಿಹುದ್ದೆ | ಅರ್ಹತೆ |
ಇಂಗ್ಲಿಷ್ ಭಾಷೆ | 1,807 | 9,190 |
ಸಮಾಜ ವಿಜ್ಞಾನ (ಕನ್ನಡ) | 4,331 | 32,995 |
ಸಮಾಜ ವಿಜ್ಞಾನ (ಉರ್ದು) | 261 | 278 |
ಸಮಾಜ ವಿಜ್ಞಾನ (ಮರಾಠಿ) | 99 | 93 |
ಸಮಾಜ ವಿಜ್ಞಾನ (ತೆಲುಗು) | 2 | 0 |
ಗಣಿತ ಮತ್ತು ವಿಜ್ಞಾನ (ಕನ್ನಡ) | 6,013 | 8,712 |
ಗಣಿತ ಮತ್ತು ವಿಜ್ಞಾನ (ಉರ್ದು) | 411 | 286 |
ಗಣಿತ ಮತ್ತು ವಿಜ್ಞಾನ (ಮರಾಠಿ) | 74 | 50 |
ಗಣಿತ ಮತ್ತು ವಿಜ್ಞಾನ (ತೆಲುಗು) | 22 | 2 |
ಜೈವಿಕ ವಿಜ್ಞಾನ (ಕನ್ನಡ) | 1,900 | 2,635 |
ಜೈವಿಕ ವಿಜ್ಞಾನ (ಉರ್ದು) | 83 | 75 |
ಜೈವಿಕ ವಿಜ್ಞಾನ (ಮರಾಠಿ) | 17 | 26 |
ಒಟ್ಟು | 15,000 | 54,342 |
ಈ ಹಿಂದೆ ಖಾಲಿ ಇರುವ ಹುದ್ದೆಗಳಿಗೆ ಅಗತ್ಯವಾಗಿರುವಷ್ಟು ಅರ್ಹ ಅಭ್ಯರ್ಥಿಗಳು ದೊರೆಯುತ್ತಿರಲಿಲ್ಲ. ಆದರೆ ಈಗ ಎರಡು ವರ್ಷಗಳಿಂದ ನೇಮಕಾತಿ ನಡೆಯದೇ ಇರುವುದರಿಂದ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ನೇಮಕದ ಹೆಚ್ಚಿನ ಮಾಹಿತಿಗೆ ನೋಡಬೇಕಾದ ವೆಬ್‌ಸೈಟ್ ವಿಳಾಸ: www.schooleducation.kar.nic.in
ಇದನ್ನೂ ಓದಿ | Teacher Recruitment 2022 | 15 ಸಾವಿರ ಶಿಕ್ಷಕರ ನೇಮಕ: ಪರೀಕ್ಷೆ ಫಲಿತಾಂಶ ಈಗ ವೆಬ್‌ನಲ್ಲಿ ಲಭ್ಯ