Site icon Vistara News

Kempegowda statue : ಬಿಜೆಪಿ ಪ್ರತಿಮೆ ಪಾಲಿಟಿಕ್ಸ್‌, ರಾಜಧಾನಿಯಲ್ಲಿ ನಿರ್ಮಾಣ ಆಗಲಿದೆ 100 ಅಡಿ ಎತ್ತರದ ಕೆಂಪೇಗೌಡ ಮೂರ್ತಿ

Kempegowda munirathna Ashok

#image_title

ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣಾ ಸಮೀಪಿಸುತ್ತಿರುವ ಬೆನ್ನಲ್ಲೇ ಬಿಜೆಪಿ ದೊಡ್ಡ ಮಟ್ಟದ ಪ್ರತಿಮೆ ಪಾಲಿಟಿಕ್ಸ್‌ಗೆ ಮುಂದಾಗಿದೆ. ರಾಜ್ಯದ ಶಕ್ತಿ ಸೌಧವಾಗಿರುವ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಬಸವಣ್ಣ ಮತ್ತು ಕೆಂಪೇಗೌಡರ ಪ್ರತಿಮೆಯನ್ನು (Kempegowda statue) ಮಾರ್ಚ್‌ 26ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಅನಾವರಣಗೊಳಿಸಲಿದ್ದಾರೆ. ಈ ಮಾಹಿತಿಯನ್ನು ಹಂಚಿಕೊಳ್ಳಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌ ಮತ್ತು ತೋಟಗಾರಿಕಾ ಸಚಿವ ಆರ್‌. ಮುನಿರತ್ನ ಅವರು ಇನ್ನೊಂದು ಬೃಹತ್‌ ಪ್ರತಿಮೆಯ ಅನಾವರಣದ ಸಂಗತಿಯನ್ನು ತೆರೆದಿಟ್ಟರು. ಇದು ರಾಜಧಾನಿಯ ಪಕ್ಕದಲ್ಲೇ 100 ಅಡಿ ಎತ್ತರದ ಕೆಂಪೇಗೌಡರ ಮೂರ್ತಿಯ ಪ್ರತಿಷ್ಠಾಪನೆ.

ಬಿಜೆಪಿ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಬೇಕು ಎಂದರೆ ಹಳೆ ಮೈಸೂರು ಭಾಗದ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಅನಿವಾರ್ಯ ಎನ್ನುವುದನ್ನು ಅರ್ಥ ಮಾಡಿಕೊಂಡಿರುವ ನಾಯಕರು ಕಳೆದ ಕೆಲವು ವರ್ಷಗಳಿಂದಲೇ ಒಕ್ಕಲಿಗ ಪಾಲಿಟಿಕ್ಸ್‌ಗೆ ಇಳಿದಿದ್ದಾರೆ. ಇದರ ಭಾಗವಾಗಿಯೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ನಲ್ಲಿ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದರ ಜತೆಗೆ ಉರಿ ಗೌಡ, ನಂಜೇಗೌಡರು ಟಿಪ್ಪು ಸುಲ್ತಾನ್‌ನನ್ನು ಕೊಂದ ಯೋಧರು ಎಂಬ ಪ್ರಚಾರವನ್ನೂ ಜೋರಾಗಿ ನಡೆಸುತ್ತಿರುವುದು ಎಂಬ ಅಭಿಪ್ರಾಯವಿದೆ.

ಹೊಸ ಪ್ರತಿಮೆಯ ಸ್ಥಾಪನೆ ಎಲ್ಲಿ?

ಸಚಿವರಾದ ಆರ್‌ ಅಶೋಕ್‌ ಮತ್ತು ಮುನಿರತ್ನ ಅವರು ಹಂಚಿಕೊಂಡ ಮಾಹಿತಿಯ ಪ್ರಕಾರ, 240 ವರ್ಷಗಳ ಹಿಂದೆ ನಿರ್ಮಾಣವಾದ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್‌ ಮಾದರಿಯಲ್ಲೇ ಬೆಂಗಳೂರಿನಲ್ಲಿ ಇನ್ನೊಂದು ಬೃಹತ್‌ ಪಾರ್ಕನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅದರಲ್ಲಿ ಈ 100 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ವಿಧಾನ ಸೌಧದ ನಡುವೆ ಯಲಹಂಕದಿಂದ ಐದು ನಿಮಿಷದಷ್ಟು ವಾಹನದಲ್ಲಿ ಕ್ರಮಿಸುವ ದೂರದಲ್ಲಿರುವ ಬೆಟ್ಟ ಅಲಸೂರು ಎಂಬ ಜಾಗದಲ್ಲಿ 184 ಎಕರೆ ಪ್ರದೇಶದಲ್ಲಿ ಈ ಪಾರ್ಕ್‌ ನಿರ್ಮಾಣವಾಗುತ್ತಿದೆ. ಇದು ಕಬ್ಬನ್‌ ಪಾರ್ಕ್‌ಗಿಂತಲೂ ದೊಡ್ಡ ಪಾರ್ಕ್‌ ಆಗಲಿದೆ ಎಂದು ಸಚಿವರು ತಿಳಿಸಿದರು.

