Site icon Vistara News

ಯುವಕರಲ್ಲಿ ಚೈತನ್ಯ ಮೂಡಿಸಿದ ಮಹಾನ್ ನಾಯಕ ರಾಜೀವ್ ಗಾಂಧಿ : ಮಲ್ಲಿಕಾರ್ಜುನ ಖರ್ಗೆ

RAJIV GANDHI DEATH ANNIVERSARY

RAJIV GANDHI DEATH ANNIVERSARY

ಬೆಂಗಳೂರು: ರಾಜೀವ್ ಗಾಂಧಿ(Rajiv Gandhi) ಅವರು ಯುವಕರಲ್ಲಿ ಚೈತನ್ಯ ಮೂಡಿಸಿದ ಮಹಾನ್ ನಾಯಕ. ಅವರು ವಿಯೆನ್ನಾದ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾತನಾಡಿದಾಗ ವಿಶ್ವದ ಅನೇಕ ದೇಶಗಳು ಆಕರ್ಷಿತವಾಗಿದ್ದವು ಎಂದು ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ರಾಜೀವ್ ಗಾಂಧಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಂಗ್ರೆಸ್‌ ಆಡಳಿತದಲ್ಲಿ ಭಾರತ ಅಲಿಪ್ತ ನೀತಿಗೆ ಬದ್ಧವಾಗಿ ರಷ್ಯಾ ಅಥವಾ ಅಮೆರಿಕ ಪರವಾಗಿ ನಿಲ್ಲಬಾರದು ಎಂಬ ಧೋರಣೆಯನ್ನು ಅವರು ಮುಂದುವರಿಸಿದರು. ಇದೇ ನೀತಿಯನ್ನು ಉಕ್ರೇನ್-ರಷ್ಯಾ ಯುದ್ಧದ ಸಂದರ್ಭದಲ್ಲೂ ಅನುಸರಿಸಲಾಗಿದೆ. ಆದರೆ ಬಿಜೆಪಿ ಇದನ್ನು ತಮ್ಮ ನೀತಿ ಎಂದು ಹೇಳಿಕೊಳ್ಳುತ್ತಾರೆ ಎಂದು ಕಿಡಿ ಕಾರಿದರು.

ಇವರು ಕೇವಲ ಹೆಸರು ಬದಲಾವಣೆ ಮಾಡುವುದಷ್ಟೇ. ಇವರ ಸ್ವಂತ ಬಂಡವಾಳ ಯಾವುದೂ ಇಲ್ಲ. ಕಾಂಗ್ರೆಸ್‌ ಕಟ್ಟಿ ಬೆಳೆಸಿದ ಸಂಸ್ಥೆಗಳನ್ನು ಮಾರಿಕೊಳ್ಳುವುದೇ ಇವರ ಕೆಲಸವಾಗಿದೆ. ಬಡತನ, ನಿರುದ್ಯೋಗ ನಿವಾರಣೆ ಮಾಡುವುದು ಬಿಟ್ಟು ಬಿಎಸ್ಎನ್ಎಲ್ ಅವರನ್ನು ದುರ್ಬಲಗೊಳಿಸಿ ಖಾಸಗೀಕರಣಗೊಳಿಸಲು ಹೊರಟಿದ್ದಾರೆ ಎಂದು ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡಿದರು.

ರಾಜೀವ್ ಗಾಂಧಿ ಅವರು ರಾಷ್ಟ್ರೀಯ ಶಿಕ್ಷಣ ನೀತಿ ತಂದು ಅನೇಕ ಕೇಂದ್ರಿಯ ವಿದ್ಯಾಲಯ, ವಸತಿ ಶಾಲೆಗಳನ್ನು ಸ್ಥಾಪಿಸಿದರು. ಆದರೆ ಬಿಜೆಪಿ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಪಠ್ಯಕ್ರಮ ಬಲಾವಣೆ ಮಾಡಿ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅನೇಕ ಪ್ರಧಾನಿಗಳನ್ನು ನಾವು ಕಂಡಿದ್ದೇವೆ. ನೆಹರೂ ಅವರಿಂದ ಮನಮೋಹನ್ ಸಿಂಗ್ ವರೆಗೂ ಅನೇಕ ಪ್ರಧಾನಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ರಾಜೀವ್ ಗಾಂಧಿ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ತಂದು ಕೋಟ್ಯಂತರ ಜನರಿಗೆ ಉದ್ಯೋಗ ಸೃಷ್ಟಿಸಿದರು. ಮಹಿಳೆಯರಿಗೆ ಮೀಸಲಾತಿ, ನೆರೆ ರಾಷ್ಟ್ರಗಳಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಿದರು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ರಾಜೀವ್ ಗಾಂಧಿ ಅವರು ಅಪರೂಪದ ಅದ್ಭುತ ರಾಜಕಾರಣಿ. ಯುವಕರ ಕಣ್ಮಣಿಯಾಗಿದ್ದ ಅವರ ಸಾವು ದೇಶದ ಯುವ ನಾಯಕತ್ವಕ್ಕೆ ದೊಡ್ಡ ಪೆಟ್ಟು ಕೊಟ್ಟಿತು. ಈ ರಾಷ್ಟ್ರ ಅಭಿವೃದ್ಧಿ ಆಗಬೇಕಾದರೆ ಅದು ಯುವಕರಿಂದ ಮಾತ್ರ ಸಾಧ್ಯ ಎಂದು ಅವರು ಸದಾ ಹೇಳುತ್ತಿದ್ದರು, ಅದೇ ಮಾತನ್ನು ಈಗ ರಾಹುಲ್ ಗಾಂಧಿ ಅವರು ಹೇಳುತ್ತಿದ್ದಾರೆ ಎಂದರು.

ಮಾಜಿ ಸಚಿವ ದಿನೇಶ್ ಗುಂಡುರಾವ್ ಮಾತನಾಡಿ, ರಾಜೀವ್ ಗಾಂಧಿ ಅವರು ದೇಶ ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾಗ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಭಯೋತ್ಪಾದನೆ, ಪ್ರತ್ಯೇಕವಾದ ನಿಯಂತ್ರಣ ಮಾಡಲು ಮುಂದಾದಾಗ ಇಂದಿರಾ ಗಾಂಧಿ ಅವರ ಹತ್ಯೆ ಆಗಿತ್ತು. ಇಂತಹ ಸಮಯದಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಿ, ಕಷ್ಟಕಾಲದಲ್ಲಿ ದೇಶ ಮುನ್ನಡೆಸಿದರು. ಅವರ ನಾಯಕತ್ವದಲ್ಲಿ ದೇಶ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಕ್ಕಿತ್ತು ಎಂದರು.

ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವ ಯು.ಟಿ ಖಾದರ್, ಮಾಜಿ ಸಚಿವ ಹೆಚ್.ಆಂಜನೇಯ ಮತ್ತಿತರರು ಇದ್ದರು.

ಇದನ್ನೂ ಓದಿ | ಕಾಂಗ್ರೆಸ್‌ ಪಾರ್ಟಿ ಮುಳುಗುತ್ತಿರುವಾಗ ನೇಪಾಳದಲ್ಲಿ ʼಪಾರ್ಟಿʼ ಮಾಡುತ್ತಿದ್ದರು ರಾಹುಲ್‌ ಗಾಂಧಿ !

Exit mobile version