Site icon Vistara News

Kannada Rajyotsava: ಭೇಟಿ ನೀಡಲೇಬೇಕಾದ ಕರ್ನಾಟಕದ ಐತಿಹಾಸಿಕ ತಾಣಗಳಿವು

hampi

hampi

ಬೆಂಗಳೂರು: ಕರ್ನಾಟಕ ಭೌಗೊಳಿಕವಾಗಿ, ಸಾಂಸ್ಕೃತಿಕವಾಗಿ ವೈವಿಧ್ಯ ಹೊಂದಿರುವ ರಾಜ್ಯ. ಪಶ್ಚಿಮ ಘಟ್ಟಗಳು, ಡೆಕ್ಕನ್ ಪ್ರಸ್ಥಭೂಮಿ, ಕರಾವಳಿ ಹೀಗೆ ವಿವಿಧ ನಿಸರ್ಗದತ್ತ ಪ್ರವಾಸಿ ತಾಣಗಳನ್ನು ಹೊಂದಿದೆ. ನದಿ, ಜಲಪಾತ, ಕಾಫಿ ತೋಟ, ಸರೋವರ, ಬೆಟ್ಟ, ಹಸಿರು ಮುಂತಾದ ಪ್ರಕೃತಿಯ ಕೊಡುಗೆಗಳ ಜತೆಗೆ ಕಲೆ, ವಾಸ್ತು ಶಿಲ್ಪ, ಐತಿಹಾಸಿಕ ಕೋಟೆ, ಸ್ಮಾರಕಗಳಿಂದಲೂ ಪ್ರವಾಸಿಗರ, ಇತಿಹಾಸ ರಚನೆಕಾರರ ಗಮನ ಸೆಳೆಯುತ್ತದೆ. ಕನ್ನಡ ರಾಜ್ಯೋತ್ಸವ (Kannada Rajyotsava) ಹಿನ್ನಲೆಯಲ್ಲಿ ನಮ್ಮ ರಾಜ್ಯದಲ್ಲಿನ ನೋಡಲೇಬೇಕಾದ ಐತಿಹಾಸಿಕ, ಪ್ರವಾಸಿ ತಾಣಗಳ ಪಟ್ಟಿ ಇಲ್ಲಿದೆ (Historical places).

ಹಂಪಿ

ಯುನೆಸ್ಕೋ ಹೆಸರಿಸಿರುವ ಐತಿಹಾಸಿಕ ತಾಣಗಳಲ್ಲಿ ಹಂಪಿಯೂ ಒಂದು. ಸುಮಾರು 500 ಪ್ರಾಚೀನ ದೇವಾಲಯಗಳನ್ನು ಹೊಂದಿರುವ ಈ ನಗರದಲ್ಲಿ ಪುರಾತತ್ತ್ವ ಶಾಸ್ತ್ರದ ಹಲವಾರು ಸ್ಮಾರಕಗಳನ್ನು ನೋಡಬಹುದು. ವಿರೂಪಾಕ್ಷ ದೇವಾಲಯ, ವಿಠಲ ದೇವಾಲಯ ಇಲ್ಲಿವೆ. ಇಲ್ಲಿನ ಹನುಮಾನ್‌ ದೇವಸ್ಥಾನ, ಹೇಮಕೂಟ ಬೆಟ್ಟದ ದೇವಸ್ಥಾನ ಸಂಕೀರ್ಣವನ್ನು ನೀವು ನೋಡಲೇಬೇಕು. ಇಲ್ಲಿ ನಿಮಗೆ ಟ್ರೆಕ್ಕಿಂಗ್‌ ಮಾಡುವುದುಕ್ಕೆ, ಕ್ಯಾಂಪಿಂಗ್‌ ಮಾಡುವುದಕ್ಕೂ ಅವಕಾಶವಿದೆ. ಇಲ್ಲಿನ ಸಂಪೂರ್ಣ ಐತಿಹಾಸಿಕ ತಾಣಗಳನ್ನು ನೋಡಲು ಒಂದು ದಿನ ಸಾಲದಾದ್ದರಿಂದ ಕನಿಷ್ಠ ಎರಡು ದಿನಗಳ ಮಟ್ಟಿಗೆ ಇಲ್ಲಿನ ಟ್ರಿಪ್‌ ಪ್ಲ್ಯಾನ್‌ ಮಾಡಿಕೊಳ್ಳಿ. ಬೇಸಗೆಯಲ್ಲಿ ಇಲ್ಲಿ ಹೆಚ್ಚಾದ ಬಿಸಿಲಿರುತ್ತದೆಯಾದ್ದರಿಂದ ಚಳಿಗಾಲದ ಸಮಯವಾದ ಅಕ್ಟೋಬರ್‌ನಿಂದ ಫೆಬ್ರವರಿಯವರೆಗೆ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ. ಹಂಪಿ ಹೊಸಪೇಟೆಯಿಂದ 13 ಕಿ.ಮೀ. ದೂರದಲ್ಲಿರುವುದರಿಂದ ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ತಲುಪಿ, ಅಲ್ಲಿಂದ ಪ್ರಯಾಣ ಬೆಳೆಸಬಹುದು.

