ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಾತಿಯು (Teacher Recruitment) ವಿಳಂಬವಾಗುತ್ತಿರುವುದು ಆಯ್ಕೆಗೊಂಡ ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದ್ದು, ಕೂಡಲೇ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಬೇಕೆಂದು ಟ್ವಿಟ್ಟರ್ ಅಭಿಯಾನ ನಡೆಸುತ್ತಿದ್ದಾರೆ.
“GPTR ನೇಮಕಾತಿಯ ಅಂತಿಮಪಟ್ಟಿ ಬಿಡುಗಡೆಗಿದ್ದ ತಡೆಯಾಜ್ಞೆ ಈಗಾಗಲೇ ತೆರವಾಗಿರುವುದರಿಂದ ಸರ್ಕಾರ 13,000+ಅಭ್ಯರ್ಥಿಗಳ ಜೀವನ & ಮಕ್ಕಳ ಗುಣಮಟ್ಟದ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ಚುನಾವಣೆಯೊಳಗೆ ಆದೇಶಪತ್ರ ದೊರಕುವಂತೆ ಪ್ರಕ್ರಿಯೆ ಬೇಗ ಮುಗಿಸಲು ಮನವಿʼʼ ಎಂದು ಟ್ವಿಟ್ಟರ್‌ನಲ್ಲಿ ಬರೆಯಲಾಗಿದೆ.
Justice_for_GPSTR_Aspirants ಎಂಬ ಹ್ಯಾಷ್ ಟ್ಯಾಗ್‌ನಲ್ಲಿ ಟ್ವೀಟ್ ಮಾಡುತ್ತಿರುವ ಅಭ್ಯರ್ಥಿಗಳು ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಾಗೂ “ವಿಸ್ತಾರ ನ್ಯೂಸ್ʼʼಗೆ ಟ್ಯಾಗ್ ಮಾಡುತ್ತಿದ್ದಾರೆ.
ವಿಧಾನಸಭಾ ಚುನಾವಣೆಯ ದಿನ ಸಮೀಪಿಸುತ್ತಿದ್ದು, ಒಂದು ವೇಳೆ ನೀತಿ ಸಂಹಿತೆ ಜಾರಿಗೆ ಬಂದಲ್ಲಿ ಹೊಸ ನೇಮಕ ಪ್ರಕ್ರಿಯೆಗೆ ತಡೆ ಬೀಳಲಿದೆ. ಮುಂದೆ ಚುನಾವಣಾ ಪ್ರಕ್ರಿಯೆ ಮುಗಿದು ಹೊಸ ಸರ್ಕಾರ ರಚನೆಯಾಗುವವರೆಗೂ ನೇಮಕ ಪ್ರಕ್ರಿಯೆ ನಡೆಯದು. ಹೀಗಾಗಿ ಆಯ್ಕೆಯಾಗಿರುವ ತಮಗೆ ನೇಮಕಾತಿ ಪತ್ರ ನೀಡಲು ಮೂರ್ನಾಲ್ಕು ತಿಂಗಳು ತಡವಾಗಬಹುದು ಎಂಬ ಆತಂಕದಲ್ಲಿ ಅಭ್ಯರ್ಥಿಗಳಿದ್ದಾರೆ.
ಆದ್ದರಿಂದ ಕೂಡಲೇ ಶಿಕ್ಷಣ ಇಲಾಖೆಯು ನೇಮಕ ಪ್ರಕ್ರಿಯೆಯನ್ನು ಮುಂದುವರಿಸಿ, ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಬೇಕು ಹಾಗೂ ನೇಮಕಾತಿ ಪತ್ರವನ್ನು ವಿತರಿಸಬೇಕು ಎಂದು ಅವರುಗಳು ಒತ್ತಾಯಿಸುತ್ತಿದ್ದಾರೆ. ಒಟ್ಟು 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ಹುದ್ದೆಗಳಿಗೆ 13,363 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 1,637 ಹುದ್ದೆಗಳು ನೇಮಕವಾಗದೇ ಖಾಲಿ ಉಳಿದಿವೆ.
ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸಲ್ಲಿಕೆಯಲ್ಲಿ ಗೊಂದಲ ಉಂಟಾದ ಕಾರಣ ೧:೧ ಅನುಪಾತದ ತಾತ್ಕಾಲಿಕ ಆಯ್ಕೆಪಟ್ಟಿಗೆ ತಡೆಯಾಜ್ಞೆ ನೀಡಬೇಕೆಂದು ಕೆಲ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿ, ತಡೆಯಾಜ್ಞೆ ತಂದಿದ್ದರು. ಆದರೆ ಈ ತಡೆಯಾಜ್ಞೆಯು 1:1 ಅನುಪಾತದಲ್ಲಿ ಪ್ರಕಟವಾಗಿದ್ದ ಆಯ್ಕೆಪಟ್ಟಿಗಲ್ಲ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಯಾವ ಜಿಲ್ಲೆಗೆ ಸೇರಿದ್ದಾರೆ, ಮೀಸಲಾತಿಗೆ ಅರ್ಹತೆ ಹೊಂದಿದ್ದಾರೆ ಎಂಬುದನ್ನಷ್ಟೇ ಪರಿಗಣಿಸಿ, ಆಯಾ ಹುದ್ದೆಗಳ ಅಂತಿಮ ಪಟ್ಟಿ ಪ್ರಕಟಿಸಲು ತಡೆಯಾಜ್ಞೆ ನೀಡಲಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು.
ಹೀಗಾಗಿ ನೇಮಕ ಪ್ರಕ್ರಿಯೆ ಮುಂದುವರಿಸಲು ಅವಕಾಶವಿದ್ದರೂ ಶಿಕ್ಷಣ ಇಲಾಖೆ ಮೀನ ಮೇಷ ಎಣಿಸುತ್ತಿದೆ ಎಂದು ಆಯ್ಕೆಯಾಗಿರುವ ಅಭ್ಯರ್ಥಿಗಳು ದೂರುತ್ತಿದ್ದಾರೆ. ಆದರೆ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಲಿದೆ. ಕಾನೂನು ತೊಡಕಿನಿಂದಾಗಿ ಇದು ವಿಳಂಬವಾಗಿದ್ದು, ಫೆಬ್ರವರಿಯಲ್ಲಿ ನೇಮಕಾತಿ ಪೂರ್ಣಗೊಳ್ಳಲಿದೆ ಎಂದು ಶಿಕ್ಷಣ ಇಲಾಖೆಯು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ನೇಮಕಾತಿಗೆ ಸಂಬಂಧಿಸಿದಂತೆ ಕಳೆದ ಮೇ 21 ಮತ್ತು 22 ರಂದು ಲಿಖಿತ ಪರೀಕ್ಷೆ ನಡೆಸಿದ್ದು, ಆಗಸ್ಟ್ 17 ರಂದು ಫಲಿತಾಂಶ ಪ್ರಕಟಿಸಲಾಗಿತ್ತು. 15 ಸಾವಿರ ಹುದ್ದೆಗಳಿಗೆ ನಡೆದ ಈ ಪರೀಕ್ಷೆ ಬರೆಯಲು 1,16,223. ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಶಿಕ್ಷಕ ಹುದ್ದೆಗೆ ಪರಿಗಣನೆಯಾಗಿರುವ ಅರ್ಜಿಗಳ ಸಂಖ್ಯೆ 68,849 ಮಾತ್ರ. ಪರೀಕ್ಷೆಗೆ ಶೇ.7ರಷ್ಟು ಅಭ್ಯರ್ಥಿಗಳು ಗೈರು ಹಾಜರಾಗಿದ್ದರು. 51,098 ಪರೀಕ್ಷೆ ಬರೆದು ಅರ್ಹತೆ ಪಡೆದಿದ್ದರು.
ಸೆಪ್ಟೆಂಬರ್‌ನಲ್ಲಿ 1:2 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪರಿಶೀಲನಾ ಪಟ್ಟಿ ಪ್ರಕಟಿಸಲಾಗಿತ್ತು. ಈ ಪಟ್ಟಿಯಲ್ಲಿ 22,432 ಅಭ್ಯರ್ಥಿಗಳು ಸ್ಥಾನ ಪಡೆದಿದ್ದರು. ಅಕ್ಟೋಬರ್‌ನಲ್ಲಿ ಇವರ ದಾಖಲೆ ಪರಿಶೀಲನೆ ನಡೆಸಲಾಗಿತ್ತು. ಕಳೆದ ನವೆಂಬರ್‌ನಲ್ಲಿ ಅಂತಿಮವಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿತ್ತು.
ಇದನ್ನೂ ಓದಿ : ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸಚಿವ ಸಂಪುಟದ ಮುಂದೆ ಪ್ರಸ್ತಾವನೆ