ಆರೋಪಕ್ಕೆ ಸಾಧನೆ ಮೂಲಕವೇ ಉತ್ತರ!
ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಸುಳ್ಳು ಆರೋಪದಿಂದ ಬೇಸತ್ತಿದ್ದ ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಅಭ್ಯರ್ಥಿಯೊಬ್ಬರು ನಾಗರಿಕ ಸೇವಾ ಪರೀಕ್ಷೆಯಲ್ಲಿ 352ನೇ ರ‍್ಯಾಂಕ್ ಪಡೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.
ಇತ್ತೀಚೆಗೆ ನಡೆದ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ವಿನಯ್‌ಕುಮಾರ್ ಡಿ ಎಚ್ ಎಂಬುವರು 65ನೇ ರ‍್ಯಾಂಕ್ ಪಡೆದಿದ್ದರು. ಆದರೆ ಈ ಪರೀಕ್ಷೆಯ ವೇಳೆ ಅಕ್ರಮ ನಡೆದಿದ್ದರಿಂದ ಇದನ್ನುರದ್ದುಪಡಿಸಲಾಗಿತ್ತು. 65ನೇ ರ‍್ಯಾಂಕ್ ಪಡೆದ ವಿನಯ್ ಕುಮಾರ್ ಸಾಧನೆಯ ಬಗ್ಗೆಯೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ʼ SCAM ವಾಟ್ಸಪ್ ಗ್ರೂಪ್ʼ ನಲ್ಲಿ ಅವರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಫೋಟೋದೊಂದಿಗೆ ರೋಲ್ ನಂಬರ್ ಹಾಕಿ, ಬರೆದು ಪೋಸ್ಟ್ ಮಾಡಲಾಗಿತ್ತು. ಇದು ವೈರಲ್ ಕೂಡ ಆಗಿತ್ತು.
ಈಗ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 14ನೇ ಸ್ಥಾನ ಪಡೆಯುವ ಮೂಲಕ ತಮ್ಮ ಮೇಲೆ ಸುಳ್ಳು ಆರೋಪ ಮಾಡಿದವರಿಗೆ ತಕ್ಕ ಉತ್ತರ ನೀಡಿದ್ದಾರೆ.
ಬ್ಯಾಡ್ಮಿಂಟನ್ ಆಟಗಾರ 213ನೇ ರ‍್ಯಾಂಕ್!
ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ ಶಿರಸಿಯ ಮನೋಜ್ ಆರ್ ಹೆಗಡೆ ನಾಗರಿಕ ಸೇವಾ ಪರೀಕ್ಷೆಯಲ್ಲಿ 213ನೇ ರ‍್ಯಾಂಕ್ ಪಡೆದಿದ್ದಾರೆ. ಶಿರಸಿಯ ಲಯನ್ಸ್ ಹೈಸ್ಕೂಲ್‌ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದ ಇವರು ಶಿರಸಿಯ ಎಂಇಎಸ್ ಕಾಲೇಜಿನಲ್ಲಿ ಪಿಯುಸಿ ಓದಿದ್ದರು. ಮುಂದೆ ಧಾರವಾಡ ದಲ್ಲಿ ಬಿಎಸ್‌ಸ್ಸಿ ಅಗ್ರಿಕಲ್ಚರ್ ಪದವಿ ಪಡೆದಿದ್ದರು.
ದೆಹಲಿಯಲ್ಲಿ ಕೋಚಿಂಗ್ ಪಡೆದ ಕೊಪ್ಪಳದ ಕುವರಿ
ಬೆಂಗಳೂರಿನಲ್ಲಿ ಓದಿ, ನವದೆಹಲಿಯಲ್ಲಿ ಕೋಚಿಂಗ್ ಪಡೆದಿದ್ದ ಕೊಪ್ಪಳದ ಕುವರಿ ಅಪೂರ್ವ ಬಾಸೂರು 191 ರ‍್ಯಾಂಕ್ ಪಡೆದಿದ್ದಾರೆ. ರಾಜ್ಯದಲ್ಲಿ 7ನೇ ಸ್ಥಾನ ಪಡೆದ ಇವರು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ. ಶ್ರೀಕಾಂತ ಬಾಸೂರರ ಪುತ್ರಿ.
