ಬೆಂಗಳೂರು: ದೇಶದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗಾಗಿ ಮತ್ತು ಜೂನಿಯರ್ ರಿಸರ್ಚ್ ಫೆಲೋಶಿಪ್ ನೇಮಕಕ್ಕಾಗಿ ನಡೆಸಲಾಗುವ ಅಖಿಲ ಭಾರತ ಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆಗೆ (UGC NET 2023) ಅರ್ಜಿ ಸಲ್ಲಿಸಲು ಇಂದು (ಮೇ 31) ಕೊನೆಯ ದಿನವಾಗಿದೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಪರವಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಈ ಪರೀಕ್ಷೆ ಇನ್ನೂ ಅರ್ಜಿ ಸಲ್ಲಿಸದೇ ಇರುವ ಆಸಕ್ತ ಅಭ್ಯರ್ಥಿಗಳು ಇಂದು ಸಂಜೆ ಐದು ಗಂಟೆಯ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ 13 ರಿಂದ ಜೂನ್ 22ರ ವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಯಾಗಿರಲಿದೆ.
ವರ್ಷದಲ್ಲಿ 2 ಬಾರಿ ಈ ಪರೀಕ್ಷೆ ನಡೆಯುತ್ತದೆ. ಕಳೆದ ಫೆಬ್ರವರಿಯಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆಯಬೇಕಾಗಿದ್ದ ಪರೀಕ್ಷೆ ನಡೆಸಲಾಗಿತ್ತು. ಈಗ ಜೂನ್‌ನಲ್ಲಿ ಪರೀಕ್ಷೆ ನಡೆಯುತ್ತಿದ್ದು, ಮುಂದೆ ಮತ್ತೆ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಯುವ ಸಾಧ್ಯತೆಗಳಿವೆ.
ಪರೀಕ್ಷಾ ವೇಳಾಪಟ್ಟಿ ಇಂತಿದೆ;
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಅಭ್ಯರ್ಥಿಗಳಿಗೆ 1,150 ರೂ. ಇಡಬ್ಲ್ಯುಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 600ರೂ. ಹಾಗೂ ಎಸ್/ಎಸ್‌ಟಿ/ಅಂಗವಿಕಲ ಮತ್ತು ತೃತೀಯ ಲಿಂಗಿಗಳಿಗೆ 325 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಲು ಅವಕಾಶವಿರುತ್ತದೆ.
ವಯೋಮಿತಿ ಎಷ್ಟು?
ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ ಇರುವುದಿಲ್ಲ. ಜೂನಿಯರ್ ರಿಸರ್ಚ್ ಫೆಲೋಶಿಪ್‌ಗಾಗಿ ಅರ್ಜಿ ಸಲ್ಲಿಸುವವರು 30 ವರ್ಷದೊಳಗಿನವರಾಗಿರಬೇಕು.
ಪರೀಕ್ಷೆ ಹೇಗಿರುತ್ತದೆ?
ಒಟ್ಟು 100 ವಿಷಯಗಳಿಗೆ ಸಂಬಂಧಿಸಿದಂತೆ ಈ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ನಡೆಯುವ ದಿನದಂದು ಎರಡು ಅಧಿವೇಶನಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಬೆಳಗ್ಗೆ 9.30ರಿಂದ 12.30 ಮತ್ತು ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಪರೀಕ್ಷೆ ನಡೆಯಲಿದೆ.
ಒಟ್ಟು ಎರಡು ಪಶ್ನೆ ಪತ್ರಿಕೆಗಳಿರಲಿವೆ. ಪ್ರಶ್ನೆ ಪತ್ರಿಕೆ-1 ನೂರು ಅಂಕಗಳಿಗೆ ನಡೆಯಲಿದ್ದು, 50 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪ್ರಶ್ನೆ ಪತ್ರಿಕೆ-2 ಇನ್ನೂರು ಅಂಕಗಳಿಗೆ ನಡೆಯಲಿದ್ದು, 100 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಈ ಪ್ರಶ್ನೆ ಪತ್ರಿಕೆಗಳಿರಲಿವೆ. ಪ್ರತಿ ಪ್ರಶ್ನೆಗೆ ಎರಡು ಅಂಕ ನಿಗದಿಪಡಿಸಲಾಗಿದೆ. ನೂರು (50 ಪ್ರಶ್ನೆ) ಅಂಕಗಳ ಪ್ರಶ್ನೆ ಪತ್ರಿಕೆ-1ಕ್ಕೆ ಉತ್ತರ ಬರೆಯಲು ಒಂದು ಗಂಟೆ ಕಾಲಾವಕಾಶ ಮತ್ತು 200 ಅಂಕಗಳ (100ಪ್ರಶ್ನೆ) ಪ್ರಶ್ನೆ ಪತ್ರಿಕೆ-2ಕ್ಕೆ ಉತ್ತರ ಬರೆಯಲು 2ಗಂಟೆ ಕಾಲಾವಕಾಶ ನೀಡಲಾಗುತ್ತದೆ.
ರಾಜ್ಯದ ಬೆಳಗಾವಿ, ಬಳ್ಳಾರಿ, ಬಾಗಲಕೋಟ, ಬೆಂಗಳೂರು, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಹಾಸನ, ಹುಬ್ಬಳ್ಳಿ/ಧಾರವಾಡ, ಹಾವೇರಿ, ಕಾರವಾರ, ಕೊಡಗು, ಕೋಲಾರ, ಮಂಗಳೂರು, ಮೈಸೂರು, ರಾಯಚೂರು, ರಾಮನಗರ, ಯಾದಗಿರಿ, ಮಣಿಪಾಲ್/ ಉಡುಪಿ, ಮಂಡ್ಯ, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ.
ಸಹಾಯವಾಣಿ ಸಂಖ್ಯೆ: 011 -40759000 / 011 – 69227700
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ : https://ugcnet.nta.nic.in/
ಇದನ್ನೂ ಓದಿ : DRDO Recruitment 2023 : ಎಂಜಿನಿಯರಿಂಗ್ ಮುಗಿಯಿತಾ? ಡಿಆರ್‌ಡಿಒನಲ್ಲಿ ಸೈಂಟಿಸ್ಟ್ ಆಗಿ!