ಬೆಂಗಳೂರು: ನಾಳೆ ನವೆಂಬರ್ 1. ಕನ್ನಡ ರಾಜ್ಯೋತ್ಸವ (Kannada Rajyotsava). ನಾಡಿನೆಲ್ಲೆಡೆ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಕರೆ ನೀಡಿರುವ ರಾಜ್ಯ ಸರ್ಕಾರ (State Government) ಅಧಿಕೃತ ಕಾರ್ಯಕ್ರಮಗಳಲ್ಲಿ ಐದು ಕನ್ನಡ ಗೀತೆಗಳ ಗಾಯನವನ್ನು (Five Kannada Songs) ಕಡ್ಡಾಯಗೊಳಿಸಿದೆ. ಹಾಗಿದ್ದರೆ ಆ ಹಾಡುಗಳು ಯಾವುವು ಎಂದು ಇಲ್ಲಿ ನೋಡೋಣ.
ಈ ಬಾರಿ ಕರ್ನಾಟಕ ಸಂಭ್ರಮ 50ನೇ ವರ್ಷಾಚರಣೆ (Kannada Sambhrama 50) ನಡೆಯುತ್ತಿದೆ. ಮೈಸೂರು ರಾಜ್ಯವು ಕರ್ನಾಟಕ ಎಂದು ಮರುನಾಮಕರಣಗೊಂಡು ಈ ವರ್ಷದ ನವೆಂಬರ್ 1ಕ್ಕೆ 50 ವರ್ಷ ಪೂರ್ಣಗೊಳ್ಳಲಿದೆ. ಈ ಶುಭ ಸಂದರ್ಭದಲ್ಲಿ ಐದು ಕನ್ನಡಗೀತೆಗಳನ್ನು ಕಡ್ಡಾಯವಾಗಿ ಹಾಡುವ ಮೂಲಕ ನುಡಿ ನಮನ ಸಲ್ಲಿಸಬೇಕು ಎನ್ನುವುದು ರಾಜ್ಯ ಸರ್ಕಾರದ ಮನವಿ.
‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಹೆಸರಿನಲ್ಲಿ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕ ಅರಿವು ಮೂಡಿಸುವ ಯೋಜನೆ ಹಮ್ಮಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚಿಸಿದೆ.
ನ.1ರಂದು ರಾಜ್ಯದೆಲ್ಲೆಡೆ ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಭ್ರಮ 50 ಅಭಿಯಾನದ ಅಂಗವಾಗಿ ಆಯ್ಕೆ ಮಾಡಿರುವ ನಾಡಿನ ಹೆಸರಾಂತ ಕವಿಗಳ 5 ಕನ್ನಡ ಗೀತೆಗಳನ್ನು ಹಾಡುವ ಮೂಲಕ ಸಮಸ್ತ ಕನ್ನಡಿಗರು ಕನ್ನಡಾಂಬೆಗೆ ನುಡಿ ನಮನ (ಗೀತೆ ಗಾಯನ) ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಹಾಡಬೇಕಾಗಿರುವ ಹಾಡುಗಳು ಇವು
1. ಹುಯಿಲಗೋಳ ನಾರಾಯಣ ರಾಯರ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
2. ಕುವೆಂಪು ವಿರಚಿತ ಎಲ್ಲಾದರೂ ಇರು ಎಂತಾದರು ಇರು
3. ದ. ರಾ. ಬೇಂದ್ರೆ ಅವರ ಒಂದೇ ಒಂದೇ ಕರ್ನಾಟಕ ಒಂದೇ
4. ಸಿದ್ದಯ್ಯ ಪುರಾಣಿಕ ಅವರ ಹೊತ್ತಿತೋ ಹೊತ್ತಿತು ಕನ್ನಡ ದೀಪ
5. ಚನ್ನವೀರ ಕಣವಿ ಅವರ ಹೆಸರಾಯಿತು ಕರ್ನಾಟಕ
ಹಾಡುಗಳ ಪೂರ್ಣ ಸಾಹಿತ್ಯ ಇಲ್ಲಿದೆ
