ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸಾಲ ಮಾಡಿ ತುಪ್ಪ ತಂದಿದ್ದಾರೆ. ರಾಜ್ಯದ ಜನತೆಗೆ ಅದನ್ನು ಹಿತವಾಗಿ ಹಂಚಿದ್ದಾರೆ. ಹೊಸತೇನೂ ಇಲ್ಲವಾದರೂ ಹೊತ್ತಿನ ಊಟಕ್ಕೆ ಸಾಕಾಗುವಂತೆ ಬಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಭಾರಿ ಜನಪ್ರಿಯ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಅಡಚಣೆ ಆಗದಂತೆ ತಾಳಮೇಳ ಕಾಯ್ದುಕೊಂಡಿದ್ದಾರೆ: ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ 2024-25ನೇ ಸಾಲಿನ ಬಜೆಟ್‌ನ (Karnataka Budget 2024) ಸಿಂಪಲ್ ವಿಮರ್ಶೆ.
ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಮಂಡಿಸಿದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. 2023ರ ಜುಲೈ 7ರಂದು ಮಂಡಿಸಿದ ಬಜೆಟ್ ಕೇವಲ ಎಂಟು ತಿಂಗಳಿಗೆ ಸೀಮಿತವಾಗಿತ್ತು. ಶುಕ್ರವಾರ ವಿಧಾನಸಭೆಯಲ್ಲಿ ಅವರು ಸುಮಾರು ಮೂರು ಗಂಟೆ 14 ನಿಮಿಷಗಳ ಸುದೀರ್ಘ ಕಾಲ ಬಜೆಟ್ ಮಂಡನೆ ಮಾಡಿದ್ದು, ಅದರಲ್ಲಿ ಎಲ್ಲ ಪ್ರಮುಖ ಕ್ಷೇತ್ರಗಳಿಗೆ ಬಿಡಿ ಬಿಡಿಯಾಗಿ ಅನುದಾನಗಳನ್ನು ಪ್ರಕಟಿಸಿದ್ದಾರೆ.
2024-25ನೇ ಸಾಲಿನ ಕರ್ನಾಟಕ ರಾಜ್ಯ ಆಯವ್ಯಯದ (Karnataka Budget 2024) ಒಟ್ಟು ಗಾತ್ರವು (Budget layout) 3,71,383 ಕೋಟಿ ರೂ. ಅಂದರೆ 2023-24ನೇ ಸಾಲಿಗಿಂತ 44 ಸಾವಿರ ಕೋಟಿ ರೂ. ಹೆಚ್ಚು. ಇಷ್ಟು ದೊಡ್ಡ ಗಾತ್ರದ ಬಜೆಟ್ ಮಂಡನೆಗಾಗಿ ಸಿದ್ದರಾಮಯ್ಯ ಅವರು 1,05,246 ಕೋಟಿ ರೂ. ಸಾಲ ಮಾಡಬೇಕಾಗಿದೆ (Loan Responsibility). ಹಾಗಂತ ಇದು ವಿತ್ತೀಯ ಶಿಸ್ತಿನ ಒಳಗೇ ಇರುವ ಪ್ರಮಾಣವಾಗಿರುವುದರಿಂದ ರಾಜ್ಯಕ್ಕೆ ಆರ್ಥಿಕ ಅಪಾಯವೇನೂ ಎದುರಾಗುವ ಸ್ಥಿತಿಯಲ್ಲಿ ಇಲ್ಲ. ಆದರೆ, ಈ ಬಜೆಟ್‌ನ ಅಂತ್ಯದಲ್ಲಿ ರಾಜ್ಯಕ್ಕೆ ಒಟ್ಟು 6.65 ಲಕ್ಷ ಕೋಟಿ ರೂ. ಸಾಲದ ಹೊರೆ ಎದುರಾಗಿದೆ. ಅಂದರೆ ಪ್ರತಿಯೊಬ್ಬ ನಾಗರಿಕನ ತಲೆಯ ಮೇಲೆ ತಲಾ ಒಂದು ಲಕ್ಷ ರೂ ಸಾಲದ ಹೊರೆ ಇದೆ.
