ಬೆಳಗಾವಿ: ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನ ಮಾಡಿದ್ದ ನೂಪುರ್ ಶರ್ಮಾ ವಿರುದ್ಧ ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ನೂಪುರ್ ಶರ್ಮಾ ಬಂಧನಕ್ಕೆ ಆಗ್ರಹ ಕೇಳಿಬರುತ್ತಿದೆ. ಕಳೆದ ಎರಡು ದಿನಗಳ ಹಿಂದೆ ಬೆಳಗಾವಿಯಲ್ಲೂ ಪ್ರತಿಭಟನೆ ನಡೆದಿತ್ತು. ಈ ವೇಳೆ ನೂಪುರ್ ಶರ್ಮಾ ಪ್ರತಿಕೃತಿ (Nupur Sharma Effigy)ಯನ್ನು ನಡುರಸ್ತೆಯಲ್ಲಿ ಗಲ್ಲಿಗೇರಿಸುವ ಮಾದರಿಯಲ್ಲಿ ನೇತುಹಾಕಲಾಗಿತ್ತು. ಹೀಗೆ ಮಾಡಿದ ಮೂವರನ್ನು ಈಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜೂ.10ರಂದು ಮುಂಜಾನೆಯೇ ಪೋರ್ಟ್ ರಸ್ತೆ ಬೀದಿಗೆ ಇಳಿದಿದ್ದ ಮುಸ್ಲಿಂ ಪ್ರತಿಭಟನಾಕಾರರು, ನೂಪುರ್ ಶರ್ಮಾ ಫೋಟೋ ಇಟ್ಟು ಪ್ರತಿಕೃತಿ ರಚಿಸಿದ್ದರು. ಅದಕ್ಕೆ ಸೀರೆಯನ್ನೂ ಉಡಿಸಿದ್ದರು. ಬಳಿಕ ಅದನ್ನು ವಿದ್ಯುತ್ ಕಂಬಕ್ಕೆ ನೇತು ಹಾಕಿದ್ದರು. ಥೇಟ್ ಗಲ್ಲಿಗೇರಿಸಿದ ರೀತಿಯೇ ಕಾಣುತ್ತಿತ್ತು. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಕೃತ್ಯದ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಬಲೆಬೀಸಿದ್ದರು.
ನೂಪುರ್ ಶರ್ಮಾ ಪ್ರತಿಕೃತಿ ನೇತು ಹಾಕಿದ್ದು ದುರುದ್ದೇಶದಿಂದ ಕೂಡಿದ ಕೃತ್ಯ. ಸಾರ್ವಜನಿಕರಿಗೆ ಭಯ ಹುಟ್ಟಿಸುವಂತೆ ಇದೆ. ನಗರದಲ್ಲಿ ಗಲಾಟೆ ಎಬ್ಬಿಸಿ, ಸಾರ್ವಜನಿಕರ ಶಾಂತಿ, ಸಮಾಜದ ನೆಮ್ಮದಿ ಕೆಡಿಸುವ ಸಲುವಾಗಿ ಹೀಗೆ ಮಾಡಲಾಗಿದೆ ಎಂದು ಹೇಳಿರುವ ಪೊಲೀಸ್, ಮುಂದಿನ ತನಿಖೆಗೆ ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: ನೂಪುರ್ ಶರ್ಮಾ ಬಂಧನ ಆಗ್ರಹಿಸಿ ರಾಜ್ಯದ ಹಲವೆಡೆ ಪ್ರತಿಭಟನೆ, ಬೆಳಗಾವಿಯಲ್ಲಿ ಪ್ರತಿಕೃತಿಗೆ ಗಲ್ಲು