ಮೈಸೂರು

ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು. ಏಳು ಶತಮಾನಗಳ ಕಾಲ ಮೈಸೂರಿನ ರಾಜವಂಶ ಆಡಳಿತ ನಡೆಸಿದ ನಾಡಿದು. ಇದು ಕರ್ನಾಟಕದ ಅತಿ ಪ್ರಸಿದ್ಧ ಪ್ರವಾಸಿ ನಗರವಾಗಿದ್ದು, ಇಲ್ಲಿಗೆ ಪ್ರತಿ ವರ್ಷ 25 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಲ್ಲಿನ ಲಲಿತ ಮಹಲ್‌, ಜಗಮೋಹನ್‌ ಅರಮನೆ, ಬೃಂದಾವನ ಉದ್ಯಾನವನ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತದೆ. ಹಾಗೆಯೇ ಇಲ್ಲಿನ ಪ್ರಸಿದ್ಧ ಸಿಹಿಯಾದ ಮೈಸೂರು ಪಾಕ್‌ ಅನ್ನು ಸವಿಯಲು ಪ್ರವಾಸಿಗರು ಮರೆಯುವುದಿಲ್ಲ. ಇಲ್ಲಿನ ಅರಮನೆಯಲ್ಲಿ ನೀವು ರಾಜಮನೆತನದ ಅದ್ಧೂರಿತನವನ್ನು ಕಾಣಬಹುದು. ಪ್ರತಿವರ್ಷ ದಸರಾ ಸಮಯದಲ್ಲಿ ಇಲ್ಲಿ ಅದ್ಧೂರಿಯಾಗಿ ಉತ್ಸವ ನಡೆಸಲಾಗುತ್ತದೆ. ಆನೆ ಮೇಲಿನ ಬಂಗಾರದ ಅಂಬಾರಿಯಲ್ಲಿ ಮೈಸೂರಿನ ಚಾಮುಂಡೇಶ್ವರಿ ದೇವಿಯನ್ನು ಮೆರವಣಿಗೆ ಮಾಡಿಸಲಾಗುತ್ತದೆ.

ಬಿಜಾಪುರ

ವಿಶ್ವಪ್ರಸಿದ್ಧ ಗೋಲ್‌ಗುಂಬಜ್‌ ಇರುವುದು ಬಿಜಾಪುರ(ವಿಜಯಪುರ)ದಲ್ಲಿ. ಇದು ಉತ್ತರ ಕರ್ನಾಟಕದಲ್ಲಿ ಭೇಟಿ ನೀಡಲೇಬೇಕಾದ ಐತಿಹಾಸಿಕ ಸ್ಥಳಳಲ್ಲಿ ಒಂದು. ಇದು ಮೊಹಮ್ಮದ್‌ ಆದಿಲ್‌ ಷಾ ಅವರ ಸಮಾಧಿಯಾಗಿದೆ. ಭಾರತದಲ್ಲಿನ ಅತಿ ದೊಡ್ಡ ಗುಮ್ಮಟ ಈ ಗೋಲ್‌ಗುಂಬಜ್‌ನ ಗುಮ್ಮಟವಾಗಿದೆ. ಗೋಲ್‌ಗುಂಬಜ್‌ ಮಾತ್ರವಲ್ಲದೆ ನಗರದಲ್ಲಿ ಶಿವಗಿರಿ, ಜಾಮಾ ಮಸೀದಿ ಮತ್ತು ಬಾರಾ ಕಮಾನ್‌ನಂತಹ ಹಲವು ಐತಿಹಾಸಿಕ ತಾಣಗಳಿವೆ. ಈ ನಗರದಲ್ಲಿ ನೀವು ಉತ್ತರ ಕರ್ನಾಟಕದ ಜೀವನ ಶೈಲಿಯ ಪರಿಚಯವನ್ನೂ ಮಾಡಿಕೊಳ್ಳಬಹುದು. ಇಲ್ಲಿ ಸ್ಥಳೀಯವಾಗಿ ಅನೇಕ ಹೋಟೆಲ್‌ಗಳು, ರೆಸಾರ್ಟ್‌ಗಳಿವೆ.

