ಬೆಂಗಳೂರು: ಬಿಬಿಎಂಪಿ ಚುನಾವಣೆ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜು.28ಕ್ಕೆ ಮುಂದೂಡಿದೆ. ಮಂಗಳವಾರ ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ಅಭಯ್ ಎಸ್. ಓಕಾ ಮತ್ತು ಜೆ.ಪಿ.ಪರ್ದಿವಾಲ ಅವರಿದ್ದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠವು ಸಾಲಿಸಿಟರ್ ಜನರಲ್ ಗೈರಾದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.
ಸಾಲಿಸಿಟರ್ ಜನರಲ್ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬೆಳಗ್ಗೆ 12.30ಕ್ಕೆ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.
ಸುಪ್ರೀಂಕೋರ್ಟ್ ಸರ್ಕಾರಕ್ಕೆ ನೀಡಿದ್ದ 8 ವಾರಗಳ ಗಡುವು ಮುಕ್ತಾಯಗೊಂಡಿದೆ. ವಾರ್ಡ್ ಮರು ವಿಂಗಡಣೆ, ವಾರ್ಡ್‍ವಾರು ಮೀಸಲಾತಿಯನ್ನು ಈಗಾಗಲೇ ಪ್ರಕಟಿಸಿದೆ. ಮತ್ತೊಂದೆಡೆ ಕರ್ನಾಟಕ ಸರ್ಕಾರವು ಚುನಾವಣೆ ನಡೆಸಲು ಮತ್ತಷ್ಟು ಕಾಲಾವಕಾಶ ಕೋರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಬಿಬಿಎಂಪಿ ವಾರ್ಡ್‍ಗಳ ಮರು ವಿಂಗಡಣೆಯಾದರೂ ಮೀಸಲಾತಿ ನಿಗದಿಪಡಿಸಿ ಈವರೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿಲ್ಲ. ಹೀಗಾಗಿ ಮೀಸಲಾತಿ ಅಂತಿಮಗೊಳಿಸಲು ಕನಿಷ್ಠ ನಾಲ್ಕು ವಾರಗಳ ಸಮಯಾವಕಾಶವನ್ನು ತಮ್ಮ ವಕೀಲರ ಮೂಲಕ ಕೇಳುವ ಸಾಧ್ಯತೆಯಿದೆ.
ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಿರುವ ಮಾಜಿ ಕಾರ್ಪೋರೇಟರ್‌ಗಳಾದ ಶಿವರಾಜು, ಅಬ್ದುಲ್ ವಾಜೀದ್ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಸರ್ಕಾರದ ವಾದವನ್ನು ವಿರೋಧಿಸಿ ಶೀಘ್ರ ಚುನಾವಣೆ ನಡೆಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂಬುದು ಅರ್ಜಿದಾರರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | BBMP | ಕಸದ ವಾಹನಗಳ ಮೇಲೆ ಬಿಬಿಎಂಪಿ ನಾಮಫಲಕ ಹಾಕುವಂತಿಲ್ಲ; ಏನಿದು ಹೊಸ ರೂಲ್ಸ್?