Site icon Vistara News

Karnataka Budget 2024 : ಈ ಬಾರಿ ಸೂಟ್‌ಕೇಸ್‌ ಕೇಸ್‌ ಇಲ್ಲ, ಬ್ಯಾಗ್‌ನಲ್ಲಿ ಬಜೆಟ್‌

Karnataka Budget 2024 Suitcase Bag

ಬೆಂಗಳೂರು: 2024-25ನೇ ಸಾಲಿನ ರಾಜ್ಯ ಬಜೆಟ್‌ (Karnataka Budget 2024) ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ರಾಜಕೀಯ ಬದುಕಿನ 15ನೇ ಬಜೆಟ್‌ ಮಂಡನೆ ಮಾಡುವುದಕ್ಕಾಗಿ ಸಿದ್ದರಾಗಿದ್ದಾರೆ. ಅವರು ಹೊಸ ರೇಷ್ಮೆ ಪಂಚೆ ಮತ್ತು ಶರ್ಟ್‌ ತೊಟ್ಟು ತಮ್ಮ ಕಾವೇರಿ ನಿವಾಸದಿಂದ ವಿಧಾನ ಸೌಧಕ್ಕೆ ಆಗಮಿಸಿದ್ದಾರೆ. ಈ ಬಾರಿಯ ವಿಶೇಷವೇನೆಂದರೆ, ಇದುವರೆಗೂ ಬಜೆಟ್‌ ಮಂಡನೆ ಮಾಡುವ ಮುಖ್ಯಮಂತ್ರಿ ಇಲ್ಲವೇ ಹಣಕಾಸು ಸಚಿವರು ಸೂಟ್‌ಕೇಸ್‌ನಲ್ಲಿ ಬಜೆಟ್‌ ಪ್ರತಿಗಳನ್ನು ಹಿಡಿದುಕೊಂಡು ಬರುತ್ತಿದ್ದರೆ ಈ ಬಾರಿ ಇದು ಬದಲಾಗಿದೆ. ಇದೇ ಮೊದಲ ಬಾರಿಗೆ ಸೂಟ್‌ ಕೇಸ್‌ ಬದಲು ಬ್ಯಾಗ್‌ನಲ್ಲಿ (Bag instead of suitcase) ಬಜೆಟ್‌ ಪ್ರತಿಗಳನ್ನು (Budget copies) ಹಿಡಿದುಕೊಂಡು ಬಂದಿದ್ದಾರೆ ಸಿಎಂ ಸಿದ್ದರಾಮಯ್ಯ ಅವರು.

ಕಾವೇರಿ ನಿವಾಸದಲ್ಲಿ ಮುಂಜಾನೆಯೇ ಸರ್ವ ರೀತಿಯಲ್ಲೂ ಸಿದ್ಧವಾಗಿದ್ದರು. ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ ರಾಯರೆಡ್ಡಿ, ಎಂಎಲ್‌ಸಿ ಗೋವಿಂದರಾಜು, ಸಚಿವರಾದ ಸಂತೋಷ್‌ ಲಾಡ್‌, ಜಮೀರ್‌ ಅಹಮದ್‌ ಖಾನ್‌ ಮತ್ತಿತರರು ಆಗಮಿಸಿದ್ದರು. ಆರ್ಥಿಕ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾಗಿರುವ ಎಲ್‌.ಕೆ. ಅತೀಕ್‌ ಅವರು ಮುಖ್ಯಮಂತ್ರಿಗಳ ಕಚೇರಿಗೆ ಬಂದು ಬಜೆಟ್‌ ಪ್ರತಿಗಳನ್ನು ನೀಡಿದರು.

