Site icon Vistara News

Kannada Rajyothsava : ನಾಳೆ ಸಿಎಂ ನೇತೃತ್ವದಲ್ಲಿ ಸಭೆ; ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಫೈನಲ್‌

Kannada Rajyothsava awards 2023

ಬೆಂಗಳೂರು: ಕನ್ನಡ ರಾಜ್ಯೋತ್ಸವವನ್ನು (Kannada Rajyothsava) ಅದ್ಧೂರಿಯಾಗಿ ಆಚರಿಸಲು ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸಿದೆ. ಇದರ ನಡುವೆಯೇ ಅಂದು ನಡೆಯಲಿರುವ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ (Rajyothsava Awards) ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲಿರುವ ಸಾಧಕರ ಪಟ್ಟಿ ಅಂತಿಮಗೊಳಿಸಲು ಅಕ್ಟೋಬರ್‌ 26ರಂದು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.

ಸಿಎಂ ಸಿದ್ದರಾಮಯ್ಯ ಅವರ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ನಡೆಯುವ ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಭಾಗವಹಿಸಲಿದ್ದಾರೆ.

136 ಅರ್ಹರ ಪಟ್ಟಿ ಈಗಾಗಲೇ ಅಂತಿಮ

ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ರಾಜ್ಯೋತ್ಸವ ಪ್ರಶಸ್ತಿಗೆ ಆನ್‌ಲೈನ್‌ ಮೂಲಕ ಅರ್ಜಿ ಸ್ವೀಕರಿಸಲಾಗುತ್ತಿದೆ. ವೈಯಕ್ತಿಕವಾಗಿ ಇಲ್ಲವೆ, ವ್ಯಕ್ತಿಗಳ ಪರವಾಗಿ ಬೇರೆಯವರು ಅರ್ಜಿ ಸಲ್ಲಿಸಬಹುದಾಗಿದೆ. ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಕೆ ನಡೆದಿದೆ. ಅಕ್ಟೋಬರ್‌ 1ರಿಂದ ಆರಂಭಗೊಂಡ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್‌ 15ರಂದು ಅಂತ್ಯಗೊಂಡಿದೆ.

ಈ ಅವಧಿಯಲ್ಲಿ 25 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಇವುಗಳ ಪರಿಶೀಲನೆಗೆ ಸಚಿವ ಶಿವರಾಜ್‌ ತಂಗಡಗಿ ಅವರ ನೇತೃತ್ವದಲ್ಲಿ 30 ಸದಸ್ಯರ ಪ್ರಶಸ್ತಿ ಸಲಹಾ ಸಮಿತಿ ರಚಿಸಲಾಗಿತ್ತು. ಸಮಾಜದ ಎಲ್ಲ ವರ್ಗಗಳಿಗೆ ಸೇರಿದ ಗಣ್ಯರು ಈ ಸಮಿತಿಯಲ್ಲಿದ್ದರು. ಈ ಸಮಿತಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಆಯ್ಕೆ ಮಾಡುವ ಸಲುವಾಗಿ ಹಲವು ಸುತ್ತಿನ ಸಭೆಗಳನ್ನು ನಡೆಸಿದೆ.

ಈ ಸಮಿತಿಯು ತಮ್ಮ ತಮ್ಮ ವಲಯದಲ್ಲಿನ ಸಾಧಕರನ್ನು ಗುರುತಿಸಿದೆ, ಜತೆಗೆ ಜಿಲ್ಲಾ ಮಟ್ಟದಿಂದ ಬಂದಿರುವ ಶಿಫಾರಸುಗಳನ್ನು ಪರಿಗಣಿಸಿದೆ. ಜತೆಗೆ ಸೇವಾ ಸಿಂಧು ಪೋರ್ಟಲ್‌ ಮೂಲಕ ಸಲ್ಲಿಕೆ ಆಗಿರುವ 25000ಕ್ಕೂ ಅಧಿಕ ಅರ್ಜಿಗಳನ್ನು ಪರಿಶೀಲಿಸಿದೆ. ಇದೀಗ 136 ಸಾಧಕರ ಹೆಸರುಗಳನ್ನು ಹೊಂದಿರುವ ಪಟ್ಟಿಯೊಂದು ಸಿದ್ಧವಾಗಿದೆ ಎನ್ನಲಾಗಿದೆ.

ನಾಳೆಯೇ ಅಂತಿಮವಾಗುತ್ತಾ ಪ್ರಶಸ್ತಿ ಪಟ್ಟಿ?

ಪ್ರಶಸ್ತಿ ಸಲಹಾ ಸಮಿತಿಯು ನಾನಾ ಕ್ಷೇತ್ರ, ಜಿಲ್ಲೆಗಳಿಗೆ ಸೇರಿದ 136 ಹೆಸರುಗಳನ್ನು ಅಂತಿಮಗೊಳಿಸಿಕೊಂಡಿದೆ. ಅಂದರೆ ಒಂದೊಂದು ಕ್ಷೇತ್ರಕ್ಕೆ ಸಂಬಂಧಿಸಿ ತಲಾ ಎರಡು ಹೆಸರುಗಳನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ರಾಜ್ಯೋತ್ಸವಕ್ಕೆ 68 ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಇದು 68ನೇ ರಾಜ್ಯೋತ್ಸವವಾಗಿರುವ ಹಿನ್ನೆಲೆಯಲ್ಲಿ 68 ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ.

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಈ ಸಾಧಕರ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: Kannada Rajyotsava : ಕನ್ನಡ ರಾಜ್ಯೋತ್ಸವ ದಿನ ಪಂಚ ಗೀತೆಗಳ ಗಾಯನ ಕಡ್ಡಾಯ

ಮುಂದಿನ ವರ್ಷದಿಂದ ಅರ್ಜಿ ಸ್ವೀಕಾರ ಇಲ್ಲ

ಈ ನಡುವೆ, ಈ ಬಾರಿ 25000ಕ್ಕೂ ಅಧಿಕ ಆನ್‌ಲೈನ್‌ ಅರ್ಜಿಗಳು ಬಂದಿರುವುದು, ಅವುಗಳ ಗುಣಮಟ್ಟವನ್ನು ಪರಿಶೀಲಿಸಿದ ಇಲಾಖೆ ಮುಂದಿನ ಬಾರಿಯಿಂದ ಈ ರೀತಿ ಅರ್ಜಿ ಹಾಕುವ ಪದ್ಧತಿ ಇರುವುದಿಲ್ಲ ಎಂದು ಹೇಳಿದೆ. ಇದರಲ್ಲಿ ಹೆಚ್ಚಿನವು ಜೊಳ್ಳಾಗಿರುವ ಕಾರಣ ಅನಗತ್ಯವಾಗಿ ಪರಿಶೀಲನೆ ಮಾಡಬೇಕಾಗುತ್ತದೆ. ಹೀಗಾಗಿ ಮುಂದಿನ ವರ್ಷದಿಂದ ತಜ್ಞರ ಸಮಿತಿಯೇ ಈ ಆಯ್ಕೆಯನ್ನು ಮಾಡಲಾಗುತ್ತದೆ ಎಂದು ಹೇಳಿದರು.

Exit mobile version