ಏನಿಲ್ಲ ಏನಿಲ್ಲ ಎಂದ ಬಿಜೆಪಿ ಬಹಿಷ್ಕಾರ ನಡುವೆಯೇ ಬಜೆಟ್ ಮಂಡನೆ
ಈ ಬಾರಿಯ ಬಜೆಟ್ ಮಂಡನೆಗೆ ಪ್ರತಿಪಕ್ಷವಾದ ಬಿಜೆಪಿ ಶಾಸಕರು ʻಏನಿಲ್ಲ ಏನಿಲ್ಲʼ ಎಂಬ ಜನಪ್ರಿಯ ಹಾಡನ್ನು ಬಳಸಿಕೊಂಡು ಪ್ಲೇಕಾರ್ಡ್‌ಗಳನ್ನು ಹಿಡಿದುಕೊಂಡು ಬಂದಿದ್ದರು. ಬಜೆಟ್ ಮಂಡನೆಯ ಮೇಲೆ ಇವುಗಳನ್ನು ಪ್ರದರ್ಶಿಸಿ ಕಾಂಗ್ರೆಸ್ ಸರ್ಕಾರದ ಬಜೆಟ್‌ನಲ್ಲಿ ಏನೇನೂ ಇಲ್ಲ ಎಂದು ಹೇಳಿ ಸಭಾತ್ಯಾಗ ಮಾಡಿದರು. ಬಳಿಕ ಆಡಳಿತ ಪಕ್ಷದ ಸದಸ್ಯರ ಉಪಸ್ಥಿತಿಯಲ್ಲಿ ಸಿದ್ದರಾಮಯ್ಯ ಸುದೀರ್ಘ ಬಜೆಟ್ ಮಂಡಿಸಿದರು.
ಇದನ್ನೂ ಓದಿ: Karnataka Budget Session 2024: ಬಿಜೆಪಿಯಿಂದ ಬಜೆಟ್ ಬಾಯ್ಕಾಟ್; ಇತಿಹಾಸದಲ್ಲೇ ಮೊದಲು ಎಂದ ಸಿದ್ದರಾಮಯ್ಯ
2024-25ನೇ ಸಾಲಿನಲ್ಲಿ ಒಟ್ಟು 2,90,531 ಕೋಟಿ ರೂ.ಗಳ ರಾಜಸ್ವ ವೆಚ್ಚ, 55,877 ಕೋಟಿ ರೂ.ಗಳ ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ 24,974 ಕೋಟಿ ರೂ.ಗಳ ವೆಚ್ಚವನ್ನು ಒಳಗೊಂಡು, ಒಟ್ಟು ವೆಚ್ಚವು 3,71,383 ಕೋಟಿ ರೂ.ಗಳಾಗುತ್ತದೆಂದು ಅಂದಾಜು ಮಾಡಲಾಗಿದೆ. ಎಲ್ಲ ವಿತ್ತೀಯ ಮೂಲಗಳಿಂದು ಬರುವ ಒಟ್ಟು ಆದಾಯವು 2.66 ಲಕ್ಷ ಕೋಟಿ ಆಗುವುದರಿಂದ ಉಳಿದ ಮೊತ್ತವನ್ನು ಸಾಲವಾಗಿ ತರಬೇಕಾಗಿದೆ.
ಗ್ಯಾರಂಟಿ ಯೋಜನೆಗಳಿಗೆ 52,009 ಕೋಟಿ ರೂ. ಅನುದಾನ
ಒಟ್ಟಾರೆಯಾಗಿ ಐದೂ ಗ್ಯಾರಂಟಿಗಳಿಗೆ ಸೇರಿ 52,009 ಕೋಟಿ ರೂಪಾಯಿಯನ್ನು ಮೀಸಲಿಟ್ಟಿರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಈ ಐದೂ ಗ್ಯಾರಂಟಿ ಯೋಜನೆಯಲ್ಲಿ ಸಿಂಹಪಾಲು ಗೃಹ ಲಕ್ಷ್ಮಿ ಯೋಜನೆಗೆ (28,608 ಕೋಟಿ ರೂ) ಖರ್ಚಾಗುತ್ತಿದ್ದರೆ, ಅತಿ ಕಡಿಮೆ ಅನುದಾನ (650 ಕೋಟಿ ರೂ.) ಯುವ ನಿಧಿಗೆ ಮೀಸಲಿಡಲಾಗಿದೆ.