2010-11 ನೇ ಸಾಲಿನಲ್ಲಿ ಗಂಗಾವತಿಯಲ್ಲಿ ಎಸ್ಎಸ್‌ಎಸ್‌ಎಲ್‌ಸಿ ಮುಗಿಸಿದ ಇವರು, ಮಂಗಳೂರಿನ ಎಕ್ಸ್‌ಪರ್ಟ್ ಕಾಲೇಜಿನಲ್ಲಿ ಪಿಯುಸಿ ಓದಿದ್ದರು. ಬೆಂಗಳೂರಿನ ಆರ್ ವಿ ಡೆಂಟಲ್ ಕಾಲೇಜಿನಲ್ಲಿ ಬಿಡಿಎಸ್ ಓದಿರುವ ಅಪೂರ್ವ ದೆಹಲಿಯಲ್ಲಿದ್ದು ಎರಡೂವರೆ ವರ್ಷ ಐಎಎಸ್ ಕೋಚಿಂಗ್ ಪಡೆದಿದ್ದರು.
222ನೇ ರ‍್ಯಾಂಕ್ ಪಡೆದ ಕೊಡಗಿನ ಎಂಜಿನಿಯರ್
ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿಯೂ ರ‍್ಯಾಂಕ್ ಪಡೆದಿದ್ದ ಕೊಡಗಿನ ಮುಂಡಂಡ ರಾಜೇಶ್ 222 ನೇ ರ‍್ಯಾಂಕ್ ಪಡೆದಿದ್ದಾರೆ. ಇವರು ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ನೆಲಜಿ ನಿವಾಸಿ ರಾಜೇಶ್.
ಐಎಎಸ್ ಆಗಬೇಕೆಂದು ಕನಸು ಹೊತ್ತ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುತ್ತಲೇ ತಾವೂ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಅವರು 222ನೇ ರ‍್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸತತ ಆರು ವರ್ಷ ಓದಿ ಗೆದ್ದ ಸಾಹಿತ್ಯ!
ಸತತವಾಗಿ ಆರು ವರ್ಷ ಅಭ್ಯಾಸ ನಡೆಸಿದ ಬೆಳಗಾವಿ ಜಿಲ್ಲೆ ಬೈಲಹೊಂಗಲದ ಸಾಹಿತ್ಯ ಮಲ್ಲಿಕಾರ್ಜುನ ಆಲದಕಟ್ಟಿ ಎಂಬುವರು 250ನೇ ರ‍್ಯಾಂಕ್ ಪಡೆದಿದ್ದಾರೆ. ಇವರ ತಂದೆ ಮಲ್ಲಿಕಾರ್ಜುನ್ ಬೈಲಹೊಂಗಲದಲ್ಲಿ ವ್ಯಾಪಾರಸ್ಥರಾಗಿದ್ದಾರೆ.
ಎಂಜಿನಿಯರಿಂಗ್ ಮುಗಿಸಿ 2016ರಿಂದ ಐಎಎಸ್‌ಗೆ ತರಬೇತಿ ಪಡೆಯುತ್ತಿದ್ದ ಸಾಹಿತ್ಯ ನಿರಂತರ ಪರಿಶ್ರಮದಿಂದ ಪರೀಕ್ಷೆ ಪಾಸ್ ಆಗಿದ್ದೇನೆ ಎಂದಿದ್ದಾರೆ. ಇದುವರೆಗೆ ಅವರು ಐದು ಬಾರಿ ಪರೀಕ್ಷೆ ಬರೆದಿದ್ದು ಈ ಸಾರಿ ಆಯ್ಕೆಯಾಗಿದ್ದಾರೆ.
