Site icon Vistara News

Karnataka Budget 2024 : ಬಜೆಟ್‌ ಮೇಲೆ ನಿರೀಕ್ಷೆಯೇ ಇಲ್ಲ, ಏನಿದ್ರೂ ಜಾರಿಯಾಗಲ್ಲ ಎಂದ‌ ಅಶ್ವತ್ಥ್‌ ನಾರಾಯಣ

Karnataka Budget 2024 Siddaramaiah CN Ashwathnarayan

ಮೈಸೂರು: ಶುಕ್ರವಾರ ಮಂಡನೆಯಾಗಲಿರುವ ರಾಜ್ಯ ಬಜೆಟ್‌ (Karnataka Budget 2024) ಮೇಲೆ ಯಾವುದೇ ನಿರೀಕ್ಷೆ ಇಲ್ಲ ಎಂದು ಹೇಳಿದ್ದಾರೆ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ (CN AshwathNarayan). ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದಿಂದ ನಮಗೆ ಯಾವುದೇ ನಿರೀಕ್ಷೆ ಇಲ್ಲ. ಅವರ ಬಜೆಟ್‌ ವಿಚಾರದಲ್ಲಿ ಆಡಳಿತ ಪಕ್ಷದ ಶಾಸಕರಿಗೆ ತೃಪ್ತಿ ಇಲ್ಲ. ಒಬ್ಬರ ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬ ರೀತಿ ಆಗಿದೆ. ಇಂಥವರು ಮಂಡಿಸುವ ಬಜೆಟ್ ಮೇಲೆ ಯಾವ ನಿರೀಕ್ಷೆಯೂ ಇಲ್ಲ. ಏನೇ ಘೋಷಣೆಯಾದರೂ ಅದು ಕೇವಲ ಪೇಪರ್ ಮೇಲೆ ಇರುತ್ತದೆ ಎಂದು ಹೇಳಿದರು.

ʻʻಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜಾತಿ ಧರ್ಮಗಳ ನಡುವೆ ಎತ್ತಿ ಕಟ್ಟುವುದರಲ್ಲಿ ಕಾಂಗ್ರೆಸ್ ಮೊದಲಿಗರುʼʼ ಎಂದು ಹೇಳಿದ ಅವರು, ಕಾಂಗ್ರೆಸ್ ನವರು ಕಂಡ ಕಂಡಲ್ಲಿ ಚೀಲ ಹಿಡಿದು ಕೊಂಡು ನಿಂತಿದ್ದಾರೆ. ರಾಜಕಾರಣಿಗಳ ಕುಟುಂಬಸ್ಥರೆ ಏಜೆಂಟ್ – ಬ್ರೋಕರ್ಸ್‌ಗಳಾಗಿದ್ದಾರೆ. ಇದು ಭಂಡಗೆಟ್ಟ ಸರ್ಕಾರ. ಕಾಂಗ್ರೆಸ್ ನಿರ್ನಾಮ ಮಾಡಲು ಬೇರೆ ಯಾರು ಬೇಡ. ಕಾಂಗ್ರೆಸ್‌ನವರೆ ಕಾಂಗ್ರೆಸ್ ನಿರ್ನಾಮ ಮಾಡುತ್ತಾರೆʼʼ ಎಂದು ಅಶ್ವತ್ಥ್‌ ನಾರಾಯಣ ಅವರು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Karnataka Budget 2024 : ಗ್ಯಾರಂಟಿ ಭಾರದ ನಡುವೆ ಬಜೆಟ್‌; ಹೇಗಿದೆ ರಾಜ್ಯದ ಆರ್ಥಿಕ ಸ್ಥಿತಿಗತಿ?

ಸಂಸದರಾಗಿ ದಾಖಲೆ ಬರೆದ ಪ್ರತಾಪ್‌ಸಿಂಹ: ಮಾಜಿ ಡಿಸಿಎಂ ಶ್ಲಾಘನೆ

ʻʻನರೇಂದ್ರ ಮೋದಿ ಅವರು ಮೂರನೇ ಬಾರಿ ಪ್ರಧಾನಿಯಾಗಬೇಕು ಎನ್ನುವುದು ಎಲ್ಲರ ಆಶಯವಾಗಿದೆ. 400ಕ್ಕೂ ಹೆಚ್ಚು ಸೀಟುಗಳನ್ನು ಎನ್ ಡಿ ಎ ಗೆಲ್ಲುತ್ತದೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸವಿದೆʼʼ ಎಂದು ಹೇಳಿದ ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಅವರು, ಮೈಸೂರಿನ ಶಾಸಕರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಅದ್ಬುತವಾಗಿ ಕೆಲಸ ಮಾಡಿದ್ದಾರೆ. ನಾಲ್ವಡಿ ಕಾಲದ ರೀತಿಯಲ್ಲಿ ಪ್ರತಾಪ್ ಸಿಂಹ ಕೆಲಸ ಮಾಡಿದ್ದಾರೆʼʼ ಎಂದು ಹೇಳಿದರು.

