ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಐಎಎಸ್ ಹಾಗೂ ಐಪಿಎಸ್ ಹುದ್ದೆಗಳ ನೇಮಕಕ್ಕೆ ಇದೇ ಜೂನ್ 5 ರಂದು ಪೂರ್ವಭಾವಿ (IAS prelims 2022) ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆಯನ್ನು ಕೇವಲ ಮುಖ್ಯ (ಮೇನ್) ಪರೀಕ್ಷೆಗೆ ಅರ್ಹತೆ ನಿಗದಿಪಡಿಸಲು ನಡೆಸಲಾಗುತ್ತದೆ.
ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದಕ್ಕೆ ಇದುವೇ (IAS prelims 2022) ಮೊದಲ ಮೆಟ್ಟಿಲು. ಇದರಲ್ಲಿ ಯಶಸ್ವಿಯಾಗಬೇಕೆಂದು ಲಕ್ಷಾಂತರ ಸಂಖ್ಯೆಯ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಆದರೆ ಪ್ರಿಲಿಮ್ಸ್ ನಲ್ಲಿ ಅರ್ಹತೆ ಪಡೆಯುವುದು ಅಂದಾಜು 15,000 ಮಂದಿ ಮಾತ್ರ.
ಹೀಗಾಗಿ ಈ ಪರೀಕ್ಷೆಗೆ ಹೆಚ್ಚು ಗಂಭೀರವಾಗಿ ಸಿದ್ಧತೆ ನಡೆಸದಿದ್ದರೆ ಯಶಸ್ಸು ಪಡೆಯುವುದು ಕಷ್ಟ. ಈ ಬಾರಿಯ ಪರೀಕ್ಷೆಗೆ ಉಳಿದಿರುವ ಕೆಲವೇ ದಿನಗಳನ್ನು ವ್ಯರ್ಥಮಾಡದೆ ಅಭ್ಯರ್ಥಿಗಳು ಸಿದ್ಧತೆ ನಡೆಸಲೇಬೇಕಾಗಿದೆ. ಇದಕ್ಕೆ ಕೆಲವು ಉಪಯುಕ್ತ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಸಮಗ್ರವಾಗಿರಲಿ ನಿಮ್ಮ ಅಧ್ಯಯನ
ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಈ ಕೊನೆಯ ದಿನಗಳಲ್ಲಿ ಹೆಚ್ಚಾಗಿ ಹೊಸ ವಿಷಯಗಳನ್ನು ಓದಲು ಹೋಗಬಾರದು. ಕಳೆದ ಒಂದು ವರ್ಷಗಳಿಂದ ನೀವು ಮಾಡಿಕೊಂಡಿರುವ ಸಿದ್ಧತೆಗಳನ್ನು ಸಮಗ್ರವಾಗಿ ಅವಲೋಕನ ಮಾಡಿ. ನೀವು ಈಗಾಗಲೇ ಅಧ್ಯಯನ ಮಾಡಿದ ಸಂಗತಿಗಳನ್ನು ಮತ್ತೆ ಮನನ ಮಾಡದೇ ಹೋದರೆ ಪರೀಕ್ಷೆಯಲ್ಲಿ ಅವನ್ನು ನೆನಪು ಮಾಡಿಕೊಳ್ಳುವುದು ಸಾಧ್ಯವಿಲ್ಲ.
ಈ ರಿವಿಷನ್ ಸಮಯದಲ್ಲಿ, ನೀವು ಪ್ರಮುಖ ಅಂಶಗಳತ್ತ ಮಾತ್ರವೇ ಗಮನಹರಿಸಿ. ಇತಿಹಾಸ, ರಾಜನೀತಿ, ಭೂಗೋಳಶಾಸ್ತ್ರದಂತಹ ಸಾಂಪ್ರದಾಯಿಕ ವಿಭಾಗಗಳನ್ನು ಮಾತ್ರ ಮತ್ತೊಮ್ಮೆ ಓದಿ. ಒಂದು ದಿನದಲ್ಲಿ ಒಂದು ವಿಷಯವನ್ನು ಓದಿಮುಗಿಸುತ್ತಾ ಹೋಗಿ. ಸಾಕಷ್ಟು ತಯಾರಿಯ ಬಳಿಕವೂ ಇನ್ನೂ ಹಲವು ವಿಷಯಗಳು ಉಳಿದಿರುತ್ತವೆ. ಆದರೆ ಅವುಗಳನ್ನು ಪರೀಕ್ಷೆಗೆ ದಿನ ಹತ್ತಿರವಾಗುತ್ತಿದ್ದಂತೆಯೇ ಓದಬೇಡಿ. ಅಂದರೆ ಈಗಾಗಲೇ ನೀವು ಓದಿದ್ದನ್ನು ಪುನರಾವಲೋಕನ ಮಾಡಿ. ಬದಲಾಗಿ ಅಧ್ಯಯನ ವಿಷಯದ ವ್ಯಾಪ್ತಿಯನ್ನು ಹಿಗ್ಗಿಸಬೇಡಿ.
