ಬೆಂಗಳೂರು: ವಿಧಾನಸೌಧದಲ್ಲಿ ದಾಖಲೆ ಇಲ್ಲದೆ ೧೦.೫ ಲಕ್ಷ ರೂಪಾಯಿಯನ್ನು (Illegal cash found) ತೆಗೆದುಕೊಂಡು ಹೋಗಿದ್ದ ಸಹಾಯಕ ಎಂಜಿನಿಯರ್ ಜಗದೀಶ್ ವಿಧಾನಸೌಧ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ದಾಖಲೆಗಳ ಸಮೇತ ಠಾಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರಿಂದ ಹಾಜರಾಗಿದ್ದರು.
ವಿಧಾನಸೌಧ ಪೊಲೀಸರು ಸೆಕ್ಷನ್ 41ರ ಅಡಿ ನೋಟಿಸ್ ಜಾರಿ ಮಾಡಿ, ಹಣದ ಮೂಲದ ಬಗ್ಗೆ ದಾಖಲೆ ಒದಗಿಸಬೇಕಿದ್ದು, ಎಲ್ಲ ದಾಖಲೆಯನ್ನು ತೆಗೆದುಕೊಂಡು ಬರುವಂತೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಜಗದೀಶ್ ತಮ್ಮ ವಕೀಲರ ಜತೆ ಆಗಮಿಸಿದ್ದರು. ಆದರೆ, ಅಲ್ಲಿ ಏನೆಲ್ಲ ವಿವರಣೆ ನೀಡಿದ್ದಾರೆಂಬ ಮಾಹಿತಿ ಲಭ್ಯವಾಗಿಲ್ಲ.
ಏನಿದು 10 ಲಕ್ಷ ರೂಪಾಯಿ ಜಪ್ತಿ ಪ್ರಕರಣ?
ಕೆಲಸ ನಿಮಿತ್ತ ಬುಧವಾರ (ಜ.೪) ಸಂಜೆ ವಿಕಾಸಸೌಧಕ್ಕೆ ಇಂಜಿನಿಯರ್ ಜಗದೀಶ್ ಹಣವನ್ನು ಒಯ್ಯುತ್ತಿದ್ದರು. ಅವರು ವಿಧಾನಸೌಧ ವೆಸ್ಟ್ ಗೇಟ್ ಬಳಿ ಪ್ರವೇಶಿಸುವಾಗ ಪೊಲೀಸರು ತಪಾಸಣೆ ನಡೆಸಿದ್ದಾರೆ. ಆಗ ಅವರ ಬಳಿ ೧೦.೫ ಲಕ್ಷ ರೂಪಾಯಿ ಪತ್ತೆಯಾಗಿದೆ. ಈ ಹಣವನ್ನು ಯಾಕೆ, ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಇಷ್ಟು ಮೊತ್ತದ ಹಣವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ತಂದಿದ್ದೇನೆ. ಕೆಲವು ಬಿಲ್ ಕ್ಲಿಯರ್ ಮಾಡಬೇಕಿತ್ತು ಎಂದು ಜಗದೀಶ್ ಹೇಳಿಕೆ ನೀಡಿದ್ದಾರೆ. ದಾಖಲೆ ಕೇಳಿದರೆ ಅವರ ಬಳಿ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಹಣವನ್ನು ಜಪ್ತಿ ಮಾಡಿ ಕೋರ್ಟ್‌ಗೆ ಒಪ್ಪಿಸಲಾಗಿದೆ. ಕೋರ್ಟ್‌ಗೆ ದಾಖಲೆ ಸಲ್ಲಿಸಿ ಹಿಂಪಡೆಯುವಂತೆ ಸೂಚಿಸಲಾಗಿದೆ. ಅಲ್ಲದೆ, ತಾನು ಯಾರನ್ನು ಭೇಟಿಯಾಗಲು ಬಂದಿದ್ದೇನೆ ಎಂದೂ ಸಹ ಜಗದೀಶ್ ಇದುವರೆಗೆ ತಿಳಿಸಿಲ್ಲ. ಈ ಮಧ್ಯೆ ಪೊಲೀಸರು ವಿಚಾರಣೆಗೆ ಕರೆದಿದ್ದು, ದಾಖಲೆ ನೀಡುವಂತೆ ಸೂಚಿಸಿದ್ದರಿಂದ ಜಗದೀಶ್ ವಿಚಾರಣೆಯನ್ನು ಎದುರಿಸಿದ್ದಾರೆ.
