Site icon Vistara News

Teacher Recruitment : ಆಯ್ಕೆ ಪಟ್ಟಿ ರದ್ದು; ಹೈಕೋರ್ಟ್‌ ತೀರ್ಪಿನ ವಿರುದ್ಧ ಶಿಕ್ಷಣ ಇಲಾಖೆಯಿಂದ ಮೇಲ್ಮನವಿ?

teacher recruitment 2022 final selection list released at education department website

teacher recruitment 2022 final selection list released at education department website

ಬೆಂಗಳೂರು: 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಾತಿಗೆ (Teacher Recruitment) ಸಂಬಂಧಿಸಿದಂತೆ ಪ್ರಕಟಿಸಲಾಗಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಹೈ ಕೋರ್ಟ್‌ ರದ್ದು ಪಡಿಸಿರುವುದರ ವಿರುದ್ಧ ಶಿಕ್ಷಣ ಇಲಾಖೆಯು ಮೇಲ್ಮನವಿ ಸಲ್ಲಿಸುವುದು ಬಹುತೇಕ ಖಚಿತ ಪಟ್ಟಿದೆ.

ಕಳೆದ ನವೆಂಬರ್‌ನಲ್ಲಿ ಪ್ರಕಟಿಸಲಾಗಿದ್ದ ೧:೧ ಅನುಪಾತದ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಸೋಮವಾರ ಹೈಕೋರ್ಟ್‌ನ ಏಕ ಸದಸ್ಯ ಪೀಠ ರದ್ದು ಪಡಿಸಿ, ಹೊಸದಾಗಿ ಆಯ್ಕೆ ಪಟ್ಟಿ ಸಿದ್ಧಪಡಿಸುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿತ್ತು. ಈ ತೀರ್ಪಿನ ಪ್ರತಿಗಾಗಿ ಈಗ ಇಲಾಖೆಯು ಎದುರು ನೋಡುತ್ತಿದ್ದು, ಕೋರ್ಟ್‌ನ ಆದೇಶ ದೊರೆಯುತ್ತಿದ್ದಂತೆಯೇ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.

ಇಲಾಖೆಯು ಆಯ್ಕೆ ಪಟ್ಟಿ ಸಿದ್ಧಪಡಿಸುವಾಗ ಸರಿಯಾಗಿ ನಿಯಮ ಪಾಲಿಸಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಇದನ್ನು ನ್ಯಾಯಾಲಯಕ್ಕೆ ಸರಿಯಾಗಿ ಮನದಟ್ಟು ಮಾಡಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ತೀರ್ಪು ಹೊರ ಬಿದ್ದಿದೆ. ಆದ್ದರಿಂದ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದು ಇಲಾಖೆಗೆ ಅನಿವಾರ್ಯವಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು “ವಿಸ್ತಾರ ನ್ಯೂಸ್‌ʼʼಗೆ ತಿಳಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಎಇ) ಸಹಾಯಕ ಪ್ರಾಧ್ಯಾಪಕರ ನೇಮಕದ ಸಂದರ್ಭದಲ್ಲಿ ಇದೇ ರೀತಿಯ ಗೊಂದಲ ಉಂಟಾದಾಗ ಉನ್ನತ ಶಿಕ್ಷಣ ಇಲಾಖೆಗೆ ಸಲಹೆ ಕೇಳಿತ್ತು. ಆಗ ಇಲಾಖೆಯು ಇದಕ್ಕೆ ಸಂಬಂಧಿಸಿದಂತೆ ಕಾನೂನು ಇಲಾಖೆಯ ಸಲಹೆ ಪಡೆದು, “ವಿವಾಹಿತ ಮಹಿಳಾ ಅರ್ಜಿದಾರಳ ಆದಾಯಕ್ಕೆ ಅವಳ ತಂದೆ ತಾಯಿಗಳ ಆದಾಯ ಸೇರಿಸಬಾರದು. ಪತಿ ಪತ್ನಿಯರು ಒಂದು ಸ್ವಾಯತ್ತ ಕುಟುಂಬದಂತೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಲ್ಲಿ ಅರ್ಜಿದಾರಳ ಆದಯಕ್ಕೆ ಅವಳ ಪತಿಯ ಆದಾಯ ಸೇರಿಸಬೇಕು. ಅವರು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದರೆ, ಅರ್ಜಿದಾರಳ ಆದಾಯ ಮತ್ತು ಅವಿಭಕ್ತ ಕುಟುಂಬದ ಆದಾಯವನ್ನು ಒಟ್ಟಿಗೆ ಸೇರಿಸಿ ಕುಟುಂಬದ ಆದಾಯವನ್ನು ಕಂಡು ಹಿಡಿಯಬೇಕುʼʼ ಎಂದು ಸೂಚಿಸಿತ್ತು.

ಈ ಸಲಹೆ ನೀಡುವಾಗ ಕಾನೂನು ಇಲಾಖೆಯು ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ಗಳು ಈ ಹಿಂದೆ ನೀಡಿದ್ದ ತೀರ್ಪುಗಳನ್ನು ಉಲ್ಲೇಖಿಸಿತ್ತು. ಈಗ ನಮ್ಮ ಇಲಾಖೆ ಕೂಡ ಇದೇ ನಿಯಮವನ್ನು ಅನುಸರಿಸಿ, ಆಯ್ಕೆ ಪಟ್ಟಿ ಸಿದ್ಧಪಡಿಸಿದೆ. 1986 ರಿಂದಲೂ ಇಲಾಖೆ ಅನುಸರಿಸುತ್ತಿರುವ ನಿಯಮಗಳನ್ವಯ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ. ಹೀಗಾಗಿ ಹೈಕೋರ್ಟ್‌ ಈ ತೀರ್ಪು ನೀಡಿರುವುದು ಆಶ್ಚರ್ಯ ಮೂಡಿಸಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಇತ್ತೀಚೆಗೆ ಕೆಇಎಗೆ ಕಾನೂನು ಇಲಾಖೆ ನೀಡಿದ ಸಲಹೆ ಇಲ್ಲಿದೆ:

ತೀರ್ಪು ಪಾಲಿಸಿದರೂ ಅನ್ಯಾಯ!