ʻʻಕೊಡಗು ಮೈಸೂರು ಎಲ್ಲಾ ಕ್ಷೇತ್ರದಲ್ಲೂ ಮತ್ತೊಮ್ಮೆ ನಮ್ಮ ಅಭ್ಯಾರ್ಥಿ ಮತ್ತೆ ಆಯ್ಕೆಯಾಗಬೇಕು. ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆಯಬೇಕುʼʼ ಎಂದು ಹೇಳಿದ ಅವರು, ಸಂಸದ ಪ್ರತಾಪಸಿಂಹ ಹಿಂದಿನ ಅವಧಿಯ ಕೆಲಸದ ದಾಖಲೆ ಇಟ್ಟಿದ್ದಾರೆ. ಅದಕ್ಕಾಗಿ ಬುಕ್‌ಲೆಟ್ ಮಾಡಿಸಿದ್ದಾರೆ ಎಂದರು.

ಮಂಗಳೂರಿನ ಶಾಸರ ಮೇಲೆ ಎಫ್‌ಐಆರ್‌ ದಾಖಲಿಸಿದ್ದಕ್ಕೆ ಆಕ್ಷೇಪ

ಮಂಗಳೂರಿನಲ್ಲಿ ಶಿಕ್ಷಕಿಯೊಬ್ಬರು ರಾಮನ ಅವಹೇಳನ ಮಾಡಿದ್ದನ್ನು ಆಕ್ಷೇಪಿಸಿದ್ದಕ್ಕೆ ಶಾಸಕರಿಬ್ಬರ ಮೇಲೆ ಎಫ್‌ಐಆರ್‌ ದಾಖಲಿಸಿದ್ದನ್ನು ಮಾಜಿ ಡಿಸಿಎಂ ಅಶ್ವತ್ಥ್‌ನಾರಾಯಣ ಅವರು ಖಂಡಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಕಾನೂನು ದುರ್ಬಳಕೆ ನಿರಂತರವಾಗಿದೆ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದರು.

ದೇಶ ವಿಭಜನೆ ಹೇಳಿಕೆ ಕೊಟ್ಟ ಸಂಸದ ಡಿ ಕೆ ಸುರೇಶ್ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ನಮ್ಮವರ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ. ನಮ್ಮ ಸಂಸ್ಕೃತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.

Karnataka Budget 2024 : ಮೈಸೂರಿನಲ್ಲಿ ಬಿಜೆಪಿ ಗೆಲುವು ಖಚಿತ ಎಂದ ಎಸ್‌.ಎ ರಾಮದಾಸ್‌

ಈ ಹಿಂದೆ ಸಂಸದ ಪ್ರತಾಪ್‌ಸಿಂಹ ಅವರ ಟೀಕಾಕಾರರೆಂದೇ ಹೆಸರಾಗಿದ್ದ ಮಾಜಿ ಶಾಸಕ ಎಸ್‌.ಎ ರಾಮದಾಸ್‌ ಅವರು ಕೂಡಾ ಪ್ರತಾಪ್‌ ಅವರ ಗೆಲುವು ಖಚಿತ ಎಂದರು. ನರೇಂದ್ರ ಮೋದಿ ಅವರ ಎರಡನೇ ಆವೃತ್ತಿಯಲ್ಲಿ ಆದ ಅಭಿವೃದ್ಧಿ ಮೂಲಕ ಮತಯಾಚನೆ ಮಾಡುತ್ತೇವೆ. ಮೈಸೂರು ಲೋಕಸಭಾ ಕ್ಷೇತ್ರವನ್ನು ನಿಶ್ಚಿತವಾಗಿ ಗೆಲ್ಲುತ್ತೇವೆ ಎಂದರು.

Exit mobile version