Site icon Vistara News

ಮಂಗಳೂರಿನಲ್ಲಿ ಫರ್ನೀಚರ್ ಕ್ಲಸ್ಟರ್ ಆರಂಭಕ್ಕೆ ಕ್ರಮ: CM ಬಸವರಾಜ ಬೊಮ್ಮಾಯಿ

CM basavaraja bommai

ಉಡುಪಿ: ಯುವಕರಿಗೆ ಉದ್ಯೋಗ ಒದಗಿಸುವಂತಹ ಅಂತಾರಾಷ್ಟ್ರೀಯ ಮಟ್ಟದ ಫರ್ನೀಚರ್ ಕ್ಲಸ್ಟರ್ ಅನ್ನು ಮಂಗಳೂರು ಸಮೀಪ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾರ್ಕಳ ತಾಲೂಕಿನ ಎಣ್ಣೆಹೊಳೆಯ ಬಳಿ ಎಣ್ಣೆಹೊಳೆ ಏತ ನೀರಾವರಿ ಯೋಜನೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಕರಾವಳಿ ಪ್ರದೇಶದಲ್ಲಿ ಹಸಿರು ಇಂಧನ ಅಭಿವೃದ್ಧಿ ಹಾಗೂ ಹಸಿರು ಇಂಧನ ಆಧಾರಿತ ಕೈಗಾರಿಕಾ ಹಬ್ ನಿರ್ಮಿಸಲು ತೀರ್ಮಾನ ಮಾಡಲಾಗಿದೆ. ಶಿಲ್ಪಿಗಳು, ಮರದ ಕೆಲಸಗಾರರಿಗೆ ಮಾಡುವವರಿಗೆ ಕ್ಲಸ್ಟರ್ ಅನ್ನು ಸ್ಥಾಪಿಸಲು ಶೀಘ್ರದಲ್ಲಿಯೇ ಅನುಮೋದನೆ ನೀಡಲಾಗುವುದು. ಈ ಮೂಲಕ ಸಮಗ್ರ, ಸಶಕ್ತ, ಸಮೃದ್ಧಿ ಕರ್ನಾಟಕ ಕಟ್ಟುವ ಬದ್ಧತೆ ಸರ್ಕಾರ ತೋರುತ್ತಿದೆ ಎಂದರು.

ಕಾರ್ಕಳದಲ್ಲಿ ಟೆಕ್ಸ್‌ಟೈಲ್ ಪಾರ್ಕ್ : ಕಾರ್ಕಳದಲ್ಲಿ ಪ್ರಾಚೀನ ಜೈನಬಸದಿಗಳು ಸೇರಿ ಇತರ ಪ್ರವಾಸಿ ತಾಣಗಳ ಟೂರಿಸಂ ಸರ್ಕೀಟ್ ಅನ್ನು ಅಭಿವೃದ್ದಿಗೊಳಿಸಲಾಗುವುದು. ಕರಾವಳಿ ಭಾಗದಲ್ಲಿ ಬೀಚ್ ಟೂರಿಸಂ ಹಾಗೂ ಯಾತ್ರಾ ಪ್ರವಾಸೋದ್ಯಮ ಈ ವರ್ಷ ಅಭಿವೃದ್ಧಿ ಮಾಡಲಾಗುವುದು. ಉದ್ಯೋಗ ಹೆಚ್ಚಳ, ಕೈಗಾರಿಕೆಗೆ ಹೆಚ್ಚಳಕ್ಕೆ ಒತ್ತು ನೀಡಲಾಗಿದ್ದು, ಕಾರ್ಕಳದಲ್ಲಿ ಟೆಕ್ಸ್‌ಟೈಲ್ ಪಾರ್ಕ್‌ ನಿರ್ಮಿಸಲಾಗುವುದು ಎಂದರು.

ಇದನ್ನೂ ಓದಿ | ರೋಹಿತ್‌ ʼಚಕ್ರವ್ಯೂಹʼದಲ್ಲಿ CM ಬಸವರಾಜ ಬೊಮ್ಮಾಯಿ: ಇಂದು ಕ್ಲೈಮ್ಯಾಕ್ಸ್‌?

