Site icon Vistara News

UPSC Prelims Result 2023 : ಯುಪಿಎಸ್‌ಸಿ ಫೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ

upsc prelims 2023 IAS prelims 2023

#image_title

ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ಭಾರತೀಯ ನಾಗರಿಕ ಸೇವಾ ಅಧಿಕಾರಿ (ಐಎಎಸ್‌) ಮತ್ತು ಭಾರತೀಯ ಅರಣ್ಯ ಸೇವಾ ಅಧಿಕಾರಿ (ಐಎಫ್‌ಎಸ್‌) ಹುದ್ದೆಗಳ ನೇಮಕಕ್ಕೆ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ (UPSC Prelims Result 2023) ಪ್ರಕಟಿಸಿದೆ.

ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ ಎಲ್ಲ ಅಭ್ಯರ್ಥಿಗಳ ಹೆಸರು ಮತ್ತು ರೋಲ್‌ ನಂಬರ್‌ ಅನ್ನು ವೆಬ್‌ಸೈಟ್‌ನಲ್ಲಿ ಒದಗಿಸಲಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಇದನ್ನು ಪರಿಶೀಲಿಸಬಹುದಾಗಿದೆ. ಮೇ 28ರ ಭಾನುವಾರದಂದು ಈ ಪರೀಕ್ಷೆಯನ್ನು ನಡೆಸಲಾಗಿತ್ತು.

ದೇಶಾದ್ಯಂತ ಸುಮಾರು 13 ಲಕ್ಷ ಅಭ್ಯರ್ಥಿಗಳು ಈ ಪೂರ್ವಭಾವಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 14,624 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಮುಖ್ಯ ಪರೀಕ್ಷೆ ಬರೆಯಬೇಕಾಗಿರುವ ಅಭ್ಯರ್ಥಿಗಳು ಮತ್ತೊಮ್ಮೆ ವಿವರವಾದ ಅರ್ಜಿಯನ್ನು (Detailed Application Form-I (DAF-I)) ಸಲ್ಲಿಸಬೇಕಾಗಿದ್ದು, ಈ ಬಗ್ಗೆ ಮುಂದೆ ಯುಪಿಎಸ್‌ಸಿಯು ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಿದೆ. ಸೆಪ್ಟೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆಸುವುದಾಗಿ ಈಗಾಗಲೇ ಯುಪಿಎಸ್‌ಸಿಯು ವೇಳಾಪಟ್ಟಿ ಪ್ರಕಟಿಸಿದೆ.

ಭಾರತೀಯ ಅರಣ್ಯ ಸೇವಾ ಅಧಿಕಾರಿ (ಐಎಫ್‌ಎಸ್‌) ಹುದ್ದೆಗಳ ನೇಮಕಕ್ಕೂ ಈ ಪೂರ್ವಭಾವಿ ಪರೀಕ್ಷೆಯನ್ನು ಪರಿಗಣಿಸಲಾಗುತ್ತದೆ. ಈ ಬಾರಿ ಒಟ್ಟು 1,958 ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ. ಇವರುಗಳ ಹೆಸರು ಮತ್ತು ರೋಲ್‌ ನಂಬರ್‌ ಅನ್ನು ಕೂಡ ವೆಬ್‌ಸೈಟ್‌ನಲ್ಲಿ ಪ್ರತ್ಯೇಕವಾಗಿ ಒದಗಿಸಲಾಗಿದೆ.

ಪೂರ್ವಭಾವಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕ, ಕಟ್‌ಆಫ್‌ ಅಂಕ ಹಾಗೂ ಕೀ ಉತ್ತರಗಳನ್ನು ಈ ನೇಮಕ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಅಂದರೆ ಅಂತಿಮ ಫಲಿತಾಂಶ ಪ್ರಕಟವಾದ ನಂತರ ವೆಬ್‌ಸೈಟ್‌ನಲ್ಲಿ ಒದಗಿಸಲಾಗುವುದು ಎಂದು ಯುಪಿಎಸ್‌ಸಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಫಲಿತಾಂಶವನ್ನು ನೋಡಲು ಇಲ್ಲಿ (Click Here) ಕ್ಲಿಕ್‌ ಮಾಡಿ.

ಈ ಬಾರಿ ಒಟ್ಟು 1,105 ಐಎಎಸ್‌ ಮತ್ತು 150 ಐಎಫಎಸ್‌ ಹುದ್ದೆಗಳಿಗೆ ನೇಮಕ ನಡೆಯಲಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಅತಿ ಹೆಚ್ಚು ಐಎಎಸ್‌ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. ಕಳೆದ ವರ್ಷ ಮೊದಲಿಗೆ ಕಡಿಮೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದರೂ ನಂತರ 1,011 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. 2016 ರಲ್ಲಿ 1079 ಹುದ್ದೆಗಳಿಗೆ ನೇಮಕ ನಡೆದಿತ್ತು. 2017 ರಲ್ಲಿ 980, 2018 ರಲ್ಲಿ 782, 2019 ರಲ್ಲಿ 896 ಮತ್ತು 2020 ರಲ್ಲಿ 796 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. 2021 ರಲ್ಲಿ ಕೇವಲ 712 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ಈ ಬಾರಿಯ ಹುದ್ದೆಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ದೇಶದ ಅತ್ಯಂತ ಪ್ರತಿಷ್ಠಿತ ಪರೀಕ್ಷೆ ಎಂದು ಈ ಪರೀಕ್ಷೆಯನ್ನು ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಹತ್ತು ಲಕ್ಷಕ್ಕೂ ಹೆಚ್ಚು ಮಂದಿ ಈ ಪರೀಕ್ಷೆ ಬರೆಯುತ್ತಾ ಬಂದಿದ್ದಾರೆ. ಕಳೆದ ವರ್ಷ 11.52 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು.

ಸಹಾಯವಾಣಿ ಸಂಖ್ಯೆ:011-23385271, 011-23098543 or 011-23381125
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ : https://www.upsc.gov.in/

ಇದನ್ನೂ ಓದಿ : UPSC Results 2022: ಯುಪಿಎಸ್‌ಸಿ ಟಾಪರ್ ಇಶಿತಾ ಎರಡು ಬಾರಿ ಪ್ರಿಲಿಮ್ಸ್ ಕೂಡ ಪಾಸ್ ಮಾಡಿರಲಿಲ್ಲ!

Exit mobile version