ಸರಣಿ ಮಾಕ್‌ಟೆಸ್ಟ್ ಬೇಡ
ಪರೀಕ್ಷೆಯ ಸಮದಲ್ಲಿ ಅಭ್ಯರ್ಥಿಗಳು ಆಗಾಗ ಒಂದರ ಹಿಂದೊಂದರಂತೆ ಆನ್‌ಲೈನ್‌ನಲ್ಲಿ ದೊರೆಯುವ ಮಾಕ್ ಟೆಸ್ಟ್ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಇದರಿಂದ ಪರೀಕ್ಷೆಯ ಒತ್ತಡ ಹೆಚ್ಚಾಗುವ ಸಾಧ್ಯತೆಯಿರುತ್ತದೆ.
ಇದಕ್ಕೆ ಬದಲಾಗಿ, ಯುಪಿಎಸ್‌ಸಿಯ ಹಿಂದಿನ ಹತ್ತು ವರ್ಷಗಳಲ್ಲಿ ನಡೆಸಿರುವ ಐಎಎಸ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಿ. ಅಲ್ಲದೇ ಎಸ್‌ಎಸ್‌ಸಿ ಮೊದಲಾದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ ಕಣ್ಣುಹಾಯಿಸಿ. ಏಕೆಂದರೆ ಈ ಪ್ರಶ್ನೆಗಳು ಪ್ರಿಲಿಮ್ಸ್‌ನಲ್ಲಿ ಪುನರಾವರ್ತನೆಯಾಗಬಹುದು. ಸಮಯದ ನಿರ್ವಹಣೆಯನ್ನು ಕಲಿತುಕೊಳ್ಳುವ ಉದ್ದೇಶದಿಂದ ಬೇಕಾದರೆ ನೀವು ಮಾಕ್‌ಟೆಸ್ಟ್ ಅಟೆಂಡ್ ಮಾಡಿ. ವಾರದಲ್ಲಿ ಒಮ್ಮೆ ಮಾಕ್ ಟೆಸ್ಟ್ ಅಂಟೆಂಡ್ ಮಾಡಿದರೆ ನಿಮ್ಮ ಓದಿನ ಸಾಮರ್ಥ್ಯ ಅಳೆದುಕೊಳ್ಳಲೂ ಅನುಕೂಲವಾಗುತ್ತದೆ.
ಇದು ನಿಮಗೆ ಗೊತ್ತಿರಲಿ
- ಪ್ರಿಲಿಮ್ಸ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಅಧ್ಯಯನಕ್ಕೆ ಎನ್ಸಿಇಆರ್ಟಿ (NCERT) ಪುಸ್ತಕಗಳೇ ಗಟ್ಟಿ ಅಡಿಪಾಯ.
- ಪರೀಕ್ಷೆಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳು ದಿನ ಪತ್ರಿಕೆ ಓದಲೇಬೇಕು. ಪತ್ರಿಕೆಯಲ್ಲಿನ ಪ್ರತಿ ಅಂಕಣ, ಸಂಪಾದಕೀಯ ಮತ್ತು ವಿದ್ಯಮಾನಗಳನ್ನು ಓದಿ ನಿಮ್ಮದೇ ದೃಷ್ಟಿಯಲ್ಲಿ ವಿಶ್ಲೇಷಿಸಬೇಕು.
