ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಫೆ. 16ರಂದು (ಇಂದು) 15ನೇ ಬಾರಿಗೆ ರಾಜ್ಯ ಬಜೆಟ್ (Karnataka Budget 2024) ಮಂಡಿಸಲಿದ್ದಾರೆ. ಬಜೆಟ್ ಎಂದ ಕೂಡಲೇ ಸಿದ್ದರಾಮಯ್ಯ ಎಂದು ನೆನಪಿಗೆ ಬರುವಷ್ಟರ ಮಟ್ಟಿಗೆ ಅವರ ಹೆಸರು ಅಚ್ಚೊತ್ತಿದೆ. ಹೀಗೆ 15 ಬಾರಿ ಬಜೆಟ್ ಮಂಡನೆ ಮಾಡಿದ್ದು ಒಂದು ದಾಖಲೆಯೇ ಸರಿ (Record Number of Budget). ಆದರೆ, ನೆನಪಿರಲಿ, ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಸಿದ್ದರಾಮಯ್ಯ ಅಲ್ಲ. ಅವರಿಗಿಂತಲೂ ಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದವರು ಇನ್ನೊಬ್ಬರಿದ್ದಾರೆ. ಅದ್ಯಾರು ಎನ್ನುವುದರ ಕುತೂಹಲವೇ? ಈ ವರದಿಯನ್ನು ಓದಿ..
13 ಬಜೆಟ್‌ಗಳ ರಾಮಕೃಷ್ಣ ಹೆಗಡೆ ದಾಖಲೆ ಮುರಿದ ಸಿದ್ದರಾಮಯ್ಯ!
2023ರ ಜುಲೈ 7ರಂದು ಸಿದ್ದರಾಮಯ್ಯ ಅವರು 14ನೇ ಬಾರಿ ಕರ್ನಾಟಕ ಬಜೆಟ್ ಮಂಡಿಸುವ ಮೂಲಕ ಒಂದು ದಾಖಲೆಯನ್ನು ಮುರಿದಿದ್ದರು. ಸಿದ್ದರಾಮಯ್ಯ ಅವರಿಗಿಂತ ಮೊದಲು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ (Ramakrishna Hegade) ಅವರು 13 ಬಜೆಟ್ ಮಂಡಿಸಿದ ದಾಖಲೆ ಹೊಂದಿದ್ದರು. 2024ರ ಫೆ. 16ರಂದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವುದು 15ನೇ ಬಜೆಟ್.
ಸಿದ್ದರಾಮಯ್ಯ ಬಜೆಟ್ ಮಂಡನೆಯ ವಿವರ ಇಲ್ಲಿದೆ
ಸಿದ್ದರಾಮಯ್ಯ ಅವರು ಮೊದಲ ಬಜೆಟ್ ಮಂಡಿಸಿದ್ದು 1995ರಲ್ಲಿ. ಎಚ್.ಡಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ. 1995 ಮತ್ತು 1996ರಲ್ಲಿ ದೇವೇಗೌಡರು ಸಿಎಂ ಆಗಿದ್ದಾಗ, 1997, 1998, 1999ರಲ್ಲಿ ಜೆ.ಎಚ್. ಪಟೇಲ್ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಅವರು ಬಜೆಟ್ ಮಂಡಿಸಿದ್ದರು.
ಮುಂದೆ 2005 ಮತ್ತು 2006ರಲ್ಲಿ ಧರ್ಮ ಸಿಂಗ್ ಅವರು ಮುಖ್ಯಮಂತ್ರಿ ಆಗಿದ್ದಾಗ ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ ಎರಡು ಬಜೆಟ್‌ಗಳನ್ನು ಮಂಡಿಸಿದರು.
2013ರಲ್ಲಿ ಮೊದಲ ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು 2013, 2014, 2015, 2016, 2017 ಮತ್ತು 2018 (ಲೇಖಾನುದಾನ) ಹೀಗೆ ನಿರಂತರವಾಗಿ ಆರು ಬಾರಿ ಬಜೆಟ್ ಮಂಡಿಸಿದ್ದರು. 2018ರಲ್ಲಿ ಮಂಡಿಸಿದ್ದು ಪೂರ್ಣ ಪ್ರಮಾಣದ ಬಜೆಟ್ ಆಗಿರಲಿಲ್ಲ. ಇದು ಅವರು ಮಂಡಿಸಿದ 13ನೇ ಬಜೆಟ್ ಆಗಿತ್ತು.
2023ರಲ್ಲಿ ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಿದ್ದರಾಮಯ್ಯ ಅವರು 14ನೇ ಬಜೆಟ್ ಮಂಡಿಸಿ ಹೊಸ ದಾಖಲೆ ಬರೆದರು. ಈಗ 2024-25ನೇ ಸಾಲಿನ ಬಜೆಟ್ 15ನೆಯದು.
ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ್ದು ವಜುಭಾಯಿ ವಾಲಾ!
ಸಿದ್ದರಾಮಯ್ಯ ಅವರು 15ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿರುವುದು ನಿಜವಾದ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿ ಅವರದಲ್ಲ. ಅದು ಸದ್ಯಕ್ಕೆ ಸಲ್ಲುವುದು 2014ರಿಂದ 2021ರವರೆಗೆ ರಾಜ್ಯದಲ್ಲಿ ರಾಜ್ಯಪಾಲರಾಗಿದ್ದ, ಗುಜರಾತ್ ಮೂಲದ ಹಿರಿಯ ರಾಜಕಾರಣಿ ವಜುಬಾಯಿ ವಾಲಾ (Vajubhai Vala) ಅವರಿಗೆ. ಅವರು 1998ರಿಂದ 2012ರವರೆಗೆ ಗುಜರಾತ್‌ನಲ್ಲಿ ಹಣಕಾಸು ಸಚಿವರಾಗಿ 18 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಸಿದ್ದರಾಮಯ್ಯ ಅವರು ಇನ್ನು ನಾಲ್ಕು ಬಜೆಟ್ ಮಂಡಿಸಿದರೆ ವಜುಬಾಯಿ ವಾಲಾ ಅವರ ದಾಖಲೆಯನ್ನು ಮುರಿಯುವ ಅವಕಾಶವನ್ನು ಹೊಂದಲಿದ್ದಾರೆ.
ಇದನ್ನೂ ಓದಿ : Karnataka Budget 2024 : ಗ್ಯಾರಂಟಿ ಭಾರದ ನಡುವೆ ಬಜೆಟ್; ಹೇಗಿದೆ ರಾಜ್ಯದ ಆರ್ಥಿಕ ಸ್ಥಿತಿಗತಿ?
ರಾಷ್ಟ್ರಮಟ್ಟದಲ್ಲಿ ಗರಿಷ್ಠ ಬಜೆಟ್ ಮಂಡಿಸಿದ್ದು ಯಾರು?
ಇನ್ನು ರಾಷ್ಟ್ರೀಯ ಬಜೆಟ್ ಮಂಡನೆಯ ದಾಖಲೆ ಇರುವುದು ಮೊರಾರ್ಜಿ ದೇಸಾಯಿ ಅವರ ಹೆಸರಿನಲ್ಲಿ. ಅವರು 1959ರಿಂದ 1969ರವರೆಗೆ 10 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಪಿ. ಚಿದಂಬರಂ ಅವರು 9 ಬಾರಿ, ಪ್ರಣಬ್ ಮುಖರ್ಜಿ ಅವರು 8 ಬಾರಿ, ಯಶವಂತ್ ಸಿನ್ಹಾ ಅವರು ಐದು ಬಾರಿ ಬಜೆಟ್ ಮಂಡಿಸಿದ್ದಾರೆ. ಆದರೆ ದೇಶದ ಅತ್ಯಂತ ಶಕ್ತಿಶಾಲಿ, ಕ್ರಾಂತಿಕಾರಿ ಹಣಕಾಸು ಸಚಿವ ಎಂದೇ ಖ್ಯಾತರಾದ ಮನಮೋಹನ್ ಸಿಂಗ್ ಅವರು ಮಂಡಿಸಿದ್ದು ಕೇವಲ 5 ಬಜೆಟ್‌ಗಳನ್ನು ಮಾತ್ರ. ಅವರು 1991ರಿಂದ 1996ರವರೆಗೆ ಪಿ.ವಿ ನರಸಿಂಹ ರಾವ್ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. 2004ರಿಂದ 2014ರವರೆಗೆ ಅವರು ಪ್ರಧಾನಿಯಾಗಿದ್ದರೂ ಹಣಕಾಸು ಖಾತೆಯನ್ನು ಪಿ. ಚಿದಂಬರಂ ಮತ್ತು ಪ್ರಣಬ್ ಮುಖರ್ಜಿ ಅವರಿಗೆ ವಹಿಸಿದ್ದರು.