1.ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಸಾಹಿತ್ಯ: ಹುಯಿಲಗೋಳ ನಾರಾಯಣರಾಯರು
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು || ಪ ||
ರಾಜನ್ಯರಿಪು ಪರಶುರಾಮನಮ್ಮನ ನಾಡು
ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು
ಓಜೆಯಿಂ ಮೆರೆದರಸುಗಳ ಸಾಹಸದ ಸೂಡು
ತೇಜವನು ನಮಗೀವ ವೀರವೃಂದದ ಬೀಡು || 1 ||
ಲೆಕ್ಕಿಗ ಮಿತಾಕ್ಷರರು ಬೆಳೆದು ಮೆರೆದಿಹ ನಾಡು
ಜಕ್ಕಣನ ಶಿಲ್ಪಿ ಕಲೆಯಚ್ಚರಿಯ ಕರುಗೋಡು
ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು
ಬೊಕ್ಕಸದ ಕಣಜವೈ ವಿದ್ವತ್ತೆಗಳ ಕಾಡು || 2 ||
ಪಾವನೆಯರಾ ಕೃಷ್ಣೆ ಭೀಮೆಯರ ತಾಯ್ನಾಡು
ಕಾವೇರಿ ಗೋದೆಯರು ಮೈದೊಳೆವ ನಲುನಾಡು
ಅವಗಂ ಸ್ಪೂರ್ತಿಸುವ ಕಬ್ಬಿಗರ ನಡೆಮಾಡು
ಕಾವ ಗದುಗಿನ ವೀರನಾರಾಯಣನ ಬೀಡು|| 3 ||
2. ಎಲ್ಲಾದರೂ ಇರು ಎಂತಾದರು ಇರು
ರಚನೆ: ಕುವೆಂಪು
ಎಲ್ಲಾದರು ಇರು; ಎಂತಾದರು ಇರು;
ಎಂದೆಂದಿಗು ನೀ ಕನ್ನಡವಾಗಿರು.
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!
ನೀ ಮೆಟ್ಟುವ ನೆಲ – ಅದೆ ಕರ್ನಾಟಕ;
ನೀನೇರುವ ಮಲೆ – ಸಹ್ಯಾದ್ರಿ.
ನೀ ಮುಟ್ಟುವ ಮರ – ಶ್ರೀಗಂಧದ ಮರ;
ನೀ ಕುಡಿಯುವ ನೀರ್ – ಕಾವೇರಿ.
ಪಂಪನನೋದುವ ನಿನ್ನಾ ನಾಲಗೆ
ಕನ್ನಡವೇ ಸತ್ಯ.
ಕುಮಾರವ್ಯಾಸನನಾಲಿಪ ಕಿವಿಯದು
ಕನ್ನಡವೇ ನಿತ್ಯ.
ಹರಿಹರ ರಾಘವರಿಗೆ ಎರಗುವ ಮನ,
ಹಾಳಾಗಿಹ ಹಂಪೆಗೆ ಕೊರಗುವ ಮನ,
ಪೆಂಪಿನ ಬನವಾಸಿಗೆ ಕರಗುವ ಮನ;
ಬೆಳ್ಗೊಳ ಬೇಲೂರ್ಗಳ ನೆನೆಯುವ ಮನ,
ಜೋಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಹೊಂಪುಳಿವೋಗುವ ಮನ;
ಎಲ್ಲಿದ್ದರೆ ಏನ್? ಎಂತಿದ್ದರೆ ಏನ್?
ಎಂದೆಂದಿಗು ತಾನ್-
ಕನ್ನಡವೇ ಸತ್ಯ!
ಕನ್ನಡವೇ ನಿತ್ಯ!
ಕಾಜಾಣಕೆ ಗಿಳಿ ಕೋಗಿಲೆಯಿಂಪಿಗೆ,
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ,
ಮಾವಿನ ಹೊಂಗೆಯ ತಳಿರಿನ ತಂಪಿಗೆ,
ರಸರೋಮಾಂಚನಗೊಳುವಾತನ ಮನ
ಎಲ್ಲಿದ್ದರೆ ಏನ್? ಎಂತಿದ್ದರೆ ಏನ್?