ಯಾವ ಗ್ಯಾರಂಟಿಗೆ ಎಷ್ಟು?
- ಗೃಹ ಜ್ಯೋತಿ: 9,657 ಕೋಟಿ ರೂ.
ಅನ್ನ ಭಾಗ್ಯ: 8,079 ಕೋಟಿ ರೂ.
ಶಕ್ತಿ: 5,015 ಕೋಟಿ ರೂ.
ಯುವನಿಧಿ: 650 ಕೋಟಿ ರೂ.
ಗೃಹ ಲಕ್ಷ್ಮಿ :28,608 ಕೋಟಿ ರೂ.
ಒಟ್ಟು: 52,009 ಕೋಟಿ ರೂ.
ವಿವಿಧ ಇಲಾಖೆಗಳಿಗೆ ಅನುದಾನ ಹಂಚಿಕೆ ಹೇಗಿದೆ?
ಶಿಕ್ಷಣ- 44422 ಕೋಟಿ ರೂ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ- 34406 ಕೋಟಿ ರೂ.
ಇಂಧನ- 23159 ಕೋಟಿ ರೂ.
ಗ್ರಾಮೀಣಾಭಿವೃದ್ಧಿ- 21160 ಕೋಟಿ ರೂ.
ಒಳಾಡಳಿತ ಸಾರಿಗೆ- 19777 ಕೋಟಿ ರೂ.
ನೀರಾವರಿ- 19179 ಕೋಟಿ ರೂ.
ನಗರಾಭಿವೃದ್ಧಿ – 18155 ಕೋಟಿ ರೂ.
ಕಂದಾಯ- 16170 ಕೋಟಿ ರೂ.
ಆರೋಗ್ಯ – 15145 ಕೋಟಿ ರೂ.
ಸಮಾಜ ಕಲ್ಯಾಣ- 13334 ಕೋಟಿ ರೂ.
ಲೋಕೋಪಯೋಗಿ- 10424 ಕೋಟಿ ರೂ.
ಆಹಾರ ಮತ್ತು ನಾಗರಿಕ ಪೂರೈಕೆ- 9963 ಕೋಟಿ ರೂ.
ಕೃಷಿ ತೋಟಗಾರಿಕೆ- 6688 ಕೋಟಿ ರೂ.
ಪಶುಸಂಗೋಪನೆ- 3307 ಕೋಟಿ ರೂ.
ಇತರೆ- 124593 ಕೋಟಿ ರೂಪಾಯಿ
ಬಜೆಟ್ ಆರ್ಥಿಕ ನೋಟ ಹೀಗಿದೆ: ಯಾವುದಕ್ಕೆ ಎಷ್ಟು?
- ಆಯವ್ಯಯ ಗಾತ್ರ (ಸಂಚಿತ ನಿಧಿ): 3,71,383 ಕೋಟಿ ರೂ.
- ಒಟ್ಟು ಸ್ವೀಕೃತಿ: 3,68,674 ಕೋಟಿ ರೂ
- ರಾಜಸ್ವ ಸ್ವೀಕೃತಿ: 2,63,178 ಕೋಟಿ
- ಸಾರ್ವಜನಿಕ ಋಣ: 1,05,246 ಕೋಟ ರೂ. ಸೇರಿದಂತೆ ಬಂಡವಾಳ ಸ್ವೀಕೃತಿ 38 ಕೋಟಿ ರೂ.