ಕರಾವಳಿ ಜಿಲ್ಲೆಗಳ ಅಭಿವೃದ್ಧಿ : ಕರಾವಳಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲು ಸಚಿವರಿಗೆ ಸೂಚಿಸಿದ್ದೇನೆ. ಇದಕ್ಕಾಗಿ ಪೂರಕ ಕಾರ್ಯಕ್ರಮಗಳನ್ನು ಆಯವ್ಯಯದಲ್ಲಿ ರೂಪಿಸಲಾಗಿದೆ. ಕಾರವಾರ ಮತ್ತು ಮಂಗಳೂರಿನ ಬಂದರುಗಳ ವಿಸ್ತರಣಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. 2 ಬಂದರುಗಳಲ್ಲಿ ಹೆಚ್ಚಿನ ಪ್ರಮಾಣದ ಹಡಗುಗಳು ತಂಗಲು ಹಾಗೂ ಅಲ್ಲಿನಚಟುವಟಿಕೆಗಳಿಗೆ ಜಮೀನು ನೀಡಲಾಗಿದೆ. 8 ಮೀನುಗಾರರ ಬಂದರಿಗೆ ಯೋಜನೆ ರೂಪಿಸಿ ಅನುದಾನ ನೀಡಲಾಗಿದ್ದು, ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಆಳಸಮುದ್ರದ ಮೀನುಗಾರಿಕೆ ದೋಣಿಗಳನ್ನು ನೀಡುವ ಯೋಜನೆ ಜಾರಿಗೆ ತರಲಾಗಿದೆ. ಕರಾವಳಿ ಭಾಗದ ಆರ್ಥಿಕ ಚಟುವಟಿಕೆಗಳ ಅಭಿವೃದ್ಧಿಗೆ ಇವು ಪೂರಕವಾಗಿವೆ ಎಂದರು.

₹2400 ಕೋಟಿ ವೆಚ್ಚದ 24 ಯೋಜನೆಗಳಿಗೆ ಪ್ರಸ್ತಾವನೆ ಕೇಂದ್ರಕ್ಕೆ ಸಲ್ಲಿಕೆ: ಮೋದಿ ಸರ್ಕಾರ 8 ವರ್ಷ ಪೂರೈಸಿದೆ. ನರೇಂದ್ರ ಮೋದಿ ದೂರದೃಷ್ಟಿಯುಳ್ಳ ದಕ್ಷ ನಾಯಕ. ಆಯುಷ್ಮಾನ ಭಾರತ ಯೋಜನೆಯ ಮೂಲಕ ಬಡವರಿಗಾಗಿ ಆರೋಗ್ಯ ಕವಚ ನೀಡಿದ್ದಾರೆ. ರೈತರಿಗಾಗಿ ಕಿಸಾನ್ ಸಮ್ಮಾನ್ ನಿಧಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಮೂಲಭೂತ ಸೌಕರ್ಯ ಯೋಜನೆಗಳಡಿ, ಸಾಗರಮಾಲಾ ಯೋಜನೆಯಡಿ ಕರಾವಳಿ ಭಾಗದ ಎಲ್ಲ ಬಂದರುಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಕರಾವಳಿ ಭಾಗದಲ್ಲಿ 2400 ಕೋಟಿ ರೂ.ಗಳ 24 ಯೋಜನೆಗಳಿಗೆ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಈಗಾಗಲೇ ಸಲ್ಲಿಸಲಾಗಿದ್ದು, ಇವೆಲ್ಲವೂ ಕರಾವಳಿ ಪ್ರದೇಶದ ಅಭಿವೃದ್ಧಿಗೆ ಪೂರಕವಾಗಿವೆ ಎಂದರು.

ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಪರಿಹಾರ: ಡೀಮ್ಡ್ ಫಾರೆಸ್ಟ್ ಸಮಸ್ಯೆಯನ್ನು ಬಗೆಹರಿಸಿ 6,33,000 ಎಕರೆ ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಪ್ರದೇಶದಿಂದ ಹೊರಗುಳಿಸಿ, ಉಳುಮೆ ಮಾಡುತ್ತಿರುವವರಿಗೆ, ವಾಸಿಸುತ್ತಿರುವವರಿಗೆ ಹಕ್ಕುಪತ್ರ ನೀಡುವ ಕೆಲಸ ಮಾಡಲಾಗಿದೆ. ಕೊಡಗು, ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಉಳುಮೆ ಮಾಡುವವರಿಗೆ ಜಮೀನಿನ ಹಕ್ಕನ್ನು ನೀಡಲು ವಿಶೇಷವಾದ ಕಾನೂನು ರಚಿಸಿ, ಜಮೀನಿನ ಹಕ್ಕುಪತ್ರವನ್ನು ನೀಡಲಾಗುವುದು. ಜನರಿಗೆ ನ್ಯಾಯ ಒದಗಿಸುವ ಜನಸ್ಪಂದನೆಯ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಬಹಳ ವರ್ಷಗಳಿಂದ ಇರುವ ಈ ಸಮಸ್ಯೆಗೆ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಒದಗಿಸುವ ಬದ್ಧತೆ ಸರ್ಕಾರಕ್ಕಿದೆ ಎಂದರು.

ಸರ್ಕಾರದ ಜನಪರ ಯೋಜನೆಗಳು
ಎಣ್ಣೆಹೊಳೆ ಏತ ನೀರಾವರಿ ಯೋಜನೆ ರೂಪಿಸಿದ ಸರ್ಕಾರದ ಅವಧಿಯಲ್ಲಿಯೇ ಯೋಜನೆಯನ್ನು ಪೂರ್ಣಗೊಳಿಸಿರುವುದು ನಮ್ಮ ಸರ್ಕಾರದ ಹೆಗ್ಗಳಿಕೆ. ನೀರಾವರಿ ಸಚಿವರು ರಾಜ್ಯದ ಪ್ರಮುಖ ನೀರಾವರಿಯೋಜನೆಗಳ ಅನುಷ್ಠಾನದಲ್ಲಿ ಬದ್ಧತೆಯನ್ನು ತೋರಿದ್ದಾರೆ. ಕಂದಾಯ ಸಚಿವರು, ಜನರ ಮನೆ ಬಾಗಿಲಿಗೆ ಕಂದಾಯ ದಾಖಲೆಯನ್ನು ತರುವ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಮೀನುಗಾರಿಕೆ ಅಭಿವೃದ್ಧಿ, ದೀನದಲಿತರ ಅಭಿವೃದ್ಧಿಗೆ ಈ ಭಾಗದ ಸಚಿವರು ಶ್ರಮವಹಿಸಿದ್ದಾರೆ. ಎಸ್ಸಿ ಎಸ್ಟಿ ಕಾರ್ಯಕ್ರಮಗಳಿಗೆ 28 ಸಾವಿರ ಕೋಟಿ ಅನುದಾನ ನೀಡುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ. ಎಸ್ಸಿ ಎಸ್ಟಿ ಜನಾಂಗದ ಬಿಪಿಎಲ್ ಕುಟುಂಬಕ್ಕೆ 75 ಯೂನಿಟ್ ಗಳ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಆ್ಯಸಿಡ್ ದಾಳಿಗೆ ಒಳಗಾಗಿರುವ ಹೆಣ್ಣುಮಕ್ಕಳಿಗೆ ನೀಡುತ್ತಿರುವ ಮಾಸಿಕ ಧನಸಹಾಯವನ್ನು 3000 ರೂ.ನಿಂದ 10 ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಸಂಧ್ಯಾ ಸುರಕ್ಷೆ, ವಿಧವೆಯರು, ಅಂಗವಿಕಲರಿಗೆ ಮಾಸಾಶನ ಹೆಚ್ಚಳ, ರೈತ ವಿದ್ಯಾನಿಧಿಯ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ, 60 ವರ್ಷ ವಯೋಮಾನದವರಿಗೆ ಆರೋಗ್ಯ ತಪಾಸಣೆ, ಕಿಮೋ ಥೆರಪಿಗಾಗಿ 10 ಹೊಸ ಕೇಂದ್ರಗಳು, 60 ಸಾವಿರ ಸೈಕಲ್ ಡಯಾಲಿಸಿಸ್ ವ್ಯವಸ್ಥೆ ಮಾಡುವ ಮೂಲಕ ದುಡಿಯುವ ವರ್ಗಕ್ಕೆ ಸಹಾಯ ಮಾಡಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ | ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಶೀಘ್ರ ತೀರ್ಮಾನ : CM ಬಸವರಾಜ ಬೊಮ್ಮಾಯಿ

Exit mobile version