ಶಿಕ್ಷಣ ಇಲಾಖೆಯು ಪ್ರಕಟಿಸಿರುವ 1:1ರ ಅನುಪಾತದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ರದ್ದುಪಡಿಸಿರುವುದರ ಜತೆಗೆ ಪತಿಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರದ ಬದಲು ಅಭ್ಯರ್ಥಿಗಳ ತಂದೆಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನೂ ಪರಿಗಣಿಸಿ ಹೊಸದಾಗಿ ಪಟ್ಟಿ ಸಿದ್ಧಪಡಿಸಬೇಕು ಎಂದೂ ಸೂಚಿಸಿದೆ.

ಈ ರೀತಿ ಹೊಸ ಪಟ್ಟಿ ಸಿದ್ಧಪಡಿಸಲು ಹೋದರೆ ಈಗಾಗಲೇ ಚಾಲ್ತಿಯಲ್ಲಿರುವ ನಿಯಮಗಳನ್ವಯ ದಾಖಲೆ ಸಲ್ಲಿಸಿ, ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುವುದು ಖಚಿತ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆಗ ಅನ್ಯಾಯಕ್ಕೊಳಗಾದ ಅಭ್ಯರ್ಥಿಗಳು ಮತ್ತೆ ನ್ಯಾಯಾಲಯದ ಮೆಟ್ಟಿಲೇರುವ ಆತಂಕವೂ ಇದೆ.

ನ್ಯಾಯಾಲಯದ ಮೆಟ್ಟಿಲೇರಿರುವ ಅಭ್ಯರ್ಥಿಗಳಲ್ಲಿ ಈ ಆಯ್ಕೆ ಪ್ರಕ್ರಿಯೆ ಪ್ರಾರಂಭವಾದ ನಂತರ ಮದುವೆಯಾದ ಅಭ್ಯರ್ಥಿಗಳಿದ್ದಂತಿಲ್ಲ. ಅರ್ಜಿ ಸಲ್ಲಿಸಿದ ಮೇಲೆ ಮದುವೆಯಾಗಿದ್ದರೆ ಅವರ ಅಹವಾಲನ್ನು ಆಲಿಸಿ, ನೇಮಕ ಪ್ರಕ್ರಿಯೆ ಸಂದರ್ಭದಲ್ಲಿ ಅವರ ತಂದೆ ತಾಯಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಪರಿಗಣಿಸಲಾಗಿದೆ. ಆದರೆ ಕೆಲವರು ಮದುವೆಯಾಗಿ ಹತ್ತು ಹನ್ನೆರಡು ವರ್ಷಗಳಾಗಿದ್ದರೂ ತಂದೆ ತಾಯಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಿದ್ದು, ಅವರರನ್ನು ಮಾತ್ರ ನಿಯಮಾನುಸಾರ ಸಾಮಾನ್ಯ ಅಭ್ಯರ್ಥಿಗಳ ವರ್ಗಕ್ಕೆ ಸೇರ್ಪಡೆ ಮಾಡಲಾಗಿದೆ ಎಂದು ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಕೇಂದ್ರ ಸರ್ಕಾರ ಕೂಡ ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಯು ವಿವಾಹಿತರಾಗಿದ್ದಲ್ಲಿ ಪತಿಯ ಮನೆಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನೇ ಪರಿಗಣಿಸುತ್ತಿದೆ. ನೇಮಕಾತಿ ಅಧಿಸೂಚನೆಯಲ್ಲಿ ಚಾಲ್ತಿಯಲ್ಲಿರುವ ನಿಯಮಗಳನ್ನು ಅನುಸರಿಸಿ, ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದರಿಂದ ವಿವಾಹಿತ ಮಹಿಳೆಯರು ಪತಿಯ ಮನೆಯ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕೆಂದು ಸೂಚಿಸಿರಲಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಒಟ್ಟಾರೆ ಹೈಕೋರ್ಟ್‌ನ ಏಕ ಸದಸ್ಯಪೀಠದ ಈ ತೀರ್ಪಿನ ವಿರುದ್ಧ ಶಿಕ್ಷಣ ಇಲಾಖೆಯು ಮೇಲ್ಮನವಿ ಸಲ್ಲಿಸಿದಲ್ಲಿ ಈ ನೇಮಕ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದರಿಂದ ಚುನಾವಣೆಯ ಒಳಗೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಗೊಂಡು, ನೇಮಕಾತಿ ಪೂರ್ಣಗೊಳ್ಳುವುದು ಕಷ್ಟಸಾಧ್ಯವಾಗಲಿದೆ. ಇದರಿಂದ ಈಗಾಗಲೇ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ 13,363 ಅಭ್ಯರ್ಥಿಗಳು ಅತ್ತ ಕೆಲಸವೂ ಇಲ್ಲ, ಇತ್ತ ಉದ್ಯೋಗವೂ ಇಲ್ಲ ಎಂಬ ಸ್ಥಿತಿಯಲ್ಲಿ ದಿನ ದೂಡಬೇಕಾಗಿ ಬರಲಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಇದನ್ನೂ ಓದಿ: DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Exit mobile version