- ಪ್ರಿಲಿಮ್ಸ್ಗೆ ಅಧ್ಯಯನ ನಡೆಸುವಾಗ ಏನು ಓದಬೇಕೆಂಬುದಕ್ಕಿಂತ ಹೇಗೆ ಓದಬೇಕು ಎಂಬುದು ಬಹಳ ಮುಖ್ಯ. ಆದಷ್ಟು ಎಲ್ಲ ವಿಷಯಗಳನ್ನು ಓದಿದ್ದರೆ ಒಳ್ಳೆಯದು. ಒಂದು ವೇಳೆ ಪರೀಕ್ಷೆಯಲ್ಲಿ ವಿಫಲರಾದರೆ ಬೇಸರ ಪಡಬೇಡಿ, ಮತ್ತೆ ಪರೀಕ್ಷೆಗೆ ಸಿದ್ಧತೆ ನಡೆಸಲು ಇದರಿಂದ ಅನುಕೂಲವಾಯಿತು ಎಂದೇ ತಿಳಿಯಿರಿ.
- ಪರೀಕ್ಷೆಯಲ್ಲಿ ಪತ್ರಿಕೆ-1, ಪತ್ರಿಕೆ-2 ಎಂಬ ಎರಡು ಪ್ರಶ್ನೆ ಪತ್ರಿಕೆಗಳಿರುತ್ತವೆ. ಒಂದು ವರ್ಷದಿಂದ ಮತ್ತೊಂದು ವರ್ಷಕ್ಕೆ ಪ್ರಶ್ನೆ ಪತ್ರಿಕೆ ಭಿನ್ನವಾಗಿರುತ್ತವೆ.
ಈಗ ಪರೀಕ್ಷೆಗೆ ಹೆಚ್ಚು ಸಮಯವಿಲ್ಲದೇ ಇರುವುದರಿಂದ ನೀವು ಯಾವ ವಿಷಯದಲ್ಲಿ ವೀಕ್ ಇದ್ದೀರಿ ಎಂಬುದನ್ನು ಗಮನಿಸಿಕೊಂಡು, ಅದರತ್ತ ಹೆಚ್ಚು ತಲೆಕೆಡಿಸಿಕೊಳ್ಳದೇ ನೀವು ಹೆಚ್ಚು ಇಷ್ಟ ಪಡುವ ವಿಷಯಗಳತ್ತವೇ ನಿಮ್ಮ ಗಮನ ಕೇಂದ್ರೀಕರಿಸಿ. ಉದಾಹರಣೆಗೆ- ಗಣಿತ, ರೀಸನಿಂಗ್ ವಿಷಯಗಳು ನಿಮಗೆ ಕಷ್ಟವೆನಿಸಿದರೆ, ಸುಲಭವೆನಿಸುವ ಕಾಂಪ್ರಹೆನ್ಷನ್ ವಿಷಯವನ್ನು ಇನ್ನಷ್ಟು ಚೆನ್ನಾಗಿ ಓದಿಕೊಳ್ಳಿ.
ಸಮಯ ನಿರ್ವಹಣೆ ಕಲಿಯಿರಿ
ಈ ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಸಮಾನ ಅಂಕಗಳಿದ್ದರೂ, ಅವೆಲ್ಲಕ್ಕೂ ಅಷ್ಟೇ (ಸಮಾನ) ಸಮಯ ಬೇಕಿರುವುದಿಲ್ಲ. ಒಂದು ಪ್ರಶ್ನೆಗೆ ಉತ್ತರಿಸುವುದಕ್ಕಾಗಿಯೇ ಹೆಚ್ಚು ವೇಳೆಯನ್ನು ಹಾಳು ಮಾಡಬೇಡಿ. ಜಟಿಲವಾದ ಪ್ರಶ್ನೆಯನ್ನು ಕೈಬಿಟ್ಟು ಇನ್ನೊಂದು ಪ್ರಶ್ನೆಗೆ ಪ್ರಯತ್ನಿಸಿ.