- ಒಟ್ಟು ವೆಚ್ಚ: 3,71,383 ಕೋಟಿ ರೂ.
- ರಾಜಸ್ವ ವೆಚ್ಚ: 2,90,531 ಕೋಟ ರೂ.
- ಬಂಡವಾಳ ವೆಚ್ಚ: 55,877 ಕೋಟ ರೂ.
- ಸಾಲ ಮರುಪಾವತಿ: 24,794 ಕೋಟಿ ರೂ.
- ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಅಡಿಯಲ್ಲಿ ಆಯವ್ಯಯದಲ್ಲಿ ಒದಗಿಸಿದ ಅನುದಾನ 39,121 ಕೋಟಿ ರೂ.
- ಎಸ್.ಸಿ.ಎಸ್.ಪಿ. ಅಡಿ 27,674 ಕೋಟಿ ರೂ. ಹಾಗೂ ಟಿ.ಎಸ್.ಪಿ. ಅಡಿ 11,447 ಕೋಟಿ ರೂ.
ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಪ್ರಕಟಿಸಿದ ಪ್ರಮುಖ ಕೊಡುಗೆಗಳ ಪಟ್ಟಿ ಇಲ್ಲಿದೆ
- ವಿವಿಧ ರೈತಪರ ಯೋಜನೆ ಒಗ್ಗೂಡಿಸಿ ಸಮಗ್ರ ಕೃಷಿ ಉತ್ತೇಜಿಸುವ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ
- ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ, ಯೋಜನೆಗಳ ಸಂಯೋಜನೆ ಹಾಗೂ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ.
- ತೋಟಗಾರಿಕೆ ಕುರಿತು ತಾಂತ್ರಿಕ ಸಲಹೆ, ಮಾರುಕಟ್ಟೆ ಸಂಪರ್ಕ, ಬೇಸಾಯ ಪರಿಕರಗಳು ಮತ್ತು ಉತ್ಪನ್ನಗಳನ್ನು ಒಂದೇ ಸೂರಿನಡಿ ಒದಗಿಸಲು ಆಯ್ದ ಜಿಲ್ಲೆಗಳಲ್ಲಿ ಕಿಸಾನ್ ಮಾಲ್ ಸ್ಥಾಪನೆ.
- ಮಧ್ಯಮಾವಧಿ ಮತ್ತು ದೀರ್ಫಾವಧಿ ಸುಸ್ತಿ ಸಾಲಗಳ ಬಡ್ಡಿ ಮನ್ನಾ ಹಿನ್ನೆಲೆಯಲ್ಲಿ ಡಿಸಿಸಿ ಮತ್ತು ಪಿಕಾರ್ಡ್ ಬ್ಯಾಂಕುಗಳಿಗೆ 450 ಕೋಟಿ ರೂ. ಅನುದಾನ. ಟಿ.ಎ.ಪಿ.ಸಿ.ಎಂ.ಎಸ್.ಗಳಿಗೆ ಗೋದಾಮು ನಿರ್ಮಾಣಕ್ಕೆ ಶೇ. 6ರ ಬಡ್ಡಿ ಸಹಾಯಧನ
- ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಸುಮಾರು 75,000 ಎಕರೆ ನೀರಾವರಿ ಸಾಮರ್ಥ್ಯ ಕಲ್ಪಿಸುವ ಗುರಿ. ಘೋಷಣೆಯಂತೆ 5300 ಕೋಟಿ ರೂ. ಬಿಡುಗಡೆಗೆ ಕೇಂದ್ರಕ್ಕೆ ಒತ್ತಾಯ.
- 2000 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ ಶಾಲೆಗಳಾಗಿ ಪರಿವರ್ತನೆ
- ಏಳು ಜಿಲ್ಲೆಗಳಲ್ಲಿ 187 ಕೋಟ ರೂ. ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ಕಟ್ಟಡ ನಿರ್ಮಾಣ
- ಅ೦ಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ 90 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಘೋನ್ ಒದಗಿಸಲು ಕ್ರಮ.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿ೦ದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕಾಗಿ ಒಟ್ಟು 2,710 ಕೋಟಿ ರೂ. ಅನುದಾನ.
