ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಮುಂದಿನ 2023ರ ಏಪ್ರಿಲ್‌ನಲ್ಲಿ ನಡೆಸಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿ ಪರೀಕ್ಷೆಗೆ (ಎನ್‌ಡಿಎ-ಎನ್‌ಎ) (UPSC NDA & NA Exam) ಅಧಿಸೂಚನೆ ಪ್ರಕಟಿಸಿದೆ.
ಸೇನೆಯಲ್ಲಿ ಅಧಿಕಾರಿಯಾಗಬಯಸುವ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಜನವರಿ 10ರ ಒಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. 202೦ರವರೆಗೆ ಕೇವಲ ಅವಿವಾಹಿತ ಪುರಷ ಅಭ್ಯರ್ಥಿಗಳು ಮಾತ್ರ ಈ ಪರೀಕ್ಷೆ ಬರೆಯಬಹುದಿತ್ತು. ಈಗ ಅವಿವಾಹಿತ ಮಹಿಳಾ ಅಭ್ಯರ್ಥಿಗಳು ಕೂಡ ರಕ್ಷಣಾ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಏಪ್ರಿಲ್ 16 ರಂದು ಪರೀಕ್ಷೆ
ಯುಪಿಎಸ್‌ಸಿಯು ಅಭ್ಯರ್ಥಿಗಳ ಆಯ್ಕೆಗೆ ಇದೇ ಏಪ್ರಿಲ್ 16 ರಂದು ಲಿಖಿತ ಪರೀಕ್ಷೆ ನಡೆಸಲಿದೆ. ರಾಜ್ಯದ ಅಭ್ಯರ್ಥಿಗಳಿಗೆ ಬೆಂಗಳೂರು, ಮೈಸೂರು ಮತ್ತು ಧಾರವಾಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ತರಬೇತಿಗೆ 395 ಅಭ್ಯರ್ಥಿಗಳನ್ನು ಈ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಇವರಲ್ಲಿ ಭೂಸೇನೆಗೆ-208 (10 ಮಹಿಳೆಯರು), ನೌಕಾಪಡೆಗೆ-42 (ಮೂವರು ಮಹಿಳೆಯರು) ಮತ್ತು ವಾಯುಪಡೆಯ ಫ್ಲೈಯಿಂಗ್ ವಿಭಾಗಕ್ಕೆ 92 ಮತ್ತು ಗ್ರೌಂಡ್ ಡ್ಯೂಟಿ ವಿಭಾಗಕ್ಕೆ 28 ಮತ್ತು ನೇವಲ್ ಅಕಾಡೆಮಿಗೆ 25 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ತರಬೇತಿಗೆ ಕಳುಹಿಸಲಾಗುತ್ತದೆ. ಈ ಅಕಾಡೆಮಿಗಳಲ್ಲಿ ಯಶಸ್ವಿಯಾಗಿ ತರಬೇತಿ ಪಡೆಯುವ ಅಭ್ಯರ್ಥಿಗಳನ್ನು ಸೇನೆಯು ಅಧಿಕಾರಿ ಹುದ್ದೆಗೆ ನೇಮಕ ಮಾಡಿಕೊಳ್ಳುತ್ತದೆ.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 10, 2023 (6:00 PM)
ಅರ್ಜಿ ವಾಪಾಸ್ ಪಡೆಯಲು ಕೊನೆಯ ದಿನಾಂಕ:
ಜನವರಿ 18 ರಿಂದ 24, 2023
ಪರೀಕ್ಷೆ ನಡೆಯುವ ದಿನಾಂಕ: ಏಪ್ರಿಲ್ ೧೬, 202೩
ಫಲಿತಾಂಶ ಪ್ರಕಟ: ಅಕ್ಟೋಬರ್, 202೩
ಕೋರ್ಸ್ ಪ್ರಾರಂಭ : ಜನವರಿ, 2024
ಸಹಾಯವಾಣಿ ಸಂಖ್ಯೆ: 011-23385271 / 23381125 / 23098543
ಅರ್ಜಿ ಸಲ್ಲಿಸಲು ವೆಬ್‌ವಿಳಾಸ: Website
ಭೂಸೇನೆಗೆ ಆಯ್ಕೆ ಮಾಡುವ 208 ಅಭ್ಯರ್ಥಿಗಳಲ್ಲಿ ಹತ್ತು ಮಂದಿ ಮಹಿಳೆಯರಾಗಿರಲಿದ್ದಾರೆ. ನೌಕಾಪಡೆಗೆ ಆಯ್ಕೆ ಮಾಡುವ 42 ಅಭ್ಯರ್ಥಿಗಳಲ್ಲಿ 3 ಮಂದಿ ಮಹಿಳೆಯರಿಗೆ ಅವಕಾಶ ದೊರೆಯಲಿದೆ. ವಾಯುಪಡೆಗೆ ಆಯ್ಕೆ ಯಾಗುವ ಒಟ್ಟು 120 ಅಭ್ಯರ್ಥಿಗಳಲ್ಲಿ 6 ಅಭ್ಯರ್ಥಿಗಳು ಮಹಿಳೆಯರಾಗಿರಲಿದ್ದಾರೆ. ನೇವಲ್ ಅಕಾಡೆಮಿಯಲ್ಲಿ ಮಾತ್ರ ಮಹಿಳೆಯರಿಗೆ ತರಬೇತಿ ಪಡೆಯಲು ಅವಕಾಶ ನೀಡಲಾಗಿಲ್ಲ.
