Site icon Vistara News

UPSC Prelims 2022 | ಪರೀಕ್ಷೆ ನಡೆದ 17 ದಿನಗಳಲ್ಲಿಯೇ ಫಲಿತಾಂಶ ಪ್ರಕಟ

upsc prelims result 2022

ನವ ದೆಹಲಿ: ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ನಾಗರಿಕ ಸೇವಾ ಹುದ್ದೆಗಳ ನೇಮಕಕ್ಕೆ ಜೂನ್‌ ೫ ರಂದು ನಡೆಸಿದ ಪೂರ್ವಭಾವಿ ಪರೀಕ್ಷೆಯ (ಪ್ರಿಲಿಮ್ಸ್‌) (upsc prelims 2022) ಫಲಿತಾಂಶವನ್ನು ಆಯೋಗದ ವೆಬ್‌ನಲ್ಲಿ ಪ್ರಕಟಿಸಿದೆ.

ಪರೀಕ್ಷೆ ನಡೆದ ಕೇವಲ ೧೭ ದಿನಗಳಲ್ಲಿ ಫಲಿತಾಂಶ ಪ್ರಕಟಿಸಲಾಗಿದ್ದು, ಇದೊಂದು ದಾಖಲೆಯಾಗಿದೆ. ಸುಮಾರು ೧೩,೦೯೦ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮುಖ್ಯ ಪರೀಕ್ಷೆ ಬರೆಯಬಹುದಾಗಿದೆ. ಅರ್ಹತೆ ಪಡೆದ ಅಭ್ಯರ್ಥಿಗಳ ರೋಲ್‌ ನಂಬರ್‌ ಅನ್ನು ಮಾತ್ರ ವೆಬ್‌ನಲ್ಲಿ ನೀಡಲಾಗಿದೆ.

ಫಲಿತಾಂಶ ನೋಡಲು ಇಲ್ಲಿ ಕ್ಲಿಕ್‌ ಮಾಡಿ

ಅರ್ಹತೆ ಪಡೆದ ಅಭ್ಯರ್ಥಿಗಳು ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಮುಖ್ಯ ಪರೀಕ್ಷೆ ಬರೆಯಲು ಮತ್ತೆ ಯುಪಿಎಸ್‌ಸಿಯ ವೆಬ್‌ನಲ್ಲಿ ವಿವರಣಾತ್ಮಕ ಅರ್ಜಿ ಸಲ್ಲಿಸಬೇಕಿರುತ್ತದೆ. ಸದ್ಯದಲ್ಲಿಯೇ ಈ ಅರ್ಜಿ ಸಲ್ಲಿಕೆಯ ಕುರಿತು ವೆಬ್‌ನಲ್ಲಿ ಮಾಹಿತಿ ನೀಡಲಾಗುತ್ತದೆ ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಾರಿ ಒಟ್ಟು ೧,೦೧೧ ಹುದ್ದೆಗಳ ನೇಮಕಕ್ಕೆ ಈ ಪರೀಕ್ಷೆ ನಡೆಸಲಾಗತ್ತಿದ್ದು, ನಾಗರಿಕ ಸೇವಾ ಹುದ್ದೆ (ಐಎಎಸ್‌) ಮತ್ತು ಅರಣ್ಯ ಸೇವಾ ಹುದ್ದೆ ( ಐಎಫ್‌ಎಸ್‌ )ಗಳಿಗೆ ಏಕ ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಮುಖ್ಯ ಪರೀಕ್ಷೆಯನ್ನು ಮಾತ್ರ ಬೇರೆ ಬೇರೆಯಾಗಿ ನಡೆಸಲಾಗುತ್ತದೆ.

ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಪಡೆದ ಅಂಕಗಳ ಮಾಹಿತಿಯನ್ನು ಮುಖ್ಯ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ ನಂತರ ವೆಬ್‌ನಲ್ಲಿ ಒದಗಿಸಲಾಗುತ್ತದೆ. ಫಲಿತಾಂಶದ ಕುರಿತು ಗೊಂದಲವಿದ್ದಲ್ಲಿ ಆಯೋಗದ ಕಚೇರಿಯನ್ನು ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ (ದೂರವಾಣಿ ಸಂಖ್ಯೆ: 011-23385271, 011-23098543 or 011-23381125) ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ವೆಬ್‌: https://www.upsc.gov.in

Exit mobile version