ನವ ದೆಹಲಿ: ನಾಗರಿಕ ಸೇವಾ ಹುದ್ದೆಗಳಿಗೆ ಸಿದ್ಧತೆ ನಡೆಸುವುದು ಎಂದರೆ ಮೂರು ಹೊತ್ತೂ ಓದಬೇಕು. ಸೋಷಿಯಲ್ ಮೀಡಿಯಾ ಬಳಸಬಾರದು, ಹೀಗೆ ನಿಯಮಗಳ ಪಟ್ಟಿಯನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಆದರೆ ಈ ಬಾರಿಯ ಫಲಿತಾಂಶದಲ್ಲಿ (UPSC Results 2021) ದೇಶದಲ್ಲಿಯೇ ನಂ.1 ಸ್ಥಾನ ಪಡೆದ ಶ್ರುತಿ ಶರ್ಮಾ ಓದುವಾಗ ಕೂಡ ಸೋಷಿಯಲ್ ಮೀಡಿಯಾ ಬಳಸುತ್ತಿದ್ದರಂತೆ!
ʼʼನಾನು ಅಭ್ಯಾಸ ನಡೆಸುವಾಗ ಸೋಷಿಯಲ್ ಮೀಡಿಯಾದಿಂದ ದೂರವೇನೂ ಉಳಿದಿರಲಿಲ್ಲ. ಆದರೆ ಅದರಲ್ಲಿಯೇ ಮುಳುಗಿರುತ್ತಿರಲಿಲ್ಲ. ಎಷ್ಟು ಬೇಕೋ ಅಷ್ಟು ಬಳಸುತ್ತಿದ್ದೆʼʼ ಎಂದು ಅವರು ಹೇಳಿದ್ದಾರೆ. ಅವರ ತಾಯಿ ರುಚಿ ಶರ್ಮಾ ಕೂಡ ಶ್ರುತಿ ಸೋಷಿಯಲ್ ಮೀಡಿಯಾ ಬಳಸುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ. ʼʼಆಕೆ ತಾನೇ ಕಷ್ಟ ಪಟ್ಟು ಓದಿದ್ದಾಳೆ. ಹೆಚ್ಚು ಸಮಯ ಓದುತ್ತಿದ್ದಳು, ನಾವೇ ಮಲಗಿ ನಿದ್ರೆ ಮಾಡು ಎಂದು ಒತ್ತಾಯಿಸಬೇಕಾಗಿತ್ತು. ಎಷ್ಟು ಬೇಕೋ ಅಷ್ಟು ಹೊತ್ತು ಸೋಷಿಯಲ್ ಮೀಡಿಯಾದಲ್ಲಿ ಕಾಲ ಕಳೆಯುತ್ತಿದ್ದಳು. ಮೋದಲಿನಿಂದಲೂ ಆಕೆ ಹಾಗೆಯೇ….ʼʼ ಎಂದು ಅವರು ವಿವರಿಸಿದ್ದಾರೆ.
ಇತಿಹಾಸದ ವಿದ್ಯಾರ್ಥಿನಿಯಾಗಿರುವ ಶ್ರುತಿ ಶರ್ಮಾ 2021ನೇ ಸಾಲಿನ ಫಲಿತಾಂಶ ಪ್ರಕಟವಾದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುತ್ತೇನೆ ಎಂದು ಕಲ್ಪಿಸಿಕೊಂಡೂ ಇರಲಿಲ್ಲವಂತೆ. ಪಟ್ಟಿಯನ್ನು ಎರಡೆರಡು ಬಾರಿ ನೋಡಿ ನನ್ನ ಹೆಸರೇ ಮೊದಲಿದೆ ಎಂದು ಕನ್ಫರ್ಮ್ ಮಾಡಿಕೊಂಡೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಬರೆಯುವುದನ್ನು ಪ್ರ್ಯಾಕ್ಟೀಸ್ ಮಾಡಿದೆ
ಅಭ್ಯಾಸ ನಡೆಸುವಾಗ ಮುಖ್ಯವಾಗಿ ಸರಿಯಾಗಿ ಉತ್ತರವನ್ನು ಪ್ರೆಸೆಂಟ್ ಮಾಡುವುದನ್ನು ನಾನು ಪ್ರ್ಯಾಕ್ಟೀಸ್ ಮಾಡಿದೆ ಎಂದು ತಮ್ಮ ಯಶಸ್ಸಿನ ಗುಟ್ಟು ರಟ್ಟು ಮಾಡಿರುವ ಶ್ರುತಿ ಶರ್ಮಾ, ಕೋಚಿಂಗ್ ಪಡೆಯುವುದರ ಜತೆಗೆ ನಾನೇ ಪತ್ರಿಕೆಯನ್ನು ಓದಿ, ವಿಷಯಗಳನ್ನು ನೋಟ್ಸ್ ಮಾಡಿಕೊಳ್ಳುತ್ತಿದ್ದೆ, ಇದರಿಂದ ನನಗೆ ಈ ಯಶಸ್ಸು ಪಡೆಯಲು ಸಾಧ್ಯವಾಯಿತು ಎಂದಿದ್ದಾರೆ.
