ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಾತಿಗೆ (Teacher Recruitment) ಸಂಬಂಧಿಸಿದಂತೆ ಪ್ರಕಟಿಸಲಾಗಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಹೈ ಕೋರ್ಟ್ ರದ್ದು ಪಡಿಸಿರುವುದರಿಂದ ಮುಂದೇನು ಎಂಬ ಆತಂಕದಲ್ಲಿ ಸುಮಾರು 13 ಸಾವಿರ ಅಭ್ಯರ್ಥಿಗಳಿದ್ದರೆ, ಸರ್ಕಾರ ಮಾತ್ರ ಇನ್ನೂ ಯಾವುದೇ ಸ್ಪಷ್ಟ ತೀರ್ಮಾನ ತೆಗೆದುಕೊಳ್ಳದೆ ಮೀನ-ಮೇಷ ಎಣಿಸುತ್ತಿದೆ.
ನೇಮಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಂಗಳವಾರ ವಿಧಾನಸೌಧದಲ್ಲಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಡ್ವೊಕೇಟ್ ಜನರಲ್ ಮತ್ತು ಕಾನೂನು ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಆದರೆ ಯಾವುದೇ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.
ಆಯ್ಕೆ ಪಟ್ಟಿಯನ್ನು ರದ್ದು ಪಡಿಸಿರುವುದರ ವಿರುದ್ಧ ಮೇಲ್ಮನವಿ ಸಲ್ಲಿಸಿದರೆ ಏನಾಗುತ್ತದೆ? ಹೊಸ ಆಯ್ಕೆ ಪಟ್ಟಿ ಸಿದ್ಧಪಡಿಸಿದರೆ ಏನೆಲ್ಲಾ ಪರಿಣಾಮಗಳಾಗುತ್ತವೆ ಎಂಬುದರ ಕುರಿತು ಮಂಗಳವಾರ ನಡೆದ ಸಭೆ ಸುದೀರ್ಘವಾಗಿ ಚರ್ಚಿಸಲಾಗಿದೆ. ಚುನಾವಣೆ ಬರುವುದರ ಒಳಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಏನೆಲ್ಲಾ ಕ್ರಮ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಪರಿಶೀಲಿಸಲಾಗಿದೆ. ಆದರೆ ಅಂತಿಮವಾಗಿ ತೀರ್ಮಾನ ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ಹೈ ಕೋರ್ಟಿನ ತೀರ್ಪಿಗೆ ಸಂಬಂಧಿಸಿದಂತೆ ಮುಂದೇನು ಮಾಡಬಹುದು ಎಂಬ ಕುರಿತು ಕಾನೂನು ಇಲಾಖೆ ಇನ್ನೂ ಅಂತಿಮ ಸಲಹೆ ನೀಡಿಲ್ಲ. ವಿವಾಹಿತ ಮಹಿಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಕುರಿತು ನ್ಯಾಯಾಲಯ ನೀಡಿರುವ ತೀರ್ಪುಗಳಲ್ಲಿ ಗೊಂದಲವಿದೆ. ಹೀಗಾಗಿ ಏನು ಮಾಡಬೇಕೆಂಬ ನಿರ್ಧಾರಕ್ಕೆ ಬರುವುದು ಕಷ್ಟವಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಕೋರ್ಟ್ ನೀಡಿರುವ ತೀರ್ಪಿನಂತೆ ವಿವಾಹಿತ ಮಹಿಳಾ ಅಭ್ಯರ್ಥಿಯು ಸಲ್ಲಿಸಿರುವ ಪೋಷಕರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪರಿಗಣಿಸಿದಲ್ಲಿ ಆಯ್ಕೆ ಪಟ್ಟಿಯಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ.
ಸ್ಪಷ್ಟ ತೀರ್ಪು; ಎಡವಿತೇ ಇಲಾಖೆ?