ಇದನ್ನೂ ಓದಿ | Man Masturbates On Bus | ಬಸ್‌ನಲ್ಲಿ ಯುವತಿ ಎದುರು ಹಸ್ತಮೈಥುನ ಮಾಡಿಕೊಂಡ ಯುವಕ, ಸಿಕ್ಕಿಬಿದ್ದ ಬಳಿಕ ಗಳಗಳನೆ ಅತ್ತ
40% ಕಮಿಷನ್‌ಗೆ ಇನ್ನೇನು ಸಾಕ್ಷಿ ಬೇಕು: ಡಿಕೆಶಿ ಪ್ರಶ್ನೆ
ಈ ಸರ್ಕಾರದಲ್ಲಿ ಕಾಸಿಲ್ಲದೆ ಯಾವುದೂ ನಡೆಯುವುದಿಲ್ಲ ಎಂಬುದು ವಿಧಾನಸೌಧದ ಪ್ರತಿಯೊಂದು ಗೋಡೆಗೂ ಗೊತ್ತಿದೆ. ೪೦ ಪರ್ಸೆಂಟ್ ಕಮಿಷನ್‌ಗೆ ಇನ್ನೇನು ಸಾಕ್ಷಿ ಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಫೈಲ್ ಮೂವ್ ಮಾಡಬೇಕೆಂದರೂ ಕಮಿಷನ್ ನೀಡಬೇಕು. ಹೀಗಾಗಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ದಯಾಮರಣ ಕೇಳಿದ್ದಾರೆ. ವಿರೋಧ ಪಕ್ಷಕ್ಕೆ ಈ ಬಗ್ಗೆ ಎಲ್ಲ ಮಾಹಿತಿ ಬಂದಿದೆ. ನಾವು ಇದನ್ನು ಜನರ ಬಳಿ ತೆಗೆದುಕೊಂಡು ಹೋಗುತ್ತೇವೆ. ಸತ್ಯ ಹೊರಗೆ ಬರಬೇಕು, ತನಿಖೆಯಾಗಬೇಕು ಎಂದು ನಾವು ಒತ್ತಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಭ್ರಷ್ಟಾಚಾರ ಕಳಂಕ ಬಂದಿದೆ. ಇನ್ನು ೬೦ ದಿನ ಮಾತ್ರ ಈ ಸರ್ಕಾರ ಇರಲಿದೆ. ಆಮೇಲೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಬರಲಿದೆ. ದಾಖಲೆ ಕೊಡಿ ಅಂತಾರೆ ಇದು ದಾಖಲೆ ಅಲ್ವಾ? ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತರ ಮನೆಯಲ್ಲಿ ಹಣ ಸಿಗಲಿಲ್ಲವೇ? ದುಡ್ಡನ್ನು ಜೇಬಿನಿಂದ ತೆಗೆದು ಕೊಡೋದಾಗಿದೆ. ಇದಕ್ಕೆ ಸಾಕ್ಷಿ ಕೊಡಲು ಆಗುತ್ತದೆಯೇ? 40% ಕಮಿಷನ್‌ಗೆ ದಾಖಲೆಯಾಗಿ ಇವೆಲ್ಲ ಸಾಕಲ್ಲವೇ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | Panchamasali Reservation | 2ಡಿ ಮೀಸಲು ಬೇಡ, 2ಎನಲ್ಲೇ ಕೊಡ್ಬೇಕು: ಜ.12ರೊಳಗೆ ಘೋಷಿಸದಿದ್ದರೆ ಮತ್ತೆ ಹೋರಾಟ