ಶಿವಮೊಗ್ಗ

ಶಿವಮೊಗ್ಗ ಅನೇಕ ರಾಜವಂಶಗಳಿಗೆ ಪ್ರಮುಖ ಸ್ಥಾನವಾಗಿದ್ದ ಜಿಲ್ಲೆ. ಇಲ್ಲಿ ವಿಶ್ವ ವಿಖ್ಯಾತ ಜೋಗ ಜಲಪಾತವೂ ಇದೆ. ಇಲ್ಲಿನ ಶಿವಪ್ಪ ನಾಯಕ ಅರಮನೆ, ಇಕ್ಕೇರಿ ದೇಗುಲ ಹಾಗೂ ಇನ್ನೂ ಹಲವು ದೇಗುಲಗಳು ಐತಿಹಾಸಿಕ ಪ್ರಾಮುಖ್ಯತೆ ಹೊಂದಿವೆ. ಸಾಗರ ತಾಲೂಕಿನ ಕೆಳದಿಯ ಶಿವಪ್ಪ ನಾಯಕ ಅರಮನೆಯ ಮುಂಭಾಗದಲ್ಲೇ ಅದರ ವಸ್ತು ಸಂಗ್ರಹಾಲಯವಿದ್ದು, ಅಲ್ಲಿ ನೀವು ಶಿವಪ್ಪ ನಾಯಕನ ಆಡಳಿತದ ಕಾಲದ ಹಲವು ವಸ್ತುಗಳನ್ನು ಕಾಣಬಹುದು. ಇತಿಹಾಸ ಮಾತ್ರವಲ್ಲದೆ ನಿಸರ್ಗ ಸೌಂದರ್ಯದಲ್ಲೂ ಶಿವಮೊಗ್ಗ ಸಂಪತ್‌ ಭರಿತ ಜಿಲ್ಲೆಯಾಗಿದೆ. ಇಲ್ಲಿ ನೀವು ಹಲವಾರು ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಬಹುದು. ಹಾಗೆಯೇ ಧಾರ್ಮಿಕ ವಿಶೇಷತೆ ಹೊಂದಿರುವ ಸಿಗಂದೂರು, ವರದಳ್ಳಿಯಂತಹ ಹಲವು ಸ್ಥಾನಗಳಿಗೆ ಭೇಟಿ ನೀಡಬಹುದು.

ಬೆಂಗಳೂರು

ಭಾರತದ ಸಿಲಿಕಾನ್‌ ವ್ಯಾಲಿ ಆಗುವುದಕ್ಕೂ ಮೊದಲು ಬೆಂಗಳೂರು ಕರ್ನಾಟಕದ ರಾಜಕೀಯ, ವಾಣಿಜ್ಯ ಮತ್ತು ವ್ಯಾಪಾರದ ಕೇಂದ್ರಬಿಂದು. ಇದು ನೋಡುವುದಕ್ಕೆ ಕಾಂಕ್ರಿಟ್‌ ಕಾಡಿನಂತೆ ಕಾಣುತ್ತದೆಯಾದರೂ ಇಲ್ಲಿ ಕೂಡ ಹಲವು ಐತಿಹಾಸಿಕ ಅರಮನೆಗಳು, ಕೋಟೆಗಳು ಇವೆ. ಇಲ್ಲಿ ಐತಿಹಾಸಿಕ ಉಲ್ಲೇಖವನ್ನು ಹೊಂದಿರುವ ಬೆಂಗಳೂರು ಅರಮನೆ, ಟಿಪ್ಪು ಸುಲ್ತಾನರ ಬೇಸಗೆ ಅರಮನೆ, ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌ ಅನ್ನು ನೋಡಬಹುದು. ಹಾಗೆಯೇ ಈಗಿನ ಸರ್ಕಾರದ ಕೇಂದ್ರಬಿಂದುವಾಗಿರುವ ವಿಧಾನಸೌಧವನ್ನೂ ಕಾಣಬಹುದು. ಜತೆಗೆ ಉದ್ಯಾನನಗರಿಯೂ ಆಗಿರುವುದರಿಂದ ವಿವಿಧ ಉದ್ಯಾನಗಳಿಗೂ ಭೇಟಿ ನೀಡಬಹುದು.

ಬಾದಾಮಿ

ಭಾರತದ ಐತಿಹಾಸಿಕ ಸ್ಥಳಗಳಲ್ಲಿ ಒಂದು ಬಾದಾಮಿ. ಬಾದಾಮಿಯಲ್ಲಿ ಸೊಗಸಾದ ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳನ್ನು ನೋಡಬಹುದು. ಇಲ್ಲಿನ ಕಲ್ಲಿನ ದೇವಾಲಯ ಎಂಥವರನ್ನೂ ಸೆಳೆಯುತ್ತದೆ. ಇಲ್ಲಿನ ಕೆಂಪು ಮರಳುಗಲ್ಲಿನ ಬಂಡೆಗಳು, ಬಾದಾಮಿ ಕೋಟೆ, ಅಗಸ್ತ್ಯ ಸರೋವರವನ್ನು ನೀವು ನೋಡಿ ಬಂದು ವರ್ಷಗಳಾದರೂ ಮರೆಯುವುದಿಲ್ಲ. ರಾಕ್‌ ಕ್ಲೈಂಬಿಂಗ್‌ ಮಾಡಬೇಕು ಎನ್ನುವವರು ಇಲ್ಲಿ ಆ ಆಸೆಯನ್ನು ನೆರವೇರಿಸಿಕೊಳ್ಳಬಹುದು. ಇಲ್ಲಿನ ಬಾದಾಮಿ ಗುಹೆ ದೇವಾಲಯ, ಭೂತನಾಥ ದೇವಾಲಯಗಳ ಸಂಕೀರ್ಣ, ಮಲ್ಲಿಕಾರ್ಜುನ ದೇವಾಲಯವನ್ನು ನೋಡಲು ಮರೆಯದಿರಿ.

ಹಳೇಬೀಡು

ಹಾಸನ ಜಿಲ್ಲೆಯಲ್ಲಿರುವ ಹಳೇಬೀಡು ಕರ್ನಾಟಕದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಒಂದು. ಈ ನಗರವು 12ನೇ ಶತಮಾನದಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇಲ್ಲಿ ನೀವು ಅತ್ಯದ್ಭುತ ವಾಸ್ತುಶಿಲ್ಪ ಹೊಂದಿರುವ ದೇವಸ್ಥಾನಗಳನ್ನು ಕಾಣಬಹುದು. ಹೊಯ್ಸಳೇಶ್ವರ ಮತ್ತು ಕೇದಾರೇಶ್ವರ ದೇವಾಲಯ ಹಳೇಬೀಡಿನ ಅತ್ಯಂತ ಪ್ರಸಿದ್ಧ ದೇಗುಲಗಳಾಗಿವೆ. ಇದಲ್ಲದೆ ಇದಕ್ಕೆ ಕೆಲವು ಕಿ.ಮೀ. ದೂರದಲ್ಲಿ ಬೇಲೂರು ಇದ್ದು, ಅಲ್ಲಿ ಕೂಡ ಹೊಯ್ಸಳರ ವಾಸ್ತುಶಿಲ್ಪದ ಉತ್ತಮ ಉದಾಹರಣೆ ಎನಿಸುವಂತಹ ದೇವಸ್ಥಾನವಿದೆ.

ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣವು ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿಯ ತಟದಲ್ಲಿದೆ. ವಿಶ್ವ ಪ್ರಸಿದ್ಧ ಮೈಸೂರಿನಿಂದ 15 ಕಿ.ಮೀ. ದೂರದಲ್ಲಿ ಈ ಊರಿದೆ. ಶ್ರೀರಂಗಪಟ್ಟಣವು ವಿಜಯನಗರ ಮತ್ತು ಹೊಯ್ಸಳ ಸಾಮ್ರಾಜ್ಯದ ಕೆಲವು ಭವ್ಯವಾದ ವಾಸ್ತುಶಿಲ್ಪದ ಮೇರುಕೃತಿಗಳಿಗೆ ನೆಲೆಯಾಗಿದೆ. ಇಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರಿಂದ ತುಂಬಿರುತ್ತದೆ. ಇದು ವೈಷ್ಣವರ ಪ್ರಮುಖ ದೇವಾಲಯವಾಗಿದೆ. ಇಲ್ಲಿ ಸಮೀಪದಲ್ಲಿ ಕೆಲವು ಜಲಪಾತಗಳು, ಉದ್ಯಾನಗಳಿದ್ದು, ನೀವು ಅಲ್ಲಿಗೂ ಕೂಡ ಪ್ರಯಾಣ ಬೆಳೆಸಬಹುದು.

ಐಹೊಳೆ

ಐಹೊಳೆ ಕರ್ನಾಟಕದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಒಂದು. ಈ ಸ್ಥಳವು ಚಾಲುಕ್ಯ ಸಾಮ್ರಾಜ್ಯದ 100ಕ್ಕೂ ಹೆಚ್ಚು ಕೆತ್ತಿದ ದೇವಾಲಯಗಳನ್ನು ಹೊಂದಿದೆ. ಇದರ ಪ್ರಾಮುಖ್ಯತೆಯಿಂದಾಗಿ ಯುನೆಸ್ಕೋ ಇದನ್ನು ಐತಿಹಾಸಿಕ ತಾಣ ಎಂದು ಗುರುತಿಸಿದೆ. ಇಲ್ಲಿನ ದೇವಾಲಯಗಳನ್ನು ನೋಡಲು ನಿಮಗೆ ಒಂದು ದಿನ ಸಾಲದು. ಬಾಗಲಕೋಟೆ ರೈಲು ನಿಲ್ದಾಣದಿಂದ ಈ ಐಹೊಳೆ ಕೇವಲ 34 ಕಿ.ಮೀ. ದೂರದಲ್ಲಿದೆ. ಹಾಗಾಗಿ ನೀವು ಅರಾಮವಾಗಿ ಇಲ್ಲಿಗೆ ರೈಲು ಮೂಲಕ ಅಥವಾ ಬಸ್ಸಿನ ಮೂಲಕ ಪ್ರಯಾಣ ಮಾಡಬಹುದು.

ದಾಂಡೇಲಿ

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ದಾಂಡೇಲಿಯು ಐತಿಹಾಸಿಕವಾಗಿಯೂ ಸಾಕಷ್ಟು ಮಹತ್ವ ಹೊಂದಿದೆ. ಇಲ್ಲಿ ಜ್ವಾಲಾಮುಖಿಯಿಂದಾಗಿ ರೂಪುಗೊಂಡ ಹಲವು ಗುಹೆಗಳನ್ನು ನೀವು ಕಾಣಬಹುದು. ಇಲ್ಲಿನ ಕವಾಲಾ ಗುಹೆ ತುಂಬಾ ದೊಡ್ಡದಾದ ಸುರಂಗವನ್ನು ಹೊಂದಿದೆ. ಈ ಗುಹೆಯಲ್ಲಿ 375 ಮೆಟ್ಟಿಲುಗಳಿದ್ದು, ಈ ಗುಹೆಯನ್ನು ನೋಡಲೆಂದೇ ಪ್ರತಿವರ್ಷ ಇಲ್ಲಿಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅದಷ್ಟೇ ಅಲ್ಲದೆ ಕಾಳಿ ನದಿಯ ದಡದಲ್ಲಿರುವ ಈ ಊರು ನಿಸರ್ಗ ರಮಣೀಯತೆ ವಿಚಾರದಲ್ಲೂ ಪ್ರಸಿದ್ಧವಾಗಿದೆ. ಇಲ್ಲಿನ ಕಾಳಿ ನದಿಯಲ್ಲಿ ಹಲವಾರು ರೀತಿಯ ವಾಟರ್‌ ಗೇಮ್ಸ್‌ಗಳನ್ನು ನೀವು ಆಡಬಹುದು. ಹಾಗೆಯೇ ದಾಂಡೇಲಿ ವನ್ಯಜೀವಿ ಅಭಯಾರಣ್ಯಕ್ಕೂ ಭೇಟಿ ನೀಡಬಹುದು. ಇಲ್ಲಿ ಅನೇಕ ರೆಸಾರ್ಟ್‌ಗಳಿದ್ದು, ಅವುಗಳೇ ನಿಮಗೆ ಪ್ಯಾಕೇಜ್‌ ನೀಡಿ ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅವಕಾಶ ಮಾಡಿಕೊಡುತ್ತವೆ.

ರಾಮನಗರ

ಕರ್ನಾಟಕದ ಮತ್ತೊಂದು ಪ್ರಸಿದ್ಧ ಐತಿಹಾಸಿಕ ಸ್ಥಳವೆಂದರೆ ರಾಮನಗರ. ದೊಡ್ಡ ದೊಡ್ಡ ಕಲ್ಲಿನ ಬೆಟ್ಟಗಳ ನಡುವೆ ಇರುವ ಹಚ್ಚ ಹಸಿರಿನ ನಗರವಿದು. ಬೆಂಗಳೂರಿಗರಿಗೆ ವಾರಾಂತ್ಯದ ಪ್ರವಾಸಕ್ಕೆ ಸೂಕ್ತವಾದ ಸ್ಥಳವಾಗಿದೆ. ಇದು ಗ್ರ್ಯಾನೈಟ್‌ ಬೆಟ್ಟಗಳಿಗೆ ಹೆಸರುವಾಸಿಯಾದ ನಗರ. ರೇಷ್ಮೆ ಉತ್ಪಾದನೆಗೆ ಪ್ರಸಿದ್ಧವಾದ ಈ ನಗರವನ್ನು ಭಾರತದ ರೇಷ್ಮೆ ನಗರ ಎಂದೂ ಕರೆಯಲಾಗುತ್ತದೆ. ಇಲ್ಲಿ ಉತ್ಪಾದನೆಯಾಗುವ ರೇಷ್ಮೆಯನ್ನು ಪ್ರಸಿದ್ಧ ಮೈಸೂರು ಸಿಲ್ಕ್‌ ಸೀರೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.

ಹಾಸನ

ಬೆಂಗಳೂರಿನಿಂದ 187 ಕಿ.ಮೀ. ದೂರದಲ್ಲಿರುವ ಹಾಸನ ಕರ್ನಾಟಕದ ವಾಸ್ತುಶಿಲ್ಪದ ರಾಜಧಾನಿ ಎಂದೇ ಕರೆಸಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಹಾಸನಾಂಬ ದೇವಿ ದೇವಾಲಯ. ಹಾಸನಾಂಬ ಎಂದರೆ ನಗುತ್ತಿರುವ ತಾಯಿ ಎಂದರ್ಥ. ಹಾಸನಾಂಬ ದೇವಾಲಯ ಮಾತ್ರವಲ್ಲದೆ ಇತಿಹಾಸ ಪ್ರಸಿದ್ಧ ಶೆಟ್ಟಿಹಳ್ಳಿ ಚರ್ಚ್‌ ಹಾಗೂ ಜೈನ ದೇವಾಲಯಗಳನ್ನು ಈ ಜಿಲ್ಲೆಯಲ್ಲಿ ಕಾಣಬಹುದು. ಇಲ್ಲಿರುವ ಗೊರೂರು ಅಣೆಕಟ್ಟು ಕೂಡ ಪ್ರವಾಸಿಗರ ಗಮನ ಸೆಳೆಯುತ್ತದೆ. ಶ್ರವಣಬೆಳಗೊಳ ಕೂಡ ಜಿಲ್ಲೆಯ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ.

ಬೀದರ್‌

ಬೀದರ್‌ ಜಿಲ್ಲೆಯಾದ್ಯಂತ ಹಲವಾರು ಐತಿಹಾಸಿಕ ತಾಣಗಳಿವೆ. ಈ ನಗರ ಮೋಡಿ ಮಾಡುವ ವಾಸ್ತುಶಿಲ್ಪ, ಆಸಕ್ತಿದಾಯಕ ಇತಿಹಾಸ ಮತ್ತು ಪ್ರಾಚೀನ ಕಲಾಕೃತಿಗಳಿಗೆ ಹೆಸರುವಾಸಿಯಾಗಿದೆ. ಬೀದರ್ ಒಂದು ಕಾಲದಲ್ಲಿ ಚಾಲುಕ್ಯರು, ಅಲ್ಲಾವುದ್ದೀನ್ ಖಿಲ್ಜಿ ಮತ್ತು ಮುಹಮ್ಮದ್ ಬಿನ್ ತುಘಲಕ್ ಅವರಂತಹ ಅನೇಕ ಮಹಾನ್ ಆಡಳಿತಗಾರರ ಅಧಿಕಾರದ ಕೇಂದ್ರವಾಗಿತ್ತು. ಅವರೆಲ್ಲರೂ ಶ್ರೀಮಂತ ವಾಸ್ತುಶಿಲ್ಪದ ಪರಂಪರೆಯೊಂದಿಗೆ ಈ ನಗರಕ್ಕೆ ಶ್ರೇಷ್ಠ ಇತಿಹಾಸ ಮತ್ತು ಪರಂಪರೆಯನ್ನು ಬಿಟ್ಟಿದ್ದಾರೆ. ಇಲ್ಲಿ ಹಲವಾರು ದೇವಾಲಯಗಳು, ಮಸೀದಿಗಳು ಮತ್ತು ಸಮಾಧಿಗಳನ್ನು ನೀವು ನೋಡಬಹುದಾಗಿದೆ.

ತಲಕಾಡು

ಕರ್ನಾಟಕದ ಪ್ರಸಿದ್ಧ ಕಾವೇರಿ ನದಿಯ ದಡದಲ್ಲಿರುವ ಸ್ಥಳ ತಲಕಾಡು. ತಲಕಾಡು ಪಟ್ಟಣವು ಶ್ರೀಮಂತ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿದೆ. ಇಲ್ಲಿ ಪ್ರಮುಖವಾಗಿ ಶಿವನಿಗೆ ಅರ್ಪಿತವಾದ ವೈದ್ಯನಾಥೇಶ್ವರ ದೇಗುಲವನ್ನು ಕಾಣಬಹುದು. ದೇಶದ ಮೂಲೆಮೂಲೆಗಳಿಂದ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಇಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಪಂಚಲಿಂಗ ದರ್ಶನಕ್ಕಾಗಿ ಉತ್ಖನನ ಕಾರ್ಯ ಮಾಡಲಾಗುತ್ತದೆ. ಆ ರೀತಿ ಮಾಡಿದಾಗ ಇಲ್ಲಿ ಮರಳಿನ ಅಡಿಯಲ್ಲಿದ್ದ ಸಾಕಷ್ಟು ದೇವಾಲಯಗಳು ಹೊರಬಂದಿವೆ. ಮೈಸೂರಿನಿಂದ ಇಲ್ಲಿಗೆ 45 ಕಿ.ಮೀ. ದೂರವಾಗುತ್ತದೆ.

ಮೇಲುಕೋಟೆ

ಮೇಲುಕೋಟೆ ದಕ್ಷಿಣ ಭಾರತದಲ್ಲಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಸ್ಥಳಗಳಲ್ಲಿ ಒಂದು. ಮಂಡ್ಯ ಜಿಲ್ಲೆಯಲ್ಲಿರುವ ಈ ಸ್ಥಳದಲ್ಲಿ ಅನೇಕ ದೇವಾಲಯಗಳಿವೆ. ಇಲ್ಲಿ ನಡೆಸಲಾಗುವ ವೈರಮುಡಿ ಉತ್ಸವಕ್ಕೆ ರಾಜ್ಯ ಮಾತ್ರವಲ್ಲದೆ ದೇಶದ ಹಲವು ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಇಲ್ಲಿನ ಬೆಟ್ಟದ ತುದಿಯಲ್ಲಿರುವ ಶ್ರೀ ಯೋಗನರಸಿಂಹ ಸ್ವಾಮಿ ದೇವಸ್ಥಾನ ಮತ್ತು ಚೆಲುವನಾರಾಯಣ ಸ್ವಾಮಿ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆ.

ಸೋಮನಾಥಪುರ

ಕಾವೇರಿ ನದಿಯ ದಡದಲ್ಲಿ ಸೋಮನಾಥಪುರ ದೇವಾಲಯವನ್ನು ಕಾಣಬಹುದು. ಈ ದೇವಾಲಯ ಹೊಯ್ಸಳರ ಅದ್ಭುತವ ವಾಸ್ತುಶಿಲ್ಪದ ಉದಾಹರಣೆಗಳಲ್ಲಿ ಒಂದಾಗಿದೆ. ಇದನ್ನು ಚೆನ್ನಕೇಶವ ದೇವಾಲಯ ಅಥವಾ ಕೇಶವ ದೇವಾಲಯ ಎಂದೂ ಕರೆಯಲಾಗುತ್ತದೆ. ಹೊಯ್ಸಳ ಸಾಮ್ರಾಜ್ಯದ ರಾಜರು ನಿರ್ಮಿಸಿದ 1,500 ದೇವಾಲಯಗಳಲ್ಲಿ ಈ ದೇವಾಲಯವೂ ಒಂದಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ನಾಮನಿರ್ದೇಶನಗೊಂಡಿರುವ ಈ ಸ್ಥಳವು ಕರ್ನಾಟಕದ ಪ್ರಸಿದ್ಧ ಸ್ಮಾರಕಗಳಲ್ಲಿ ಪ್ರಮುಖವಾದುದು.

ಮಿರ್ಜಾನ್‌ ಕೋಟೆ

ಅಘನಾಶಿನಿ ನದಿ ದಡದಲ್ಲಿ ಮಿರ್ಜಾನ್‌ ಕೋಟೆಯಿದೆ. ಕುಮಟಾ ಪಟ್ಟಣದಿಂದ 11 ಕಿ.ಮೀ. ದೂರದಲ್ಲಿರುವ ಈ ಸ್ಥಳ 4.1 ಹೆಕ್ಟೇರ್‌ ಪ್ರದೇಶದಲ್ಲಿ ಹಬ್ಬಿಕೊಂಡಿದೆ. ರಾಜಮನೆತನಗಳ ಇತಿಹಾಸ ಹೊಂದಿರುವ ಈ ಕೋಟೆ 16 ಮತ್ತು 17ನೇ ಶತಮಾನದಲ್ಲಿ ನಡೆದ ಯುದ್ಧಗಳಿಗೆ ಸಾಕ್ಷಿಯಾಗಿದೆ. ಹುಲ್ಲಿನಿಂದ ಆವರಿಸಿಕೊಂಡಿರುವ ಈ ಕೋಟೆ ನೋಡುವುದಕ್ಕೆ ಭವ್ಯವಾಗಿ ಕಾಣುತ್ತದೆ.

ಮಡಿಕೇರಿ ಕೋಟೆ

ಕೊಡಗು ಭಾಗದಲ್ಲಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿರುವ ಸ್ಥಳಗಳಲ್ಲಿ ಒಂದು ಮಡಿಕೇರಿ ಕೋಟೆ. ಇದು ಮಡಿಕೇರಿ ಪಟ್ಟಣದಲ್ಲಿಯೇ ಇದೆ. 17ನೇ ಶತಮಾನದಲ್ಲಿ ರಾಜ ಮುದ್ದುರಾಜ ಈ ಕೋಟೆಯನ್ನು ನಿರ್ಮಿಸಿದರು. ಈ ಕೋಟೆಯನ್ನು ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಮಾರಕಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ನೀವು ಇದನ್ನು ನೋಡಲೆಂದು ಕೊಡಗಿಗೆ ತೆರಳಿದರೆ ಅಲ್ಲಿ ನಿಮಗೆ ರಾಜಾ ಸೀಟ್‌, ಓಂಕಾರೇಶ್ವರ ದೇವಸ್ಥಾನ ಸೇರಿ ಅನೇಕ ಪ್ರಸಿದ್ಧ ಪ್ರವಾಸಿ ತಾಣಗಳಿಗೂ ಭೇಟಿ ನೀಡಬಹುದು. ಮಳೆಗಾಲದ ಸಮಯದಲ್ಲಿ ಕೊಡಗು ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುತ್ತದೆಯಾದ್ದರಿಂದ ನಿಮ್ಮ ಮನಸ್ಸಿಗೂ ಉಲ್ಲಾಸವಾಗುತ್ತದೆ.

ಶೃಂಗೇರಿ

ಚಿಕ್ಕಮಗಳೂರು ಜಿಲ್ಲೆಯ ಸಣ್ಣ ಗುಡ್ಡಗಾಡು ಪಟ್ಟಣ ಶೃಂಗೇರಿ. ಇಲ್ಲಿನ ದೇವಾಲಯವನ್ನು 9ನೇ ಶತಮಾನದಲ್ಲಿ ಆದಿ ಶಂಕರರು ನಿರ್ಮಿಸಿದರು. ಅವರು ಅದನ್ನು ಒಂದು ಯಾತ್ರಾ ಕೇಂದ್ರವಾಗಿ ಸ್ಥಾಪಿಸಿದರು. ದಾಖಲೆಗಳ ಪ್ರಕಾರ, ಆದಿ ಶಂಕರಾಚಾರ್ಯರು 12 ವರ್ಷಗಳ ಕಾಲ ಇಲ್ಲಿಯೇ ಇದ್ದು, ತಮ್ಮ ಶಿಷ್ಯರಿಗೆ ಬೋಧಿಸಿದರು ಎಂದು ಹೇಳಲಾಗುತ್ತದೆ. ಇಲ್ಲಿಂದ ನೀವು ಹತ್ತಿರದಲ್ಲೇ ಇರುವ ಹೊರನಾಡು ದೇವಸ್ಥಾನ, ಬೇರೆ ಬೇರೆ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡಬಹುದಾಗಿದೆ.

ಪಟ್ಟದಕಲ್

ದಕ್ಷಿಣ ಭಾರತದ ಹಿಂದೂ ಮತ್ತು ಜೈನ ದೇವಾಲಯಗಳ ನಿಧಿ ಎಂದು ಪಟ್ಟದಕಲ್ಲನ್ನು ಕರೆಯಲಾಗುತ್ತದೆ. ಇದನ್ನು ಯುನೆಸ್ಕೋ ಪರಂಪರೆಯ ತಾಣವೆಂದು ಹೆಸರಿಸಲಾಗಿದೆ. ಮಲಪ್ರಭಾ ನದಿಯ ದಡದಲ್ಲಿರುವ ಈ ಸ್ಥಳವು 4ನೇ ಶತಮಾನದಷ್ಟು ಹಿಂದಿನ ಪರಂಪರೆಯನ್ನು ಹೊಂದಿದೆ. ಶಿವನಿಗೆ ಸಮರ್ಪಿತವಾಗಿರುವ ಈ ದೇವಾಲಯವು ಉತ್ತರ ಮತ್ತು ದಕ್ಷಿಣ ಭಾರತದ ವಾಸ್ತುಶಿಲ್ಪದ ಸುಂದರ ಮಿಶ್ರಣವನ್ನು ಒಳಗೊಂಡಿದೆ.

ಕಾರ್ಕಳ

ಇದು ಐತಿಹಾಸಿಕ ಪ್ರಾಮುಖ್ಯತೆಗೆ ಹೆಸರುವಾಸಿಯಾದ ಉಡುಪಿ ಜಿಲ್ಲೆಯಲ್ಲಿರುವ ಸ್ಥಳವಾಗಿದೆ. ಪುರಾತನ ದೇವಾಲಯಗಳು ಮತ್ತು ಜೈನ ಬಸದಿಗಳಿಗೆ ಹೆಸರುವಾಸಿಯಾಗಿರುವ ಈ ಸ್ಥಳಕ್ಕೆ ಹೆಸರು ಇಲ್ಲಿ ಅಪಾರ ಪ್ರಮಾಣದಲ್ಲಿರುವ ಕಪ್ಪು ಗ್ರಾನೈಟ್‌ನಿಂದಾಗಿ ಬಂದಿದೆ. ಕರ್ನಾಟಕದ ಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಒಂದಾದ ಇದು ಯುನೆಸ್ಕೋದಿಂದ ವಿಶ್ವ ಪರಂಪರೆಯ ತಾಣವಾಗಿ ನಾಮನಿರ್ದೇಶನಗೊಂಡಿದೆ.

ಇದನ್ನೂ ಓದಿ: Kannada Rajyotsava: ಚೆಲುವ ಕನ್ನಡನಾಡು ಉದಯವಾಗಿದ್ದು ಹೀಗೆ…

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version