ನವದೆಹಲಿ: ಜಾತಿ ಮಾತುಗಳು ರಾಜಕಾರಣದಲ್ಲಿ ಅಪ್ರಸ್ತುತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬ್ರಾಹ್ಮಣ ಸಮುದಾಯದ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತಿಗೆ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ನಮ್ಮ ಪಕ್ಷ ಹಾಗೂ ಅದರ ಕಾರ್ಯಕ್ರಮಗಳು ಏನು ಮಾಡಲು ಸಾಧ್ಯ ಎಂಬ ಬಗ್ಗೆ ಮಾತನಾಡಿದರೆ ಜನ ಚಿಂತನೆ ಮಾಡುತ್ತಾರೆಯೇ ಹೊರತಾಗಿ ವೈಯಕ್ತಿಕ ಮಾತು ಗಳು ಪ್ರಸ್ತುತವಲ್ಲ ಎಂದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಗೆ ಪ್ರತಿಕ್ರಿಯೆ ನೀಡಿ ನಮ್ಮ ಪಕ್ಷದ ಬಗ್ಗೆ ಅವರು ಚಿಂತಿಸಬೇಕಿಲ್ಲ. ಕಾಂಗ್ರೆಸ್ ಮೊದಲು ಅವರ ಪಕ್ಷದ ಸರಿಮಾಡಿಕೊಳ್ಳಲಿ. ಬ್ರಾಹ್ಮಣರು ಎಂದೆಲ್ಲಾ ಜನ ನೋಡುವುದಿಲ್ಲ ಎಂದರು.
ಮದುವೆಯೊಂದರಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿರುವುದಾಗಿ ತಿಳಿಸಿದ ಸಿಎಂ ಬೊಮ್ಮಾಯಿ, ಶಾಸಕ ರಮೇಶ್ ಜಾರಳಿಹೊಳಿ ತಮ್ಮನ್ನು ಭೇಟಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಅವರು ವಿವರಗಳನ್ನು ನೀಡಿದರೆ ಕಾನೂನು ಪ್ರಕಾರ ಕೆಲಸ ಮಾಡುತ್ತೇವೆ ಎಂದರು.
ಆರ್. ಅಶೋಕ್ ಖಂಡನೆ
ಈ ಕುರಿತು ಟ್ವೀಟ್ ಮಾಡಿರುವ ಕಂದಾಯ ಸಚಿವ ಆರ್. ಅಶೋಕ್, ಹೆಚ್ ಡಿ ಕುಮಾರಸ್ವಾಮಿ ಅವರು ಬ್ರಾಹ್ಮಣರ ಬಗ್ಗೆ ಕೀಳಾಗಿ ಮಾತನಾಡಿದ್ದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಬ್ರಾಹ್ಮಣರ ತ್ಯಾಗ, ಬಲಿದಾನ ಸಾಕಷ್ಟಿದೆ. ಯಾವುದೇ ಜಾತಿಯ ಬಗ್ಗೆ ಈ ರೀತಿ ಕೀಳಾಗಿ ಮಾತನಾಡುವುದು ಮಾಜಿ ಮುಖ್ಯಮಂತ್ರಿಯಾಗಿದ್ದವರಿಗೆ ಶೋಭೆ ತರುವಂತದ್ದಲ್ಲ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವುದನ್ನು ತಿಳಿದು ಅಸಹಾಯಕತೆ ಹಾಗೂ ಹತಾಶೆಯಿಂದ ಮಾತನಾಡುತ್ತಿದ್ದಾರೆ ಅನಿಸುತ್ತದೆ. ಅವರು ತಕ್ಷಣ ಬ್ರಾಹ್ಮಣ ಸಮಾಜದ ಕ್ಷಮೆ ಕೇಳಬೇಕೆಂದು ನಾನು ಆಗ್ರಹಿಸುತ್ತೇನೆ ಎಂದಿದ್ದಾರೆ.