ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ (Congress Guarantee) ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿಗಳಲ್ಲಿ ಕೊನೆಯ ಗ್ಯಾರಂಟಿಯಾದ ಯುವ ನಿಧಿ (Yuva Nidhi Scheme) ಚಾಲನೆಯಾಗಿದ್ದು, ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ ಮಾರ್ಚ್ ಅಂತ್ಯದೊಳಗೆ 4 ಲಕ್ಷ ನೋಂದಣಿ ಮಾಡಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಇನ್ನು ಅಭ್ಯರ್ಥಿಗಳು ಈ ಯೋಜನೆಯನ್ವಯ ಪ್ರತಿ ತಿಂಗಳು ಹಣ ಪಡೆಯಬೇಕಾದರೆ ಪ್ರತಿ ತಿಂಗಳಲ್ಲೂ ತಮಗೆ ಕೆಲಸ ಸಿಕ್ಕಿಲ್ಲ, ಉನ್ನತ ಶಿಕ್ಷಣಕ್ಕೆ ದಾಖಲಾಗಿಲ್ಲ ಎಂದು ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಬೇಕಿದೆ.
ಈ ಸಂಬಂಧ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಒಂದು ವೇಳೆ ಮಾಹಿತಿಯನ್ನು ಅಪ್ಲೋಡ್ ಮಾಡದೇ ಇದ್ದರೆ ಅಂಥವರಿಗೆ ಆ ತಿಂಗಳ ಹಣ ಜಮೆ ಆಗುವುದಿಲ್ಲ. ಹೀಗಾಗಿ ಪ್ರತಿ ತಿಂಗಳು ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. ಸುಳ್ಳು ಮಾಹಿತಿ ನೀಡಿದರೆ ಅಂಥವರ ಮೇಲೆ ಕ್ರಮ ಕೈಗೊಳ್ಳುವುದಲ್ಲದೆ ಪಡೆದ ಹಣವನ್ನು ವಸೂಲಿ ಮಾಡುವುದಾಗಿಯೂ ಸರ್ಕಾರ ಹೇಳಿದೆ.
ಸರ್ಕಾರ ಎಲ್ಲಿಂದ ಮಾಹಿತಿ ಪಡೆಯಲಿದೆ?
ನ್ಯಾಷನಲ್ ಅಕಾಡೆಮಿಕ್ ಡಿಪಾಸಿಟರಿಯಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪದವೀಧರರ ಪ್ರಮಾಣ ಪತ್ರಗಳಿದ್ದು, ಅಲ್ಲಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ದಾಖಲೆಗಳು ಹೊಂದಾಣಿಕೆಯಾಗಿ ಫಲಿತಾಂಶ ಬಂದು ಆರು ತಿಂಗಳು ಆದ ಅಭ್ಯರ್ಥಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ. ಇಷ್ಟಿದ್ದರೂ ಅಭ್ಯರ್ಥಿಗಳು ಪ್ರತಿ ತಿಂಗಳು ಕೆಲಸ ಸಿಕ್ಕಿಲ್ಲ, ಉನ್ನತ ಶಿಕ್ಷಣಕ್ಕೆ ಹೋಗಿಲ್ಲ ಎಂದು ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಬೇಕಿದೆ.
ಯುವ ನಿಧಿ ನೋಂದಣಿ ಹೇಗೆ? ಇಲ್ಲಿದೆ ವಿಡಿಯೋ
ಯುವನಿಧಿಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸರಳ ಮಾಹಿತಿ ನೀವೂ 2023 ರಲ್ಲಿ ಪದವೀಧರರಾಗಿದ್ದು, ಉದ್ಯೋಗದ ಹುಡುಕಾಟ ನಡೆಸುತ್ತಿದ್ದೀರಾ? ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿ ಇಲ್ಲವೇ? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಏನು? ಪ್ರಕ್ರಿಯೆ ಹೇಗೆ? ಯಾವೆಲ್ಲ ದಾಖಲೆಗಳು ಬೇಕು? ಎಂಬ ಪೂರ್ಣ ಮಾಹಿತಿ ಈ… pic.twitter.com/tybBvMDb91
— DIPR Karnataka (@KarnatakaVarthe) December 30, 2023
ಅರ್ಹತೆ ಏನು?
- 2022- 23ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಸಿಗದೆ ಇರುವವರಿಗೆ ಈ ಯೋಜನೆಯ ಲಾಭ ಸಿಗಲಿದೆ.