- ಪರಿಶಿಷ್ಟ ಜಾತಿಯ 5,000 ಯುವಕ/ಯುವತಿಯರಿಗೆ ಡ್ರೋನ್ ಆಧಾರಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ.
- ಹಿಂದುಳಿದ ವರ್ಗಗಳ 150 ಮೆಟ್ರಿಕ್ ನಂತರದ ಹೊಸ ವಸತಿನಿಲಯಗಳ ಪ್ರಾರಂಭ; 174 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 200 ಕೋಟ ರೂ. ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲು ಕ್ರಮ.
- 50 ಸಂಖ್ಯಾಬಲವುಳ್ಳ 50 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು, 100 ಸಂಖ್ಯಾಬಲವುಳ್ಳ 100 ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳು, 100 ಹೊಸ ಮೌಲಾನಾ ಆಜಾದ್ ಶಾಲೆಗಳ ಪ್ರಾರಂಭ ಹಾಗೂ 25 ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣ ಪ್ರಾರಂಭ.
ಗೃಹಲಕ್ಷ್ಮಿ ಯೋಜನೆಯ ಮೂಲಕ ನಾಡಿನ ಪ್ರತಿ ಕುಟುಂಬಕ್ಕೆ ಕನಿಷ್ಠ ಆದಾಯದ ಖಾತ್ರಿ ನೀಡಿ, ಬೆಲೆಯೇರಿಕೆಯ ನಡುವೆಯೂ ನೆಮ್ಮದಿಯ ಬದುಕು ಕಲ್ಪಿಸಿದ್ದೇವೆ. #NammaBudget2024 #KarnatakaBudget2024 pic.twitter.com/1mc7x7SPww
— Siddaramaiah (@siddaramaiah) February 16, 2024
- ವಸತಿ: 2024-25 ರಲ್ಲಿ 3 ಲಕ್ಷ ಮನೆಗಳ ನಿರ್ಮಾಣದ ಗುರಿ
- ಬೆಂಗಳೂರಿನಲ್ಲಿ ಸುಸಜ್ಜಿತವಾದ ಅಂತಾರಾಷ್ಟೀಯ ಮಟ್ಟದ ವಾಣಿಜ್ಯ ಪುಷ್ಪ ಮಾರುಕಟ್ಟೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ.
- ಬೆ೦ಗಳೂರು ಗ್ರಾಮಾ೦ತರ ಜಿಲ್ಲೆಯ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಹಾಗೂ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಾಲಯ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚನೆ.
- ಯಾವುದೇ ಆದಾಯವಿಲ್ಲದ 34,165 “ಸಿ’ ವರ್ಗದ ಐತಿಹಾಸಿಕ ದೇವಾಲಯಗಳಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ Vision Group ರಚನೆ.
- 29,523 “ಸಿ’ ವರ್ಗದ ದೇವಾಲಯಗಳ ಅರ್ಚಕರ ಬ್ಯಾಂಕ್ ಖಾತೆಗೆ ತಸ್ತಿಕ್ ಮೊತ್ತ ಜಮೆ ಮಾಡಲು ಕ್ರಮ.
- ಮದ್ಯದ ಘೋಷಿತ ಸ್ಲಾಬ್ಗಳನ್ನು ತರ್ಕಬದ್ಧಗೊಳಿಸುವ ಮೂಲಕ IML ಹಾಗೂ ಬಿಯರ್ ಸ್ಲಾಬ್ಗಳ ಪರಿಷ್ಕರಣೆ.
- ಇದನ್ನೂ ಓದಿ: Karnataka Budget 2024 : ಸಿದ್ದು ಬಜೆಟ್‌ನ ಘೋಷಣೆಗಳ ಸಂಪೂರ್ಣ ಪಟ್ಟಿ; ಇದನ್ನು ಓದಿದ್ರೆ ಸಾಕು!