ಎಂದೆಂದಿಗು ತಾನ್-
ಕನ್ನಡವೇ ಸತ್ಯ!
ಕನ್ನಡವೇ ನಿತ್ಯ!
ಅನ್ಯವನೆಲದೆ ಮಿಥ್ಯಾ!
3. ಒಂದೇ ಒಂದೇ ಒಂದೇ ಕರ್ನಾಟಕ ಒಂದೇ
ಕವಿ: ದತ್ತಾತ್ರೇಯ ರಾಮಚಂದ್ರ ಬೇಂದ್ರೆ(ಅಂಬಿಕಾತನಯ ದತ್ತ)
ಒಂದೇ ಒಂದೇ ಒಂದೇ ಕರ್ನಾಟಕ ಒಂದೇ
ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ
ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ
ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ
ಇಲ್ಲಿಯ ಜನ ಮನ ಭಾಷೆಯು ಕನ್ನಡವದು ಒಂದೇ
ಒಂದೇ ಜಗವು ಮನವು ಕನ್ನಡಿಗರು ಎಂದೆ
ಕುಲವೊಂದೇ ಛಲವೊಂದೇ ನೀತಿಯ ನೆಲೆಯೊಂದೇ
ಹೀಗೆನ್ನದ ಹೆರವರು ಅವರಿದ್ದರು ಒಂದೆ ಇರದಿದ್ದರು ಒಂದೆ
ಕನ್ನಡವೆಂದು ಒಪ್ಪದು ಕರ್ನಾಟಕ ನಿಂದೆ
ಕನ್ನಡ ಮಾತೇ ಮಾತೆಯು ಕರ್ನಾಟಕ ಒಂದೇ
ಅದು ದೈವತ ಅದು ಜೀವಿತ ಒಪ್ಪಿಹೆವದು ಎಂದೆ
ನಮ್ಮದು ನಿಮ್ಮದು ಅವರದು ಈ ಆಸ್ತಿ ಪಾಸ್ತಿ
ನಾಡಿನ ತಾಯಿಗೆ ಸೇರಿದೆ ಬೇರೆಯ ಮನೆ ನಾಸ್ತಿ
ಕನ್ನಡ ಕಾಯಕದಲ್ಲಿಲ್ಲವು ಕಮ್ಮೀ ಜಾಸ್ತಿ
ಇದನೊಪ್ಪದ ಹೆರವರು ಅವರಿದ್ದರು ಒಂದೆ ಇರದಿದ್ದರು ಒಂದೇ
ಕರ್ನಾಟಕ ಹಿತ ಹಿಡಿತವು ಕನ್ನಡ ಕುಲದಿಂದೆ
ಕನ್ನಡವು ಭಾರತವು ಜಗವೆಲ್ಲವು ಒಂದೇ
ತುಂಬಿದೆ ಕನ್ನಡ ಕುಲವನ್ನು ಒಪ್ಪುವ ಕುಲದಿಂದೇ
ಇಂತರಿಯದ ಹೆರವರು ಅವರಿದ್ದರು ಒಂದೆ ಇರದಿದ್ದರು ಒಂದೇ
ಉಚ್ಛರಿಸಿರಿ ಮಾತೆಗೆ ಜಯ ಜಯ ಜಯವೆಂದೇ
4. ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಸಾಹಿತ್ಯ: ಡಾ.ಸಿದ್ದಯ್ಯ ಪುರಾಣಿಕ
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ..
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಹೊತ್ತಿತೋ.. ಹೊತ್ತಿತು…ಕನ್ನಡದ ದೀಪ
ಕಣ್ಣು ಕುಕ್ಕಿಸುವಂತೆ ದೇದೀಪ್ಯಮಾನ
ಹರ್ಷ ಉಕ್ಕಿಸುವಂತೆ ಶೋಭಾಯಮಾನ..
