Site icon Vistara News

UPSC Result 2022 : ಡ್ರೈವರ್‌ ಮಗ ಐಎಎಸ್‌ ಪರೀಕ್ಷೆ ಬರೆದಿದ್ದು ಅಮ್ಮನಿಗೆ ಗೊತ್ತೇ ಇರಲಿಲ್ಲ!

upsc result 2022 25 from Karnataka selected for Civil Services 

#image_title

ಬೆಂಗಳೂರು: ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) 2022ನೇ ಸಾಲಿನ ನಾಗರಿಕ ಸೇವಾ ಪಾರೀಕ್ಷೆಗಳ ಫಲಿತಾಂಶ (UPSC Result 2022) ಪ್ರಕಟಿಸಿದ್ದು, ಒಟ್ಟು 933 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಲ್ಲಿ 25 ಅಭ್ಯರ್ಥಿಗಳು ರಾಜ್ಯದವರಾಗಿದ್ದಾರೆ.

ಧಾರವಾಡದ ಸಾರಿಗೆ ಬಸ್‌ ಡ್ರೈವರ್‌ ಮಗ ಸಿದ್ದಲಿಂಗಪ್ಪ ಕೆ ಪೂಜಾರ್ 589ನೇ ರ‍್ಯಾಂಕ್‌ ಪಡೆದಿದ್ದರೆ, ರಾಮನಗರದ ರೈತನ ಮಗ ಚಲುವರಾಜು 238ನೇ ರ‍್ಯಾಂಕ್‌ ಪಡೆದಿದ್ದಾರೆ. ಈ ರೀತಿಯ ಸಾಧನೆ ಮಾಡಿದ ಕೆಲ ಅಭ್ಯರ್ಥಿಗಳ ಪರಿಚಯ ಇಲ್ಲಿದೆ.

ಬಸ್‌ ಡ್ರೈವರ್‌ ಮಗ 589ನೇ ರ‍್ಯಾಂಕ್‌

ಸಿದ್ದಲಿಂಗಪ್ಪ ಕೆ ಪೂಜಾರ್ ಮನೆಯ ಮುಂದೆ ಅವತ ತಾಯಿ ಶಾಂತಮ್ಮ

ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಕರ್ನಾಟಕ ರಸ್ತೆ ಸಾರಿಗೆ ಬಸ್ ಡ್ರೈವರ್ ಮಗ ಸಿದ್ದಲಿಂಗಪ್ಪ ಕೆ ಪೂಜಾರ್ 589ನೇ ರ‍್ಯಾಂಕ್‌ ಪಡೆದಿದ್ದಾರೆ. ಕನ್ನಡ ಮಾದ್ಯಮದಲ್ಲಿ ಓದಿರುವ ಸಿದ್ದಲಿಂಗಪ್ಪ ಬಡತನದ ನಡುವೆಯೇ ಈ ಸಾಧನೆ ಮಾಡಿದ್ದಾರೆ.

ಸಿದ್ದಲಿಂಗಪ್ಪ ಕೆ ಪೂಜಾರ್‌ ಏನು ಹೇಳಿದ್ದಾರೆ ನೋಡಿ.

ಸಿದ್ದಲಿಂಗಪ್ಪ ಕೆ ಪೂಜಾರ್ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದು ತಾಯಿ ಶಾಂತವ್ವಗೆ ಗೊತ್ತೇ ಇರಲಿಲ್ಲ. ʻʻಮಗ ಏನು ಕಲಿತಿದ್ದಾನೆ ಎಂತಲೇ ನನಗೆ ಗೊತ್ತಿಲ್ಲʼʼ ಎಂದು ತಾಯಿ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ. ʻʻನಮ್ಮಿಂದ ಮಗನಿಗೆ ಸಹಾಯ ಸಹಕಾರ‌ ಇರಲಿಲ್ಲ, ಆದರೂ ಸಾಧನೆ ಮಾಡಿದ್ದಾನೆ. ಇಷ್ಟು ಮುಂದೆ ಆತ ಬಂದಿದ್ದು ನಮಗೆ ಹೆಮ್ಮೆ. ಧಾರವಾಡ ಜಿಲ್ಲೆಗೆ ಆತ ಹೆಮ್ಮೆ ತಂದಿದ್ದಾನೆ. ಆತ ಇಷ್ಟು ದೊಡ್ಡ ಮಟ್ಟಕ್ಕೆ ಬೆಳಿತಾನೆ ಎಂಬ ಭರವಸೆ ಇರಲಿಲ್ಲʼʼ ಎಂದು ಅವರು ಹೇಳಿದ್ದಾರೆ.

