Site icon Vistara News

ವಿಮ್ಸ್‌ ಸಾವಿಗೆ ಇನ್ನೊಂದು ಸೇರ್ಪಡೆ, ಡೆಂಗೆ ಪೀಡಿತ ಬಾಲಕನೂ ಅಂದು ಸಾವು?

Ballary VIMS

ಬಳ್ಳಾರಿ: ವಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಡೆಂಗೆ ಜ್ವರದಿಂದ ದಾಖಲಾಗಿದ್ದ 8 ವರ್ಷದ ಬಾಲಕನೊಬ್ಬ ಕೂಡ ಬುಧವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮೃತಪಟ್ಟಿರುವುದಾಗಿ ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ.

ಸಿರುಗುಪ್ಪದ ಕೆ.ಮಹೇಶ್ ಹಾಗೂ ಈರಮ್ಮ ದಂಪತಿಗಳ ಪುತ್ರ ನಿಖಿಲ್ (08) ಡೆಂಗೆ ಜ್ವರದಿಂದ ಬಳಲುತ್ತಿದ್ದ. ಸೆ.11ರಂದು ನಿಖಿಲ್‍ನನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆಂಗ್ಯೂ ಜ್ವರಕ್ಕೆ ಸಂಬಂಧಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಬುಧವಾರ ಸರಣಿ ಸಾವುಗಳ ಪ್ರಕರಣ ಹೊರ ಬೀಳುತ್ತಿದ್ದಂತೆ ಈ ವಿಚಾರವನ್ನು ಗುರುವಾರ ಸಂಜೆ ವೇಳೆಗೆ ಪೋಷಕರು ಹೊರಹಾಕಿದ್ದಾರೆ. ನನ್ನ ಮಗನನ್ನು ಐಸಿಯುದಲ್ಲಿ ಅಡ್ಮಿಟ್ ಮಾಡಿದ್ದೆವು. ವೆಂಟಿಲೇಟರ್ ಮೇಲೆ ಮಗ ಇದ್ದ. ಆದರೆ ನಿನ್ನೆ ಬೆಳಿಗ್ಗೆ ಕರೆಂಟ್ ಹೋದಾಗ ಮೆಶೀನ್‍ಗಳೆಲ್ಲ ಬಂದ್ ಆದವು. ಇದು ಯಾಕೆ ಹೀಗೆ ಎಂದು ಅಲ್ಲಿದ್ದ ಸಿಬ್ಬಂದಿಯನ್ನು ಕೇಳಿದೆವು. ಕರೆಂಟ್ ಹೋಗಿದೆ ಎಂದರು. ಕೆಲವೇ ಕ್ಷಣಗಳಲ್ಲಿ ನನ್ನ ಮಗ ಸತ್ತು ಹೋದ ಎಂದು ಬಾಲಕನ ತಾಯಿ ಈರಮ್ಮ ಆರೋಪಿಸಿದ್ದಾರೆ.

ಈಗಾಗಲೇ ಮೌಲಾ ಹುಸೇನ್, ಚಿಟ್ಟೆಮ್ಮ, ಚಂದ್ರಮ್ಮ ಹಾಗೂ ಮನೋಜ್ ಅವರು ವಿದ್ಯುತ್ ವ್ಯತ್ಯಯದಿಂದ ವೆಂಟಿಲೇಟರ್ ಸ್ಥಗಿತ ಆಗಿ ಮೃತರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದರು. ಈಗ ನಿಖಿಲ್ ಪೋಷಕರೂ ಇದೇ ಆರೋಪ ಮಾಡಿದ್ದಾರೆ. ಸಾವುಗಳ ಕುರಿತು ಈಗಾಗಲೇ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿದ್ದು, ಸತ್ಯ ಏನೆಂದು ಹೊರ ಬರಬೇಕಿದೆ.

ಇದನ್ನೂ ಓದಿ | ವಿಮ್ಸ್‌ ಆಸ್ಪತ್ರೆ ಸಾವಿನ ಹೊಣೆ ಹೊರದ ಸರ್ಕಾರ: ಆಕಸ್ಮಿಕವಲ್ಲ, ಕೊಲೆ ಎಂದ ಸಿದ್ದರಾಮಯ್ಯ

Exit mobile version