ಯುಪಿಎಸ್‌ಸಿ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ವಿವರಣಾತ್ಮಕವಾದ ಉತ್ತರವನ್ನು ಬರೆಯಬೇಕಾಗಿರುತ್ತದೆ. ನಿಗದಿತ ಸಮುದಲ್ಲಿ ಸರಿಯಾದ ಉತ್ತರವನ್ನು ಬರೆಯುವುದು ಸವಾಲಿನ ವಿಷಯವಾಗಿರುತ್ತದೆ. ಕೇವಲ ಉತ್ತರಗೊತ್ತಿರುವುದಷ್ಟೇ ಅಲ್ಲ, ಅದನ್ನು ಸರಿಯಾಗಿ ಬರೆಯುವುದೂ ಕೂಡ ಮುಖ್ಯವಾಗಿರುತ್ತದೆ. ಜಾಸ್ತಿ ಬರೆಯಬೇಕಾಗಿರುವುದರಿಂದ ಇದನ್ನು ಅಭ್ಯಾಸ ಮಾಡಿಕೊಳ್ಳದ ಅನೇಕರು ವಿಫಲರಾಗುತ್ತಾರೆ. ಈ ವಿಷಯದ ಕಡೆಗೆ ಹೆಚ್ಚು ಗಮನ ನೀಡಿರುವುದು ಶ್ರುತಿಯವರ ಯಶಸ್ಸಿಗೆ ಕಾರಣವಾದ ವಿಷಯಗಳಲ್ಲಿ ಒಂದಾಗಿದೆ.
ತರಬೇತಿಯನ್ನೂ ಪಡೆದಿದ್ದರು!
ಶ್ರುತಿ ಶರ್ಮಾ ಸ್ನಾತಕೋತ್ತರ ಪದವಿ ಪಡೆಯಲು ಜೆಎನ್‌ಯು ಸೇರಿದ್ದರಾದರೂ ಅಲ್ಲಿ ಓದು ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಮುಂದೆ ದಿಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ (ಡಿಎಸ್‌ಇ)ನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನಾಗರಿಕ ಸೇವಾ ಪರೀಕ್ಷೆ ಬರೆಯಬೇಕೆಂದೇ ಜಮಿಯಾ ಮಿಲಿಯಾ ಇಸ್ಲಾಮಿಯಾ ರೆಸಿಡೆಂನ್ಷಿಯಲ್ ಕೋಚಿಂಗ್ ಅಕಾಡೆಮಿಯನ್ನು ಸೇರಿದ್ದರು. ಈ ಬಾರಿ ಆಯ್ಕೆಯಾಗಿರುವ ಅಭ್ಯರ್ಥಿಗಳಲ್ಲಿ ಈ ಅಕಾಡೆಮಿಯ 23 ಅಭ್ಯರ್ಥಿಗಳಿದ್ದಾರೆ. ಇಲ್ಲಿ ಪರೀಕ್ಷೆ ಎದುರಿಸಲು ಸೂಕ್ತ ತರಬೇತಿಯನ್ನು ಪಡೆದುಕೊಂಡೆ ಎಂದು ಶ್ರುತಿ ಹೇಳಿದ್ದಾರೆ.