ತಾಯಿ ಶಾಂತವ್ವ ಮಾತನಾಡಿದ್ದಾರೆ ನೋಡಿ

ಸಿದ್ದಲಿಂಗಪ್ಪ ಕೆ ಪೂಜಾರ್ ತಮ್ಮ ಓದಿಗೆ ತಾವೇ ಹಣಕಾಸಿನ ವ್ಯವಸ್ಥೆ ಮಾಡಿಕೊಂಡಿದ್ದರು. ತಾಯಿ ಶಾಂತಮ್ಮ ಒಕ್ಕಲುತನ ಮಾಡುತ್ತಿದ್ದಾರೆ.

ರೈತನ ಮಗ 238ನೇ ರ‍್ಯಾಂಕ್

ರಾಮನಗರದ ಹಾರೋಹಳ್ಳಿ ತಾಲೂಕಿನ ದೊಡ್ಡಬಾದಿಗೆರೆ ಗ್ರಾಮನ ನಿವಾಸಿ ಚಲುವರಾಜು 238ನೇ ರ‍್ಯಾಂಕ್ ಪಡೆದಿದ್ದಾರೆ. ಇವರು 3ನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಚಲುವರಾಜು, ಪಿಯುಸಿ ವರೆಗೂ ಸರ್ಕಾರಿ ಶಾಲೆಯಲ್ಲೇ ವಿಧ್ಯಾಭ್ಯಾಸ ಮಾಡಿದ್ದಾರೆ. ಇವರ ಪೋಷಕರು ರೈತರಾಗಿದ್ದಾರೆ.

ಚಲುವರಾಜು

ಶೃತಿ ಯರಗಟ್ಟಿ 362 ನೇ ರ‍್ಯಾಂಕ್‌

ಶೃತಿ ಯರಗಟ್ಟಿ

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅರಭಾವಿಮಠ ಗ್ರಾಮದ ಯುವತಿ ಶೃತಿ ಯರಗಟ್ಟಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶದಲ್ಲೇ 362 ನೇ ರ‍್ಯಾಂಕ್‌ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಎಂಎಸ್ಸಿ ಪದವಿ ಪಡೆದಿರುವ ಇವರು ಆರನೇ ಪ್ರಯತ್ನದಲ್ಲಿ ಈ ಯಶಸ್ಸು ಪಡೆದಿದ್ದಾರೆ.

ಶೃತಿ ಯರಗಟ್ಟಿ ಶಿರಢಾಣ ಗ್ರಾಮದ ಡಾ.ಗಂಗಾಧರ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದಿದ್ದಾರೆ. ಕೆಸಿಡಿ ಧಾರವಾಡದಲ್ಲಿ ಪಿಯು ವಿಜ್ಞಾನ ವಿಭಾಗದಲ್ಲಿ ಕಲಿತು, ಬಿಎಸ್‌ಸಿ ವ್ಯಾಸಂಗ ಮಾಡಿ 7 ಚಿನ್ನದ ಪದಕ ಗಳಿಸಿದ್ದರು. ಇವರ ತಂದೆ ನಿವೃತ್ತ ಶಿಕ್ಷಕ ಶಿವಾನಂದ ಯರಗಟ್ಟಿ, ತಾಯಿ ಮಹಾನಂದ. ಆರನೇ ಬಾರಿ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 362ನೇ ರ‍್ಯಾಂಕ್‌ ಪಡೆದಿದ್ದಾರೆ. ಸದ್ಯ ಬೆಂಗಳೂರಿನ ವಿಜಯನಗರದ ಪಿಜಿಯಲ್ಲಿ ಶೃತಿ ಎಸ್. ಯರಗಟ್ಟಿ ವಾಸವಿದ್ದಾರೆ.