ಫಲಿತಾಂಶ ಸುಧಾರಿಸಿಕೊಂಡ ಸವಿತಾ
ವಿಜಯಪುರ ನಗರದ ಸಿದ್ದಾರೂಢ ನಗರದ ಸವಿತಾ ಸಿದ್ದಪ್ಪ ಗೋಟ್ಯಾಳ ತಮ್ಮ ಹಿಂದಿನ ಸಾಧನೆಯನ್ನು ಸುಧಾರಿಸಿಕೊಂಡಿದ್ದಾರೆ. 2019 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕೂಡ ಸವಿತಾ ಆಯ್ಕೆಯಾಗಿದ್ದರು. ಆದರೆ 626ನೇ ರ‍್ಯಾಂಕ್ ಪಡೆದುಕೊಂಡಿದ್ದರು. ಕೇಂದ್ರ ಸರ್ಕಾರದ ಇಂಡಿಯನ್ ಪಿ ಆ್ಯಂಡ ಟಿ ಅಕೌಂಟ್ಸ್ ಆ್ಯಂಡ್ ಫೈನಾನ್ಸ್ ಸರ್ವೀಸ್ ಸೇವೆಗೆ ತರಬೇತಿ ಪಡೆಯುತ್ತಿದ್ದರು. ಇಷ್ಟರಮದ್ಯೆ 2021 ರ ಯುಪಿಎಸ್‌ಸಿ ಪರೀಕ್ಷೆಯನ್ನು ಅವರು ಮತ್ತೆ ಬರೆದಿದ್ದು, ಈ ಬಾರಿ 479 ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಸವಿತಾರ ಹಿರಿಯ ಸಹೋದರಿ ಅಶ್ವಿನಿ ಗೋಟ್ಯಾಳ ಐಪಿಎಸ್ ಅಧಿಕಾರಿಯಾಗಿದ್ದು, 2016 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅಶ್ವಿನಿ ಗೋಟ್ಯಾಳ 625 ನೇ ರ‍್ಯಾಂಕ್ ಪಡೆದಿದ್ದಾರೆ.
ಸದ್ಯ ಅಶ್ವಿನಿ ಪಂಜಾಬಿನ ಚಂಡಿಗಡದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸವಿತಾ ಗೋಟ್ಯಾಳ ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಪದವಿಧರೆ. ದೆಹಲಿಯ ವಾಜಿರಾಮ್ ಆ್ಯಂಡ ರವಿ ತರಬೇತಿ ಕೇಂದ್ರದಲ್ಲಿ ಈ ಪರೀಕ್ಷೆಗೆ ತರಬೇತಿ ಪಡೆದಿದ್ದಾರೆ. ಸವಿತಾರ ತಂದೆ ಸಿದ್ದಪ್ಪ ಗೋಟ್ಯಾಳ ಬಿಎಸ್‌ಎನ್‌ಎಲ್‌ನ ನಿವೃತ್ತ ನೌಕರರಾಗಿದ್ದಾರೆ.
ಇದನ್ನೂ ಓದಿ|UPSC result 2022: ಯುಪಿಎಸ್ಸಿ ಫಲಿತಾಂಶ ಪ್ರಕಟ; ಹೆಣ್ಣುಮಕ್ಕಳೇ ಟಾಪ್ 4
ಮೊರಾರ್ಜಿ ಶಾಲೆಯ ವಿದ್ಯಾರ್ಥಿ 311ನೇ ರ‍್ಯಾಂಕ್
ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಮೊರಾರ್ಜಿ ಶಾಲೆಯಲ್ಲಿ ಓದಿದ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ವಿದ್ಯಾರ್ಥಿ ದೀಪಕ್ ಆರ್ ಶೇಟ್ ಯುಪಿಎಸ್‌ಸಿ ಪರೀಕ್ಷೆಯಲ್ಲಿ 311 ರ‍್ಯಾಂಕ್ ಪಡೆದಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ದೀಪಕ್ ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಓದಿದ್ದರು. ನಂತರ ಬೆಂಗಳೂರಿನ ಆರ್ ವಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಅವರು ಬೆಂಗಳೂರಿನಲ್ಲಿಯೇ ತರಬೇತಿ ಪಡೆದುಕೊಂಡು ಈ ಪರೀಕ್ಷೆ ತೆಗೆದುಕೊಂಡಿದ್ದರು. ಅವರ ಕುಟುಂಬ ಈಗಲೂ ಮಂಕಿಯಲ್ಲಿ ನೆಲೆಸಿದೆ.