- ಕರ್ನಾಟಕದಲ್ಲಿ ಕನಿಷ್ಠ 6 ವರ್ಷದವರೆಗೆ ಪದವಿ/ಡಿಪ್ಲೊಮಾ ವ್ಯಾಸಂಗದ ಅವಧಿಯಲ್ಲಿ ಕರ್ನಾಟಕದ ರಹವಾಸಿಯಾಗಿರಬೇಕು.
ಯಾರು ಫಲಾನುಭವಿಗಳು?
- ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ನೀಡಲಾಗುತ್ತದೆ.
- ಡಿಪ್ಲೊಮಾ ಪದವೀಧರರಿಗೆ ಮಾಸಿಕ 1,500 ರೂಪಾಯಿ ನಿರುದ್ಯೋಗ ಭತ್ಯೆ ಸಿಗಲಿದೆ.
- ಈ ಭತ್ಯೆಯು ಉದ್ಯೋಗ ಸಿಗುವವರೆಗೆ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ಸಿಗಲಿದೆ.
ಯಾರು ಅನರ್ಹರು?
- ಉನ್ನತ ವ್ಯಾಸಂಗಕ್ಕೆ ದಾಖಲಾಗುವವರು ಮತ್ತು ವಿದ್ಯಾಭ್ಯಾಸ ಮುಂದುವರಿಸುವವರು.
- ಯಾವುದೇ ಅಪ್ರೆಂಟಿಸ್ ವೇತನ ಪಡೆಯುತ್ತಿರುವವರು.
- ಸರ್ಕಾರಿ/ ಖಾಸಗಿ ಉದ್ಯೋಗ ಪಡೆದಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ.
- ಸರ್ಕಾರದ ನಾನಾ ಯೋಜನೆಗಳಡಿ ಅಥವಾ ಬ್ಯಾಂಕ್ ಸಾಲ ಪಡೆದು ಸ್ವಯಂ ಉದ್ಯೋಗ ಶುರು ಮಾಡಿದವರಿಗೂ ಇಲ್ಲ.
- ಯಾವುದಾದರೂ ಉದ್ಯೋಗ ಸಿಕ್ಕಿದ ಕೂಡಲೇ ಈ ಸವಲತ್ತು ಸ್ಥಗಿತಗೊಳ್ಳಲಿದೆ.
- ಉದ್ಯೋಗ ದೊರೆತ ನಂತರ ಘೋಷಣೆ ಮಾಡಿಕೊಂಡು ಭತ್ಯೆ ಸ್ವೀಕರಿಸುವುದನ್ನು ನಿಲ್ಲಿಸಬೇಕು. ಇಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತದೆ.
ಯುವ ನಿಧಿಗೆ ಅರ್ಜಿ ಸಲ್ಲಿಕೆ ಹೇಗೆ?
- ‘ಸೇವಾ ಸಿಂಧು’ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು
- ಕರ್ನಾಟಕ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
- ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ತೆಗೆದಿಟ್ಟುಕೊಳ್ಳಿ.
- ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಸ್ಪಷ್ಟವಾಗಿರಬೇಕು, ಖಾತೆಯೇ ಇಲ್ಲದಿದ್ದರೆ ಈಗಲೇ ಮಾಡಿಸಿ, ಕೆವೈಸಿ ಕೂಡಾ ಮಾಡಿ ಇಡಿ.
- ಪದವಿ ಅಂಕಪಟ್ಟಿ ಹಾಗೂ ವಿಶ್ವವಿದ್ಯಾಲಯ ಪದವಿ ಪ್ರಮಾಣ ಪತ್ರ ಕಡ್ಡಾಯ (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು)
- ಡಿಪ್ಲೊಮಾ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ. (ಅದು 2023ರದ್ದೇ ಆಗಿರಬೇಕು, ಶಿಕ್ಷಣ ಮುಗಿಸಿ ಆರು ತಿಂಗಳು ಆಗಿರಬೇಕು).
ಇದನ್ನೂ ಓದಿ: Housing Scheme: ರಾಜೀವ್ ವಸತಿ ಯೋಜನೆಗೆ ನೋಂದಣಿ ಶುರು; ಸ್ವಂತ ಸೂರು ನಿಮ್ಮದಾಗಲು ಹೀಗೆ ಮಾಡಿ
ಯುವ ನಿಧಿ ಅರ್ಜಿ ಎಲ್ಲಿ ಸಲ್ಲಿಸಬೇಕು?
ಯುವನಿಧಿಗೆ ಅರ್ಹತೆ ಹೊಂದಿರುವ ಯುವಕ ಯುವತಿಯರು ‘ಸೇವಾ ಸಿಂಧು’ ಪೋರ್ಟಲ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ ಒನ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು.