ಬೆಂಗಳೂರು: ಅಡಿಕೆಯನ್ನು ಕಾಡುತ್ತಿರುವ ಎಲೆಚುಕ್ಕಿ ರೋಗ (Leaf spot Disease) ಸೇರಿದಂತೆ ವಿವಿಧ ರೋಗಗಳ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮುಂದಾಗಲಿದೆ, ಈ ಕುರಿತು ರಾಜ್ಯ ಬಜೆಟ್‌ನಲ್ಲಿ (Karnataka Budget 2024) ಸ್ಪಷ್ಟ ಯೋಜನೆ ಪ್ರಕಟಿಸಲಾಗುತ್ತದೆ ಎಂದು ಕಾಯುತ್ತಿದ್ದ ಅಡಿಕೆ ಬೆಳೆಗಾರರಿಗೆ ನಿರಾಸೆ (Arecanut Growers) ಆಗಿದೆ.
ʻʻರಾಜ್ಯದಲ್ಲಿ ಅಡಿಕೆ ಬೆಳೆಯಲ್ಲಿ ಕಂಡು ಬರುವ ಮಾರಕ ರೋಗಗಳನ್ನು ನಿಯಂತ್ರಿಸಲು ಪೂರಕವಾದ ಸಂಶೋಧನೆ ಹಾಗೂ ಸಸ್ಯ ಸಂರಕ್ಷಣೆ ಚಟುವಟಿಕೆಗಳನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕೈಗೊಳ್ಳಲಾಗುವುದುʼʼ ಎಂದಷ್ಟೇ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಆದರೆ ಇದಕ್ಕೆ ಇಂತಿಷ್ಟು ಎಂದು ಹಣವನ್ನು ತೆಗೆದಿರಿಸಲಾಗಿಲ್ಲ.
ರಾಜ್ಯದಲ್ಲಿ ಎಲೆ ಚುಕ್ಕಿ ರೋಗ ಉಲ್ಬಣಗೊಂಡಿದ್ದಾಗ ಕೇಂದ್ರ ಸರ್ಕಾರ ನೇಮಿಸಿದ್ದ ತಜ್ಞರ ಸಮಿತಿಯು ಅಧ್ಯಯನ ನಡೆಸಿ, ಈ ರೋಗದ ನಿರ್ವಹಣೆಗೆ 225.73 ಕೋಟಿ ರೂ.ಗಳ ವರದಿ ಸಲ್ಲಿಸಿತ್ತು. ಇದನ್ನು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ, ಹಣ ಒದಗಿಸುವಂತೆ ಕೋರಿತ್ತು.
ಇದಕ್ಕೆ ಸ್ಪಂದಿಸಿದ ಕೇಂದ್ರ ಸರಕಾರ 225.73 ಕೋಟಿಯಲ್ಲಿ ರಾಜ್ಯ ಸರಕಾರ ಶೇ. 40ರಷ್ಟು ಹಣ ಭರಿಸುವುದಾದರೆ ತಾನು ಶೇ.60 ರಷ್ಟು ಕೊಡುವುದಾಗಿಯೂ ಒಪ್ಪಿಕೊಂಡು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಪತ್ರವನ್ನೂ ಬರೆದಿತ್ತು. ಹೀಗಾಗಿ ಈ ಬಾರಿಯ ಬಜೆಟನಲ್ಲಿ ರಾಜ್ಯ ಸರ್ಕಾರ ಶೇ. 40ರಷ್ಟು ಅಂದರೆ 90.292 ಕೋಟಿ ಹಣವನ್ನು ಎಲೆಚುಕ್ಕಿ ರೋಗದ ನಿರ್ವಹಣೆಗೆ ತೆಗೆದಿರಿಸಲಿದೆ ಎಂದು ಅಡಿಕೆ ಬೆಳೆಗಾರರು ನಿರೀಕ್ಷಿಸುತ್ತಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್‌ನಲ್ಲಿ ಹಣ ನೀಡುವ ಕುರಿತು ಯಾವುದೇ ಸ್ಪಷ್ಟತೆ ನೀಡಿಲ್ಲ. ಆದರೆ ʻʻಅಡಿಕೆಯನ್ನು ಕಾಡುವ ಮಾರಕ ರೋಗಗಳನ್ನು ನಿಯಂತ್ರಿಸಲು ಪೂರಕವಾದ ಸಂಶೋಧನೆ ಹಾಗೂ ಸಸ್ಯ ಸಂರಕ್ಷಣೆ ಚಟುವಟಿಕೆಗಳನ್ನು ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಕೈಗೊಳ್ಳಲಾಗುವುದುʼʼ ಎಂದಷ್ಟೇ ಹೇಳಲಾಗಿದೆ. ಇದರಿಂದ ಅಡಿಕೆ ಬೆಳೆಗಾರರು ಗೊಂದಲಕ್ಕೀಡಾಗಿದ್ದಾರೆ.
ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಬರೆದ ಪತ್ರದಲ್ಲಿ ರಾಜ್ಯ ಸರ್ಕಾರ ಜಂಟಿ ಖಾತೆಗೆ ಹಣ ವಾರ್ಗಾಯಿಸದರೆ, ಕೇಂದ್ರವೂ ಶೇ.60ರಷ್ಟು ಹಣ ವರ್ಗಾಯಿಸುವುದಾಗಿ ಸ್ಪಷ್ಟಪಡಿಸಿತ್ತು. ಹೀಗಾಗಿ ಬಜೆಟ್‌ನಲ್ಲಿ ಹಣ ನೀಡುವಂತೆ ಮಲೆನಾಡು ಮತ್ತು ಕರಾವಳಿ ಭಾಗದ ಅಡಿಕೆ ಬೆಳೆಗಾರರು ತೋಟಗಾರಿಕಾ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.
ಅಲ್ಲದೆ, ಈ ಹಿಂದೆ ಅಡಿಕೆ ಎಲೆ ಚುಕ್ಕಿ ರೋಗದ ಸಮಗ್ರ ಸಂಶೋಧನೆಗೆ 10 ಕೋಟಿ ನೀಡುವ ಕುರಿತು ರಾಜ್ಯ ಬಜೆಟ್ ಸಮಯದಲ್ಲಿ ಪರಿಗಣಿಸಲಾಗುವುದು ಎಂದು ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದರು. ಆದರೆ ಭರವಸೆಯೂ ಈಡೇರಿಲ್ಲ. ಅಡಿಕೆ ಬೆಳೆಗಾರರಿಗೆ ನೇರವಾಗುವ ಯಾವುದೇ ಸ್ಪಷ್ಟ ಯೋಜನೆಯನ್ನೂ ಪ್ರಕಟಿಸಿಲ್ಲ.
ಇದನ್ನೂ ಓದಿ : Leaf spot Disease : ವಿಸ್ತಾರ ನ್ಯೂಸ್ ಇಂಪ್ಯಾಕ್ಟ್; ಅಡಿಕೆ ಎಲೆ ಚುಕ್ಕಿ ರೋಗ ಸಂಶೋಧನೆಗೆ 43 ಲಕ್ಷ ರೂ. ಬಿಡುಗಡೆ
ಬಜೆಟ್ ಅಧಿವೇಶನದಲ್ಲಿಯೇ ವಿಧಾನ ಪರಿಷತ್‌ನಲ್ಲಿ ಶಾಸಕ ಪ್ರತಾಪ್ ಸಿಂಹನಾಯಕ್ ಕೆ. ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಸಚಿವ ಮಲ್ಲಿಕಾರ್ಜುನ್, ಎಲೆ ಚುಕ್ಕಿರೋಗದಿಂದ ಒಟ್ಟು, 53,977 ಹೆಕ್ಟೇರ್ ಅಡಿಕೆ ತೋಟ ಹಾನಿಗೀಡಾಗಿದೆ. ಅಂದಾಜು ರೈತರಿಗೆ ಎಲೆಚುಕ್ಕಿಯಿಂದ 1,101.81ಕೋಟಿ ನಷ್ಟವಾಗಿದೆ. ಹಳದಿ ರೋಗದಿಂದ 13,767 ಹೆಕ್ಟೇರ್ ಅಡಿಕೆ ತೋಟ ಹಾನಿಗೀಡಾಗಿದ್ದು, 562.33 ಕೋಟಿ ನಷ್ಟವಾಗಿದೆ ಎಂದು ಉತ್ತರಿಸಿದ್ದರು. ಆದರೆ ಅಡಿಕೆ ರೋಗ ಬಾಧೆಗೆ ಪರಿಹಾರ ನೀಡಲು ರಾಜ್ಯ ಸರ್ಕಾರ ಯಾವುದೇ ಯೋಜನೆ ಇಲ್ಲ ಹೊಂದಿಲ್ಲ ಎಂದು ತಿಳಿಸಿದ್ದರು. ಹೀಗಾಗಿ ಯಾವುದಾದರೂ ಹೊಸ ಯೋಜನೆ ಪ್ರಕಟಿಸಿ, ಹಣ ಒದಗಿಸಬಹುದು ಎಂದು ಅಡಿಕೆ ಬೆಳೆಗಾರರು ಕಾಯುತ್ತಿದ್ದರು.
ಅಲ್ಲದೆ, ಅಡಿಕೆ ಬೆಳೆಗಾರರ ಹಿತ ಕಾಪಾಡಲು ಪ್ರತ್ಯೇಕ ಮಂಡಳಿ ರೂಪಿಸುವಂತೆ ಬೆಳೆಗಾರರು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ಕುರಿತು ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘಟನೆ ಸೇರಿದಂತೆ ವಿವಿಧ ಅಡಿಕೆ ಬೆಳೆಗಾರರ ಸಂಘಟನೆಗಳು ಸರ್ಕಾರಕ್ಕೆ ಮನವಿ ಕೂಡ ಸಲ್ಲಿಸಿದ್ದವು. ಈ ಬಗ್ಗೆ ಗಮನ ನೀಡುವುದಾಗಿ ಅಡಿಕೆ ಬೆಳೆಗಾರರೂ ಆಗಿರುವ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಭರವಸೆ ನೀಡಿದ್ದರು. ಈ ಭರವಸೆಯೂ ಬಜೆಟ್‌ನಲ್ಲಿ ಈಡೇರಿಲ್ಲ.