ಹೆಚ್ಚು ಸಮಯ ಬೇಡುವ ಪ್ರಶ್ನೆಗೆ ಉತ್ತರಿಸಲೇ ಬೇಕೆಂದು ಹಟತೊಟ್ಟು ಸಮಯ ವ್ಯರ್ಥಮಾಡಬೇಡಿ. ಕೊನೆಗೆ ಸಮಯ ಉಳಿದಲ್ಲಿ, ಆ ಕ್ಲಿಷ್ಟಕರ ಪ್ರಶ್ನೆಯತ್ತ ಮತ್ತೆ ದೃಷ್ಟಿ ಹರಿಸಿ. ಪರೀಕ್ಷೆಯಲ್ಲಿಯು ನೀವು ಗುರುತಿಸಿದ ಉತ್ತರ ಸರಿಯಾಗಿದೆಯೇ ಎಂಬುದನ್ನು ಕನ್ ಫರ್ಮ್ ಮಾಡಿಕೊಳ್ಳಲು ಇತರ ಆಪ್ಷನ್‌ಗಳನ್ನು ವಿಶ್ಲೇಷಣೆಗೊಳಪಡಿಸುತ್ತಾ ಸಮಯವನ್ನು ವ್ಯರ್ಥ ಮಾಡಬೇಡಿ.
ಅಭ್ಯಾಸ ನಡೆಸುವಾಗಲೇ ವಿಷಯವನ್ನು ಸ್ಪಷ್ಟ ಮಾಡಿಕೊಳ್ಳುವುದರಿಂದ ಪರೀಕ್ಷೆಯಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯ. ಮಾಕ್ ಟೆಸ್ಟ್‌ಗಳನ್ನು ನೀವೇ ರೂಪಿಸಿ ಕೊಂಡು ಸಮಯ ನಿರ್ವಹಣೆ ಮಾಡುವುದನ್ನು ಕಲಿತುಕೊಳ್ಳಿ. ಯಾವ ವಿಷಯದ ಯಾವ ರೀತಿಯ ಪ್ರಶ್ನೆಗಳಿಗೆ ಉತ್ತರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತಿದ್ದೇನೆ ಎಂಬುದರ ಅರಿವು ನಿಮಗಿರಲಿ.
ಸಿಲಬಸ್‌ನಂತೆ ಓದಿ
ಈ ಪರೀಕ್ಷೆಗೆ (IAS prelims 2022)ಸಿದ್ಧತೆ ನಡೆಸುವಾಗ ಮೊದಲು ಸಿಲಬಸ್ ಅನ್ನು ಸರಿಯಾಗಿ ನೋಡಿಕೊಳ್ಳಿ. ಹೆಚ್ಚು ಪ್ರಶ್ನೆಗಳನ್ನು ಕೇಳಬಹುದಾದ, ಸಿಲಬಸ್‌ನ ಭಾಗಗಳಿಗೆ ಒತ್ತು ಕೊಡಿ. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ನೋಡುವುದರಿಂದ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬಹುದು.
ಇದನ್ನೂ ಓದಿ | Job News: ಕೇಂದ್ರ ಸರಕಾರಿ ನೌಕರಿಗೆ SSC ಪರೀಕ್ಷೆ ಬರೆಯಿರಿ
ಪರೀಕ್ಷೆ ಹತ್ತಿರವಿರುವಾಗ ನೀವು ಪ್ರತಿಯೊಂದು ವಿಷಯಕ್ಕೂ ಸಮಾನ ಮಹತ್ವವನ್ನು ನೀಡಬೇಡಿ. ಬದಲಾಗಿ, ಹೆಚ್ಚು ಪ್ರಶ್ನೆಗಳನ್ನು ಕೇಳಬಹುದಾದ, ಸಿಲಬಸ್‌ನ ವಿಷಯಗಳನ್ನು ಮತ್ತೆ ಅಭ್ಯಾಸ ನಡೆಸಿ. ಉದಾಹರಣೆಗೆ, ಪ್ರಾಚೀನ ಇತಿಹಾಸದಲ್ಲಿ ಕಲೆ, ಆಧುನಿಕ ಇತಿಹಾಸದಲ್ಲಿ (1885ರಿಂದ 1947ರ ಅವಧಿಯಲ್ಲಿನ) ಸ್ವಾತಂತ್ರ್ಯ ಹೋರಾಟ ಕುರಿತು ಹೆಚ್ಚು ಪ್ರಶ್ನೆಗಳಿರುತ್ತವೆ. ಆದ್ದರಿಂದ ಸ್ಮಾರ್ಟ್ ಆಗಿ, ಪರೀಕ್ಷೆಗೆ ಸಿದ್ಧರಾಗಿ.
ಆಲ್ ದಿ ಬೆಸ್ಟ್ !