Site icon Vistara News

UPSC Results 2021: ಶ್ರದ್ಧೆಯಿಂದ ಓದಿ, ಅಜ್ಜನಂತೆ ಅಧಿಕಾರಿಯಾಗುವ ಕನಸು ನನಗಾಗಿಸಿದ ಲಕ್ಕುಂಡಿಯ ಯುವಕ

UPSC Results 2021

ವಿಜಯಪುರ: ತಹಶೀಲ್ದಾರರಾಗಿದ್ದ ತಮ್ಮ ಅಜ್ಜನಂತೆ ತಾವೂ ಸರ್ಕಾರದ ಉನ್ನದ ಅಧಿಕಾರಿಯಾಗಬೇಕೆಂದು ಕನಸು ಕಂಡಿದ್ದ ಗ್ರಾಮೀಣ ಭಾಗದ ಯುವಕನೊಬ್ಬ ಯುಪಿಎಸ್‌ಸಿ (UPSC Results 2021) ಪರೀಕ್ಷೆ ಬರೆದು 139ನೇ ರ‍್ಯಾಂಕ್‌ ಪಡೆಯುವ ಮೂಲಕ ತಮ್ಮ ಕನಸು ಈಡೇರಿಸಿಕೊಂಡಿದ್ದಾರೆ.

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಲಕ್ಕುಂಡಿ ಗ್ರಾಮದ ನಿಖಿಲ ಬಿ ಪಾಟೀಲ್ ಈ ಸಾಧನೆ ಮಾಡಿದ ಯುವಕ. ನಿಖಿಲ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದರೂ ಕನ್ನಡ ಸಾರಸ್ವತ ವಿಷಯವನ್ನು ಪ್ರಧಾನ ವಿಷಯವಾಗಿಸಿಕೊಂಡು, ತಮ್ಮ ಅಜ್ಜ ತಹಶೀಲ್ದಾರ ಆಗಿದ್ದ ಶಂಕ್ರೆಪ್ಪ ಅವರಿಗಿಂತಲೂ ಉನ್ನತ ಅಧಿಕಾರಿಯಾಗಲಿದ್ದಾರೆ.

ನಿಖಿಲ್‌ ಮೂಲತಃ ತಾಳಿಕೋಟೆಯ ಲಕ್ಕುಂಡಿ ಗ್ರಾಮದವರಾಗಿದ್ದರೂ, ನಿಖಿಲ್ ಅವರ ತಂದೆ ಗೋಕಾಕ್ ತಾಲೂಕಿನ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರಿಂದ ಗೋಕಾಕ್‌ನಲ್ಲಿ ನೆಲೆಸಿದ್ದರು. ಪ್ರಾಥಮಿಕ ಶಿಕ್ಷಣವನ್ನು ಗೋಕಾಕ್‌ನಲ್ಲಿಯೇ ಪೂರೈಸಿದ ನಂತರ ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆ ಶ್ರೀ ಸತ್ಯಸಾಯಿ ವಸತಿ ಶಾಲೆಯಲ್ಲಿ ಪೂರೈಸಿದ್ದರು. ಪಿ.ಇ.ಎಸ್.ಐ.ಟಿ. ಎಂಜನಿಯರಿಂಗ್ ಮಹಾವಿದ್ಯಾಲಯದಿಂದ ಬಿ.ಇ ಪದವಿ ಪೂರೈಸಿದ್ದರು.

ಬಾಲ್ಯದಲ್ಲಿಯೇ ತಮ್ಮ ಅಜ್ಜ (ತಾಯಿಯ ತಂದೆ) ಕೆಎಎಸ್ ಅಧಿಕಾರಿ ಶಂಕ್ರೆಪ್ಪ ಪಾಟೀಲರಂತೆಯೇ ಅಧಿಕಾರಿಯಾಗಬೇಕು ಎಂದು ನಿಖಿಲ್ ಕನಸು ಕಂಡಿದ್ದರು. ಆದರೆ ಎಂಜಿನಿಯರಿಂಗ್‌ ಓದಬೇಕಾದ ಒತ್ತಡ ಸೃಷ್ಟಿಯಾಗಿತ್ತು. ಎಂಜಿನಿಯರಿಂಗ್ ಪೂರೈಸಿದಾಗ ಪುನಃ ಸುಪ್ತವಾಗಿದ್ದ ಕನಸು ಮತ್ತೆ ಜಾಗೃತವಾಯಿತು, ಆಗ ನಿಖಿಲ್ ತಡಮಾಡಲಿಲ್ಲ. ತಕ್ಷಣವೇ ತಮ್ಮ ಕನಸು ನನಸು ಮಾಡುವ ಸಂಕಲ್ಪ ಹೊತ್ತು ಪ್ರಯತ್ನಕ್ಕೆ ಅಣಿಯಾದರು. ನಾಗರಿಕ ಸೇವಾ ಪರೀಕ್ಷೆಯನ್ನು ತೆಗೆದುಕೊಂಡರು. ನಾಲ್ಕು ಬಾರಿಯ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ದೊರಕಿದೆ. ನವದೆಹಲಿಯ ವಾಜಿರಾಮ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ನಿಖಿಲ್ ಈಗ 139ನೇ ರ‍್ಯಾಂಕ್ ಪಡೆದು ಯಶಸ್ಸಿನ ನಗೆ ಬೀರಿದ್ದಾರೆ.