ಯಾರು ಅರ್ಜಿ ಸಲ್ಲಿಸಬಹುದು?
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದಿರುವ ಅವಿವಾಹಿತ ಯುವಕರು ಮತ್ತು ಯುವತಿಯರು ಈ ಪರೀಕ್ಷೆ ಬರೆಯಬಹುದಾಗಿದೆ. ಈ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿ ಗಳೂ ಅರ್ಜಿಸಲ್ಲಿಸಬಹುದು.
ನೌಕಾ ಪಡೆ ಮತ್ತು ವಾಯುಪಡೆಗೆ ಸೇರಬೇಕೆಂದು ಇಚ್ಛಿಸಿದ್ದಲ್ಲಿ ದ್ವಿತೀಯ ಪಿಯುಸಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯವನ್ನು ಕಡ್ಡಾಯವಾಗಿ ಕಲಿತಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 2004ರ ಜುಲೈ 2 ರಿಂದ 2007ರ ಜುಲೈ 1ರ ನಡುವೆ ಜನಿಸಿರಬೇಕು.
ಅರ್ಜಿ ಶುಲ್ಕ ಎಷ್ಟು?
ಎಸ್‌ಸಿ/ಎಸ್‌ಟಿ ಮತ್ತು ಸೇನೆಯ ಅಧಿಕಾರಿಗಳ (ಜೆಸಿಎ/ಎನ್‌ಸಿಎ ಒಆರ್) ಪುತ್ರರಾಗಿದ್ದಲ್ಲಿ ಅಂಥ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯ್ತಿ ನೀಡಲಾಗಿದೆ. ಉಳಿದ ಅಭ್ಯರ್ಥಿಗಳು 100 ರೂ. ಶುಲ್ಕ ಅರ್ಜಿ ಶುಲ್ಕ ಪಾವತಿಸ ಬೇಕಿರುತ್ತದೆ. ಯಾವುದೇ ಎಸ್‌ಬಿಐ ಶಾಖೆಯಲ್ಲಿ ಶುಲ್ಕ ಪಾವತಿಸಬಹುದಾಗಿದೆ ಅಥವಾ ವೀಸಾ ಕಾರ್ಡ್/ಮಾಸ್ಟರ್ ಕಾರ್ಡ್ ಪೇ ಕಾರ್ಡ್/ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಹೇಗೆ?
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಅಥವಾ ನೇವಲ್ ಅಕಾಡೆಮಿಗೆ ಆಯ್ಕೆಯಾಗಲು ಅಭ್ಯರ್ಥಿಯು ಮೂರು ಹಂತಗಳ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪ್ರವೇಶ ಪರೀಕ್ಷೆ ಮೊದಲನೇ ಹಂತ. ಇದರಲ್ಲಿ ಯಶಸ್ವಿಯಾದ ಅಭ್ಯರ್ಥಿಗಳು ಎಸ್‌ಎಸ್‌ಬಿ ನಡೆಸುವ ಬೌದ್ಧಿಕ ಹಾಗೂ ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗಬೇಕು. ಅಧಿಕಾರಿಗೆ ಇರಬೇಕಾದ ಅರ್ಹತೆಗಳನ್ನು ಈ ವ್ಯಕ್ತಿತ್ವ ಪರೀಕ್ಷೆಯ ಸಂದರ್ಭದಲ್ಲಿ ಒರೆಗೆ ಹಚ್ಚಿ ನೋಡಲಾಗುತ್ತದೆ.
ಈ ಎರಡನೇ ಹಂತ ದಾಟಿದ ಅಭ್ಯರ್ಥಿಗಳು ಎಸ್‌ಎಸ್‌ಬಿ ನಡೆಸುವ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು. ಈ ಮೂರೂ ಹಂತಗಳಲ್ಲಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಅವರವರ ಆಯ್ಕೆಯ ಕೋರ್ಸ್‌ಗಳಿಗೆ ಸೀಟು ಲಭ್ಯತೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ| Central University Recruitment | ಸೆಂಟ್ರಲ್ ವಿವಿಯಲ್ಲಿ 77 ಬೋಧಕೇತರ ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