ಕನ್ನಡದ ಮನೆಯಾಗೇ ಜ್ಯೋತಿರ್ನಿಧಾನ
ಕನ್ನಡದ ಪ್ರಾಣ.. ಕನ್ನಡದ ಮಾನ ..
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಉರಿವವರು ಬೇಕಿನ್ನು ಇದರೆಣ್ಣೆಯಾಗಿ
ಸುಡುವವರು ಬೇಕಿನ್ನು ನಿಡುಬತ್ತಿಯಾಗಿ..
ಧರಿಸುವವರು ಬೇಕಿನ್ನು ಸಿರಿಹಣತೆಯಾಗಿ
ನಮ್ಮೀ ಉಸಿರಾಗಿ ಧರ್ಮಕ್ಕೆ ಬಾಗಿ..
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಚಿರಕಾಲ ಬೆಳಗಲಿ ಕನ್ನಡದ ದೀಪ
ಜನಕೆಲ್ಲ ಬೆಳಕಾಗಿ ಪುಣ್ಯ ಪ್ರದೀಪ..
ಭಾರತಕೆ ಬಲವಾಗಿ ಭವ್ಯ ಪ್ರದೀಪ
ಕಳೆಯುತ್ತ ತಾಪ , ಬೆಳೆಸುತ್ತ ಸೈಪ..
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಹೊತ್ತಿತೋ ಹೊತ್ತಿತು ಕನ್ನಡದ ದೀಪ
ಮುಗಿಯಿತೋ ಮುಗಿಯಿತು ಶತಮಾನಗಳ ಶಾಪ
ಹೊತ್ತಿತೋ.. ಹೊತ್ತಿತು.. ಕನ್ನಡದ ದೀಪ
5. ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ
ಕವಿ : ಚನ್ನವೀರ ಕಣವಿ
ಹೆಸರಾಯಿತು ಕರ್ನಾಟಕ
ಉಸಿರಾಗಲಿ ಕನ್ನಡ
ಹಸಿಗೋಡೆಯ ಹರಳಿನಂತೆ
ಹುಸಿಹೋಗದ ಕನ್ನಡ
ಹೊಸೆದ ಹಾಗೆ ಹುರಿಗೊಳ್ಳುವ
ಗುರಿ ತಾಗುವ ಕನ್ನಡ;
ಕುರಿತೋದದ ಪರಿಣತಮತಿ –
ಅರಿತವರಿಗೆ ಹೂಗೊಂಡ
ಪಡುಗಡಲಿನ ತೆರೆಗಳಂತೆ
ಹೆಡೆ ಬಿಚ್ಚುತ ಮೊರೆಯುವ
ಸಹ್ಯಾದ್ರಿಯ ಶಿಖರದಂತೆ
ಬಾನೆತ್ತರ ಕರೆಯುವ
ಗುಡಿ – ಗೋಪುರ ಹೊಂಗಳಸಕೆ
ಚೆಂಬೆಳಕಿನ ಕನ್ನಡ;
ನಮ್ಮೆಲ್ಲರ ಮೈಮನಸಿನ
ಹೊಂಗನಸಿನ ಕನ್ನಡ
ತ್ರಿಪದಿಯಿಂದ ಸಾಸಿರಪದಿ
ಸ್ವಚ್ಛಂದದ ಉಲ್ಲಾಸ
ಭಾವಗೀತೆ, ಮಹಾಕಾವ್ಯ –
ವೀರ – ವಿನಯ ಸಮರಸ
ಹಳ್ಳಿ – ಊರು, ನಗರ – ಜಿಲ್ಲೆ
ಮೊಗದ ಹೊಗರು ಕನ್ನಡಿ;
ಎಲ್ಲ ದಿಸೆಗು ಚೆಲ್ಲುವರಿದ
ಚೈತನ್ಯದ ದಾಂಗುಡಿ
ಇದನ್ನೂ ಓದಿ: Karnataka Rajyotsava: ಭೇಟಿ ನೀಡಲೇಬೇಕಾದ ಕರ್ನಾಟಕದ ಐತಿಹಾಸಿಕ ತಾಣಗಳಿವು