Site icon Vistara News

ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾಗುತ್ತಿದೆ ಮೈಸೂರು; ಯೋಗಾಭ್ಯಾಸ ಪ್ರಾರಂಭ

international yoga day

ಮೈಸೂರು: ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (ಜೂ.21) (International Yoga Day) ರಾಜ್ಯದ ಪಾಲಿಗೆ ವಿಶೇಷ. ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿ, ಯೋಗ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಅಂದು ಬೃಹತ್ ಕಾರ್ಯಕ್ರಮ ನಡೆಯಲಿದ್ದು, ಅದಕ್ಕಾಗಿ ಮೈಸೂರು ಸಜ್ಜಾಗುತ್ತಿದೆ. ಅರಮನೆ ಆವರಣದಲ್ಲಿ ಮೈಸೂರು ಯೋಗ ಫೆಡರೇಶನ್‌ನಿಂದ ಪೂರ್ವಭಾವಿ ಯೋಗಾಭ್ಯಾಸ ಪ್ರಾರಂಭವಾಗಿದೆ. ಇದರಲ್ಲಿ ಸುಮಾರು ಹತ್ತು ಸಾವಿರ ಯೋಗ ಪಟುಗಳು ಭಾಗವಹಿಸಿದ್ದಾರೆ. ಯೋಗ ಪೂರ್ವಾಭ್ಯಾಸಕ್ಕೆ ಮೈಸೂರು ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದಾರೆ.

ಇದೇ ವೇಳೆ ವಿಶ್ವ ಪರಿಸರ ದಿನದ ನಿಮಿತ್ತ ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಯೋಗ ನರಸಿಂಹಸ್ವಾಮಿ ದೇವಾಲಯದ ಸಂಸ್ಥಾಪಕ ಭಾಷ್ಯಂ ಸ್ವಾಮೀಜಿ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಇದ್ದರು.

ಇದನ್ನೂ ಓದಿ: yoga day 2022: ದೇಶದಾರೋಗ್ಯಕ್ಕಾಗಿ ನಾವೆಲ್ಲರೂ ಯೋಗ ಮಾಡೋಣ!

ಮೈಸೂರಿನಲ್ಲಿ ಪೂರ್ವಭಾವಿ ಯೋಗಾಭ್ಯಾಸ

ಮೈಸೂರಲ್ಲಿ ಭರ್ಜರಿ ಸಿದ್ಧತೆ
ಈ ಬಾರಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮೈಸೂರು ಸಂಸದ ಪ್ರತಾಪ್‌ ಸಿಂಹ ಆಹ್ವಾನ ಕೊಟ್ಟಿದ್ದರು. ಕುಟುಂಬ ಸಮೇತ ತೆರಳಿ ಪ್ರಧಾನಿಯವರನ್ನು ಭೇಟಿ ಮಾಡಿ ಆಮಂತ್ರಿಸಿದ್ದರು. ಅದರಂತೆ ಅವರೂ ಕೂಡ ಬರಲು ಒಪ್ಪಿಕೊಂಡಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿಗೆ ಮೋದಿ ಭೇಟಿ ನೀಡುತ್ತಿರುವುದು ವಿಶೇಷ. ಹೀಗಾಗಿ ಅಲ್ಲಿ ಸಿದ್ಧತೆಗಳೂ ಭರ್ಜರಿಯಾಗಿ ನಡೆಯುತ್ತಿವೆ. ಹಾಳಾದ ರಸ್ತೆಗಳೆಲ್ಲ ಡಾಂಬರು ಕಾಣುತ್ತಿವೆ. ಸ್ವಚ್ಛತಾ ಕಾರ್ಯ ವೇಗವಾಗಿ ನಡೆಯುತ್ತಿದೆ. ಹಲವು ಸಮಿತಿಗಳನ್ನು ರಚಿಸಿದ್ದು, ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗುತ್ತಿದೆ.

ಇದನ್ನೂ ಓದಿ: ಯೋಗದಿನದಲ್ಲಿ ರಾಜ್ಯ ಸರ್ಕಾರದ್ದು ಕೇವಲ ಪೋಷಕ ಪಾತ್ರ: ಸಂಸದ ಪ್ರತಾಪ್‌ ಸಿಂಹ

Exit mobile version