ನಿಟ್ಟೂರು (ಉಡುಪಿ) ಉಡುಪಿಯ ನಿಟ್ಟೂರು ಪ್ರೌಢ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ತಜ್ಞರೂ ಆಗಿರುವ ಉದ್ಯಮಿ ಎಚ್.ಎಸ್. ಶೆಟ್ಟಿ ಅವರು ೧ ಕೋಟಿ ರೂ.ಗಳ ದೇಣಿಗೆಯನ್ನು ಉದಾರವಾಗಿ ನೀಡಿದ್ದಾರೆ.
ನಿಟ್ಟೂರು ಪ್ರೌಢಶಾಲೆಯ ಇತಿಹಾಸದಲ್ಲಿ ೨೦೨೨ರ ಆಗಸ್ಟ್ ೧ ಚಾರಿತ್ರಿಕ ದಿನವಾಯಿತು. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಎಚ್.ಎಸ್. ಶೆಟ್ಟಿಯವರು ಗುಣಮಟ್ಟದ ಶಿಕ್ಷಣದೊಂದಿಗೆ ಸಾಮಾಜಿಕ ಕಳಕಳಿಯ ಶಿಕ್ಷಣವನ್ನು ನೀಡುತ್ತಿರುವ ಶಾಲೆಯ ಚಟುವಟಿಕೆಯನ್ನು ಗಮನಿಸಿ ಒಂದು ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡಿದರು.
ಈ ಸಂದರ್ಭ ನಡೆದ ಸಮಾರಂಭದಲ್ಲಿ ಶಿಕ್ಷಣ ಮತ್ತು ಕಲಿಕೆಯ ಮಹತ್ವದ ಬಗ್ಗೆ ಮಾತನಾಡಿದರು. ಕನ್ನಡ ಮಾಧ್ಯಮದ ಶಾಲೆಗಳ ಅಭಿವೃದ್ಧಿಯ ಅಗತ್ಯವನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳು ಎಂಟನೇ ತರಗತಿಯ 12 ವಿದ್ಯಾರ್ಥಿಗಳ ಕುಟುಂಬಕ್ಕೆ ಎಲ್ಪಿಜಿ ಗ್ಯಾಸ್ ಸಂಪರ್ಕದ ಸೌಲಭ್ಯವನ್ನು ಕಲ್ಪಿಸಿದರು.
ಸಮಾರಂಭದಲ್ಲಿ ಬೆಂಗಳೂರಿನ ವಿಜ್ಞಾನಿ ಡಾ. ರಾಜಾ ವಿಜಯ ಕುಮಾರ್ ಹಾಗೂ ಅವರ ಪತ್ನಿ ರಜನೀ ಭಾರತಿ ಮಂಗಲಮ್, ನಿಟ್ಟೂರು ಎಜುಕೇಶನಲ್ ಸೊಸೈಟಿ ಉಪಾಧ್ಯಕ್ಷರೂ, ಇಂಜಿನಿಯರೂ ಆದ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಉಪಾಧ್ಯಕ್ಷರಾದ ಎಸ್. ವಿ. ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ಚಂದ್ರಾಧರ, ಕಾರ್ಯದರ್ಶಿ ಪ್ರದೀಪ್ ಜೋಗಿ, ಉಪಾಧ್ಯಕ್ಷ ಪಿ. ದಿನೇಶ್ ಪೂಜಾರಿ, ಹಳೆ ವಿದ್ಯಾರ್ಥಿ ಪಿ.ಪರಶುರಾಮ ಶೆಟ್ಟಿ, ಹರೀಶ್ ಆಚಾರ್ಯ, ಶಿಕ್ಷಕರುಗಳಾದ ಎಚ್.ಎನ್.ಶೃಂಗೇಶ್ವರ್, ಅಶೋಕ್ ಎಂ., ರಾಮದಾಸ್ ನಾಯ್ಕ್,ದೇವದಾಸ್ ಶೆಟ್ಟಿ ಉಪಸ್ಥಿತರಿದ್ದರು.