ಈಗಾಗಲೇ ಪ್ರಕಟವಾಗಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಮರ್ಥಿಸಿಕೊಂಡಿರುವ ಶಿಕ್ಷಣ ಇಲಾಖೆ 1986 ರಿಂದಲೂ ಇಲಾಖೆ ಅನುಸರಿಸುತ್ತಿರುವ ನಿಯಮಗಳನ್ವಯ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ ಎಂದು ಹೇಳಿತ್ತು. ಇದಕ್ಕೆ ತೀರ್ಪಿನಲ್ಲಿ ಪ್ರತಿಕ್ರಿಯೆ ನೀಡಿರುವ ಹೈಕೋರ್ಟ್‌ನ ಏಕ ಸದಸ್ಯ ಪೀಠ, ವಿವಾಹಿತ ಮಹಿಳೆಯು ಪೋಷಕರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿದಲ್ಲಿ, ಪತಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕೇಳುವಂತಿಲ್ಲ ಮತ್ತು ಪರಿಗಣಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮತ್ತು ಹೈ ಕೋರ್ಟ್ ಸ್ಪಷ್ಟವಾಗಿ ತೀರ್ಪು ನೀಡಿದ್ದರೂ ರಾಜ್ಯ ಸರ್ಕಾರ ಪದೇ ಪದೇ ಅದೇ ತಪ್ಪನ್ನು ಮಾಡುತ್ತಿದೆ ಎಂದು ಹೇಳಿದೆ.
1986 ರ ಡಿಸೆಂಬರ್ 12 ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಸಮರ್ಥನೀಯವಲ್ಲ ಎಂದು ನ್ಯಾಯಾಲಯಗಳು ಹೇಳಿರುವಾಗ ಅದೇ ನಿಯಮಗಳನ್ನು ಅನುಸರಿಸಿ ನೇಮಕ ಮಾಡಿಕೊಳ್ಳುವ ಅವಶ್ಯಕತೆ ಏನಿತ್ತು ಎಂದು ಕೋರ್ಟ್ ತೀರ್ಪಿನಲ್ಲಿ ಶಿಕ್ಷಣ ಇಲಾಖೆಯನ್ನು ಪ್ರಶ್ನಿಸಿದೆ. ಶಿಕ್ಷಕರ ನೇಮಕದ ಸಂದರ್ಭದಲ್ಲಿ ಅಭ್ಯರ್ಥಿಗಳು ಸಲ್ಲಿಸಿರುವ ಪೋಷಕರ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಪರಿಗಣಿಸಿ, ಮೀಸಲಾತಿ ನಿಗದಿಪಡಿಸಬೇಕು. ಅವರನ್ನು ಸಾಮಾನ್ಯ ಅಭ್ಯರ್ಥಿಗಳೆಂದು ಪರಿಗಣಿಸಬಾರದು ಎಂದು ಸ್ಪಷ್ಟವಾಗಿ ಹೇಳಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಎಇ) ಸಹಾಯಕ ಪ್ರಾಧ್ಯಾಪಕರ ನೇಮಕದ ಸಂದರ್ಭದಲ್ಲಿ ಇದೇ ರೀತಿಯ ಗೊಂದಲ ಉಂಟಾದಾಗ ಉನ್ನತ ಶಿಕ್ಷಣ ಇಲಾಖೆಗೆ ಸಲಹೆ ಕೇಳಿತ್ತು. ಆಗ ಇಲಾಖೆಯು ಇದಕ್ಕೆ ಸಂಬಂಧಿಸಿದಂತೆ ಕಾನೂನು ಇಲಾಖೆಯ ಸಲಹೆ ಪಡೆದು, “ವಿವಾಹಿತ ಮಹಿಳಾ ಅರ್ಜಿದಾರಳ ಆದಾಯಕ್ಕೆ ಅವಳ ತಂದೆ ತಾಯಿಗಳ ಆದಾಯ ಸೇರಿಸಬಾರದು. ಪತಿ ಪತ್ನಿಯರು ಒಂದು ಸ್ವಾಯತ್ತ ಕುಟುಂಬದಂತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಲ್ಲಿ ಅರ್ಜಿದಾರಳ ಆದಯಕ್ಕೆ ಅವಳ ಪತಿಯ ಆದಾಯ ಸೇರಿಸಬೇಕು. ಅವರು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರೆ, ಅರ್ಜಿದಾರಳ ಆದಾಯ ಮತ್ತು ಅವಿಭಕ್ತ ಕುಟುಂಬದ ಆದಾಯವನ್ನು ಒಟ್ಟಿಗೆ ಸೇರಿಸಿ ಕುಟುಂಬದ ಆದಾಯವನ್ನು ಕಂಡು ಹಿಡಿಯಬೇಕುʼʼ ಎಂದು ಸೂಚಿಸಿತ್ತು. ಇದನ್ನು ಪರಿಗಣಿಸಿ ಶಿಕ್ಷಣ ಇಲಾಖೆಯು ಈ ಆಯ್ಕೆ ಪಟ್ಟಿ ಸಿದ್ಧಪಡಿಸಿತ್ತು.