ಸಣ್ಣಪ್ಪನಹಳ್ಳಿ,ಬೆಟ್ಟ ಅಲಸೂರು, ಕಾಡಿಗಾನಹಳ್ಳಿಗೆ ಸೇರಿರುವ ಸರ್ವೇ ನಂಬರ್‌ನಲ್ಲಿ ಬರುವ ಜಾಗದಲ್ಲಿ ಪಾರ್ಕ್‌ ನಿರ್ಮಾಣವಾಗುತ್ತಿದೆ. ಮಲೇಷ್ಯಾ ಮತ್ತು ಸಿಂಗಪುರ ಕಂಪನಿಗಳು ಅಭಿವೃದ್ಧಿ ಚಟುವಟಿಕೆಗಾಗಿ ಜಾಗ ಕೇಳಿದ್ದವು. ಪಿಪಿಪಿ ಮಾಡೆಲ್ ಬೇಕು ಎಂದು ಹೇಳಿದರೂ ಬೇಡ ಎಂದು ತೀರ್ಮಾನ ಮಾಡಿದ್ದೇವೆ. ಇಂಥ ಜಾಗವನ್ನು ಉಳಿಸಿ ದೊಡ್ಡ ಮಟ್ಟದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಿಸುತ್ತಿದ್ದೇವೆ. ಈ ಮೂಲಕ ಕೆಂಪೇಗೌಡರ ಹೆಸರನ್ನು ದೊಡ್ಡದಾಗಿ ಇತಿಹಾಸದಲ್ಲಿ ದಾಖಲಿಸುವ ಕೆಲಸ ನಡೆಯಲಿದೆ ಎಂದು ಸಚಿವರು ತಿಳಿಸಿದರು.

ಎರಡನೇ ಕಬ್ಬನ್ ಪಾರ್ಕ್ ಆಗಿ ಅಭಿವೃದ್ಧಿ ಮಾಡಲಾಗುವ ಈ ಪಾರ್ಕ್‌ಗೆ ಶೀಘ್ರವಾಗಿ ಗುದ್ದಲಿ ಪೂಜೆ ನಡೆಯಲಿದೆ. ಕಬ್ಬನ್‌ ಪಾರ್ಕ್‌ನಲ್ಲಿರುವ ಎಲ್ಲವೂ ಸೇರಿ ಹಲವು ಹೊಸತನಗಳೊಂದಿಗೆ ಈ ಪಾರ್ಕ್‌ ರೂಪುಗೊಳ್ಳಲಿದೆ ಎಂದು ಹೇಳಿದ ಸಚಿವರು, ಬೆಟ್ಟಾಲಸೂರು ಬೆಟ್ಟದಲ್ಲಿ ಇಡೀ ಪ್ರಪಂಚ ನೋಡುವ ಪ್ರತಿಮೆ ಮಾಡುತ್ತೇವೆ ಎಂದು ಹೇಳಿದರು.

ಬಸವಣ್ಣ, ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ಆಹ್ವಾನ

ಇದೇವೇಳೆ ಮಾರ್ಚ್‌ 26ರಂದು ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿರುವ ಬಸವಣ್ಣ ಮತ್ತು ಕೆಂಪೇಗೌಡ ಪ್ರತಿಮೆಗಳ ಅನಾವರಣ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್‌ ಶಾ ಅವರು ಭಾಗವಹಿಸಲಿದ್ದು, ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಸಚಿವ ಆರ್‌. ಅಶೋಕ್‌ ಮತ್ತು ಮುನಿರತ್ನ ಮನವಿ ಮಾಡಿದರು. ಬೆಂಗಳೂರು ಹಬ್ಬವೂ ನಡೆಯಲಿದ್ದು, ಅದರಲ್ಲಿ ಕನ್ನಡ ಚಲನಚಿತ್ರ ಕಲಾವಿದರು ಭಾಗವಹಿಸುತ್ತಾರೆ. ಜನಪದ, ಸಿನಿಮಾ ಸೇರಿದಂತೆ ಮನರಂಜನಾ ಕಾರ್ಯಕ್ರಮ ಇದೆ ಎಂದು ಅವರು ಹೇಳಿದರು.

ಇದನ್ನೂ ಓದಿ : Urigowda Nanjegowda : ಅವರು ಒಕ್ಕಲಿಗರಿಗೆ ಮಾತ್ರ ಸ್ವಾಮೀಜಿ; ಉರಿ ಗೌಡ, ನಂಜೇಗೌಡ ಚರ್ಚೆ ತಡೆದ ಚುಂಚಶ್ರೀಗಳ ವಿರುದ್ಧ ಸಿಡಿದ ಅಡ್ಡಂಡ

Exit mobile version