ಹೊಸ ರೇಷ್ಮೆ ಪಂಚೆ, ಶಟ್೯ ಉಡುಗೆ ತೊಟ್ಟು ವಿಧಾನ ಸೌಧಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಅವರು ಸೂಟ್‌ ಕೇಸ್‌ ಬದಲು ಬ್ಯಾಗ್‌‌ ಹಿಡಿದು ಬಂದು ಅಚ್ಚರಿ ಮೂಡಿಸಿದರು. ಸರ್ಕಾರಿ ಸ್ವಾಮ್ಯದ ಲಿಡ್ಕರ್ ಕಂಪನಿಯ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ಹಿಡಿದುಕೊಂಡು ಬಂದಿದ್ದಾರೆ.

ಕೇಂದ್ರದಂತೆ ರಾಜ್ಯದಲ್ಲೂ ಬದಲಾದ ಬ್ಯಾಗ್‌

ಬಜೆಟ್‌ ಪ್ರತಿಗಳನ್ನು ಸೂಟ್‌ಕೇಸ್‌ನಲ್ಲಿ ಹಿಡಿದುಕೊಂಡು ಬರುವ ಸಂಪ್ರದಾಯ ಸ್ವಾತಂತ್ರ್ಯ ಬಂದ ಕಾಲದಿಂದಲೂ ಇತ್ತು.

ಆದರೆ, 2019ರಲ್ಲಿ ಮೊದಲ ಬಾರಿಗೆ ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇದನ್ನು ಬದಲಿಸಿದರು. ಅವರು ಸೂಟ್‌ಕೇಸ್‌ ಬದಲು ಬಹಿ ಖಾತಾ ಎಂಬ ಸಣ್ಣ ಸಂಚಿಯಂಥ ಬ್ಯಾಗನ್ನು ಹಿಡಿದುಕೊಂಡು ಬರುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಕಿದರು. ಅವರು ಹಿಡಿದುಕೊಂಡು ಬಂದ ಕೆಂಪು ಬಣ್ಣದ ಚೀಲ ಭಾರಿ ಸದ್ದು ಮಾಡಿತ್ತು.

ರಾಜ್ಯದಲ್ಲೂ ಇದೀಗ ಸಿದ್ದರಾಮಯ್ಯ ಅವರು ಸೂಟ್‌ಕೇಸ್‌ ಸಂಸ್ಕೃತಿಯನ್ನು ಬಿಟ್ಟು ಬ್ಯಾಗ್‌ ಹಿಡಿದುಕೊಂಡುಬರುವ ಮೂಲಕ ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕಿದ್ದಾರೆ.

ಬೆಳಗ್ಗೆ 10.15ಕ್ಕೆ ರಾಜ್ಯ ಬಜೆಟ್‌ ಮಂಡನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಆಗಮಿಸಿದ ಬೆನ್ನಿಗೇ ಸಚಿವ ಸಂಪುಟದ ಸಭೆಯನ್ನು ನಡೆಸಿದರು. ಬಜೆಟ್‌ ಸಂಪುಟದ ಅನುಮತಿಯನ್ನು ಪಡೆಯುವ ಪರಂಪರೆಯನ್ನು ಪಾಲಿಸಿದರು. ಅಲ್ಲಿಂದ ಇದೀಗ ವಿಶ್ರಾಂತಿಯ ಬಳಿಕ 10.15ಕ್ಕೆ ಬಜೆಟ್‌ ಮಂಡನೆ ಆರಂಭವಾಗಲಿದೆ.

ಸುಮಾರು ಎರಡೂವರೆ ಗಂಟೆಗಳ ಕಾಲ ಬಜೆಟ್‌ ಪ್ರತಿಯನ್ನು ಅವರು ಓದುವ ನಿರೀಕ್ಷೆ ಇದ್ದು, ಅದಕ್ಕಾಗಿ ರಿಹರ್ಸಲ್‌ ಕೂಡಾ ನಡೆಸಿದ್ದಾರೆ.

ಇದನ್ನೂ ಓದಿ : Karnataka Budget 2024 : ಗೊತ್ತಿರಲಿ, ಅತಿ ಹೆಚ್ಚು ಬಜೆಟ್‌ ಮಂಡಿಸಿದ್ದು ಸಿದ್ದರಾಮಯ್ಯ ಅಲ್ಲ!

Exit mobile version