ಈ ಸಲಹೆ ನೀಡುವಾಗ ಕಾನೂನು ಇಲಾಖೆಯು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳು ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿತ್ತು. ಇದನ್ನು ನಂಬಿದ ಶಿಕ್ಷಣ ಇಲಾಖೆ ಈಗ ಪೇಚಿಗೆ ಸಿಲುಕಿದೆ. ಮುಂದೇನು ಮಾಡಬೇಕೆಂಬ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿಸುತ್ತಲೇ ದಿನ ದೂಡುತ್ತಿದೆ.
ಬೇಗ ಅಂತಿಮ ಪಟ್ಟಿ ಪ್ರಕಟಿಸಿ
ಈ ನಡುವೆ ವ್ಯಾಜ್ಯವಿಲ್ಲದ ಹುದ್ದೆಗಳಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿಯನ್ನು ಕೂಡಲೇ ಪ್ರಕಟಿಸಿ, ಆದೇಶ ಪತ್ರ ವಿತರಿಸಬೇಕೆಂದು ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಭ್ಯರ್ಥಿಗಳು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಟ್ವಿಟ್ಟರ್‌ನಲ್ಲಿ ಆಂದೋಲನ ನಡೆಸುತ್ತಿರುವ ಅಭ್ಯರ್ಥಿಗಳು ಕೇವಲ 80 ಹುದ್ದೆಗಳಿಗೆ ಸಂಬಂಧಿಸಿದಂತೆ ವ್ಯಾಜ್ಯವಿದ್ದು, ಇದನ್ನು ಹೊರತು ಪಡಿಸಿ, ನೇಮಕ ಪ್ರಕ್ರಿಯೆ ಮುಂದುವರಿಸಬೇಕೆಂದು ಆಗ್ರಹಿಸಿದ್ದಾರೆ.
ಒಂದು ವೇಳೆ ಶಿಕ್ಷಣ ಇಲಾಖೆಯು ಹೈಕೋರ್ಟ್‌ನ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದಲ್ಲಿ ನೇಮಕ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಲಿದೆ ಎಂಬ ಆತಂಕ ವ್ಯಕ್ತಪಡಿಸುತ್ತಿರುವ ಅಭ್ಯರ್ಥಿಗಳು, ಇಲಾಖೆಯ ಈ ರೀತಿಯ ವಿಳಂಬ ನೀತಿಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿತವಾಗಲಿದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ : Teacher Recruitment : ಆಯ್ಕೆ ಪಟ್ಟಿ ರದ್ದು; ಹೈಕೋರ್ಟ್ ತೀರ್ಪಿನ ವಿರುದ್ಧ ಶಿಕ್ಷಣ ಇಲಾಖೆಯಿಂದ ಮೇಲ್ಮನವಿ?