ಅಭ್ಯರ್ಥಿಗಳಿಗೆ ನಿಖಿಲ್‌ ನೀಡಿದ ಸಲಹೆ ಏನು?
ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಎಂದರೆ ಸಂಪೂರ್ಣವಾಗಿ ಅದಕ್ಕೆ ಅಧ್ಯಯನ ನಡೆಸುವ ಬದ್ಧತೆ ಇರಬೇಕು. ಪರೀಕ್ಷೆಯಲ್ಲಿ ವಿಫಲರಾದಾಗ ಕೂಡ ವಿಚಲಿತರಾಗದೆ, ಶ್ರದ್ಧೆಯಿಂದ ಓದಬೇಕು. ಪ್ರತಿಯೊಂದು ತಪ್ಪು ಮಾಡಿದಾಗಲೂ, ಎಲ್ಲಿ ತಪ್ಪಾಗುತ್ತಿದೆ ಎಂದು ತಿಳಿದುಕೊಳ್ಳುತ್ತಾ ಯಶಸ್ಸಿನ ಮೆಟ್ಟಿಲೇರಬೇಕು. ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬೇಕು.

ಶ್ರದ್ಧೆಯ ಅಧ್ಯಯನದಿಂದ ಯಶಸ್ಸು

ʼʼಅಳಿಕೆಯ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಯಲ್ಲಿ ಬೋಧನೆ, ಸಂಸ್ಕಾರ ಭರಿತ ಮೌಲ್ಯ ಕಲಿಸಿದ್ದು, ತ್ಯಾಗ ಮನೋಭಾವನೆ, ಸಾಮಾಜಿಕ ಕಳಕಳಿ ನನ್ನಲ್ಲಿ ಜಾಗೃತಿ ಮೂಡಿಸುತ್ತಿತ್ತು. ನಂತರ ಸಮಾಜ ಸೇವೆ ಮಾಡುವ ತುಡಿತ ಅಧಿಕವಾಗಿ ಅಧಿಕಾರಿಯಾಗಬೇಕು ಎಂಬ ಕನಸು ಚಿಗುರಿತು. ಹೀಗಾಗಿ ಐಎಎಸ್ ತರಬೇತಿ ಕೇಂದ್ರದಲ್ಲಿ ತರಗತಿಗಳನ್ನು ಶ್ರದ್ದೆಯಿಂದ ಆಲಿಸಿದೆ, ಸಾಹಿತ್ಯದ ಕೃತಿಗಳನ್ನು ಓದಿದೆ. ನಂತರ ಬೆಂಗಳೂರಿನಲ್ಲಿ ಮನೆ ಮಾಡಿ ಸಂಪೂರ್ಣ ಸಮಯವನ್ನು ಅಧ್ಯಯನಕ್ಕೆ ಮೀಸಲಿರಿಸಿದ್ದ ʼʼ ಎಂದು ಅವರು ತಮ್ಮ ಯಶಸ್ಸಿನ ಕತೆಯನ್ನು ʼವಿಸ್ತಾರ ನ್ಯೂಸ್‌ʼ ನೊಂದಿಗೆ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ| UPSC Results 2021: ನಂ.1 ರ‍್ಯಾಂಕ್‌ ಪಡೆದ ಶ್ರುತಿ ಶರ್ಮಾ ಸೋಷಿಯಲ್‌ ಮೀಡಿಯಾದಲ್ಲಿಯೂ ಆ್ಯಕ್ಟಿವ್

ಶ್ರದ್ಧೆಯಿಂದ ಕೂಡಿದ ಅಧ್ಯಯನವೇ ನನ್ನ ಯಶಸ್ಸಿನ ಸೂತ್ರವಾಗಿದೆ ಎಂದು ನಿಖಿಲ್‌ ಹೇಳಿದ್ದಾರೆ. ಅವರು ಸಾಮಾನ್ಯ ದಿನಗಳಲ್ಲಿ 8 ತಾಸು ಅಧ್ಯಯನ ಮಾಡುತ್ತಿದ್ದರಂತೆ. ಪರೀಕ್ಷೆ ಹತ್ತಿರವಾದಾಗ ಸರಿಸುಮಾರು 12 ಗಂಟೆ ಅಧ್ಯಯನಕ್ಕೆ ಮೀಸಲಿರಿಸಿದ್ದರಂತೆ.

Exit mobile version