Site icon Vistara News

UGC NET Exam 2022: ಅರ್ಜಿ ಸಲ್ಲಿಕೆಯ ಅವಧಿ ಮೇ 30ರ ವರೆಗೆ ವಿಸ್ತರಣೆ

NTA Exam 2023

ಬೆಂಗಳೂರು: ದೇಶದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗಳಿಗಾಗಿ ಮತ್ತು ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ ನೇಮಕಕ್ಕಾಗಿ ನಡೆಸಲಾಗುವ ಅಖಿಲ ಭಾರತ ಮಟ್ಟದ ಉಪನ್ಯಾಸಕರ ಅರ್ಹತಾ ಪರೀಕ್ಷೆಗೆ (UGC NET Exam 2022) ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಲಾಗಿದೆ.

ಅರ್ಜಿ ಸಲ್ಲಿಕೆಗೆ ಮೇ 20 ಕೊನೆಯ ದಿನವೆಂದು ಈ ಹಿಂದೆ ಪ್ರಕಟಿಸಲಾಗಿತ್ತು. ಕೊನೆಯ ಕ್ಷಣದಲ್ಲಿ ಅನೇಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮುಂದಾಗಿದ್ದರಿಂದ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಅರ್ಜಿ ಸಲ್ಲಿಕೆಯ ಅವಧಿಯನ್ನು ಈಗ ಮೇ 30ರ ರವರೆಗೆ ವಿಸ್ತರಿಸಲಾಗಿದೆ.

ಕೊನೆಯ ದಿನದವರೆಗೂ ಅನೇಕ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸರಿಯಾಗಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ. ದಾಖಲೆಗಳ ಮತ್ತು ಫೋಟೋ ಅಪ್‌ಲೋಡ್‌ಗೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಅವಧಿ ವಿಸ್ತರಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಎನ್‌ಟಿಎ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ದ ಪರವಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಈ ಪರೀಕ್ಷೆಯನ್ನು ನಡೆಸುತ್ತದೆ. ವರ್ಷದಲ್ಲಿ 2 ಬಾರಿ ಈ ಪರೀಕ್ಷೆ ನಡೆಸಿಕೊಂಡು ಬರಲಾಗಿದ್ದು, ಕೊರೊನಾ ಕಾರಣದಿಂದ 2021ರ ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಸಲಾಗಿರಲಿಲ್ಲ. ಹೀಗಾಗಿ 2021ರ ಮತ್ತು 2022ರ ಜೂನ್‌ನಲ್ಲಿ ನಡೆಸಬೇಕಾಗಿದ್ದ ಪರೀಕ್ಷೆಯನ್ನು ಒಟ್ಟಾಗಿ ನಡೆಸಲಾಗುತ್ತಿದೆ. ಹೀಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ.

ಪರಿಷ್ಕೃತ ವೇಳಾಪಟ್ಟಿ ಹೀಗಿದೆ;

ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಡೆಯಲಿರುವ ಈ ಪರೀಕ್ಷೆ ದಿನಾಂಕವನ್ನು ಇನ್ನೂ ಎನ್‌ಟಿಎ ಪ್ರಕಟಿಸಿಲ್ಲ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಮೇ 30 ಕೊನೆಯ ದಿನವಾಗಿರುತ್ತದೆ. ಅರ್ಜಿಯಲ್ಲಿ ಬದಲಾವಣೆಗಳನ್ನು ಮಾಡಲು ಮೇ 31 ಕೊನೆಯ ದಿನವಾಗಿರುತ್ತದೆ.

ಈ ಸುದ್ದಿಯನ್ನೂ ಓದಿ | Job News: ಸೇನಾಧಿಕಾರಿಯಾಗಬೇಕಾ? ಎನ್‌ಡಿಎ-ಎನ್‌ಎ ಪರೀಕ್ಷೆ ಬರೆಯಿರಿ

ಒಟ್ಟು 82 ವಿಷಯಗಳಿಗೆ ಸಂಬಂಧಿಸಿದಂತೆ ನೆಟ್‌ ಪರೀಕ್ಷೆ ನಡೆಸಲಾಗುತ್ತದೆ. ಇದು ಕಂಪ್ಯೂಟರ್‌ ಆಧಾರಿತ ಪರಿಕ್ಷೆಯಾಗಿದ್ದು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರವಿರಲಿದೆ.

ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ವೆಬ್‌: https://ugcnet.nta.nic.in

Exit mobile version