ಮೇಘನಾಗೆ 617ನೇ ರ‍್ಯಾಂಕ್‌

ಐ ಎನ್ ಮೇಘನಾ

ಶಿವಮೊಗ್ಗದ ಆಲ್ಕೊಳ ಬಡಾವಣೆ ನಿವಾಸಿ ಐ ಎನ್ ಮೇಘನಾ 617ನೇ ರ‍್ಯಾಂಕ್‌ ಪಡೆದಿದ್ದಾರೆ. ಇವರು ನಿವೃತ್ತ ಡಿಸಿಎಫ್ ಐ.ಎಂ.ನಾಗರಾಜ್ ಮತ್ತು ಜಿ.ಜಿ.ನಮಿತಾ ದಂಪತಿ ಪುತ್ರಿ. ಕಳೆದ ಬಾರಿಯೂ ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ್ದ ಮೇಘನಾ ಸಂದರ್ಶನದಲ್ಲಿ ವಿಫಲರಾಗಿದ್ದರು. ಬೆಂಗಳೂರಿನ ಇನ್‌ಸೈಟ್ಸ್‌ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ.

ಮೈಸೂರು ಜಿಲ್ಲೆ ಬಂಡೀಪುರ, ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿರುವ ಮೇಘನಾ ಶಿವಮೊಗ್ಗದ ಸಾಂದೀಪನಿ ಶಾಲೆಯಲ್ಲಿ ಹೈಸ್ಕೂಲ್ ಓದಿದ್ದಾರೆ. ಶಿವಮೊಗ್ಗದ ಪೇಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಯುಪಿಎಸ್‌ಸಿ ಫಲಿತಾಂಶ ಪ್ರಕಟ

ಅಂಗನವಾಡಿ ಶಿಕ್ಷಕಿ ಮಗನ ಸಾಧನೆ

ಮೈಸೂರಿನ ಕೆ.ಆರ್‌. ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ಡಾ.ಭಾನುಪ್ರಕಾಶ್‌ 448 ನೇ ರ‍್ಯಾಂಕ್‌ ಪಡೆದಿದ್ದಾರೆ. ಇವರ ತಂದೆ ಜಯರಾಮೇಗೌಡ ಕೃಷಿಕರು. ತಾಯಿ ಗಿರಿಜಮ್ಮ ಅಂಗನವಾಡಿ ಶಿಕ್ಷಕಿ.

ಭಾನುಪ್ರಕಾಶ್‌ ಮದುವೆಯಾದ ಮೇಲೆ ಈ ಪರೀಕ್ಷೆ ತೆಗೆದುಕೊಂಡಿದ್ದಾರೆ. ನೆಲಮಂಗಲದ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಕಾಜೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರನೇ ಪ್ರಯತ್ನದಲ್ಲಿ ಅವರು ಯಶಸ್ಸು ಪಡೆದಿದ್ದಾರೆ.

ಭಾನುಪ್ರಕಾಶ್‌ ಅವರ ಮಾತುಗಳನ್ನು ಇಲ್ಲಿ ಕೇಳಿ.

ಸರ್ಕಾರಿ ಶಾಲೆಯಲ್ಲಿ ಪಾಥಮಿಕ ಶಿಕ್ಷಣ ಪಡೆದಿದ್ದ ಇವರು, ಚಾಮರಾಜನಗರದ ಹೊಂಡರಬಾಳಿನ ಜವಾಹರ್‌ ನವೋದಯ ವಿದ್ಯಾಲಯದಲ್ಲಿ ಓದಿದ್ದರು. ಮಂಡ್ಯ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಮುಗಿಸಿ, ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಎಂಡಿ ಮಾಡಿದ್ದಾರೆ. ನಿತ್ಯ ನಾಲ್ಕರಿಂದ ಐದು ಗಂಟೆ ಓದುತ್ತಿದ್ದುದ್ದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: UPSC Result 2022 : ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಇಶಿತಾ ಕಿಶೋರ್‌ ಟಾಪರ್

Exit mobile version