ನವ ದೆಹಲಿ: ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ಭಾರತೀಯ ನಾಗರಿಕ ಸೆವಾ ಅಧಿಕಾರಿ (ಐಎಎಸ್) ಮತ್ತು ಭಾರತೀಯ ಅರಣ್ಯ ಸೇವಾ ಅಧಿಕಾರಿ (ಐಎಫ್‌ಎಸ್) ಹುದ್ದೆಗಳ ನೇಮಕಕ್ಕೆ (UPSC Recruitment 2023) ನಡೆಸುವ ಪೂರ್ವಭಾವಿ (ಪ್ರಿಲಿಮ್ಸ್) ಪರೀಕ್ಷೆಗೆ ಅರ್ಜಿ ಸಲ್ಲಿಸಲು ಇಂದು ಎಂದರೆ ಫೆ.21 ಕೊನೆಯ ದಿನವಾಗಿದೆ.
ಇನ್ನೂ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ಇಂದು ಸಂಜೆಯೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆರ್ಜಿ ಶುಲ್ಕ ಪಾವತಿಸಲು ಸಂಜೆ ಆರು ಗಂಟೆಯವರೆಗೆ ಮಾತ್ರ ಕಾಲಾವಕಾಶವಿರುತ್ತದೆ. ಭಾರತೀಯ ರೈಲ್ವೆ ಇಲಾಖೆಯು ನಡೆಸುತ್ತಿದ್ದ ಭಾರತೀಯ ರೈಲ್ವೆ ಮ್ಯಾನೇಜ್‌ಮೆಂಟ್ ಸರ್ವೀಸ್(IRMS) ಪರೀಕ್ಷೆಯನ್ನು ರದ್ದುಪಡಿಸಲಾಗಿದ್ದು, ಯುಪಿಎಸ್‌ಸಿಯು ನಡೆಸುವ ಐಎಎಸ್/ಐಎಫ್‌ಎಸ್ ಪರೀಕ್ಷೆಯೊಂದಿಗೇ ಈ ಪರೀಕ್ಷೆಯನ್ನೂ ವಿಲೀನಗೊಳಿಸಲಾಗಿದೆ. ಹೀಗಾಗಿ ಈ ಹುದ್ದೆಗಳ ಆಕಾಂಕ್ಷಿಗಳು ಕೂಡ ಇಂದೇ ಅರ್ಜಿ ಸಲ್ಲಿಸಬೇಕಿರುತ್ತದೆ.
ಈ ಬಾರಿ ಒಟ್ಟು 1,105 ಐಎಎಸ್ ಮತ್ತು 150 ಐಎಫಎಸ್ ಹುದ್ದೆಗಳಿಗೆ ನೇಮಕ ನಡೆಯಲಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದಲ್ಲಿ ಈ ಬಾರಿ ಅತಿ ಹೆಚ್ಚು ಐಎಎಸ್ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ. ಈ ಬಾರಿಯ ಹುದ್ದೆಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ (Click Here) ಮಾಡಿ.
ರಾಜ್ಯದಲ್ಲಿ ಎಲ್ಲಿ ಪರೀಕ್ಷೆ?
ರಾಜ್ಯದಲ್ಲಿ ಬೆಂಗಳೂರು, ಧಾರವಾಡ ಮತ್ತು ಮೈಸೂರಿನಲ್ಲಿ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಮುಖ್ಯ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ಮಾತ್ರ ನಡೆಸಲಾಗುತ್ತದೆ. ಎರಡೂ ಸೇವೆಗಳಿಗೂ ಒಂದೇ ಪೂರ್ವಭಾವಿ ಪರೀಕ್ಷೆಯ ಮೂಲಕ ಮುಖ್ಯ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯು ಈಗಾಗಲೇ ಪ್ರಕಟಿಸಿದಂತೆ ಮೇ 28 ರಂದು ನಡೆಯಲಿದೆ.
ವಿದ್ಯಾರ್ಹತೆ ಏನು?
ಯಾವುದೇ ಪದವೀಧರರು ಐಎಎಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಐಎಫ್‌ಎಸ್ ಹುದ್ದೆಗಳ ಪರೀಕ್ಷೆ ಬರೆಯಲಿಚ್ಛಿಸುವ ಅಭ್ಯರ್ಥಿಗಳು ಪಶುಪಾಲನಾ ಮತ್ತು ಪಶುವೈದ್ಯ ವಿಜ್ಞಾನ/ಸಸ್ಯಶಾಸ್ತ್ರ/ರಸಾಯನಶಾಸ್ತ್ರ/ಭೂ ವಿಜ್ಞಾನ ಶಾಸ್ತ್ರ/ಗಣಿತ/ ಸಂಖ್ಯಾಶಾಸ್ತ್ರ ಅಥವಾ ಪ್ರಾಣಿಶಾಸ್ತ್ರ ವಿಷಯಗಳನ್ನೊಳಗೊಂಡ ಯಾವುದಾದರೂ ಒಂದು ಪದವಿ ಅಥವಾ ಕೃಷಿ ವಿಜ್ಞಾನ/ಅರಣ್ಯಶಾಸ್ತ್ರ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರಬೇಕು.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-02-2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 21-02-2023 (6:00 PM)
ಅರ್ಜಿಯಲ್ಲಿ ಬದಲಾವಣೆ ಮಾಡಲು ಅವಕಾಶ : 22.02.2023 ರಿಂದ 28.02.2023
ಪೂರ್ವಭಾವಿ ಪರೀಕ್ಷೆ ದಿನಾಂಕ: 28-05-2023
ಸಹಾಯವಾಣಿ ಸಂಖ್ಯೆ: 011-23385271 / 011-23381125 / 011-23098543
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ : https://upsc.gov.in/
ವಯೋಮಿತಿ ಎಷ್ಟು?
21 ರಿಂದ 32 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ವಯಸ್ಸನ್ನು ಆಗಸ್ಟ್ 1, 2023 ಕ್ಕೆ ಲೆಕ್ಕ ಹಾಕಲಾಗುತ್ತದೆ. ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿಗೆ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ. ಸಾಮಾನ್ಯ ಅಭ್ಯರ್ಥಿಗಳು ಆರು ಬಾರಿ ಮಾತ್ರ ಈ ಪರೀಕ್ಷೆ ಬರೆಯಬಹುದು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದು. ಒಬಿಸಿ ಅಭ್ಯರ್ಥಿಗಳು 9 ಬಾರಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ. ಮಹಿಳಾ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಲು ಅವಕಾಶ ನೀಡಲಾಗಿರುತ್ತದೆ. ಅರ್ಜಿ ಶುಲ್ಕ ಪಾವತಿಸಲು ಕೂಡ ಫೆಬ್ರವರಿ 21 ಕೊನೆಯ ದಿನವಾಗಿದೆ.
ನೇಮಕ ಹೇಗೆ?
ಮೊದಲಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ, ನೇಮಕ ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ : UPSC Recruitment 2023 : ರೈಲ್ವೆ ಇಲಾಖೆಯ IRMS ಅಧಿಕಾರಿಯಾಗಬೇಕೇ? ಐಎಎಸ್ ಪರೀಕ್ಷೆಗೇ ಅರ್ಜಿ ಸಲ್ಲಿಸಿ!