ಮುಂದೆ ತಮ್ಮ ರಾಜ್ಯ ಉತ್ತರ ಪ್ರದೇಶದಲ್ಲಿಯೇ ವೃತ್ತಿಜೀವನ ಆರಂಭಿಸಬೇಕೆಂದುಕೊಂಡಿರುವ ಶ್ರುತಿ ಶರ್ಮಾ, ಶಿಕ್ಷಣ ಮತ್ತು ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಬೇಕೆಂದುಕೊಂಡಿದ್ದಾರೆ. ನಾಗರಿಕ ಸೇವಾ ಪರೀಕ್ಷೆಗೆ ಓದಬೇಕಾಗಿರುವ ವಿಷಯಗಳು ಬಹಳವಾಗಿರುತ್ತವೆ. ಹೀಗಾಗಿ ಯಾರೊಬ್ಬರೂ ತಮ್ಮದೇ ಆದ ನೋಟ್ಸ್ , ಟಿಪ್ಪಣಿ ಸಿದ್ಧಮಾಡಿಕೊಂಡು ಓದಿದರೆ ಸಾಲದು. ಆದರೆ ಇದಕ್ಕೂ ಸಮಯವಿರಿಸಿಕೊಳ್ಳಬೇಕು. ತಮ್ಮದೇ ಆದ ತಂತ್ರಗಾರಿಕೆಯ ಮೂಲಕ ಪರೀಕ್ಷೆ ಎದುರಿಸಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಈ ಪರೀಕ್ಷೆಗೆ ಸಿದ್ಧತೆ ನಡೆಸಲು ತಾಳ್ಮೆ ಇರಬೇಕು ಎಂದು ಅವರು ಶ್ರುತಿ ಶರ್ಮಾ ವಿವರಿಸಿದ್ದಾರೆ.
ಅಭ್ಯರ್ಥಿಗಳಿಗೆ ಶ್ರುತಿ ನೀಡುವ ಸಲಹೆ ಏನು?
ನಾಗರಿಕ ಸೇವಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ನಿಮ್ಮ ಸಲಹೆ ಏನು ಎಂಬ ಪ್ರಶ್ನೆಗೆ ಉತ್ತರಿಸಿರುವ ಶ್ರುತಿ ʼʼನಿಮಗೇನಿಷ್ಟವೋ ಅದನ್ನೇ ಮಾಡಿ. ಈ ನಿಮ್ಮ ದೀರ್ಘಕಾಲದ ಸಿದ್ಧತೆಗೆ ಅದೇ ನಿಮಗೆ ಸ್ಫೂರ್ಥಿಯಾಗಿರುತ್ತದೆʼʼ ಎಂದಿದ್ದಾರೆ.
ಫೋಕಸ್ ಆಗಿ ಓದಿ
ಈ ಪರೀಕ್ಷೆಗೆ ಎಷ್ಟು ಹೊತ್ತು ಓದುತ್ತೇವೆ ಎನ್ನುವುದಕ್ಕಿಂತ ಯಾವ ವಿಷಯವನ್ನು ಎಷ್ಟು ಚೆನ್ನಾಗಿ ತಿಳಿದುಕೊಳ್ಳುತ್ತೇವೆ ಎಂಬುದು ಬಹಳ ಮುಖ್ಯ. ಎಲ್ಲದಕ್ಕಿಂತಲೂ ಓದುವುದು ಮುಖ್ಯ, ಎಷ್ಟು ಹೊತ್ತು ಓದಿದ್ದೇವೆ ಎಂಬುದಲ್ಲ. ವಿಷಯಗಳ ಓದಿಗೂ ನಾವೇ ಮಿತಿಯನ್ನೂ ಹಾಕಿಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಅದು ಮುಗಿಯುವುದೇ ಇಲ್ಲ. ಪರೀಕ್ಷಗೆ ವಿಷಯಗಳನ್ನು ಫೋಕಸ್ ಆಗಿ ಓದಬೇಕು. ನಾನು ಮಾತ್ರ ಸರಿಯಾಗಿ ಟಿಪ್ಪಣಿ ಮಾಡಿಕೊಂಡು, ಬರೆಯುವುದನ್ನು ಕಲಿತು ಗೆದ್ದೇ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಶ್ರುತಿ ಶರ್ಮಾ ಈ ಪರೀಕ್ಷೆ ಬರೆದಿರುವುದು ಇದು ಎರಡನೇ ಬಾರಿ. ಈ ಹಿಂದೆ ಒಮ್ಮೆ ಅವರು ಪರೀಕ್ಷೆ ಬರೆದಿದ್ದರು. ಮುಖ್ಯ ಪರೀಕ್ಷೆಯನ್ನು ಹಿಂದಿಯಲ್ಲಿ ಬರೆದಿದ್ದ ಕಾರಣದಿಂದ, ಸಂದರ್ಶನಕ್ಕೆ ಆಯ್ಕೆಯಾಗಲು ಒಂದು ಅಂಕ ಕಡಿಮೆಯಾಗಿತ್ತಂತೆ. ಹೀಗಾಗಿ ನನ್ನ ಸ್ಟ್ಯಾಟರ್ಜಿಯನ್ನು ಈ ಬಾರಿ ಬದಲಾಯಿಸಿಕೊಂಡು ಯಶ್ಸಸ್ಸು ಪಡೆದೆ ಎಂದಿದ್ದಾರೆ.