Site icon Vistara News

Video : ಬೆಚ್ಚಿ ಬೀಳಿಸುತ್ತದೆ ಮೈಸೂರಿನ ಭೀಕರ ಅಪಘಾತದ ಸಿಸಿಟಿವಿ ದೃಶ್ಯ​

10 Include Car Driver Killed In Mysore Accident Today

#image_title

ಮೈಸೂರು/ಬಳ್ಳಾರಿ: ಇಂದು ಮೈಸೂರಿನ ಬಳಿಯ ಕೊಳ್ಳೇಗಾಲ-ಟಿ.ನರಸಿಪುರ ಮುಖ್ಯರಸ್ತೆಯಲ್ಲಿ, ಕುರುಬೂರು ಎಂಬಲ್ಲಿ ಕಾರು ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತವಾಗಿದ್ದು (Mysore Accident) ಇದರಲ್ಲಿ ಕಾರು ಚಾಲಕ ಮತ್ತು ಒಂದೇ ಕುಟುಂಬದ 9 ಮಂದಿ ಸೇರಿ ಒಟ್ಟು 10 ಮಂದಿ ಮೃತಪಟ್ಟಿದ್ದಾರೆ. ಜನಾರ್ದನ್​, 4ವರ್ಷದ ಮಗು ಪುನೀತ್ ಮತ್ತು ಶಶಿಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಂದೀಪ್​ (23), ಇವರ ತಂದೆ ಕೊಟ್ರೇಶ್​ (45), ತಾಯಿ ಸುಜಾತಾ (35), ಮಂಜುನಾಥ್​ (40), ಪತ್ನಿ ಪೂರ್ಣಿಮಾ (30), ಮಕ್ಕಳಾದ ಕಾರ್ತೀಕ್​ (11), ಪವನ್​ (7), ಗಾಯತ್ರಿ (30) ಮತ್ತು ಇವರ ಮಗಳು ಶ್ರಾವ್ಯಾ (3) ಮೃತರು.

ಬಳ್ಳಾರಿಯ ಸಂಗನಕಲ್ ಗ್ರಾಮದವರಾಗಿದ್ದ ಇವರೆಲ್ಲ ರೈಲಿನಲ್ಲಿ ಮೈಸೂರಿಗೆ ತೆರಳಿ, ಅಲ್ಲಿ ಬಾಡಿಗೆ ಕಾರು ಮಾಡಿಸಿಕೊಂಡು ಸುತ್ತಮುತ್ತಲ ಪ್ರವಾಸ ಮಾಡುತ್ತಿದ್ದರು. ಈ ಇನ್ನೋವಾ ಕಾರಿನಲ್ಲಿ ಚಾಲಕ ಸೇರಿ ಒಟ್ಟು 13 ಜನರು ಇದ್ದರು. ಇನ್ನು ಕಾರು ಮತ್ತು ಖಾಸಗಿ ಬಸ್​ ಡಿಕ್ಕಿ ಹೊಡೆದ ದೃಶ್ಯ ಬಸ್​​ನಲ್ಲಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೋವಾ ಕಾರು ಬಂದು ಬಸ್​​ಗೆ ಬಡಿಯುವುದನ್ನು ಅದರಲ್ಲಿ ನೋಡಬಹುದು. ಈ ವಿಡಿಯೊ ಮಾಧ್ಯಮಗಳಿಗೆ ಲಭ್ಯವಾಗಿದೆ. ಮೃತರ ಊರಿನಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

ಬಸ್​​ನೆಡೆಗೆ ಕಾರು ಬರುತ್ತಿರುವ ದೃಶ್ಯ

ಬಸ್​ಗೆ ಡಿಕ್ಕಿಯಾದ ಬಳಿಕ

ಮಕ್ಕಳಿಗೂ ಬೇಸಿಗೆ ರಜಾ ಇದ್ದುದರಿಂದ ಇವರೆಲ್ಲ ಒಟ್ಟಾಗಿ ಪ್ರವಾಸಕ್ಕೆ ಬಂದಿದ್ದರು. ಕಳೆದ ಎರಡು ದಿನಗಳಿಂದಲೂ ಮೈಸೂರು ಸುತ್ತಮುತ್ತಲಿನ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಚಾಮುಂಡಿ ಬೆಟ್ಟ, ಮಲೆ ಮಹದೇಶ್ವರ ದೇವರ ದರ್ಶನ ಮತ್ತು ಬಿಳಿಗಿರಿ ರಂಗನಾಥ ಸ್ವಾಮಿಯ ದರ್ಶನ ಪಡೆದಿದ್ದರು. ಆದರೆ ಅವರು ಇಂದು ಎಲ್ಲಿಗೆ ಹೋಗುತ್ತಿದ್ದರು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಅಪಘಾತದ ಭೀಕರತೆ ಎಷ್ಟಿತ್ತು ಎಂದರೆ, ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಒಂದಿಬ್ಬರ ತಲೆಗಳೇ ಕತ್ತರಿಸಿಬಿದ್ದಿವೆ. ಕಾರಿನ ಅವಶೇಷ ಯಾವುದು, ಮನುಷ್ಯರ ದೇಹ ಯಾವುದು ಎಂಬುದನ್ನು ಗುರುತಿಸಲು ಕಷ್ಟವಾಗುವಷ್ಟು ಭಯಾನಕವಾಗಿ ಅಪಘಾತ ಆಗಿದೆ.

ಇದನ್ನೂ ಓದಿ: ಪ್ರವಾಸಕ್ಕೆಂದು ಖುಷಿಯಿಂದ ಮೈಸೂರಿಗೆ ಬಂದು ಶವವಾದರು; ಒಂದೇ ಕುಟುಂಬದ 10 ಮಂದಿ ದುರ್ಮರಣ

ಕುರಬೂರು ಗ್ರಾಮಸ್ಥರ ಆಕ್ರೋಶ
ಕಾರು ಮತ್ತು ಬಸ್​ ನಡುವೆ ಅಪಘಾತವಾಗಿ 10 ಮಂದಿ ಮೃತಪಟ್ಟ ಬೆನ್ನಲ್ಲೇ ಸ್ಥಳೀಯ ಕುರುಬೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಇಂಥ ಅಪಘಾತಗಳು ನಡೆಯುತ್ತಿರುತ್ತವೆ. ಅದಕ್ಕೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳೇ ಕಾರಣ. ಮೈಸೂರು ಕೊಳ್ಳೇಗಾಲ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಗಿಡ ಗಂಟಿಗಳು ಬೆಳೆದು ನಿಂತಿವೆ. ರಸ್ತೆಗಳನ್ನ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಅಪಘಾತ ವಲಯಗಳಲ್ಲಿ ಸೂಚನಾ ಫಲಕಗಳನ್ನ ಹಾಕಿಲ್ಲ. ಅಷ್ಟೇ ಅಲ್ಲ, ಖಾಸಗಿ ಬಸ್​ಗಳೂ ಅತಿಯಾದ ವೇಗದಲ್ಲಿ ಚಲಿಸುತ್ತವೆ. ಅವುಗಳನ್ನು ನಿಯಂತ್ರಣ ಮಾಡುತ್ತಿಲ್ಲ ಎಂದು ಕುರುಬೂರು ನಿವಾಸಿ ಶಿವು ಎಂಬುವರು ಆರೋಪಿಸಿದ್ದಾರೆ.

ಮೃತರ ಕುಟುಂಬಕ್ಕೆ ಸಿಎಂ ಪರಿಹಾರ
ಬಸ್​ ಮತ್ತು ಕಾರು ನಡುವೆ ಅಪಘಾತವಾಗಿ ಮೃತಪಟ್ಟವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಹಾಗೇ, ಮೈಸೂರು ಜಿಲ್ಲೆಯ ತಿ.ನರಸೀಪುರ ಬಳಿ ಸಂಭವಿಸಿದ ಅಪಘಾತದಲ್ಲಿ 10 ಮಂದಿ ಸಾವಿಗೀಡಾದ ಸುದ್ದಿ ಕೇಳಿ ಸಂಕಟವಾಯಿತು‌. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ
ಮೃತರ ಹುಟ್ಟೂರಾದ ಸಂಗನಕ್ಕಲು ಗ್ರಾಮಕ್ಕೆ ಬಳ್ಳಾರಿ ಜಿಲ್ಲೆಯ ಎಸಿ ಹೇಮಂತ್​ ಅವರು ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಈಗಾಗಲೇ ಮೈಸೂರು ಡಿಸಿ ಅವರೊಂದಿಗೆ ಮಾತನಾಡಿದ್ದೇವೆ. ಚಾಲಕ ಮತ್ತು ಒಂದೇ ಕುಟುಂಬದ 9ಮಂದಿ ಮೃತಪಟ್ಟಿದ್ದಾರೆ. ಅವರ ಶವವನ್ನು ತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಮೃತಪಟ್ಟವರೆಲ್ಲ ಬಡಕುಟುಂಬದವರೇ ಆಗಿದ್ದು, ರೊಟ್ಟಿ ಮತ್ತು ಇತರ ತಿನಿಸು ಮಾರಾಟ ಮಾಡಿ ಜೀವನ ಮಾಡುತ್ತಿದ್ದರು. ಈಗ ಎಲ್ಲರ ಅಂತ್ಯಸಂಸ್ಕಾರ ಮಾಡಬೇಕಿದ್ದು, ಇವರ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಅವಲೋಕಿಸಿದ್ದೇವೆ ಎಂದು ತಿಳಿಸಿದ್ದಾರೆ.

ಮೃತರ ಊರಿನಲ್ಲಿ ಕುಟುಂಬಸ್ಥರ ಗೋಳಾಟ
ಕಣ್ಣೀರು ಹಾಕುತ್ತಿರುವ ಮನೆಯವರು, ಬಂಧುಗಳು
Exit mobile version